ಹುಚ್ಚೆದ್ದು ಈ ಫೋನ್ ಖರೀದಿಸಿದ ಜನ; ಒಂದೇ ಗಂಟೆಗೆ 4 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು ಸೇಲ್!
ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು (Smartphones) ಆಗಾಗ್ಗೆ ಲಾಂಚ್ ಆಗುತ್ತಲೇ ಇರುತ್ತವೆ. ಆದರೆ ಲಾಂಚ್ ಆದ ಎಲ್ಲಾ ಫೋನ್‌ಗಳು ಸಹ ಮಾರುಕಟ್ಟೆಯಲ್ಲಿ ಭದ್ರವಾಗಿ ನಿಲ್ಲಲು ಸಾಧ್ಯವಾಗುವುದಿಲ್ಲ. ಆದರೆ ಇಲ್ಲೊಂದು ಫೋನ್ ಅನ್ನು ಜನ ಹುಚ್ಚೆದ್ದು ಖರೀದಿ ಮಾಡಿದ್ದಾರೆ. ಅಂದರೆ ಕೇವಲ ಒಂದೇ ಗಂಟೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು ಖರೀದಿ ಮಾಡಲಾಗಿದೆ.
ಹೌದು, ಪ್ರತಿಯೊಬ್ಬರು ಸಹ ಹೊಸ ಫೋನ್‌ಗೆ ಅಪ್‌ಗ್ರೇಡ್ ಆಗಲು ಇಚ್ಚೆ ಪಡುತ್ತಾರೆ. ಅದರಂತೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಸುಧಾರಿತ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಈ ನಡುವೆ ಹೊಸ ರೆಡ್ಮಿ ನೋಟ್ 13 ಪ್ರೊ (Redmi Note 13 Pro) ಸರಣಿಯ ಸ್ಮಾರ್ಟ್‌ಫೋನ್‌ಗಳು ಹೊಸ ದಾಖಲೆ ಬರೆದಿವೆ. ಮೊದಲ ಸೇಲ್ ಸಮಯದಲ್ಲೇ ಈ ದಾಖಲೆ ಬರೆಯಲಾಗಿದ್ದು, ಈ ಕ್ಷಣಕ್ಕೂ ಸಹ ಈ ಫೋನ್‌ಮೇಲಿನ ಕ್ರೇಜ್ ಹೆಚ್ಚಾಗುತ್ತಲೇ ಇದೆಯಂತೆ. ಹಾಗಿದ್ರೆ, ಇಷ್ಟೊಂದು ಪ್ರಮಾಣದಲ್ಲಿ ಈ ಫೋನ್ ಅನ್ನು ಖರೀದಿ ಮಾಡಿದ್ದಾದ್ರು ಎಲ್ಲಿ? ಈ ಫೋನ್‌ನ ಬೆಲೆ ಹಾಗೂ ಫೀಚರ್ಸ್ ಏನು? ಎಂಬ ಬಗ್ಗೆ ತಿಳಿಸಿಕೊಡಲಾಗಿದೆ ಓದಿರಿ.

