ರೆಡ್ಮಿಯ ಹೊಸ ಪವರ್‌ಬ್ಯಾಂಕ್ ಲಾಂಚ್!
ಶಿಯೋಮಿ ಕಂಪನಿಯು ಸ್ಮಾರ್ಟ್‌ಫೋನ್ ಜೊತೆಗೆ ಇದೀಗ ಫ್ಯಾಶನ್, ಎಲೆಕ್ಟ್ರಾನಿಕ್ಸ್, ಸೇರಿದಂತೆ ಹಲವು ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಸಾಗಿದ್ದು, ಇತ್ತೀಚಿಗೆ ಟ್ರಿಮ್ಮರ್, LED ಲ್ಯಾಂಪ್ ಲಾಂಚ್ ಮಾಡಿದೆ. ಇದೇ ಹಾದಿಯಲ್ಲಿ ಮುಂದುವರೆದಿರುವ ಕಂಪನಿಯು ಈಗ ಮತ್ತೆ ಪವರ್‌ಬ್ಯಾಂಕ್ ಬಿಡುಗಡೆ ಮಾಡುವ ಮೂಲಕ ತನ್ನ ಆಕ್ಸಸರಿಸ್ ಲಿಸ್ಟ್‌ನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ.

ಹೌದು, ಶಿಯೋಮಿ ಕಂಪನಿಯು ರೆಡ್ಮಿ ಹೆಸರಿನಲ್ಲಿ ಇದೀಗ ಎರಡು ಹೊಸ ಪವರ್‌ಬ್ಯಾಂಕ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. 10,000mAh ಮತ್ತು 20,000mAh ಸಾಮರ್ಥ್ಯದ ಎರಡು ಆಯ್ಕೆಗಳನ್ನು ಒಳಗೊಂಡಿರುವ ಪವರ್‌ಬ್ಯಾಂಕ್ ಡಿವೈಸ್ ಇದೇ ಜುಲೈ 23ರಂದು ಮಾರಾಟ ಆರಂಭಿಸಲಿವೆ. ಮುಂದಿನ ದಿನಗಳಲ್ಲಿ ಈ ಪವರ್‌ಬ್ಯಾಂಕ್‌ಗಳು ದೇಶಿಯ ಮಾರುಕಟ್ಟೆಗೂ ಎಂಟ್ರಿ ಕೊಡಲಿವೆ ಎನ್ನಲಾಗಿದೆ. ಹಾಗಾದರೇ ಶಿಯೋಮಿಯ ಹೊಸ ರೆಡ್ಮಿ ಪವರ್‌ಬ್ಯಾಂಕ್ ಡಿವೈಸ್‌ನ ಇತರೆ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡ್ಯುಯಲ್ ಚಾರ್ಜಿಂಗ್ ಆಯ್ಕೆ
ಶಿಯೋಮಿಯ ಹೊಸ ರೆಡ್ಮಿ ಪವರ್‌ಬ್ಯಾಂಕ್‌ನಲ್ಲಿ ಎರಡು ಚಾರ್ಜಿಂಗ್ ಪೋರ್ಟ್ ಆಯ್ಕೆಗಳನ್ನು ನೀಡಲಾಗಿದ್ದು, ಏಕಕಾಲಕ್ಕೆ ಎರಡು ಸ್ಮಾರ್ಟ್‌ಫೋನ್ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದ್ದು, ಬಹುಬೇಗನೆ ಸ್ಮಾರ್ಟ್‌ಫೋನ್ ಚಾರ್ಜ್ ಪಡೆದುಕೊಳ್ಳುತ್ತವೆ. ಹಾಗೆಯೇ ಚಾರ್ಜಿಂಗ್ ಸ್ಟೇಟಸ್ ತಿಳಿಸಲು ಎಲ್‌ಇಡಿ ಲೈಟ್ ನೀಡಲಾಗಿದೆ.

ಪವರ್‌ಬ್ಯಾಂಕ್ ವಿನ್ಯಾಸ್
ಶಿಯೋಮಿ ಕಂಪನಿಯು ಬಿಡುಗಡೆ ಮಾಡಿರುವ ಹೊಸ ರೆಡ್ಮಿ ಪವರ್‌ಬ್ಯಾಂಕ್‌ಗಳು ಅತೀ ಹಗುರವಾದ ರಚನೆಯಲ್ಲಿದ್ದು, ಕಂಫರ್ಟ್ ಎನಿಸಲಿದೆ. ಈ ಡಿವೈಸ್‌ನ ಸುತ್ತಳತೆಯು 150.5 x 73.6 x 15.1mm ಆಗಿದ್ದು, ಎರಡು ಯುಎಸ್‌ಬಿ ಫೋರ್ಟ್‌ಗಳನ್ನು, ಒಂದು ಮೈಕ್ರೋ ಯುಎಸ್‌ಬಿ ಮತ್ತು ಒಂದು ಟೈಪಿ-ಸಿ ಪೋರ್ಟ್ ಆಯ್ಕೆಯನ್ನು ಒಳಗೊಂಡಿದೆ. ಸದ್ಯ ಬಿಳಿ ಬಣ್ಣದ ಆಯ್ಕೆಯಲ್ಲಿವೆ.

ಪವರ್ ಸಾಮರ್ಥ್ಯ
ಶಿಯೋಮಿಯ ಹೊಸ ಎರಡು ರೆಡ್ಮಿ ಪವರ್‌ಬ್ಯಾಂಕ್‌ಗಳು 10,000mAh ಮತ್ತು 20,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಪವರ್ ಪಡೆದಿವೆ. ಇವುಗಳ ಬ್ಯಾಟರಿ ಬಾಳಿಕೆ ಉತ್ತಮವಾಗಿದ್ದು, ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ಬ್ಯಾಟರಿ ಶಕ್ತಿಯನ್ನು ಒದಗಿಸಲಿವೆ. ಈಗಾಗಲೇ ಶಿಯೋಮಿಯು ಮಿ ಹೆಸರಿನಲ್ಲಿ 10,000mAh ಮತ್ತು 20,000mAh ಸಾಮರ್ಥ್ಯದ ಪವರ್‌ಬ್ಯಾಂಕ್‌ಗಳನ್ನು ಹೊಂದಿದೆ.

ಲಭ್ಯತೆ ಮತ್ತು ಬೆಲೆ
ಸದ್ಯ ಚೀನಾದಲ್ಲಿ ಮಾತ್ರ ಬಿಡುಗಡೆ ಆಗಿರುವ ಶಿಯೋಮಿಯ ರೆಡ್ಮಿ ಪವರ್‌ಬ್ಯಾಂಕ್‌ಗಳು 10,000mAh ಮತ್ತು 20,000mAh ಸಾಮರ್ಥ್ಯವನ್ನು ಪಡೆದುಕೊಂಡಿದೆ. 10,000mAh ಪವರ್‌ಬ್ಯಾಂಕ್ ಬೆಲೆಯು ಚೀನಾದಲ್ಲಿ 59ಯುವಾನ್ (ಅಂದಾಜು.590ರೂ) ಆಗಿದ್ದು, ಹಾಗೆಯೇ 20,000mAh ಪವರ್‌ಬ್ಯಾಂಕ್ ಬೆಲೆಯು 99ಯುವಾನ್ (ಅಂದಾಜು.990ರೂ) ಆಗಿದೆ.


Click it and Unblock the Notifications








