UPI ಬಳಕೆದಾರರಿಗೆ ಹೊಸ ಸೌಲಭ್ಯ, ಇನ್ಮುಂದೆ ಸುಲಭವಾಗಿ ಸಾಲ ಪಡೆಯಬಹುದು; ಆರ್‌ಬಿಐ ನೀಡಿದ ಮಾರ್ಗಸೂಚಿಯಲ್ಲೇನಿದೆ?
ಭಾರತದ ಇತರೆ ದೇಶಗಳಿಗಿಂತ ಒಂದು ಹೆಜ್ಜೆ ಡಿಜಿಟಲ್ ಆರ್ಥಿಕ ವ್ಯವಹಾರದಲ್ಲಿ ಮುಂದಿದೆ. ಇಲ್ಲಿನ ಡಿಜಿಟಲ್ ವ್ಯವಹಾರವನ್ನು ಇತರೆ ರಾಷ್ಟ್ರಗಳು ನೋಡಿ ಬೆರಗಾಗುತ್ತಿವೆ. ಇದರ ಬೆನ್ನಲ್ಲೇ ಗೂಗಲ್ ಪೇ ಮತ್ತು ಫೋನ್ ಪೇಯಂತಹ ಆಪ್ (Google Pay, Phonepe) ಮೂಲಕ ಯುಪಿಐ ವಹಿವಾಟು ನಡೆಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಈ ಸಂತೋಷದೊಂದಿಗೆ ಆರ್‌ಬಿಐ ಗುಡ್‌ನ್ಯೂಸ್ ಒಂದನ್ನು ನೀಡಿದೆ.
ಹೌದು, ಆರ್‌ಬಿಐ ಯುಪಿಐ ಬಳಕೆದಾರರ ಬಳಕೆಯನ್ನು ಇನ್ನಷ್ಟು ಸುಧಾರಣೆ ಮಾಡಲು ಮುಂದಾಗಿದೆ. ಅಂದರೆ ಯುಪಿಐ ಸೌಲಭ್ಯದಲ್ಲಿ ಪೂರ್ವ ಅನುಮೋದಿತ ಸಾಲ ಸೌಲಭ್ಯವನ್ನು ಕಲ್ಪಿಸಿಕೊಡಲು ಆರ್‌ಬಿಐ ಅನುಮತಿ ನೀಡಿದೆ. ಈ ಮೂಲಕ ಯಾರು ಬೇಕಾದರೂ ಈ ಯುಪಿಐ ಆಧಾರದ ಮೂಲಕ ಸಾಲ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಇದು ಹೇಗೆ ಕೆಲಸಮಾಡುತ್ತವೆ?, ಇದರಿಂದ ಪ್ರಯೋಜನ ಏನು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಯುಪಿಐ(UPI) ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದ ಆರ್‌ಬಿಐ: ಇಂದಿನ ದಿನಗಳಲ್ಲಿ ಕಾಡಿನ ಅಂಚಿನಲ್ಲಿರುವ ಹಳ್ಳಿಯಿಂದ ಹಿಡಿದು ದಿಲ್ಲಿಯ ವರೆಗೂ ಡಿಜಿಟಲ್ ವ್ಯವಹಾರ ಮಾಡಲಾಗುತ್ತದೆ. ಅದರಲ್ಲೂ ಟೀ ಕುಡಿಯುವುದರಿಂದ ಹಿಡಿದು ದೊಡ್ಡ ದೊಡ್ಡ ವಸ್ತುಗಳನ್ನು ಖರೀದಿ ಮಾಡುವವರೆಗೂ ಸಹ ಯುಪಿಐ ಬಳಕೆ ಮಾಡಲಾಗುತ್ತದೆ. ಈ ಕಾರಣಕ್ಕೆ ಆರ್‌ಬಿಐ ಈಗ ಗ್ರಾಹಕ ಕ್ರೆಡಿಟ್ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಣೆ ಮಾಡಲು ಮುಂದಾಗಿದೆ.
ದೇಶದಲ್ಲಿ ಯುಪಿಐ ಮತ್ತು ಗ್ರಾಹಕ ಕ್ರೆಡಿಟ್ ಮಾರುಕಟ್ಟೆಯನ್ನು ವಿಸ್ತರಣೆ ಮಾಡುವ ಭಾಗವಾಗಿ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್‌ಗಳು/ಸಾಲಗಳನ್ನು ಪಡೆಯಲು ರಿಸರ್ವ್ ಬ್ಯಾಂಕ್ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಮೂಲಕ ಯಾವುದೇ ಯುಪಿಐ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಹೊಂದಿಲ್ಲದಿದ್ದರೂ ಸಹ ಸಾಲ ಪಡೆದುಕೊಳ್ಳಬಹುದಾಗಿದೆ. ಇದಾದ ನಂತರದ ಆ ಹಣವನ್ನು ಯುಪಿಐ ಮೂಲಕ ವಹಿವಾಟುಗಳನ್ನು ನಡೆಸಬಹುದಾಗಿದೆ.
