QR code; ಸಿಕ್ಕ ಸಿಕ್ಕಲ್ಲಿ ಸ್ಕ್ಯಾನ್ ಮಾಡಿ ಪಾವತಿ ಮಾಡಲು ಮುಂದಾಗಿದ್ದೀರಾ? ಭಾರೀ ಹಣ ಕಳೆದುಕೊಳ್ಳುತ್ತೀರಾ ಎಚ್ಚರ
ಕ್ಯೂಆರ್‌ಕೋಡ್ (QR code) ಎಂಬುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಪಾವತಿ ವಿಚಾರಕ್ಕೆ ಅಷ್ಟೇ ಅಲ್ಲದೆ ವಿವಿಧ ರೀತಿಯಲ್ಲಿ ಈ ಕ್ಯೂಆರ್ ಕೋಡ್ ಅನ್ನು ಬಳಕೆ ಮಾಡಲಾಗುತ್ತಿದ್ದು, ಇದೀಗ ಈ ವಿಷಯದಲ್ಲಿ ಬಳಕೆದಾರರು ಗಂಭೀರವಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಹೌದು, ಕ್ಯೂಆರ್ ಕೋಡ್‌ಗಳು ಡಿಜಿಟಲ್ ಪಾವತಿಗಳನ್ನು ಸುಲಭ ಮತ್ತು ಹೆಚ್ಚು ಅನುಕೂಲಕರವಾಗಿಸಿದೆ. ಕ್ಯೂಆರ್ ಕೋಡ್ ಆಧಾರಿತ ಪಾವತಿ ಸೇವೆಗಳು ಸಂಖ್ಯೆಯನ್ನು ಹಂಚಿಕೊಳ್ಳದೆಯೇ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ಕಳುಹಿಸಲು ಅನುಕೂಲ ಮಾಡಿಕೊಟ್ಟಿದ್ದರಿಂದ ಇದನ್ನು ಜನರು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದರೆ ಕ್ಯೂಆರ್ ಕೋಡ್ ಬಳಕೆ ಹೆಚ್ಚಾದಂತೆ ಇದನ್ನು ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆ ಸಹ ಹೆಚ್ಚಾಗಿದೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಅಥವಾ ಯುಪಿಐ ದೇಶದಲ್ಲಿ ಜನಪ್ರಿಯವಾಗುತ್ತಿದ್ದಂತೆ ಹ್ಯಾಕರ್‌ಗಳ ದಾಳಿ ಹೆಚ್ಚಾಗಿದೆ. ಹ್ಯಾಕರ್‌ಗಳು ಮೋಸದ ಕ್ಯೂಆರ್ ಕೋಡ್‌ಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆ ಖಾಲಿಮಾಡಲು ಮುಂದಾಗಿದ್ದಾರೆ. ಈ ರೀತಿಯ ಕ್ಯೂಆರ್ ಕೋಡ್ ಆಧಾರಿತ ವಂಚನೆ ಬೆಂಗಳೂರಿನಲ್ಲಿ ವ್ಯಾಪಕವಾಗಿ ಕಂಡುಬಂದಿದೆ. ಇತ್ತೀಚಿನ ಪೊಲೀಸ್ ವರದಿಯ ಪ್ರಕಾರ, ನಗರದಲ್ಲಿ 40 ಪ್ರತಿಶತ ಸೈಬರ್ ದಾಳಿಗಳು ಕ್ಯೂಆರ್ ಕೋಡ್‌ಗಳಿಗೆ ಸಂಬಂಧಿಸಿವೆ. ಕ್ಯೂಆರ್ ಕೋಡ್ ಮೂಲಕ ಹೇಗೆ ವಂಚನೆ ಮಾಡಲಾಗುತ್ತಿದೆ? ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಅನ್ನೋದನ್ನು ನೋಡೋಣ ಬನ್ನಿ.
ಪಾಲೊ ಆಲ್ಟೊ ನೆಟ್ವರ್ಕ್ಸ್ ವರದಿಯ ಪ್ರಕಾರ, ಕ್ಯೂಆರ್ ಕೋಡ್ ವಂಚನೆ ಯಾವಾಗಲೂ ಒಂದೇ ಆಗಿರುತ್ತದಂತೆ. ಆದರೆ, ಇದು ಸಾಮಾನ್ಯ ಜನರಿಗೆ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿದೆ ಎಂದು ತಿಳಿಸಿದೆ. ಅಂದರೆ ನೀವು ಸರಿಯಾದ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಿದ್ದೀರೋ ಅಥವಾ ವಂಚಕರ ನಕಲಿ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಿದ್ದೀರೋ ಎಂದು ತಿಳಿಯಲು ಕಷ್ಟವಂತೆ. ಕ್ಯೂಆರ್ ಕೋಡ್ ಸ್ಕ್ಯಾನಿಂಗ್‌ನಲ್ಲಿ ಇದು ದೊಡ್ಡ ಸಮಸ್ಯೆಯಾಗಿದೆ.
