ಕೊನೆಗೂ ಲೀಕ್ ಆಯ್ತು ಕೋಕ-ಕೋಲಾ ಫೋನ್ ಶೈಲಿ; ನಿರೀಕ್ಷಿತ ಫೀಚರ್ಸ್ ಏನು!?
ಸ್ಮಾರ್ಟ್‌ಫೋನ್‌ಗಳ ವಿಷಯಕ್ಕೆ ಬಂದರೆ ಈಗಾಗಲೇ ಹಲವು ಬ್ರ್ಯಾಂಡ್‌ಗಳು ವಿಭಿನ್ನ ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಇವು ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತಿವೆ. ಇದರ ನಡುವೆ ಪ್ರಮುಖ ತಂಪು ಪಾನೀಯ ತಯಾರಿಕಾ ಬ್ರ್ಯಾಂಡ್ ಆದ ಕೋಕ-ಕೋಲಾ ಮತ್ತೊಂದು ಸ್ಮಾರ್ಟ್‌ಫೋನ್ ತಯಾರಿಕಾ ಬ್ರ್ಯಾಂಡ್ ಜೊತೆ ಕೈಜೋಡಿಸಿದ್ದು, ಈ ಹೊಸ ಸ್ಮಾರ್ಟ್‌ಫೋನ್ ಇನ್ನೇನು ಮಾರುಕಟ್ಟೆಯಲ್ಲಿ ಅಬ್ಬರಿಸಲು ಸಜ್ಜಾಗಿದೆ.

ಹೌದು, ಕೋಕ ಕೋಲಾ ಆವೃತ್ತಿಯ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ಫೆಬ್ರವರಿ 10 ರಂದು ಲಾಂಚ್ ಆಗಲಿದ್ದು, ಈ ಫೋನ್‌ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ. ಅದರಂತೆ ಈ ಫೋನ್‌ನ ಹೆಸರೇನು?, ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ?, ಬೆಲೆ ಎಷ್ಟಿರಬಹುದು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.
ರಿಯಲ್‌ಮಿ + ಕೋಕ ಕೋಲಾ
ರಿಯಲ್‌ಮಿ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದ್ದು, ಈ ಮೂಲಕ ಈ ವಿಶೇಷ ರೂಪಾಂತರವನ್ನು ಮಾರುಕಟ್ಟೆಗೆ ಪರಿಚಯಿಸಲು ಕೋಕ-ಕೋಲಾದೊಂದಿಗೆ ಸಹಕರಿಸುತ್ತಿದೆ ಎಂದು ತಿಳಿದುಬಂದಿದೆ. ಈ ಹೊಸ ಸ್ಮಾರ್ಟ್‌ಫೋನ್‌ಗೆ ರಿಯಲ್‌ಮಿ 10 ಪ್ರೊ ನ ವಿಶೇಷ ಆವೃತ್ತಿ ಎಂದು ತಿಳಿದುಬಂದಿದೆ. ಹಾಗೆಯೇ ರಿಯಲ್‌ಮಿ 10 ಪ್ರೊ ಸ್ಮಾರ್ಟ್‌ಫೋನ್ ಅನ್ನು ಕಳೆದ ವರ್ಷದ ಕೊನೆಯಲ್ಲಿ ಭಾರತದಲ್ಲಿ ಲಾಂಚ್ ಮಾಡಲಾಗಿತ್ತು.

