ಪ್ಯಾನ್‌ಕಾರ್ಡ್ ಅಪ್‌ಡೇಟ್ ಮಾಡಿ ಎನ್ನುವ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿ: 8.27 ಲಕ್ಷ ಪಂಗನಾಮ!
ಸದ್ಯಕ್ಕೆ ಭಾರತದಲ್ಲಿ ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ವಿಷಯ ಭಾರೀ ಸದ್ದು ಮಾಡುತ್ತಿದೆ. ಅದರಂತೆ 1,000ರೂ. ಗಳ ದಂಡದೊಂದಿಗೆ ಇದೀಗ ಆಧಾರ್‌ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಪ್ರಕ್ರಿಯೆ ಭಾರೀ ವೇಗವಾಗಿ ನಡೆಯುತ್ತಿದ್ದು, ಇದರ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ನೀವು ಈ ವಿಷಯದಲ್ಲಿ ಭಾರೀ ಎಚ್ಚರಿಕೆ ವಹಿಸಬೇಕಿದೆ.
ಹೌದು, ಎಸ್‌ಬಿಐನ ಮಾಜಿ ಉದ್ಯೋಗಿಯೊಬ್ಬರು ಬರೋಬ್ಬರಿ 8.27 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇದಕ್ಕೂ ಮೊದಲು ನೀವು ಪ್ಯಾನ್‌ಕಾರ್ಡ್ ಅಪ್‌ಡೇಟ್ ಮಾಡದ ಹಿನ್ನೆಲೆ ನಿಮ್ಮ ಖಾತೆಯನ್ನು ಅಮಾನ್ಯ ಮಾಡಲಾಗುತ್ತದೆ ಎನ್ನುವ ಸಂದೇಶ ಸ್ವೀಕರಿಸಿದ್ದಾರೆ. ಹಾಗಿದ್ರೆ, ಈ ಪ್ಯಾನ್ ಕಾರ್ಡ್ ನವೀಕರಣದ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿರುವ ವಂಚಕರು ಹೇಗೆಲ್ಲಾ ಹಣದ ವಿಚಾರದಲ್ಲಿ ಮೋಸ ಮಾಡುತ್ತಾರೆ ಎಂಬ ವಿವರವನ್ನು ನಾವಿಲ್ಲಿ ತಿಳಿಸಿಕೊಟ್ಟಿದ್ದೇವೆ ಓದಿರಿ.

ಪ್ಯಾನ್‌ಕಾರ್ಡ್ ಅಪ್‌ಡೇಟ್ ಮಾಡಿ ಎಂದು ಬಂದ ಸಂದೇಶ: ಹರ್ಯಾಣದ ಪಂಚಕುಲದ ಎಸ್‌ಬಿಐನ ಮಾಜಿ ಮುಖ್ಯ ವ್ಯವಸ್ಥಾಪಕರು ತಮ್ಮ ಮೊಬೈಲ್‌ನಲ್ಲಿ ಒಂದು ಮೆಸೆಜ್ ಸ್ವೀಕಾರ ಮಾಡಿದ್ದರೆ. ಅದರಲ್ಲಿ ತಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ನವೀಕರಿಸದ ಕಾರಣ ತಮ್ಮ ಎಸ್‌ಬಿಐ ಬ್ಯಾಂಕ್ ಖಾತೆಯನ್ನು ಮುಚ್ಚಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಅದರಲ್ಲಿ ಒಂದು ಲಿಂಕ್ ಅನ್ನು ಸಹ ನೀಡಲಾಗಿದೆ.
ಲಿಂಕ್ ನಲ್ಲಿ ಏನಿತ್ತು?: 63 ವರ್ಷದ ಜವಾಹರ್ ಲಾಲ್ ಬಗಾರಿ ಅವರು ತಮ್ಮ ಸ್ಮಾರ್ಟ್‌ಫೋನ್‌ಗೆ ಬಂದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಈ ಲಿಂಕ್ ಅವರನ್ನು ಎಸ್‌ಬಿಐ ಯೋನೋ ಆಪ್‌ಗೆ ಕರೆದೊಯ್ದಿದ್ದು, ಈ ವೇಳೆ ಪ್ಯಾನ್‌ಕಾರ್ಡ್ ವಿವರವನ್ನು ಅಲ್ಲಿ ಕೇಳಲಾಗಿದೆ. ಇದರಿಂದ ಅನುಮಾನಗೊಂಡ ಬಗಾರಿ ಅವರು ಆಪ್ ಅನ್ನು ತಕ್ಷಣವೇ ಕ್ಲೋಸ್ ಮಾಡಿದ್ದಾರೆ. ಆದರೆ, ಹಣ ಮಾತ್ರ ಅವರ ಬ್ಯಾಂಕ್‌ನಿಂದ ಡ್ರಾ ಆಗಿದೆ.

