ಕ್ಯೂಆರ್ ಕೋಡ್ ಮೂಲಕ ಸತ್ತ ಮಗನ ಸಾಧನೆ ಜೀವಂತವಾಗಿರಿಸಿದ ಕುಟುಂಬ; ಅದೇಗೆ ಅಂತೀರಾ!?
ಕ್ಯೂಆರ್ ಕೋಡ್ ಎಂದರೆ ಕ್ವಿಕ್ ರೆಸ್ಪಾನ್ಸ್ ಕೋಡ್ ಎಂದರ್ಥ. ಸಮಾನ್ಯವಾಗಿ ಇತ್ತೀಚೆಗೆ ಬಹುಪಾಲು ಮಂದಿ ಹಣ ಪಾವತಿ ಮಾಡುವಾಗ ಇದನ್ನು ಬಳಕೆ ಮಾಡುತ್ತಾರೆ. ಜೊತೆಗೆ ಯಾವುದೇ ಮಾಹಿತಿ ಪಡೆದುಕೊಳ್ಳಲು ಅಥವಾ ಭದ್ರತಾ ವಿಚಾರಕ್ಕೆ ಇಂದಿನ ದಿನಗಳಲ್ಲಿ ಅತ್ಯಗತ್ಯ. ಆದರೆ, ಸಮಾಧಿಯಲ್ಲೂ ಕ್ಯೂಆರ್ ಕೋಡ್ ಬಳಕೆ ಮಾಡುತ್ತಾರೆ ಎಂದರೆ ನೀವು ನಂಬಲೇಬೇಕು.
ಹೌದು, ಸುಲಭವಾಗಿ ಮಾಹಿತಿ ವಿಭಾಗಕ್ಕೆ ಪ್ರವೇಶ ಪಡೆದುಕೊಳ್ಳಲು ಈ ಕ್ಯೂಆರ್ ಕೋಡ್ ಸಹಾಯಕವಾಗಿದ್ದು, ಇದನ್ನೇ ಸದುಪಯೋಗಪಡಿಸಿಕೊಂಡು ಕೇರಳದ ಕುಟುಂಬವೊಂದು ವಿಶಿಷ್ಟ ಕೆಲಸವೊಂದನ್ನು ಮಾಡಿದೆ. ಈ ಮೂಲಕ ಪೋಷಕರು ಸಾವಿಗೀಡಾದ ತಮ್ಮ ಮಗನನ್ನು ಸದಾಕಾಲ ಆತನ ಸಾಧನೆ ಮೂಲಕ ಜೀವಂತವಾಗಿಡಲು ಮುಂದಾಗಿದ್ದಾರೆ. ಹಾಗೆಯೇ ಅವರ ನೆನಪುಗಳನ್ನು ಸದಾ ಸ್ಮರಣೆಯಲ್ಲಿ ಇರುವಂತೆ ಮಾಡಿದ್ದಾರೆ. ಹಾಗಿದ್ರೆ, ಇದೆಲ್ಲಾ ಹೇಗೆ ಸಾಧ್ಯ ಅಂತೀರಾ ಇಲ್ಲಿದೆ ನೋಡಿ ವಿವರ.

