ಕೆಲ ಮೊಬೈಲ್ ವಾಲೆಟ್ ಆಪ್‌ಗಳು ಬ್ಯಾನ್ ಆಗಲಿವೆಯಾ?..ನಿಲೇಕಣಿ ನೇತೃತ್ವದಲ್ಲಿ ಸಮಿತಿ!!
ದೇಶದಾದ್ಯಂತ ಎಲ್ಲ ಮೊಬೈಲ್ ವಾಲೆಟ್ ಕಂಪನಿಗಳು ಫೆಬ್ರವರಿ 28ರೊಳಗೆ ಕೆವೈಸಿ ಪೂರ್ಣಗೊಳಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದ ಕೆಲವೇ ದಿನಗಳಲ್ಲೇ ಹೊಸ ಸಮಿತಿಯೊಂದು ರಚನೆಯಾಗಿದೆ. ದೇಶದಲ್ಲಿ ಜಾರಿಯಲ್ಲಿ ಇರುವ ಡಿಜಿಟಲ್ ಪಾವತಿ ವ್ಯವಸ್ಥೆ, ಈ ವ್ಯವಸ್ಥೆ ಅಳವಡಿಕೆಯಲ್ಲಿ ಇರುವ ಲೋಪದೋಷಗಳು, ಈ ಸಮಸ್ಯೆಗಳನ್ನು ನಿವಾರಿಸುವ ಪರಿಹಾರೋಪಾಯಗಳು, ಹಣಕಾಸು ಸೇರ್ಪಡೆಯಲ್ಲಿ ಈ ವ್ಯವಸ್ಥೆ ನಿರ್ವಹಿಸುತ್ತಿರುವ ಪಾತ್ರದ ಮೌಲ್ಯಮಾಪನದ ಪರಾಮರ್ಶೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮದ ಪ್ರಕಾರ, ದೇಶದಲ್ಲಿರುವ ಸುಮಾರು ಶೇಕಡಾ 95ರಷ್ಟು ವಾಲೆಟ್ ಕಂಪನಿಗಳು ಕೆವೈಸಿ ಪೂರ್ಣಗೊಳಿಸಿಲ್ಲ ಮತ್ತು ಸುರಕ್ಷತಾ ಖಾತ್ರಿಯನ್ನು ಸಹ ಸರಿಯಾಗಿ ಒದಗಿಸಿಲ್ಲ. ಹಾಗಾಗಿ, ನಗದುರಹಿತ (ಡಿಜಿಟಲ್) ಪಾವತಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್, ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ. ಡಿಜಿಟಲ್ ಪಾವತಿಯ ಸುರಕ್ಷತೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಐದು ಸದಸ್ಯರ ಸಮಿತಿ ಅಸ್ತಿತ್ವಕ್ಕೆ ಬರಲಿದೆ.

ಮಾರ್ಚ್ 1ರ ನಂತರ ಕೆವೈಸಿ ಇಲ್ಲದೆ ವಾಲೆಟ್ ಮೂಲಕ ಹಣ ಬಳಕೆ ಮಾಡಲು ಮತ್ತು ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. ಹಾಗಾಗಿ, ಈ ವಿಧಾನದ ಸುರಕ್ಷತೆ ಹೆಚ್ಚಿಸಿ, ಬಳಕೆದಾರರಲ್ಲಿ ವಿಶ್ವಾಸ ಮೂಡಿಸುವ ಮತ್ತು ಬಳಕೆದಾರರು ಡಿಜಿಟಲ್ ವಿಧಾನದಲ್ಲಿಯೇ ಹಣಕಾಸು ಸೇವೆಗಳನ್ನು ಪಡೆಯುವ ವಿಧಾನಗಳ ಬಗ್ಗೆ ಸಮಿತಿಯು ಶಿಫಾರಸು ಮಾಡಲಿದೆ. ಈ ಸೌಲಭ್ಯದ ಬಳಕೆ ಹೆಚ್ಚಿಸಲು ಕೈಗೊಳ್ಳಬೇಕಾದ ಮಧ್ಯಂತರ ಕಾರ್ಯತಂತ್ರದ ಬಗ್ಗೆಯೂ ಸಮಿತಿ ಸಲಹೆಗಳನ್ನು ನೀಡಲಿದೆ.
ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೊಸಿಸ್‌ನ ಸಹ ಸ್ಥಾಪಕ ನಂದನ್ ನಿಲೇಕಣಿ ನೇತೃತ್ವದಲ್ಲಿ, ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್ ಎಚ್. ಆರ್. ಖಾನ್, ವಿಜಯ ಬ್ಯಾಂಕ್‌ನ ಮಾಜಿ ಸಿಇಒ ಕಿಶೋರ್ ಸಾನ್ಸಿ, ಐ.ಟಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಅರುಣಾ ಶರ್ಮಾ ಮತ್ತು ಐಐಐ ಅಹ್ಮದಾಬಾದ್‌ನ ಉದ್ಯಮಶೀಲತಾ ಕೇಂದ್ರದ ಮುಖ್ಯ ಸಂಶೋಧನಾ ಅಧಿಕಾರಿ ಸಂಜಯ್ ಜೈನ್ ಅವರು ಈ ನೂತನ ಸಮಿತಿಯ ಸದಸ್ಯರಾಗಿರಲಿದ್ದಾರೆ ಎಂದು ಆರ್‌ಬಿಐ ಮಾಧ್ಯಮಗಳಿಗೆ ತಿಳಿಸಿದೆ.

ನಗದುರಹಿತ ಪಾವತಿ ವಿಧಾನ ಉತ್ತೇಜಿಸುವುದು ಮತ್ತು ಇಂತಹ ಹಣ ಪಾವತಿ ವ್ಯವಸ್ಥೆ ಮೂಲಕ ಹಣಕಾಸು ಸೇರ್ಪಡೆ ಹೆಚ್ಚಿಸುವ ಉದ್ದೇಶಕ್ಕೆ ಈ ಸಮಿತಿ ರಚಿಸಲಾಗಿದ್ದು, ಆರ್.ಬಿ.ಐ. ನಿಯಮ ಪಾಲನೆ ಮಾಡದೆ ಹೋದರೆ ಮೊಬೈಲ್ ವಾಲೆಟ್ ಬ್ರೇಕ್ ಹಾಕಬೇಕು ಎಂಬ ಸಲಹೆಯನ್ನು ಸಹ ಈ ಸಮಿತಿ ನೀಡಲಿದೆ. ಭಾರತದಲ್ಲಿರುವ ಎಲ್ಲ ಮೊಬೈಲ್ ವಾಲೆಟ್ ಕಂಪನಿಗಳಿಗೆ ಕೆವೈಸಿ ಪೂರ್ಣಗೊಳಿಸಲು 2018 ರವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಬಹುತೇಕ ಕಂಪನಿಗಳು ಇದನ್ನು ನಿರ್ಲಕ್ಷ್ಯಿಸಿವೆ. ಇದು ಕೂಡ ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಲಾಗಿದೆ.
ಓದಿರಿ: ಇದೇ ತಿಂಗಳು ವಿಶ್ವದ ಮೊದಲ 7 ಕ್ಯಾಮೆರಾಗಳ ಸ್ಮಾರ್ಟ್‌ಫೋನ್ ಬಿಡುಗಡೆ ಪಕ್ಕಾ!!


Click it and Unblock the Notifications