ಗ್ರಾಹಕರಿಗೆ ವಿಧಿಸಿದ ಹೆಚ್ಚಿನ ಶುಲ್ಕವನ್ನು ವಾಪಸ್ ನೀಡಬೇಕು, ಟೆಲಿಕಾಂ ಸಂಸ್ಥೆಗಳಿಗೆ ಟ್ರಾಯ್ ಹೊಸ ಆದೇಶ!
ಟೆಲಿಕಾಂ ಕಂಪೆನಿಗಳನ್ನು (telecom companies) ನಿಯಂತ್ರಣ ಮಾಡುವ ಟ್ರಾಯ್ ಅಂದರೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಹೊಸ ಆದೇಶ ಪ್ರಕಟಿಸಿದೆ. ಈ ಆದೇಶದಿಂದ ದೇಶದ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾ ಹಾಗೂ ಬಿಎಸ್‌ಎನ್‌ಎಲ್‌ಗೆ ಸಂಕಷ್ಟವಾದರೆ ಇವುಗಳ ಗ್ರಾಹಕರಿಗೆ ಮಾತ್ರ ಸಂತಸದ ವಿಚಾರವಾಗಿದೆ.
ಹೌದು, ಭಾರತದಲ್ಲಿನ ಟೆಲಿಕಾಂ ಕಂಪನಿಗಳಿಗೆ ಆಘಾತ ಉಂಟು ಮಾಡುವ ಹೊಸ ನಿಯಂತ್ರಣ ಆದೇಶವನ್ನು ಟ್ರಾಯ್ (TRAI) ಬಿಡುಗಡೆ ಮಾಡಿದೆ. ಅಂದರೆ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ವಿಧಿಸಿದ ಹೆಚ್ಚಿನ ಶುಲ್ಕವನ್ನು ಅವರಿಗೆ ಮರುಪಾವತಿ ಮಾಡಬೇಕು ಎಂದು ತಿಳಿಸಲಾಗಿದೆ. ಇಷ್ಟೇ ಅಲ್ಲದೆ ಗ್ರಾಹಕರಿಗೆ ಹಲವು ರೀತಿಯಲ್ಲಿ ಈ ಆದೇಶ ಅನುಕೂಲ ಆಗಲಿದೆ. ಹಾಗಿದ್ರೆ, ಟ್ರಾಯ್‌ನ ಹೊಸ ನಿಯಮಗಳು ಏನು ಎಂಬ ವಿವರ ತಿಳಿಯಲು ಈ ಲೇಖನ ಓದಿರಿ.

ಟ್ರಾಯ್‌ನಿಂದ ಹೊಸ ಆದೇಶ: ಟೆಲಿಕಾಂ ಕಂಪನಿಗಳಲ್ಲಿನ ಆಡಿಟ್‌ಗೆ ಸಂಬಂಧಿಸಿದ ಹೊಸ ನಿರ್ದೇಶನದಲ್ಲಿ ಟ್ರಾಯ್ ಕೆಲವು ಮಾಹಿತಿಯನ್ನು ನೀಡಿದೆ. ಟ್ರಾಯ್ ನ ಹೊಸ ಆದೇಶದ ಪ್ರಕಾರ, ಟೆಲಿಕಾಂ ಕಂಪನಿಗಳು ತಮ್ಮ ಚಂದಾದಾರರಿಗೆ ಹೆಚ್ಚಿನ ಶುಲ್ಕ ವಿಧಿಸಿರುವುದು ಆಡಿಟ್‌ನಲ್ಲಿ ಸಾಬೀತಾದರೆ, ಅಂತಹ ಸಂದರ್ಭಗಳಲ್ಲಿ ಟೆಲಿಕಾಂ ಕಂಪನಿಗಳು ಆ ಹಣವನ್ನು ಹಿಂದಿರುಗಿಸಬೇಕಾಗುತ್ತದೆ ಎಂದು ಹೇಳಿದೆ.
