ಕೆಲವೇ ದಿನಗಳಲ್ಲಿ ರೆಡ್ಮಿ A2 ಲಾಂಚ್; ಬಜೆಟ್ ಬೆಲೆಯ ನಿರೀಕ್ಷೆ!?
ರೆಡ್ಮಿ ಕೆಲವು ದಿನಗಳ ಹಿಂದಷ್ಟೇ 300W ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸಿತ್ತು. ಇದರ ಮೂಲಕ ಕೇವಲ ಐದು ನಿಮಿಷದಲ್ಲಿ ಬ್ಯಾಟರಿ ಭರ್ತಿ ಮಾಡಿಕೊಳ್ಳಬಹುದಾಗಿದೆ. ಇದರ ನಡುವೆ ರೆಡ್ಮಿ ಹೊಸ ಸ್ಮಾರ್ಟ್‌ಫೋನ್ ಅನ್ನು ಸಹ ಅನಾವರಣ ಮಾಡಲಿದ್ದು, ಇದರ ಫೀಚರ್ಸ್ ಲೀಕ್ ಆಗಿವೆ.
ಹೌದು, ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ರೆಡ್ಮಿ ಕಂಪೆನಿಯು ರೆಡ್ಮಿ A2 (Redmi A2) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲು ಮುಂದಾಗಿದ್ದು, ಲಾಂಚ್ ಆಗುವ ಮುನ್ನವೇ ಈ ಫೋನ್ ಸಂಬಂಧ ಪ್ರಮುಖ ಮಾಹಿತಿ ಲೀಕ್ ಆಗಿವೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ಎಷ್ಟಿರಬಹುದು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರೆಡ್ಮಿ A2 ಸ್ಮಾರ್ಟ್‌ಫೋನ್
ರೆಡ್ಮಿ A1 ಸ್ಮಾರ್ಟ್‌ಫೋನ್ ಅನ್ನು ಕಳೆದ ವರ್ಷ ಲಾಂಚ್ ಮಾಡಲಾಗಿದ್ದು, ಇದರ ಉತ್ತರಾಧಿಕಾರಿ ರೆಡ್ಮಿ A2 ಅನ್ನು ಲಾಂಚ್ ಮಾಡಲು ತಯಾರಿ ನಡೆದಿದೆ. ಅದರಂತೆ ಈ ಫೋನ್ ಎನ್‌ಬಿಟಿಸಿ ಪ್ರಮಾಣೀಕರಣವನ್ನೂ ಪಡೆದುಕೊಂಡಿದೆ. ಮಾದರಿ ಸಂಖ್ಯೆ ಮತ್ತು ಫೋನ್‌ನ ಹಲವು ವಿವರ ಸಹ ಬಹಿರಂಗಗೊಂಡಿದ್ದು, ಅದರಂತೆ ಮಾದರಿ ಸಂಖ್ಯೆ 23028RN4DG ಇರಲಿದೆ. ಅದಾಗ್ಯೂ ಕಂಪೆನಿಯು ಈ ಫೋನ್‌ನ ಯಾವುದೇ ಫೀಚರ್ಸ್ ಅನ್ನು ಬಹಿರಂಗಗೊಳಿಸಿಲ್ಲವಾದರೂ ಲೀಕ್ ಮಾಹಿತಿ ಏನು ಹೇಳುತ್ತದೆ ಎನ್ನುವುದನ್ನು ಗಮನಿಸೋಣ.
ರೆಡ್ಮಿ A2 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಹೇಗಿರಲಿದೆ?
ರೆಡ್ಮಿ A2 ಸ್ಮಾರ್ಟ್‌ಫೋನ್ 6.52 ಇಂಚಿನ ಹೆಚ್‌ಡಿ+ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದ್ದು, ಇದು 1600 x 720 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ ಎನ್ನಲಾಗಿದೆ. ಜೊತೆಗೆ ಕ್ಯಾಮೆರಾ ಉದ್ದೇಶಕ್ಕಾಗಿ ಡಿಸ್‌ಪ್ಲೇಯು ವಾಟರ್ ಡ್ರಾಪ್ ನಾಚ್ ಶೈಲಿಯಲ್ಲಿ ಕಂಡುಬರಲಿದೆ ಎನ್ನಲಾಗುತ್ತಿದೆ.

