Zomato: ವೆಜ್ ಬದಲು ನಾನ್‌ವೆಜ್ ವಿತರಣೆ; ಜೊಮ್ಯಾಟೋ, ಮೆಕ್‌ಡೊನಾಲ್ಡ್‌ಗೆ 1 ಲಕ್ಷ ರೂ.ದಂಡ
ಜೊಮ್ಯಾಟೋ (Zomato) ಎಂದಾಕ್ಷಣ ಬಾಯಲ್ಲಿ ನೀರೂರಿಸುವ ಭಕ್ಷ್ಯ ಭೋಜನ ನೆನಪಾಗುತ್ತವೆ. ಈ ಮೂಲಕ ಜನರು ತಮ್ಮಿಷ್ಟದ ಆಹಾರವನ್ನು ತಾವಿರುವಲ್ಲಿಯೇ ಕೆಲವೇ ಸಮಯದಲ್ಲಿ ತರಿಸಿಕೊಂಡು ತಿನ್ನುತ್ತಾರೆ. ಅದರಂತೆ ಇಲ್ಲೋರ್ವರು ತಮ್ಮಿಷ್ಟದ ಆಹಾರವನ್ನು ಆರ್ಡರ್ ಮಾಡಿದ್ದರು. ಆದರೆ, ಅದರ ಬದಲು ಇನ್ನೇನನ್ನೋ ವಿತರಣೆ ಮಾಡಿ ಈಗ ಲಕ್ಷ ರೂ.ಗಳ ದಂಡ ಪಾವತಿಸುವ ಸಮಸ್ಯೆಗೆ ಸಿಲುಕಿದೆ ಜೊಮ್ಯಾಟೋ.
ಹೌದು, ಇತ್ತೀಚಿನ ದಿನಗಳಲ್ಲಿ ಎಲ್ಲವನ್ನೂ ಆನ್‌ಲೈನ್‌ನಲ್ಲೇ ಆರ್ಡರ್ ಮಾಡುವ ರೂಢಿ ಜಾಸ್ತಿಯಾಗಿದೆ. ಅದರಂತೆ ಆಹಾರವನ್ನೂ ಸಹ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲಾಗುತ್ತದೆ. ಇದಕ್ಕಾಗಿ ಪ್ರಮುಖವಾಗಿ ಸ್ವಿಗ್ಗಿ ಹಾಗೂ ಜೊಮ್ಯಾಟೋ (Swiggy and Zomato) ಉತ್ತಮ ಸೇವೆ ನೀಡುತ್ತಿವೆ. ಆದರೆ ಒಂದು ತಪ್ಪಿನಿಂದಾಗಿ ಜೊಮ್ಯಾಟೋ ಮತ್ತು ಮೆಕ್‌ಡೊನಾಲ್ಡ್ ಸಂಕಷ್ಟಕ್ಕೆ ಸಿಲಿಕಿವೆ. ಹಾಗಿದ್ರೆ ಜೊಮ್ಯಾಟೋ ಮಾಡಿದ್ದ ಅಪರಾಧವಾದ್ರು ಏನು?, ನ್ಯಾಯಾಲಯ ಯಾಕೆ ಈ ಆದೇಶ ನೀಡಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಜೊಮ್ಯಾಟೋ , ಮೆಕ್‌ಡೊನಾಲ್ಡ್‌ಗೆ ದಂಡ: ಗ್ರಾಹಕ ರಾಕೇಶ್ ಕುಮಾರ್ ಶಾಸ್ತ್ರಿ ಎಂಬುವರು ಚಿಲ್ಲಿ ಪನೀರ್ ಆರ್ಡರ್ ಮಾಡಿದ್ದರು. ಆದರೆ, ಇದರ ಬದಲಾಗಿ ಚಿಲ್ಲಿ ಚಿಕನ್ ಅನ್ನು ತಪ್ಪಾಗಿ ವಿತರಿಸಿದ ನಂತರ ರೆಸ್ಟೋರೆಂಟ್ ಮತ್ತು ಡೆಲಿವರಿ ಏಜೆಂಟ್ ಕಾನೂನು ಕ್ರಮವನ್ನು ಎದುರಿಸುವಂತಾಗಿದೆ. ಈ ಪ್ರಕರಣದ ದೂರುದಾರ ರಾಕೇಶ್ ಕುಮಾರ್ ಶಾಸ್ತ್ರಿ ಅವರು ಅಕ್ಟೋಬರ್ 9 ರಂದು ತಮ್ಮ ಕುಟುಂಬಕ್ಕೆ ತಪ್ಪಾದ ಆಹಾರ ವಿತರಣೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದ್ದು, ಈ ಆರೋಪದ ಮೇಲೆ ಆನ್‌ಲೈನ್ ಆಹಾರ ಆರ್ಡರ್ ಮಾಡುವ ಪ್ಲಾಟ್‌ಫಾರ್ಮ್ ಜೊಮ್ಯಾಟೋ ಮತ್ತು ರೆಸ್ಟೋರೆಂಟ್ ಪಾಲುದಾರ ಮೆಕ್‌ಡೊನಾಲ್ಡ್ಸ್‌ಗೆ ಜೋಧಪುರದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಇಬ್ಬರಿಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಆದರೆ, ಈ ಆದೇಶದ ವಿರುದ್ಧ ಕಂಪನಿಯು ಮೇಲ್ಮನವಿ ಸಲ್ಲಿಸಲಿದೆ ಎಂದು ತಿಳಿದುಬಂದಿದೆ.