ಹಾಗೆಯೇ ಯಾವುದೇ ಟೆಲಿಕಾಂ ಸಂಸ್ಥೆಗಳು ಲೆಕ್ಕಪರಿಶೋಧಕರಿಂದ ಗ್ರಾಹಕರಿಗೆ ಹೆಚ್ಚಿನ ಶುಲ್ಕ ವಿಧಿಸಲಾಗಿದೆ ಎಂದು ಸ್ಲಿಪ್ ಸ್ವೀಕರಿಸಿದ 3 ತಿಂಗಳ ಒಳಗೆ ಆ ಹಣವನ್ನು ಮರುಪಾವತಿ ಮಾಡಬೇಕು ಎಂದು ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಆದೇಶ ನೀಡಿದೆ. ಈ ಹೊಸ ನಿಯಮಗಳ ಮೂಲಕ ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಚಂದಾದಾರರಿಗೆ ಗರಿಷ್ಠ ಮಿತಿಮೀರಿದ ಮೊತ್ತವನ್ನು ಮರುಪಾವತಿಸಲು ಒತ್ತು ನೀಡಲಾಗಿದೆ.
ಇನ್ನು ಈ ಸೇವಾ ಗುಣಮಟ್ಟ ನಿಯಮಗಳು, 2023 ರ ಸೆಪ್ಟೆಂಬರ್ 11, 2023 ರ ಭಾಗವಾಗಿವೆ. ಟೆಲಿಕಾಂ ಕಂಪನಿಗಳು ಆಡಿಟ್ ವರದಿಯನ್ನು ಸಲ್ಲಿಕೆ ಮಾಡಲು ಏನಾದರೂ ವಿಫಲವಾದರೆ, ಭಾರೀ ದಂಡವನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಟ್ರಾಯ್ಡ್ ಇದೇ ವೇಳೆ ಎಚ್ಚರಿಸಿದೆ. ಜೊತೆಗೆ ಈ ದಂಡ ಪ್ರತಿ ವರದಿಗೆ 50 ಲಕ್ಷ ರೂ.ವರೆಗೆ ಇರಬಹುದು ಎಂದು ತಿಳಿಸಲಾಗಿದೆ.
ವಿಷಯ ಏನೆಂದರೆ ಟೆಲಿಕಾಂ ಕಂಪನಿಗಳು ಅವರು ಇಷ್ಟಪಡುವವರ ಮೂಲಕ ಲೆಕ್ಕಪರಿಶೋಧನೆ ಮತ್ತು ವರದಿಗಳನ್ನು ಸಲ್ಲಿಕೆ ಮಾಡಬಾರದು. ಆಯ್ದ ಲೆಕ್ಕ ಪರಿಶೋಧಕರ ಸಮಿತಿಯನ್ನು ಟ್ರಾಯ್ ಶಿಫಾರಸು ಮಾಡುತ್ತದೆ. ಟೆಲಿಕಾಂ ಕಂಪನಿಗಳು ತಮ್ಮ ಖಾತೆಗಳನ್ನು ಆಡಿಟ್ ಮಾಡಲು ಈ ಪ್ಯಾನೆಲ್‌ನಿಂದ ಲೆಕ್ಕಪರಿಶೋಧಕರನ್ನು ಬಳಕೆ ಮಾಡಿಕೊಳ್ಳಬೇಕು. ಹೊಸ ಕಾನೂನಿನ ಪ್ರಕಾರ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಮೀಟರ್ ಮತ್ತು ಬಿಲ್ಲಿಂಗ್‌ಗಳನ್ನು ಸ್ಪಷ್ಟಪಡಿಸಬೇಕು ಎಂದು ಕಟ್ಟು ನಿಟ್ಟಾದ ಆದೇಶ ಹೊರಡಿಸಲಾಗಿದೆ.