ಡ್ಯುಯಲ್ ಟೋನ್ ವಿನ್ಯಾಸದಲ್ಲಿ ರಿಯಲ್‌ಮಿ 10 ಪ್ರೊ 5G
ಸೋರಿಕೆಯಾದ ಚಿತ್ರಗಳ ಪ್ರಕಾರ ಈ ಸ್ಮಾರ್ಟ್‌ಫೋನ್‌ನ ರಿಯರ್ ಪ್ಯಾನೆಲ್ ವಿನ್ಯಾಸದಲ್ಲಿ ಡ್ಯುಯಲ್ ಟೋನ್ ಅನ್ನು ಪಡೆದುಕೊಂಡಿದೆ. ಅಂದರೆ ರಿಯರ್ ಪ್ಯಾನೆಲ್‌ನ ಮೂರನೇ ಒಂದು ಭಾಗವು ಕಪ್ಪು ಬಣ್ಣದಿಂದ ಕೂಡಿದೆ. ಹಾಗೆಯೇ ಉಳಿದ ಭಾಗವು ಕೆಂಪು ಬಣ್ಣದಿಂದ ಕೂಡಿದ್ದು, ಇದರ ಮೇಲೆ ಕೋಕ-ಕೋಲಾ ಬ್ರ್ಯಾಂಡಿಂಗ್ ಅನ್ನು ಸ್ಲ್ಯಾಪ್ ಮಾಡಲಾಗಿದೆ. ಆದರೂ ರಿಯಲ್‌ಮಿ 10 ಪ್ರೊ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಅನ್ನೇ ಹೊಂದಿರಲಿದೆ ಎನ್ನಲಾಗಿದ್ದು, ವಿನ್ಯಾಸ ಮಾತ್ರ ಬದಲಾಗಲಿದೆ ಎನ್ನಲಾಗಿದೆ. ಹಾಗಿದ್ರೆ ರಿಯಲ್‌ಮಿ 10 ಪ್ರೊ ಫೀಚರ್ಸ್ ಏನು ಎಂಬುದನ್ನು ನೋಡಿ.
ರಿಯಲ್‌ಮಿ 10 ಪ್ರೊ 5G ಫೀಚರ್ಸ್
ರಿಯಲ್‌ಮಿ 10 ಪ್ರೊ 5G ಸ್ಮಾರ್ಟ್‌ಫೋನ್ 6.72 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್ ನೀಡಲಿದ್ದು, ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕಾಗಿ ಮೇಲ್ಭಾಗದ ಮಧ್ಯದಲ್ಲಿ ಪಂಚ್ ಕಟೌಟ್‌ನ ಶೈಲಿ ಪಡೆದುಕೊಂಡಿದೆ. ಇದರೊಂದಿಗೆ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಲಾಂಚ್ ಆಗಿದೆ.

ಹಾಗೆಯೇ ರಿಯರ್ ಡ್ಯುಯಲ್ ಕ್ಯಾಮೆರಾ ರಚನೆ ಇದರಲ್ಲಿದ್ದು, 108MP ಪ್ರಮುಖ ಕ್ಯಾಮೆರಾ ಸೆನ್ಸರ್ ಹಾಗೂ 2MP ಮ್ಯಾಕ್ರೋ ಸೆನ್ಸರ್ ಆಯ್ಕೆ ಇದೆ. ಇನ್ನು ಈ ಫೋನ್‌ನ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 5000mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ರಿಯಲ್‌ಮಿ 10 ಪ್ರೊ ಬೆಲೆ ಹಾಗೂ ಲಭ್ಯತೆ
ರಿಯಲ್‌ಮಿ 10 ಪ್ರೊ ಸ್ಮಾರ್ಟ್‌ಫೋನ್ ನಲ್ಲಿ 6GB RAM ವೇರಿಯಂಟ್‌ಗೆ 18,999 ರೂ. ಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ. ಇನ್ನು ಫೋನ್‌ನ ಕೋಕ-ಕೋಲಾ ಆವೃತ್ತಿಯು ಇದೇ ಬೆಲೆಯನ್ನು ಹೊಂದಿರುತ್ತದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಈ ಬೆಲೆಯ ಆಸುಪಾಸಿನಲ್ಲಿ ಹೊಸ ಆವೃತ್ತಿಯ ಫೋನ್ ಲಭ್ಯವಾಗಬಹುದು. ಇನ್ನು ಕಂಪೆನಿಯು ಫೆಬ್ರವರಿ 10 ರಂದು ರಿಯಲ್‌ಮಿ 10 ಪ್ರೊ 5G ಸ್ಮಾರ್ಟ್‌ಫೋನ್‌ನ ವಿಶೇಷ ಆವೃತ್ತಿಯನ್ನು ಅನಾವರಣಗೊಳಿಸಲಿದೆ.


Click it and Unblock the Notifications