ಕ್ಯೂಆರ್ ಕೋಡ್ ಬಳಕೆ ಯಾಕೆ? : ಅಕಾಲಿಕವಾಗಿ ಸಾವಿಗೀಡಾದ ವ್ಯಕ್ತಿಯ ನೆನಪುಗಳನ್ನು ಜೀವಂತವಾಗಿಡುವ ಉದ್ದೇಶದಿಂದ ಈ ಕ್ಯೂಆರ್ ಕೋಡ್ ಅನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಈ ಮೂಲಕ ಸಾವಿಗೀಡಾದ ವ್ಯಕ್ತಿಯ ಸಮಾಧಿಯ ಮೇಲೆ ಇದನ್ನು ಇರಿಸಲಾಗಿದೆ. ಇದರಿಂದ ಯಾರೇ ಸಮಾಧಿಯ ಬಳಿ ಹೋದರೂ ಸಹ ಕುತೂಹಲಕ್ಕೆ ಒಳಗಾಗುತ್ತಾರೆ.
ಯಾರದು ಈ ಸಮಾಧಿ? : ಡಾ. ಐವಿನ್ ಫ್ರಾನ್ಸಿಸ್ ಎಂಬುವರು ತಮ್ಮ 26 ನೇ ವಯಸ್ಸಿನಲ್ಲಿಯೇ ಸಾವಿಗೀಡಾಗಿದ್ದು, ಆ ಸಮಯದಲ್ಲೇ ಅವರು ಹಲವಾರು ರೀತಿಯ ಸೃಜನಶೀಲ ಕೆಲಸ ಮಾಡಿ ಹೆಸರು ಮಾಡಿದ್ದರು. ಹೀಗಾಗಿ ಅವರ ಪೋಷಕರು ಈ ಕ್ಯೂಆರ್ ಕೋಡ್ ಮೂಲಕ ಇಂದಿಗೂ ಜೀವಂತವಾಗಿ ಇರಿಸಿಕೊಂಡಿದ್ದಾರೆ.
ಎಲ್ಲಿದೆ ಈ ಸಮಾಧಿ: ಡಾ. ಐವಿನ್ ಫ್ರಾನ್ಸಿಸ್ ಎಂಬ ಹೆಸರನ್ನು ಕೇಳಿದರೆ ಇದು ಯಾವುದೋ ವಿದೇಶದ ಘಟನೆ ಎಂದು ನಿಮಗೆ ಅನಿಸಬಹುದು. ಆದರೆ, ಇದು ಕೇರಳದಲ್ಲಿ ಕಂಡುಬಂದಿರು ದೃಶ್ಯ. ಹೌದು, ಕೇರಳದ ಕುರಿಯಾಚಿರಾದ ಸೇಂಟ್ ಜೋಸೆಫ್ ಚರ್ಚ್‌ನಲ್ಲಿ ಇವರನ್ನು ಸಮಾಧಿ ಮಾಡಲಾಗಿದ್ದು, ಈ ಸಮಾಧಿ ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಇನ್ನು ಒಮಾನ್‌ನಲ್ಲಿ ಖಾಸಗಿ ಕಂಪೆನಿಯೊಂದರ ಅಧಿಕಾರಿ ಆಗಿದ್ದ ಫ್ರಾನ್ಸಿಸ್ ಹಾಗೂ ಓಮನ್‌ನ ಇಂಡಿಯನ್ ಸ್ಕೂಲ್‌ನ ಪ್ರಾಂಶುಪಾಲರಾದ ಲೀನಾ ಅವರ ಮಗ ಐವಿನ್ ಸಂಗೀತ ಮತ್ತು ಕ್ರೀಡೆಗಳಲ್ಲಿ ಚೆನ್ನಾಗಿ ನಿಪುಣರಾಗಿದ್ದರು. ಜೊತೆಗೆ ವೈದ್ಯಕೀಯ ಕೋರ್ಸ್ ಸಹ ಮಾಡುತ್ತಿದ್ದರು. ಈ ಮೂಲಕ ಹೆಚ್ಚು ಜನಪ್ರಿಯರಾಗಿದ್ದರು. ಆದರೆ, ಅವರು 2021 ರಲ್ಲಿ ಅವರು ಬ್ಯಾಡ್ಮಿಂಟನ್ ಆಡುವಾಗ ಕುಸಿದು ಅಕಾಲಿಕವಾಗಿ ಸಾವಿಗೀಡಾಗಿದ್ದರು.
ಕ್ಯೂಆರ್ ಕೋಡ್ ಮೂಲಕ ಅವರನ್ನು ಜೀವಂತವಾಗಿರಿಸಿದ ಕುಟುಂಬ: ಈ ಸಾವನ್ನು ಅರಗಿಸಿಕೊಳ್ಳಲಾಗದ ಪೋಷಕರು ಹೇಗಾದರೂ ಮಾಡಿ ತಮ್ಮ ಮಗನನ್ನು ಸದಾಕಾಲ ಜನರು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಬೇಕು ಎಂದು ಸಮಾಧಿಯ ಮೇಲೆ ಕ್ಯೂಆರ್ ಕೋಡ್ ಅನ್ನು ರಚಿಸಿದ್ದಾರೆ. ಈ ಕ್ಯೂಆರ್ ಕೋಡ್ ಮೂಲಕ ಯಾರೇ ಆದರೂ ಸಹ ಅವರ ಬಗ್ಗೆ ಸುಲಭವಾಗಿ ಮಾಹಿತಿ ಪಡೆದುಕೊಳ್ಳಬಹುದು.

ಕ್ಯೂಆರ್ ಕೋಡ್ ಕಲ್ಪನೆ ಬಂದಿದ್ದು ಹೇಗೆ?: ಐವಿನ್ ಅವರ ಸಹೋದರಿ ಎವೆಲಿನ್ ಫ್ರಾನ್ಸಿಸ್ ಅವರಿಗೆ ಈ ಕಲ್ಪನೆ ಹೊಳೆದಿದ್ದಂತೆ. ಸಮಾಧಿಯ ಮೇಲೆ ಐವಿನ್ ಬಗ್ಗೆ ಬರೆಯುವುದು ಮಾತ್ರ ಸಾಕಾಗುವುದಿಲ್ಲ ಎಂದು ನನ್ನ ಮಗಳು ನನಗೆ ಹೇಳಿದಳು. ಈ ಮೂಲಕ ಮಗ ಏನೆಲ್ಲಾ ಮಾಡಿದ್ದಾನೆ ಎಂದು ಚಿತ್ರಿಸಲು ಸ್ಥಳ ಸಾಕಾಗುವುದಿಲ್ಲ ಎಂದು ನಾವು ಅರಿತು ಈ ಕ್ಯೂಆರ್ ಕೋಡ್ ಲಿಂಕ್‌ಗೆ ಮುಂದಾದೆವು ಎಂದು ಫ್ರಾನ್ಸಿಸ್ ತಿಳಿಸಿದ್ದಾರೆ.


Click it and Unblock the Notifications