ರೆಡ್ಮಿ ನೋಟ್ 13 ಪ್ರೊ ಸರಣಿಯ ಮಾರಾಟ ದಾಖಲೆ: ಶಿಯೋಮಿ ರೆಡ್ಮಿ ನೋಟ್ 13 ಪ್ರೊ ಸರಣಿಯನ್ನು ಕಳೆದ ವಾರ ಲಾಂಚ್ ಮಾಡಲಾಗಿದ್ದು, ಸೆಪ್ಟೆಂಬರ್ 26 ರಂದು ಚೀನಾದಲ್ಲಿ ಮೊದಲ ಬಾರಿಗೆ ಮಾರಾಟಕ್ಕೆ ಲಭ್ಯ ಆಗಿದೆ. ಈ ನಡುವೆ ಆರಂಭಿಕ ಮಾರಾಟ ವರದಿ ಪ್ರಕಾರ 410,000 ಯುನಿಟ್‌ಗಳಿಗಿಂತ ಹೆಚ್ಚು ಫೋನ್‌ಗಳು ಸೇಲ್ ಆಗಿವೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಶಿಯೋಮಿ ಸಿಇಓ ಲೀ ಜುನ್ ಮಾರಾಟದ ಅಂಕಿಅಂಶಗಳನ್ನು ಟ್ವೀಟ್ ಮಾಡಿದ್ದಾರೆ.
ಇನ್ನು ಈ ರೆಡ್ಮಿ ನೋಟ್ 13 ಪ್ರೊ ಸರಣಿಯು ಮೂರು ಮಾದರಿಗಳನ್ನು ಒಳಗೊಂಡಿದೆ. ನೋಟ್ 13, ನೋಟ್ 13 ಪ್ರೊ ಮತ್ತು ನೋಟ್ 13 ಪ್ರೊ+ ಮಾದರಿಗಳು ಸೇರಿವೆ. ಈ ಮಾದರಿಗಳ ಬೆಲೆ ಕ್ರಮವಾಗಿ 1099 ಯುವಾನ್ (ಭಾರತದಲ್ಲಿ12,614ರೂ.ಗಳು), 1399 ಯುವಾನ್ (ಭಾರತದಲ್ಲಿ 16,057ರೂ.ಗಳು) ಮತ್ತು 1899 ಯುವಾನ್ (ಭಾರತದಲ್ಲಿ 21,796ರೂ.ಗಳು). ಮೊದಲ ಸೇಲ್‌ನಲ್ಲೇ ಈ ಫೋನ್‌ಗಳ ಮೇಲೆ 100 ಯುವಾನ್‌ಗಳ ರಿಯಾಯಿತಿಯನ್ನು ನೀಡಲಾಗಿದೆ.
ರೆಡ್ಮಿ ನೋಟ್ 13 ಪ್ರೊ ಮತ್ತು ಪ್ರೊ+ ಸ್ಮಾರ್ಟ್‌ಫೋನ್ 6.67 ಇಂಚಿನ 1.5K OLED ಡಿಸ್‌ಪ್ಲೇ ಹೊಂದಿದ್ದು, 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಮತ್ತು 120Hz ರಿಫ್ರೆಶ್ ರೇಟ್ ಮೂಲಕ ವಿಶೇಷ ಎನಿಸಿದೆ. ಇದರೊಂದಿಗೆ ಈ ಫೋನ್ MIUI 14 ಜೊತೆಗೆ ಆಂಡ್ರಾಯ್ಡ್ 13 ನಲ್ಲಿ ರನ್ ಆಗಲಿದ್ದು, ಗಾಜಿನ ವೇರಿಯಂಟ್ 8.9mm ದಪ್ಪ ಮತ್ತು 204.5 ಗ್ರಾಂ ತೂಕ ಹೊಂದಿದ್ದರೆ ಲೆದರ್-ಬ್ಯಾಕ್ ವೇರಿಯಂಟ್ 9mm ದಪ್ಪ ಮತ್ತು 199 ಗ್ರಾಂ ತೂಕ ಹೊಂದಿದೆ.
ಇನ್ನು ಪ್ರೊ ಮಾದರಿಯು 16GB RAM ಮತ್ತು 512GB ಸ್ಟೋರೇಜ್ ಆಯ್ಕೆಯೊಂದಿಗೆ ಸ್ನಾಪ್‌ಡ್ರಾಗನ್ 7s ಜನ್ 2 ಪ್ರೊಸೆಸರ್ ಅನ್ನು ಹೊಂದಿದ್ದರೆ ಪ್ರೊ+ ಮೀಡಿಯಾ ಟೆಕ್ ಡೈಮೆನ್ಸಿಟಿ 7200-ಅಲ್ಟ್ರಾ ಪ್ರೊಸೆಸರ್ ಬಲ ಪಡೆದುಕೊಂಡಿದೆ. ಈ ಫೋನ್ 16GB RAM ಮತ್ತು 512GB ಇಂಟರ್ ಸ್ಟೋರೇಜ್ ಮೂಲಕ ಉತ್ತಮ ಕಾರ್ಯಕ್ಷಮತೆ ನೀಡಲಿದೆ.

ಇದರೊಂದಿಗೆ ಪ್ರೊ ವೇರಿಯಂಟ್ 200 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಪಡೆದಿದೆ. ಈ ಫೋನ್‌ಗಳು ಸ್ಯಾಂಡ್ ವೈಟ್, ಮಿಡ್‌ನೈಟ್ ಬ್ಲಾಕ್, ಟೈಮ್ ಬ್ಲೂ, ಲೈಟ್ ಡ್ರೀಮ್ ಸ್ಪೇಸ್ ಬಣ್ಣ ಆಯ್ಕೆಗಳಲ್ಲಿ ಕಾಣಿಸಿಕೊಂಡಿವೆ. ಇದರೊಂದಿಗೆ ಪ್ರೊ ಮಾದರಿಯು 67W ವೇಗದ ಚಾರ್ಜಿಂಗ್‌ನೊಂದಿಗೆ 5100mAh ಬ್ಯಾಟರಿಯನ್ನು ಹೊಂದಿದೆ. ಪ್ರೊ+ 120W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಪ್ರಸ್ತುತ ಈ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿಲ್ಲ.


Click it and Unblock the Notifications