2019 ರ ಗ್ರಾಹಕ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯನ್ನು ಈ ವೇಳೆ ಎತ್ತಿ ಹಿಡಿಯಲಾಗಿದೆ. ಜೊಮ್ಯಾಟೋ ಮತ್ತು ರೆಸ್ಟೋರೆಂಟ್ ಪಾಲುದಾರ ಮೆಕ್‌ಡೊನಾಲ್ಡ್‌ಗೆ ತಪ್ಪು ಮಾಡಿರುವುದನ್ನು ಪ್ರಶ್ನಿಸಲಾಗಿದೆ. ಒಂದು ಲಕ್ಷದ ಜೊತೆಗೆ ಪ್ರಕರಣದ ವೆಚ್ಚವಾಗಿ 5 ಸಾವಿರ ರೂ.ಗಳನ್ನು ನೀಡಬೇಕು ಎಂದು ಸಹ ತಿಳಿಸಲಾಗಿದೆ. ವಿತ್ತೀಯ ದಂಡ ಮತ್ತು ಪ್ರಕರಣದ ವೆಚ್ಚವನ್ನು ಜೊಮಾಟೊ ಮತ್ತು ಮೆಕ್‌ಡೊನಾಲ್ಡ್ ಜಂಟಿಯಾಗಿ ಪಾವತಿಸಬೇಕು ಎಂದು ಹೇಳಿದ್ದು, ಇದಕ್ಕೆ ಜೊಮ್ಯಾಟೋ ಒಪ್ಪಿಗೆ ಸೂಚಿಸಿಲ್ಲ ಬದಲಾಗಿ ಮೇಲ್ಮನವಿ ಸಲ್ಲಿಸಲು ಸಜ್ಜಾಗಿದೆ.
ಈ ಆದೇಶದ ಮೂಲಕ ಗ್ರಾಹಕರು ಮತ್ತು ಕಂಪನಿಯ ನಡುವಿನ ಸಂಬಂಧವನ್ನು ನಿಯಂತ್ರಿಸುವ ಸೇವಾ ನಿಯಮಗಳನ್ನು ಜನರಿಗೆ ಅರಿವಾಗುವಂತೆ ಮಾಡಲಾಗಿದೆ. ಅಂದರೆ ಸೇವೆಯಲ್ಲಿನ ಯಾವುದೇ ಕೊರತೆ, ತಪ್ಪು ವಿತರಣೆ ಮತ್ತು ಗುಣಮಟ್ಟಕ್ಕೆ ರೆಸ್ಟೋರೆಂಟ್ ಪಾಲುದಾರರು ಜವಾಬ್ದಾರರಾಗಿರುತ್ತಾರೆ ಎಂದು ಈ ಮೂಲಕ ನ್ಯಾಯಾಲಯ ಒತ್ತಿ ಹೇಳಿದೆ. ಅದಾಗ್ಯೂ ಜೊಮ್ಯಾಟೋ ಮಾತ್ರ ಇದನ್ನು ಒಪ್ಪಿಕೊಂಡಿಲ್ಲ.
ಹೆಚ್ಚಿನ ಜನರು ಆಹಾರಕ್ಕಾಗಿ ಈ ರೀತಿಯ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಬಳಕೆ ಮಾಡುವುದರಿಂದ ಆಹಾರ ವಿತರಣಾ ಕಂಪನಿಗಳಿಗೆ ಕಠಿಣ ಗುಣಮಟ್ಟದ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲು ಮತ್ತು ಗ್ರಾಹಕರ ಕಾಳಜಿಗಳನ್ನು ತ್ವರಿತವಾಗಿ ಪರಿಹರಿಸಲು ಈ ರೀತಿಯ ಆದೇಶ ಅಗತ್ಯವಾಗಿದೆ. ಅಂದರೆ ಈ ಆದೇಶ ಪ್ರತಿ ಆರ್ಡರ್‌ನ ನಿಖರತೆಯನ್ನು ಖಾತ್ರಿಪಡಿಸುವಲ್ಲಿ ಆಹಾರ ವಿತರಣಾ ಸೇವೆಗಳು ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕು ಎಂಬುದನ್ನು ತಿಳಿಸಿಕೊಟ್ಟಿದೆ.

ನಿಮಗೂ ಏನಾದರೂ ಈ ರೀತಿಯ ತಪ್ಪಾದ ಆರ್ಡರ್‌ಗಳು ಬಂದಿದ್ದರೆ ನೀವು ಸಹ ಈ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಹುದು. ಆದರೆ, ಇದು ನ್ಯಾಯೋಚಿತವಾಗಿರಲಿ ಅಂದರೆ ಯಾವುದೇ ಸ್ವಾರ್ಥದ ಹಿತದೃಷ್ಟಿಯಿಂದ ಈ ಕೆಲಸ ಮಾಡಬೇಡಿ. ಈ ಮೂಲಕ ಮುಂದಿನ ದಿನಗಳಲ್ಲಿ ಈ ರೀತಿಯ ಪ್ಲಾಟ್‌ಫಾರ್ಮ್‌ಗಳು ಇಂತಹ ತಪ್ಪುಗಳನ್ನು ಮಾಡುವಲ್ಲಿ ಹಿಂಜರಿಯುವಂತೆ ಆಗುತ್ತದೆ.


Click it and Unblock the Notifications








