Uber: ಉಬರ್‌ನಲ್ಲಿ 8.8 ಕಿಮೀ ಸಂಚಾರಕ್ಕೆ ಬರೋಬ್ಬರಿ 1,334 ದರ! ಕೊನೆಗೂ ನ್ಯಾಯ ಪಡೆದ ಪ್ರಯಾಣಿಕ
ನೇರ ಆನ್‌ಲೈನ್ ವಂಚನೆಗಳು (Online fraud) ಒಂದು ಕಡೆಯಾದರೆ ಆಪ್ ಮೂಲಕ ಸೇವೆ ನೀಡುವ ಸಂಸ್ಥೆಗಳು ಅಥವಾ ಅಲ್ಲಿ ಕೆಲಸ ಮಾಡುವವರು ಒಂದು ರೀತಿಯಲ್ಲಿ ಜನರನ್ನು ವಂಚನೆ ಮಾಡುವುದು ಸಾಮಾನ್ಯವಾದ ವಿಷಯವಾಗಿದೆ. ಅದರಂತೆ ಈಗೊಂದು ಘಟನೆ ನಡೆದಿದ್ದು, ನ್ಯಾಯಾಲಯದ ಮೆಟ್ಟಿಲೇರಿದ ಪ್ರಯಾಣಿಕನಿಗೆ ನ್ಯಾಯ ಸಿಕ್ಕಿದೆ.
ಹೌದು, ನಮ್ಮ ದೇಶದಲ್ಲಿ ಸುಭದ್ರವಾದ ಕಾನೂನು ವ್ಯವಸ್ಥೆ ಇದೆ. ಆದರೆ, ಕೆಲವರು ಇದನ್ನು ದುರ್ಬಳಕೆ ಮಾಡಿಕೊಂಡರೆ ಇನ್ನೂ ಕೆಲವರು ಇದನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ದುರಂತ ಎಂದರೆ ಇನ್ನೂ ಕೆಲವರಿಗೆ ಕಾನೂನಿನ ಅರಿವು ಸಹ ಇಲ್ಲವೇ ಇಲ್ಲ. ಇದು ಈ ಕಡೆ ಇರಲಿ. ಇಲ್ಲೋರ್ವ ಪ್ರಯಾಣಿಕ ಉಬರ್ ವಿರುದ್ಧ ಸಮರ ಸಾರಿ ಗೆದ್ದಿದ್ದಾನೆ. ಅಲ್ಲದೆ ಮತ್ತೊಂದು ಘಟನೆಯಲ್ಲಿ ಉಬರ್ ಚಾಲಕ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸಿ ಹೋಗಿದ್ದಾನೆ. ಹಾಗಿದ್ರೆ, ಏನಿದು ಘಟನೆ? ಬನ್ನಿ ನೋಡೋಣ.

ಉಬರ್‌ಗೆ ಬಿತ್ತು ಭಾರೀ ದಂಡ: ಈ ಘಟನೆ ಆಗಸ್ಟ್ 6, 2021 ರಂದು ನಡೆದಿದ್ದು, ಇದೀಗ ಆದೇಶ ಹೊರಬಿದ್ದಿದೆ. 8.83 ಕಿಮೀ ಸವಾರಿಗಾಗಿ 1,334 ರೂ. ದರ ಪಾವತಿ ಮಾಡಿದ್ದ ಚಂಡೀಗಢದ ಉಬರ್ ಗ್ರಾಹಕನ (Uber customer) ಪರವಾಗಿ 10,000 ರೂ. ಗಳ ಪರಿಹಾರವನ್ನು ನೀಡಬೇಕು ಎಂದು ಚಂಡೀಗಢದ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಸೂಚಿಸಿದೆ. ಅಲ್ಲದೆ ಕಾನೂನು ವೆಚ್ಚಗಳನ್ನು ಪ್ರಯಾಣಿಕನಿಗೆ ಭರಿಸಬೇಕು ಎಂದು ಈ ಮೂಲಕ ಒತ್ತಿ ಹೇಳಲಾಗಿದೆ.
ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದಂತೆ, ದೂರುದಾರರಾದ ಚಂಡೀಗಢದ ಅಶ್ವನಿ ಪ್ರಶಾರ್ ಅವರು ಆಗಸ್ಟ್ 6, 2021 ರಂದು ರಾತ್ರಿ 10.40 ರಿಂದ 10.57 ರವರೆಗೆ ಕೇವಲ 15 ನಿಮಿಷಗಳ ಪ್ರಯಾಣದ ಅವಧಿಗಾಗಿ ಇಷ್ಟು ಹಣ ಪಾವತಿ ಮಾಡಿದ್ದರಂತೆ. ಇದಾದ ನಂತರದಲ್ಲಿ ಉಬರ್ ಆಪ್ (Uber app) ಮೂಲಕ ವಿವಿಧ ರೀತಿಯಲ್ಲಿ ಗ್ರಾಹಕ ಸೇವೆ ಪಡೆಯಲು ಮುಂದಾಗಿದ್ದಾರೆ. ಆದರೆ ಮಾರನೇ ದಿನ ಇದೆಲ್ಲಾ ವ್ಯರ್ಥ ಎಂದು ತಿಳಿದುಬಂದಿದೆ.

ಅಷ್ಟಕ್ಕೂ ಆಗಿದ್ದೇನು?: ಇವರು ಆರಂಭದಲ್ಲಿ ವಾಹನವನ್ನು ಬುಕ್ ಮಾಡಿದಾಗ ಉಬರ್ ಇಂಡಿಯಾ ರೈಡರ್‌ಗೆ 359 ರೂ.ಗಳನ್ನು ತೋರಿಸಿದೆ. ಆದರೆ, ಪ್ರಯಾಣದ ಸಮಯದಲ್ಲಿ ಬಹು ಮಾರ್ಗದ ವ್ಯತ್ಯಾಸಗಳಿಂದಾಗಿ 1334 ರೂ.ಗಳನ್ನು ತೋರಿಸಿದೆ. ಆದರೆ ಉಬರ್ ಇಂಡಿಯಾ ಈ ದರ ಏರಿಕೆಯನ್ನು ಸಮರ್ಥಿಸಿಕೊಂಡಿದೆ. ಪ್ರವಾಸದ ಸಮಯದಲ್ಲಿ ಹಲವಾರು ಮಾರ್ಗ ವ್ಯತ್ಯಾಸಗಳೇ ಇದಕ್ಕೆ ಕಾರಣವೆಂದು ಉಲ್ಲೇಖಿಸಿದೆ.
ಇದೆಲ್ಲಾ ಆದ ಮೇಲೆ ವಿಶ್ವಾಸಾರ್ಹತೆಯನ್ನು ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದ ಹಾಗೂ ಬಳಕೆದಾರರ ನಂಬಿಕೆಯನ್ನು ಕಾಪಾಡಿಕೊಳ್ಳಲು, ಕಂಪನಿಯು 975 ರೂ.ಗಳನ್ನು ದೂರುದಾರರ ಉಬರ್ ಖಾತೆಗೆ ಮರುಪಾವತಿ ಮಾಡಿದೆ. ಆದರೆ ಆಯೋಗ ಈ ವೇಳೆ ಗ್ರಾಹಕನಿಗೆ ಆದ ಮಾನಸಿಕ ಹಿಂಸೆಯನ್ನು ಈ ವೇಳೆ ಉಲ್ಲೇಖ ