ಟೆಲಿಕಾಂ ಲೋಕದ ಇತಿಹಾಸವನ್ನು ಬದಲಿಸಲಿರುವ ಜಿಯೋ ಆಫರ್: ಇತರೆ ಕಂಪನಿಗಳಿಗೂ ಪಾಠ..!
ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಭಾರತೀಯ ಟೆಲಿಕಾಂ ಇತಿಹಾಸದಲ್ಲಿ ಈಗಾಗಲೇ ಅಚ್ಚಳಿಯುವಂತ ಹಲವು ದಾಖಲೆಗಳನ್ನು ನಿರ್ಮಿಸಿದೆ. ಇದೇ ಮಾದರಿಯಲ್ಲಿ ಸದ್ಯ ಲಾಂಚ್ ಮಾಡಿರುವ ಹೊಸ ಆಫರ್ ವೊಂದು ಟೆಲಿಕಾಂ ಲೋಕದ ಇತಿಹಾಸದಲ್ಲೇ ಮತ್ತೊಂದು ಮೈಲಿಗಲ್ಲು ಆಗಲಿದ್ದು, ಈ ಹೊಸ ಆಫರ್ ಈಗಾಗಲೇ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿರುವ ಟೆಲಿಕಾಂ ಬಳಕೆದಾರರ ಸಂಖ್ಯೆಯನ್ನು ಇಷ್ಟು ಪ್ರಮಾಣದಲ್ಲಿ ಹೆಚ್ಚಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗ್ರಾಮೀಣ ಭಾಗದ ಜನರು ಸಹ ಅತೀ ಕಡಿಮೆ ಬೆಲೆಗೆ ಉತ್ತಮ ಸೇವೆಯನ್ನು ಈ ಆಫರ್ ನಿಂದ ಪಡೆಯಬಹುದಾಗಿದೆ.

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಕರೆ ಮತ್ತು ಡೇಟಾ ದರಗಳು ಗಗನ ಮುಟ್ಟಿದ್ದ ಸಂದರ್ಭದಲ್ಲಿ ಉಚಿತ ಸೇವೆ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಬದಲಾವಣೆಯ ಗಾಳಿ ಎಬ್ಬಿಸಿದ ಜಿಯೋ, ತದ ನಂತರದಲ್ಲಿ ಉಚಿತ ಕರೆ ಮತ್ತು ಅತೀ ಕಡಿಮೆ ಬೆಲೆಗೆ ಡೇಟಾ ಸೇವೆಯನ್ನು ನೀಡುವ ಮೂಲಕ ಮತ್ತೊಂದು ಸುತ್ತಿನ ಬದಲಾವಣೆಗೆ ಕಾರಣವಾಯಿತು. ತಿಂಗಳಿಗೆ ಒಂದು GB 3G ಡೇಟಾ ಖರೀದಿಸಲು ಮತ್ತು ಬಳಸಲು ಹಿಂದೆ ಮುಂದೆ ನೋಡುತ್ತಿದ್ದ ಭಾರತೀಯರು, ಇಂದು ದಿನಕ್ಕೊಂದು GB 4G ಡೇಟಾ ಸಾಲುತ್ತಿಲ್ಲ ಎನ್ನುವದಕ್ಕೆ ನೇರಾ ಕಾರಣ ಜಿಯೋ ಎಂದರೆ ತಪ್ಪಾಗುವುದಿಲ್ಲ ಎನ್ನಬಹುದಾಗಿದೆ.
ಓದಿರಿ: KSRTC-BMTC ಬಸ್‌ನಲ್ಲೂ ಶೀಘ್ರವೇ ಉಚಿತ ವೈ-ಫೈ..!

ಜಿಯೋ ಕೇವಲ 4G VoLTE ಸಪೋರ್ಟ್:
ಜಿಯೋ ಕೇವಲ 4G VoLTE ಸಪೋರ್ಟ್ ಮಾಡುವ ಫೋನ್‌ಗಳಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತಿತ್ತು, ಅಲ್ಲದೇ 4G VoLTE ಕೇವಲ ಹೊಸ ಸ್ಮಾರ್ಟ್ ಫೋನ್‌ಗಳಲ್ಲಿ ಮಾತ್ರವೇ ಕಾಣಲು ಸಾಧ್ಯವಿತ್ತು. ಈ ಕಾರಣಕ್ಕಾಗಿ ಹಲವು ಮಂದಿ ತಮ್ಮ ಹಳೇ ಫೋನ್‌ಗಳನ್ನೇ ಬದಲಾಯಿಸಿದರು. ಆದರೆ ಗ್ರಾಮೀಣ ಪ್ರದೇಶದ ಮಂದಿ ಮತ್ತು ಹೊಸ ಫೋನ್ ಕೊಳ್ಳಲು ಸಾಧ್ಯವಾಗದೆ ಇದ್ದವರು ಜಿಯೋ ಸೇವೆಯಿಂದ ವಂಚಿತರಾಗಿದರು.


ಜಿಯೋ ಫೋನ್:
ಈ ಸಮಸ್ಯೆಗೆ ಪರಿಹಾರ ಮತ್ತು ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಜಿಯೋ ಬಿಡುಗಡೆ ಮಾಡಿದ ಸ್ಮಾರ್ಟ್ ಫೀಚರ್ ಫೋನ್ 'ಜಿಯೋ ಫೋನ್' ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಜಿಯೋ ತನ್ನ ನೂತನ ಫೋನ್‌ಗಾಗಿಯೇ ಹೊಸ ಆಫರ್ ಲಾಂಚ್ ಮಾಡಿತ್ತು. ಇದರಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಒಂದೇ ಸೇಲ್‌ನಲ್ಲಿ ಜಿಯೋ ಸುಮಾರು 60 ಲಕ್ಷ ಜಿಯೋ ಫೋನ್ ಗಳನ್ನು ಮಾರಾಟ ಮಾಡಿ, ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಫೀಚರ್ ಫೋನ್ ಎನ್ನುವ ಪಟ್ಟವನ್ನು ಪಡೆದುಕೊಂಡಿತ್ತು.

ಟೆಲಿಕಾಂ ಇತಿಹಾಸ ಬದಲಿಸುವ ಆಫರ್:
ಇಷ್ಟು ದಿನ ಜಿಯೋ ಫೋನ್ ಬಳಕೆದಾರರು ಪ್ರತಿ ತಿಂಗಳು ರೂ.149ಕ್ಕೆ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿತ್ತು. ಆದರೆ ಇದು ಸಹ ಸಾಮಾನ್ಯರ ಜೇಬಿಗೆ ಹೆಚ್ಚಿನ ಹೊರೆಯಾಗುತ್ತಿದ್ದ ಕಾರಣದಿಂದಾಗಿ ಜಿಯೋ ಫೋನ್ ಬಳಕೆದಾರರಿಗೆ ರೂ.49ರ ಪ್ಲಾನ್ ಲಾಂಚ್ ಮಾಡಲಾಗಿದ್ದು, ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಕರೆ ಮಾಡುವ ಮತ್ತು ಡೇಟಾವನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಜಿಯೋ ಬಳಕೆದಾರರಿಗೆ ಮಾಡಿಕೊಟ್ಟಿದೆ. ಈ ಆಫರ್ ಭಾರತೀಯ ಟೆಲಿಕಾಂ ಮಾರುಕಟ್ಟೆಯ ಇತಿಹಾಸವನ್ನು ಬದಲಾಯಿಸಲಿದೆ ಎನ್ನುವ ಮಾತು ತಜ್ಞ ವಲಯದಿಂದ ಕೇಳಿಬಂದಿದೆ.

ಎಲ್ಲಾ ಟೆಲಿಕಾಂ ಕಂಪನಿಗಳಿಗೂ ಪಾಠ:
ಜಿಯೋ ಹೊಸದಾಗಿ ಲಾಂಚ್ ಮಾಡಿದ ರೂ.49 ಪ್ಲಾನ್ ನಿಂದಾಗಿ ಗ್ರಾಮೀಣ ಭಾಗದ ಜನರು ಸಹ ಫೋನ್ ಬಳಸುವಂತಾಗಿದ್ದು, ಈ ಮೂಲಕ ಸಂಪರ್ಕ ಕ್ರಾಂತಿಯ ಭಾಗವಾಗಲು ಸಾಧ್ಯವಾಗಿದೆ. ಇಂಟರ್ನೆಟ್, ಕರೆ ಮತ್ತು ಮೇಸೆಜ್ ಕಳುಹಿಸುವ ಮೂಲಕ ಹೆಚ್ಚಿನ ವಿಷಯಗಳನ್ನು ವೇಗವಾಗಿ ಪಡೆದುಕೊಳ್ಳಬಹುದಾಗಿದೆ. ತಮ್ಮ ಬಳಿ ಹಣವಿಲ್ಲ ಎನ್ನುವ ಕಾರಣಕ್ಕೆ ಹಲವು ಸೇವೆಗಳಿಂದ ವಂಚಿತರಾಗುವುದು ತಪ್ಪಲಿದೆ. ಜಿಯೋ ತೆಗೆದು ಕೊಂಡಿರುವ ಈ ಹೊಸ ಹೆಜ್ಜೆಯೂ ಇತರೆ ಟೆಲಿಕಾಂ ಕಂಪನಿಗಳಿಗೆ ಪಾಠವಾಗಲಿದೆ.


Click it and Unblock the Notifications








