Google Pixel: ಗೊತ್ತಾಯ್ತು ಗೂಗಲ್ ಪಿಕ್ಸೆಲ್ ಫೋನ್‌ಗೆ 7 ವರ್ಷಗಳ ನವೀಕರಣ ಯಾಕೆಂದು?
ಕೆಲವು ದಿನಗಳ ಹಿಂದಷ್ಟೇ ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ (Google Pixel smartphone) ಸಂಬಂಧ ಒಂದು ಗುಡ್ ನ್ಯೂಸ್ ಹೊರಬಿದ್ದಿತ್ತು ಅದುವೇ ಸಾಫ್ಟ್‌ವೇರ್ ಅಪ್‌ಡೇಟ್ (Software update) ವಿಚಾರದಲ್ಲಿ ಈ ಫೋನ್ ಉತ್ತಮ ಸ್ಥಾನ ಪಡೆದಿದ್ದು, ಇದು ಫೋನ್‌ಗಳ ಹೆಚ್ಚಿನ ಜನಪ್ರಿಯತೆಗೂ ಸಹ ಕಾರಣವಾಗಿದೆ. ಅದರಂತೆ ಈಗ ಗೂಗಲ್ ಯಾಕೆ ಸೌಲಭ್ಯ ನೀಡುತ್ತಿದೆ ಅನ್ನೋದನ್ನು ತಿಳಿದಿದೆ.
ಹೌದು, ಗೂಗಲ್ ಕಳೆದ ವರ್ಷ ಲಾಂಚ್ ಮಾಡಿರುವ ಪಿಕ್ಸೆಲ್ 8 ಸರಣಿಯಲ್ಲಿ (Pixel 8 series) ದೊಡ್ಡ ಘೋಷಣೆಯೊಂದನ್ನು ಮಾಡಿತ್ತು. ಅದೇನೆಂದರೆ ಈ ಫೋನ್ ಬಳಕೆದಾರರಿಗೆ 7 ವರ್ಷಗಳ ಓಎಸ್ ಮತ್ತು ಭದ್ರತಾ ನವೀಕರಣ. ಆದರೆ ಈ ಮೊದಲು ಈ ಸೌಲಭ್ಯ ಇರಲಿಲ್ಲ. ದಿಢೀರನೆ ಈ ಘೋಷಣೆ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇತರೆ ಕಂಪೆನಿಗಳಿಗೆ ನಡುಕ ಹುಟ್ಟುವಂತೆ ಮಾಡಿತ್ತು. ಹಾಗಿದ್ರೆ, ಬನ್ನಿ ಗೂಗಲ್ ಯಾಕೆ ಈ ಘೋಷಣೆ ಮಾಡಿದೆ?, ಇದರಿಂದ ಪ್ರಯೋಜನ ಏನು ಅನ್ನೋದನ್ನು ತಿಳಿಯೋಣ.

ಗೂಗಲ್ ಪಿಕ್ಸೆಲ್‌ನಲ್ಲಿ 7 ವರ್ಷಗಳ ನವೀಕರಣಗಳ ಭರವಸೆ: ಗೂಗಲ್ ಈ ಮೊದಲು ತನ್ನ ಪಿಕ್ಸೆಲ್ ಫೋನ್ ನಲ್ಲಿ 3 ವರ್ಷಗಳ ಓಎಸ್ ನವೀಕರಣಗಳನ್ನು ಮತ್ತು 2 ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ನೀಡಿತ್ತು. ಈ ಮೂಲಕ ಒಟ್ಟು ಐದು ವರ್ಷಗಳವರೆಗೆ ಈ ಫೋನ್ ಬಳಕೆದಾರರು ಯಾವುದೇ ಸಮಸ್ಯೆ ಇಲ್ಲದೆ ಫೋನ್ ಅನ್ನು ಬಳಕೆ ಮಾಡಬಹುದಿತ್ತು. ಆದರೆ ಕಾಲಾನಂತರದಲ್ಲಿ ಗೂಗಲ್ ಈ ಸೌಲಭ್ಯವನ್ನು ವಿಸ್ತರಣೆ ಮಾಡಿದೆ.
ಈ ಸಂಬಂಧ ಗೂಗಲ್ ನಲ್ಲಿ ಇಂಜಿನಿಯರಿಂಗ್ ವಿಪಿ ಆಗಿ ಸೇವೆ ಸಲ್ಲಿಸುತ್ತಿರುವ ಸೆಯಾಂಗ್ ಚೌ ಅವರು ಪಾಡ್‌ಕಾಸ್ಟ್‌ನಲ್ಲಿ ಮಾಹಿತಿ ನೀಡಿದ್ದು, ಡಿವೈಸ್‌ಗಳು ಮತ್ತು ಸೇವೆಗಳ ಸಾಫ್ಟ್‌ವೇರ್, ನಿರ್ಧಾರದ ಕುರಿತು ಕೆಲವು ವಿವರ ಶೇರ್ ಮಾಡಿಕೊಂಡಿದ್ದಾರೆ. ಅಂದರೆ ಗೂಗಲ್ ತನ್ನ ಎಲ್ಲಾ ಪಿಕ್ಸೆಲ್ ಬಳಕೆದಾರರ ಸಕ್ರಿಯ ಬಳಕೆದಾರರ ಡೇಟಾವನ್ನು ಗಮನಿಸಿದ್ದು, ಹೆಚ್ಚಿನ ಜನರು ಕೆಲವು ವರ್ಷಗಳಿಂದ ಒಂದೇ ಮಾದರಿಯ ಫೋನ್ ಅನ್ನು ಬಳಕೆ ಮಾಡುವುದನ್ನು ಕಂಡುಕೊಳ್ಳಲಾಗಿದೆ.