ಇದಾದ ಸ್ವಲ್ಪ ಸಮಯದ ನಂತರ ಎಸ್‌ಬಿಐ ಉದ್ಯೋಗಿ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಯೋರ್ವರು ತಮ್ಮ ಖಾತೆಯಿಂದ ಹಣ ಡ್ರಾ ಆಗುತ್ತಿದೆ ಎಂದು ಬಗಾರಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಬಗಾರಿ ಅವರು ಕರೆ ಮಾಡಿದವರನ್ನು ವಹಿವಾಟುಗಳನ್ನು ತಡೆಹಿಡಿಯಲು ಮನವಿ ಮಾಡಿಕೊಂಡರಾದರೂ ಅದು ಸಾಧ್ಯವಾಗಲಿಲ್ಲ. ಯಾಕೆಂದರೆ ಅಷ್ಟರೊಳಗೆ ಅವರ ಖಾತೆಯಿಂದ ಮೂರು ವಹಿವಾಟಿನ ಮೂಲಕ ಒಟ್ಟಾರೆ 8.27 ಲಕ್ಷ ವಂಚನೆ ಮಾಡಲಾಗಿದೆ.
ಘಟನೆ ಸಂಬಂಧ ಬಗಾರಿ ಅವರು ದೂರು ದಾಖಲು ಮಾಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಲಿಂಕ್ ಕ್ಲಿಕ್ ಮಾಡಿ ಏನನ್ನೂ ಭರ್ತಿ ಮಾಡದೆ ಇದ್ದರೂ ಸಹ ಇಷ್ಟು ಹಣ ಡ್ರಾ ಆಗಿದೆ ಎಂದರೆ ವಂಚಕರು ಎಷ್ಟರಮಟ್ಟಿಗೆ ಅಮಾಯಕರನ್ನು ವಂಚನೆ ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ನೀವು ಈ ರೀತಿಯ ಯಾವುದೇ ಅನಾಮಿಕ ಲಿಂಕ್ ಕ್ಲಿಕ್ ಮಾಡುವುದರಿಂದ ದೂರ ಇರಬೇಕಿದೆ.
ಇದರ ನಡುವೆ ನಿಮ್ಮ ಆಧಾರ್ ಕಾರ್ಡ್ ಈಗಾಗಲೇ ಪ್ಯಾನ್‌ಕಾರ್ಡ್‌ಗೆ ಲಿಂಕ್ ಆಗಿದೆ ಎಂದು ತಿಳಿದುಕೊಳ್ಳಲು ಹಾಗೂ ಮುಂದೆ ಈ ರೀತಿಯ ಸಮಸ್ಯೆಗೆ ಸಿಲುಕದಿರಲು ಈ ಕೆಲಸ ಮಾಡಿ. ಮೊದಲು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಬೇಕು ಇದಕ್ಕಾಗಿ ನೀವು https://www.incometax.gov.in/iec/foportal/ ಅನ್ನು ಬಳಕೆ ಮಾಡಿಕೊಳ್ಳಬಹುದು.

ನಂತರ ಲಿಂಕ್ ಆಧಾರ್ ಸ್ಟೇಟಸ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಬಳಿಕ ಕೇಳಲಾದ ಜಾಗದಲ್ಲಿ ಪ್ಯಾನ್ ಕಾರ್ಡ್ ನಂಬರ್ ಹಾಗೂ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ. ಬಳಿಕ ಆಧಾರ್ ಲಿಂಕ್ ಸ್ಟೇಟಸ್ ಅನ್ನು ನೋಡಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು. ನಿಮ್ಮ ಆಧಾರ್ ಕಾರ್ಡ್ ಪ್ಯಾನ್‌ಕಾರ್ಡ್‌ನೊಂದಿಗೆ ಲಿಂಕ್ ಆಗಿದೆಯಾ ಇಲ್ಲವಾ ಎಂಬುದು ತಿಳಿಯುತ್ತದೆ. ಇಲ್ಲವಾದರೆ ಲಿಂಕ್ ಮಾಡಿ ಎಂಬ ಆಯ್ಕೆ ಬರುತ್ತದೆ.


Click it and Unblock the Notifications