ರೆಡ್ಮಿ A2 ಸ್ಮಾರ್ಟ್‌ಫೋನ್ ಪ್ರೊಸೆಸರ್ ಯಾವುದಿರಬಹುದು?
ರೆಡ್ಮಿ A2 ಸ್ಮಾರ್ಟ್‌ಫೋನ್ ಹಿಲಿಯೋ G36 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, 2GB RAM ಹಾಗೂ 32GB ಇಂಟರ್ನಲ್ ಸ್ಟೋರೇಜ್‌ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಎಸ್‌ಡಿ ಕಾರ್ಡ್ ಸ್ಲಾಟ್ ಆಯ್ಕೆ ಸಹ ಇರಲಿದ್ದು ಈ ಮೂಲಕ ಗ್ರಾಹಕರು 512GB ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಣೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎನ್ನುವ ಮಾತುಗಳು ದೃಢವಾಗಿವೆ.
ರೆಡ್ಮಿ A2 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ
ರೆಡ್ಮಿ A2 ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ವಿಷಯಕ್ಕೆ ಬಂದರೆ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಇದರಲ್ಲಿ ಇರಲಿದೆ ಎನ್ನಲಾಗಿದ್ದು, ಅದರಲ್ಲಿ ಪ್ರಮುಖವಾಗಿ 8 ಮೆಗಾಪಿಕ್ಸೆಲ್‌ನ ಪ್ರಮುಖ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್‌ನ ಡೆಪ್ತ್ ಸೆನ್ಸರ್ ಆಯ್ಕೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಜೊತೆಗೆ ಸಲ್ಫಿಗಾಗಿ ಈ ಫೋನ್ 5 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆಯನ್ನು ಪಡೆದಿರಲಿದೆ ಎಂದು ತಿಳಿದುಬಂದಿದೆ.
ರೆಡ್ಮಿ A2 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ
ರೆಡ್ಮಿ A2 ಸ್ಮಾರ್ಟ್‌ಫೋನ್5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಹೊಂದಿರಲಿದ್ದು, ಇದು 10W ಚಾರ್ಜಿಂಗ್ ಬೆಂಬಲ ಪಡೆದುಕೊಂಡಿರಲಿದೆ. ಇನ್ನುಳಿದಂತೆ ಈ ಫೋನ್ ಸಿಂಗಲ್ ಸ್ಪೀಕರ್, 3.5mm ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ ಆವೃತ್ತಿ v5.0 ಹಾಗೂ ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದರೊಂದಿಗೆ ಯುರೋಪ್‌ನಲ್ಲಿ ಕಪ್ಪು, ನೀಲಿ ಮತ್ತು ಹಸಿರಿನ ಮೂರು ಬಣ್ಣದ ಆಯ್ಕೆಗಳಲ್ಲಿ ಕಾಣಿಸಿಕೊಳ್ಳಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ರೆಡ್ಮಿ A2 ಸ್ಮಾರ್ಟ್‌ಫೋನ್ ಬೆಲೆ
ರೆಡ್ಮಿ A2 ಸ್ಮಾರ್ಟ್‌ಫೋನ್‌ನ 2GB RAM ಹಾಗೂ 32GB ವೇರಿಯಂಟ್ 8,000 ರೂ. ಗಳ ಆಸುಪಾಸಿನ ಬೆಲೆ ಹೊಂದಿರಬಹುದು ಎಂದು ಊಹಿಸಲಾಗಿದೆ. ಅದಾಗ್ಯೂ ಲಾಂಚ್ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಆದರೆ, ಕೆಲವೇ ದಿನಗಳಲ್ಲಿ ಕಂಪೆನಿಯು ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ಮತ್ತು ಅನಾವರಣದ ದಿನಾಂಕವನ್ನು ಬಹಿರಂಗಪಡಿಸಲಿದೆ ಎನ್ನಲಾಗಿದೆ.


Click it and Unblock the Notifications








