Realme: ಶೀಘ್ರದಲ್ಲೇ ಭಾರತದಲ್ಲಿ ಸೌಂಡ್ ಮಾಡಲಿದೆ ರಿಯಲ್‌ಮಿ 12 ಪ್ರೊ ಸರಣಿ: ಫೀಚರ್ಸ್ ಏನು?
ರಿಯಲ್‌ಮಿ ಫೋನ್‌ಗಳಿಗೆ (Realme phone) ಭಾರತದ ಉತ್ತಮವಾದ ಮಾರುಕಟ್ಟೆ. ಈ ಕಾರಣಕ್ಕೆ ಭಾರತದಲ್ಲಿ ರಿಯಲ್‌ಮಿ ವಿಶೇಷವಾದ ಹಾಗೂ ಕೈಗೆಟಕುವ ದರದಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇರುತ್ತದೆ. ಈ ನಡುವೆ ಇನ್ನೇನು ಕೆಲವೇ ದಿನಗಳಲ್ಲಿ ರಿಯಲ್‌ಮಿ 12 ಪ್ರೊ ಸರಣಿ (Realme 12 Pro series) ಫೋನ್‌ಗಳನ್ನು ಲಾಂಚ್ ಮಾಡಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಹೌದು, ಭಾರತದಲ್ಲಿ ರಿಯಲ್‌ಮಿ 12 ಪ್ರೊ ಸರಣಿಯನ್ನು ಶೀಘ್ರದಲ್ಲೇ ಲಾಂಚ್ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಈ ಡಿವೈಸ್ BIS ಪ್ರಮಾಣೀಕರಣವನ್ನು ಪಡೆದುಕೊಂಡಿದ್ದು, 5G ಮಧ್ಯಮ ಶ್ರೇಣಿಯ ಫೋನ್‌ಗಳ ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ ಎಂದು ಹೆಳಲಾಗಿದೆ. ಹಾಗಿದ್ರೆ, ಈ ಫೋನ್ ಯಾವಾಗ ಲಾಂಚ್ ಆಗಲಿದೆ, ಲೀಕ್ ಮಾಹಿತಿ ಪ್ರಕಾರ ಈ ಫೋನ್ ಏನೆಲ್ಲಾ ಫೀಚರ್ಸ್ ಆಯ್ಕೆ ಪಡೆದಿದೆ ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಿಯಲ್‌ಮಿ 12 ಪ್ರೊ: ರಿಯಲ್‌ಮಿ 12 ಪ್ರೊ ಸರಣಿಯು ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಬಹುದು ಎಂದು ಹೇಳಲಾಗಿದೆ. ಯಾಕೆಂದರೆ ರಿಯಲ್‌ಮಿ 11 ಪ್ರೊ ಸರಣಿಯನ್ನು ಕಳೆದ ವರ್ಷ ಜೂನ್‌ನಲ್ಲಿ ಅನಾವರಣ ಮಾಡಿತ್ತು. ಆದರೆ ಇದರ ಉತ್ತರಾಧಿಕಾರಿಯು ಇದಕ್ಕೂ ಮುನ್ನವೇ ಆಗಮಿಸುವ ನಿರೀಕ್ಷೆಯಿದೆ. ಅಂದರೆ Q1 2024 ರಲ್ಲಿ ಈ ಫೋನ್ ಲಾಂಚ್ ಆಗಲಿದೆ ಎನ್ನುವ ಮಾಹಿತಿ ಇದೆ. ಇದಕ್ಕೆ ಕಾರಣ ಏನೆಂದರೆ 11 ಪ್ರೊ BIS ಪ್ರಮಾಣೀಕರಣವನ್ನು ಪಡೆದ ನಂತರ 2 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಭಾರತದಲ್ಲಿ ಫೋನ್ ಅನ್ನು ಲಾಂಚ್ ಮಾಡಿತ್ತು.
ಈವರೆಗೆ ರಿಯಲ್‌ಮಿ 12 ಪ್ರೊ ಸರಣಿಯ ಬಿಡುಗಡೆಯ ಕುರಿತು ರಿಯಲ್‌ಮಿ ಇನ್ನೂ ಯಾವುದೇ ದೃಢೀಕರಣವನ್ನು ನೀಡಿಲ್ಲ. ಅದಾಗ್ಯೂ ಈ ಫೋನ್ ಏನೆಲ್ಲಾ ಫೀಚರ್ಸ್ ಪಡೆದುಕೊಂಡಿರಬಹುದು ಎಂಬುದನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅದರಂತೆ ಈ ಫೀಚರ್ಸ್‌ನಲ್ಲಿ ಈ ಫೋನ್ ಕಾಣಿಸಿಕೊಂಡರೆ ಮಧ್ಯಮ ಶ್ರೇಣಿಯ ಫೋನ್‌ಗಳ ವಿಭಾಗದಲ್ಲಿ ಸುಂಟರಗಾಳಿಯನ್ನೇ ಉಂಟು ಮಾಡಲಿದೆ.