ಈ ವಿಷಯದಲ್ಲಿ ಮತ್ತೊಂದು ಕಳವಳವೆಂದರೆ ಸೈಬರ್ ದಾಳಿಕೋರರು ನಿಜವಾದ ಕ್ಯೂಆರ್ ಕೋಡ್ ಅನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ತಮ್ಮ ಸ್ವಂತ ಕೋಡ್ ಅನ್ನು ಬಳಸಿಕೊಂಡು ಸ್ಕ್ಯಾಮ್ ಮಾಡಲು ಮುಂದಾಗುತ್ತಾರೆ. ಅಂದರೆ ಸಾಮಾನ್ಯ ಜನರು ತಾವು ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವನ್ನು ಅಲ್ಲಿಂದ ಕದಿಯಲಿದ್ದಾರೆ. ಈ ಮೂಲಕ ಸ್ಕ್ಯಾನರ್‌ಗಳನ್ನು ವಂಚನೆಯಿಂದ ಬದಲಾಯಿಸುವ ವ್ಯವಸ್ಥೆ ಭವಿಷ್ಯದಲ್ಲಿ ದೊಡ್ಡ ಭಯ ನಿರ್ಮಾಣ ಮಾಡಲಿದೆ ಎಂದು ಎಂದು ಪಾಲೊ ಆಲ್ಟೊ ನೆಟ್‌ವರ್ಕ್ಸ್ ಘಟಕ 42 ರ ಪ್ರಧಾನ ಸಂಶೋಧಕ ವಿಕಿ ರೇ ಹೇಳಿದ್ದಾರೆ.
ಕೆಟ್ಟ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಏನಾಗುತ್ತದೆ?: ಇನ್ನು ಮಾರ್ಪಡಿಸಿದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ದುರುದ್ದೇಶಪೂರಿತ ಕೋಡ್‌ನೊಂದಿಗೆ ನಿಮ್ಮ ಡಿವೈಸ್‌ನಲ್ಲಿ ದುರುದ್ದೇಶ ಉಳ್ಳ ವೆಬ್‌ಸೈಟ್ ಅನ್ನು ನೀವು ಓಪನ್ ಮಾಡುವಂತೆ ಆಗುತ್ತದೆ. ಅಲ್ಲಿಂದ ನಿಮ್ಮನ್ನು ದುರುದ್ದೇಶಪೂರಿತ ಆಪ್ ಅನ್ನು ಸಹ ಡೌನ್‌ಲೋಡ್ ಮಾಡಲು ಒತ್ತಾಯಿಸಬಹುದು.
ಇಂತಹ ಆಪ್‌ಗಳು ಸಾಮಾನ್ಯವಾಗಿ ವೈರಸ್‌ಗಳು, ಸ್ಪೈವೇರ್, ಟ್ರೋಜನ್‌ಗಳು ಅಥವಾ ಇತರ ರೀತಿಯ ಮಾಲ್‌ವೇರ್‌ಗಳನ್ನು ಹೊಂದಿರಲಿವೆಯಂತೆ. ಇವು ಬಳಕೆದಾರರ ಖಾಸಗಿ ಮಾಹಿತಿಯನ್ನು ಕಡಿಯುವುದರೊಂದಿಗೆ ವ್ಯಕ್ತಿಯ ಗೌಪ್ಯತೆಯನ್ನು ಉಲ್ಲಂಘಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದು ರಾನ್ಸಮ್‌ವೇರ್‌ನಿಂದ ಕ್ರಿಪ್ಟೋವರೆಗೆ ವ್ಯಾಪಕವಾದ ಸಮಸ್ಯೆಗೆ ಕಾರಣವಾಗಲಿದೆ.
ಕ್ಯೂಆರ್ ಕೋಡ್ ಬಳಕೆ ಹೆಚ್ಚಾಗುತ್ತಿದೆ: ಗಮನಿಸಬೇಕಾದ ವಿಷಯ ಏನೆಂದರೆ ಫೋನ್ ನಂಬರ್‌ಗಳನ್ನು ಮರೆಮಾಡಿಕೊಳ್ಳುವ ಉದ್ದೇಶದಿಂದ ಹಾಗೂ ಖಾಸಗಿ ಮಾಹಿತಿಯನ್ನು ಭದ್ರವಾಗಿಟ್ಟುಕೊಳ್ಳುವ ಉದ್ದೇಶದಿಂದ ಜನರು ಈ ಕ್ಯೂಆರ್‌ಕೋಡ್ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ಕ್ಯೂಆರ್ ಕೋಡ್‌ಹಲವಾರು ವರ್ಷಗಳಿಂದ ಬಳಕೆಯಲ್ಲಿದ್ದು, ಯುಪಿಐ ಗಾಗಿ ಇದರ ಬಳಕೆ ವ್ಯಾಪಕವಾಗಿದೆ.

ಈಗ ಯುಪಿಐ ಮೂಲಕ ದೊಡ್ಡ ಮೊತ್ತದ ಹಣದ ವಹಿವಾಟು ನಡೆಯುವುದರಿಂದ ವಂಚಕರ ಸಾಫ್ಟ್ ಟಾರ್ಗೆಟ್ ಇದೇ ಆಗಿದೆ. ಆದರೆ ಕ್ಯೂಆರ್ ಕೋಡ್ ವಂಚನೆಯ ಬಗ್ಗೆ ಅನಗತ್ಯವಾಗಿ ಚಿಂತಿಸಲು ಯಾವುದೇ ಕಾರಣವಿಲ್ಲ. ವಂಚನೆಯನ್ನು ತಪ್ಪಿಸಲು ನೀವು ಕ್ಯೂಆರ್ ಕೋಡ್‌ಗಳ ಬಳಕೆಯನ್ನು ಕಡಿಮೆ ಮಾಡಬಹುದು. ರಿಮೋಟ್ ಮೂಲಕ ಯಾವುದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಕೆಲಸ ಮಾಡಬೇಡಿ.


Click it and Unblock the Notifications