ಈ ಸಂಬಂಧ ಆರ್‌ಬಿಐ ಸೆಪ್ಟೆಂಬರ್ 4 ರಂದು ಸುತ್ತೋಲೆ ಹೊರಡಿಸಿದೆ. ಈ ಮೂಲಕ ಆರ್‌ಬಿಐ ಈ ಹೊಸ ವ್ಯವಸ್ಥೆ ಮೂಲಕ ಸಾಲ ನೀಡಲು ಬ್ಯಾಂಕುಗಳಿಗೆ ಅವಕಾಶ ನೀಡಿದ್ದು, ಇದರೊಂದಿಗೆ ಸಾಲ ನೀಡುವ ಸಂಸ್ಥೆಗಳು ಈ ಸಾಲದ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳನ್ನು ಬಳಕೆದಾರರಿಗೆ ತಿಳಿಸಬಹುದು ಎಂದು ತಿಳಿಸಿದೆ. ಇದಕ್ಕಾಗಿ ಬಳಕೆದಾರರಿಂದ ಪೂರ್ವಾನುಮತಿ ಪಡೆಯುವುದು ಯುಪಿಐ ವ್ಯವಸ್ಥೆಗಳಿಗೆ ಅಗತ್ಯ ಎಂದು ಒತ್ತಿ ಹೇಳಲಾಗಿದೆ.
ಇನ್ನು ಈ ಯುಪಿಐ ನಲ್ಲಿನ ಈ ಹೊಸ ಸೇವೆಯು ಕ್ರೆಡಿಟ್ ಕಾರ್ಡ್ ಆಪ್‌ನಂತೆಯೇ ಕೆಲಸ ಮಾಡುತ್ತದೆ ಎಂದು ತಿಳಿದುಬಂದಿದೆ. ಆದರೆ, ಇದು ಯುಪಿಐ ಮೂಲಕ ಕೆಲಸ ಮಾಡುವುದರಿಂದ ತುರ್ತು ಸಮಯದಲ್ಲಿ ಎಲ್ಲರಿಗೂ ಅನುಕೂಲ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೆ ಈ ಸೇವೆ ಬಳಕೆ ಮಾಡುವಾಗ ತಪ್ಪಾಗಿ ಬೇರೆಯವರಿಗೆ ಏನಾದರೂ ಹಣ ಕಳುಹಿಸಿದ್ದರೆ ಅದನ್ನು ಮರಳಿ ಪಡೆಯುವುದು ಸಹ ಸುಲಭವಾಗಿದೆ.
ಈ ಹಣವನ್ನು ಮರುಪಾವತಿ ಪಡೆಯುವುದು ಹೇಗೆ?: ಆರ್‌ಬಿಐ ನೀಡಿದ ಮಾರ್ಗಸೂಚಿಯಂತೆ, ನೀವು ತಪ್ಪು ವಹಿವಾಟು ನಡೆಸಿದರೆ, ನೀವು ವಹಿವಾಟು ನಡೆಸಿದ ಯುಪಿಐ ಆಪ್‌ನಲ್ಲಿ ತಕ್ಷಣವೇ ನೀವು ದೂರು ನೀಡಬೇಕು. ನಂತರ ತಪ್ಪು ವಹಿವಾಟಿನ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು ನೀವು ಹಣವನ್ನು ವರ್ಗಾಯಿಸಿದ ಗೂಗಲೇ ಪೇ, ಪೇಟಿಎಮ್, ಫೋನ್ ಪೇ ಅಥವಾ ಯುಪಿಐ ಆಪ್‌ನ ಗ್ರಾಹಕ ಸೇವಾ ಕೇಂದ್ರದ ಸಹಾಯವಾಣಿಗೆ ಮೆಸೆಜ್ ಮಾಡಬೇಕು.
ಅದಾಗ್ಯೂ ನೀವು ಈ ಹಣವನ್ನು ಪಡೆದಿಲ್ಲ ಎಂದಾದರೆ ಆರ್‌ಬಿಐನ NPCI ಪೋರ್ಟಲ್ ವೆಬ್‌ಸೈಟ್‌ನಲ್ಲಿ ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ನೀವು npci.org.in ಗೆ ಭೇಟಿ ನೀಡಿ. ಯುಪಿಐ ಆಯ್ಕೆ ಮೇಲೆ ಆಯ್ಕೆಮಾಡಿ ಮತ್ತು ವಿವಾದ ಪರಿಹಾರ ಕಾರ್ಯವಿಧಾನವನ್ನು ಆಯ್ಕೆಮಾಡಿ. ನಂತರದಲ್ಲಿ ತಪ್ಪಾದ ವ್ಯವಹಾರದ ಬಗ್ಗೆ ಉಲ್ಲೇಖ ಮಾಡಿ.

ಈ ದೂರು ಲಿಸ್ಟ್‌ನಲ್ಲಿ ಯುಪಿಐ ವಹಿವಾಟು ಐಡಿ, ಬ್ಯಾಂಕ್ ಹೆಸರು, ವರ್ಚುವಲ್ ಪಾವತಿ ವಿಳಾಸ, ವರ್ಗಾವಣೆಯಾದ ಮೊತ್ತ, ವಹಿವಾಟು ದಿನಾಂಕ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕಿದೆ. ಹೀಗೆ ಮಾಡಿದರೆ ಮುಂದಿನ 24-48 ಗಂಟೆಗಳಲ್ಲಿ ಹಣ ವಾಪಸ್ ಬರುತ್ತದೆ. ಹೀಗೆ ಮಾಡಿದ ನಂತರ ಹಣ ಸಿಗದಿದ್ದರೆ ನೇರವಾಗಿ ಆರ್‌ಬಿಐ ವೆಬ್‌ಸೈಟ್ ನಲ್ಲಿ ದೂರು ದಾಖಲಿಸಿ ಹಣ ವಾಪಸ್ ಪಡೆಯಬಹುದು.


Click it and Unblock the Notifications