ರಿಯಲ್‌ಮಿ 12 ಪ್ರೊ, ರಿಯಲ್‌ಮಿ 12 ಪ್ರೊ +ನ ಲೀಕ್ ಫೀಚರ್ಸ್ ಕಡೆ ಗಮನಹರಿಸುವುದಾದರೆ ಈ ರಿಯಲ್‌ಮಿ 12 ಪ್ರೊ ಸರಣಿಯು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 3 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದ್ದು, 32 ಮೆಗಾಪಿಕ್ಸೆಲ್ ಸೋನಿ IMX709 ಟೆಲಿಫೋಟೋ ಸೆನ್ಸರ್‌ನ 2x ಆಪ್ಟಿಕಲ್ ಜೂಮ್‌ಗೆ ಬೆಂಬಲದೊಂದಿಗೆ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ.
ಇದು ವರ್ಧಿತ ಫೋಟೋಗ್ರಫಿ ಸಾಮರ್ಥ್ಯಗಳನ್ನು ನೀಡಲಿದ್ದು, ಇದರೊಂದಿಗೆ ಪ್ರೊ+ ವೇರಿಯಂಟ್ ಫೋನ್ 64 ಮೆಗಾಪಿಕ್ಸೆಲ್ ಓಮ್ನಿ ವಿಷನ್ OV64B ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು 3x ಆಪ್ಟಿಕಲ್ ಜೂಮ್‌ನೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಜೊತೆಗೆ ಇನ್ನೂ ಅನೇಕ ರೀತಿಯ ವಿಶೇಷ ಕ್ಯಾಮೆರಾ ಫೀಚರ್ಸ್ ಅನ್ನು ಈ ಫೋನ್ ಪಡೆಯಲಿದೆ ಎಂದು ಹೇಳಲಾಗಿದೆ.
ವಿನ್ಯಾಸದ ವಿಚಾರಕ್ಕೆ ಬಂದರೆ ಈ ಫೋನ್ ಡ್ಯುಯಲ್ ಸೆನ್ಸರ್‌ಗಳು ಮತ್ತು ಆಯತಾಕಾರದ ಪೆರಿಸ್ಕೋಪ್ ಲೆನ್ಸ್‌ನೊಂದಿಗೆ ವಿಶೇಷವಾದ ವೃತ್ತಾಕಾರದ ಕ್ಯಾಮೆರಾ ವಿನ್ಯಾಸವನ್ನು ಹೊಂದುವ ನಿರೀಕ್ಷೆಯಿದೆ. ಹಾಗೆಯೇ ಪಂಚ್-ಹೋಲ್ ಡಿಸ್‌ಪ್ಲೇ ವಿನ್ಯಾಸ ಮತ್ತು ಹೆಚ್ಚಿನ ವೇಗದ ಚಾರ್ಜಿಂಗ್ ಬೆಂಬಲವನ್ನು ಈ ಫೋನ್‌ಗಳಲ್ಲಿ ನಿರೀಕ್ಷಿಸಬಹುದು. ಇದರೊಂದಿಗೆ ಬಾಕ್ಸ್‌ನಲ್ಲಿ ಚಾರ್ಜರ್ ಅನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ 5,000mAh ಸಾಮಥ್ಯದ ಬ್ಯಾಟರಿ ಆಯ್ಕೆ ಹೊಂದಿರಲಿದೆ ಎಂದು ಹೇಳಲಾಗಿದೆ.

ಇನ್ನು ರಿಯಲ್‌ಮಿ 12 ಪ್ರೊ ಚೀನಾದಲ್ಲಿ 12GB RAM ಮತ್ತು 256GB ಮಾದರಿಗೆ CNY 2,099 (ಭಾರತದಲ್ಲಿ ಅಂದಾಜು 25,000ರೂ.ಗಳು) ಬೆಲೆಯೊಂದಿಗೆ ಲಾಂಚ್ ಮಾಡಲಿದೆ ಎಂದು ಹೇಳಲಾಗಿದ್ದು, ರಿಯಲ್‌ಮಿ 12 ಪ್ರೊ ಸರಣಿಯು ರೆಡ್ಮಿ ನೋಟ್ 13 ಪ್ರೊ ಫೋನ್‌ಗಳ ವಿರುದ್ಧ ಸ್ಪರ್ಧೆ ನೀಡುವ ಸಾಧ್ಯತೆಯಿದೆ. ಏಕೆಂದರೆ ರೆಡ್ಮಿ 2024 ಕ್ಕೆ 30,000ರೂ. ಒಳಗೆ ಈ ಫೋನ್ ಅನಾವರಣ ಮಾಡುವ ಸಾಧ್ಯತೆ ಇದೆ.


Click it and Unblock the Notifications