ಇಷ್ಟೇ ಅಲ್ಲದೆ ವರ್ಷಕ್ಕೊಮ್ಮೆ ಲೆಕ್ಕಪರಿಶೋಧನೆ ನಡೆಸಬೇಕು ಮತ್ತು ಲೆಕ್ಕಪರಿಶೋಧನೆಯ ಬಗ್ಗೆ ಕ್ರಮ ತೆಗೆದುಕೊಂಡ ವರದಿಯನ್ನು ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಬೇಕು. ಎಲ್ಲಾ ಟೆಲಿಕಾಂ ಕಂಪನಿಗಳು ಪ್ರತಿ ವರ್ಷ ಏಪ್ರಿಲ್ 15 ರೊಳಗೆ ಲೆಕ್ಕಪರಿಶೋಧನೆ ಮಾಡಬೇಕಾದ ಬಿಲ್ಲಿಂಗ್ ವ್ಯವಸ್ಥೆಗಳು ಮತ್ತು ಪರವಾನಗಿ ಪಡೆದ ಸೇವಾ ಪ್ರದೇಶಗಳ (LSAs) ವಿವರಗಳನ್ನು ಒಳಗೊಂಡಿರುವ ವಾರ್ಷಿಕ ಲೆಕ್ಕಪರಿಶೋಧನೆಯ ವೇಳಾಪಟ್ಟಿಯನ್ನು ಟ್ರಾಯ್ ಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಲೆಕ್ಕಪರಿಶೋಧನೆಯ ಸಮಯದಲ್ಲಿ ಟೆಲಿಕಾಂ ಕಂಪನಿಗಳು ಓವರ್‌ಚಾರ್ಜ್ ಮಾಡುತ್ತಿರುವುದು ಏನಾದರೂ ಕಂಡುಬಂದರೆ ಲೆಕ್ಕಪರಿಶೋಧಕರು ತಕ್ಷಣ ಅದನ್ನು ಲಿಖಿತವಾಗಿ ಸೇವಾ ಪೂರೈಕೆದಾರರ ಗಮನಕ್ಕೆ ತರಬೇಕಾಗುತ್ತದೆ. ಜೊತೆಗೆ ಕಂಪನಿಯು ಬಳಕೆದಾರರಿಗೆ ಹೆಚ್ಚಿನ ಶುಲ್ಕವನ್ನು ಮರುಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಹಾಗೆಯೇ ಈ ಹೊಸ ಕಾನೂನು ಟೆಲಿಕಾಂ ಕಂಪನಿಗಳ ಮೇಲಿನ ಆಡಿಟ್ ಹೊರೆಯನ್ನು ಸುಮಾರು 75% ರಷ್ಟು ಕಡಿಮೆ ಮಾಡುವ ಪ್ರಸ್ತಾಪವನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಪ್ರತಿ ಆರ್ಥಿಕ ವರ್ಷದಲ್ಲಿ ಪ್ರತಿ LSA (ಪರವಾನಗಿ ಪಡೆದ ಸೇವಾ ಪ್ರದೇಶ) ನಾಲ್ಕು ಲೆಕ್ಕಪರಿಶೋಧನೆಗಳು ಇದ್ದವು. ಆದರೆ, ಈಗ ಈ ನಿಯಮ ಬದಲಾಗಿದೆ. ಅಂದರೆ ಪ್ರತಿ LSA ಅನ್ನು ಪ್ರತಿ ಆರ್ಥಿಕ ವರ್ಷಕ್ಕೆ ಒಂದೇ ಆಡಿಟ್‌ಗೆ ಇಳಿಸಲಾಗುತ್ತದೆ. ಇದೇ ಸಮಯದಲ್ಲಿ, ಟ್ರಾಯ್ ಗರಿಷ್ಠ ಸುಂಕಗಳನ್ನು ಲೆಕ್ಕಪರಿಶೋಧನೆ ಮಾಡುವಂತೆ ಟೆಲಿಕಾಂ ಕಂಪನಿಗಳಿಗೆ ಆದೇಶ ಮಾಡಿದೆ. ಅಂದರೆ ಗ್ರಾಹಕರ ಹಿತಾಸಕ್ತಿಗಳಿಗೆ ಆದ್ಯತೆ ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಗರಿಷ್ಠ ಸುಂಕಗಳನ್ನು ಲೆಕ್ಕಪರಿಶೋಧನೆ ಮಾಡುವಂತೆ ನಿರ್ದೇಶಿಸಲಾಗಿದೆ.


Click it and Unblock the Notifications