ಈ ಕಾರಣಕ್ಕೆ ನಾವು 2016 ರಲ್ಲಿ ಲಾಂಚ್ ಮಾಡಿದ ಮಾಡಿದ ಮೂಲ ಪಿಕ್ಸೆಲ್ ಫೋನ್ ಅನ್ನು ಎಷ್ಟು ಜನರು ಬಳಕೆ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಗಣನೆಗೆ ತೆಗೆದುಕೊಂಡಾಗ ವಾಸ್ತವವಾಗಿ, ಸುಮಾರು ಏಳು ವರ್ಷಗಳವರೆಗೆ ಸಾಕಷ್ಟು ಸಕ್ರಿಯ ಬಳಕೆದಾರರ ಬೇಸ್ ಇದೆ ಎಂದು ನಾವು ಕಂಡುಕೊಂಡೆವು. ಅದರಲ್ಲೂ ಪಿಕ್ಸೆಲ್ ಫೋನ್ ಅನ್ನು 6 ವರ್ಷಗಳಿಗಿಂತ ಹೆಚ್ಚು ಕಾಲ ಸಕ್ರಿಯವಾಗಿ ಬಳಸಲಾಗುತ್ತಿದೆ ಎಂಬ ಮಾಹಿತಿ ಸಹ ತಿಳಿದುಬಂದಿತು ಎಂದು ವಿವರಿಸಿದ್ದಾರೆ.ಇದಾದ ನಂತರದಲ್ಲಿ ಗೂಗಲ್ ಒಟ್ಟು 7 ವರ್ಷಗಳ ಓಎಸ್ ಮತ್ತು ಭದ್ರತಾ ನವೀಕರಣಗಳೊಂದಿಗೆ ಪಿಕ್ಸೆಲ್ 8 ಮತ್ತು ನಂತರದ ಮಾದರಿಗಳನ್ನು ಪರಿಚಯಿಸಲು ಬದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ನಡುವೆ ಕೆಲವು ವರ್ಷಗಳಿಂದ ಪಿಕ್ಸೆಲ್ ಫೋನ್‌ಗಳ ಕಾರ್ಯಕ್ಷಮತೆಯ ಕುಸಿತದ ಬಗ್ಗೆ ಅನೇಕ ಜನರು ದೂರುತ್ತಿರುವುದನ್ನು ಗಮನಿಸಬಹುದಾಗಿದೆ. ಆದ್ದರಿಂದ ಈ ಫೋನ್‌ಗಳು ನಿಜವಾಗಿಯೂ 7 ವರ್ಷಗಳವರೆಗೆ ಕಾರ್ಯನಿರ್ವಹಿಸುತ್ತವೆ ಎಂದು ಗೂಗಲ್ ಹೇಳಿಕೊಳ್ಳುವುದು ಮಹತ್ವಾಕಾಂಕ್ಷೆಯ ಕ್ರಮದಂತೆ ತೋರುತ್ತದೆ. ಈ ಕಾರಣಕ್ಕೆ ಗೂಗಲ್ ಇನ್‌ಬಿಲ್ಟ್ ಟೆನ್ಸರ್ ಚಿಪ್ ಅನ್ನು ಬಳಸಲು ಮುಂದಾಗಿದೆ. ಇದು ಗೂಗಲ್‌ನ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಮೇಲೆ ಉತ್ತಮ ನಿಯಂತ್ರಣವನ್ನು ನೀಡಲಿದೆ.

ಇನ್ನೊಂದು ಗಮನಾರ್ಹ ವಿಷಯ ಏನೆಂದರೆ 5 ವರ್ಷ ವಯಸ್ಸಿನ ಪಿಕ್ಸೆಲ್ ಫೋನ್ ಹೊಸ ಅಪ್‌ಡೇಟ್ ಆದಾಗ ಏನಾಗುತ್ತದೆ ಎನ್ನುವ ಕುತೂಹಲ ನಿಮ್ಮಲ್ಲಿ ಮೂಡಿರಬಹುದು. ಇದಕ್ಕೆ ಚೌ ಅವರು ಪ್ರತಿಕ್ರಿಯೆ ನೀಡಿ, ಅಪ್‌ಡೇಟ್‌ನಲ್ಲಿ ಕಂಪನಿಯ ಇತ್ತೀಚಿನ ಫೀಚರ್ಸ್ ಅನ್ನು ಬಳಕೆ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ. ಇದರ ಬದಲಾಗಿ ಯಾವುದೇ ನಿರ್ಬಂಧ ಕಾರ್ಯಗಳನ್ನು ಮಾಡುವುದಿಲ್ಲ ಎಂದಿದ್ದಾರೆ.


Click it and Unblock the Notifications








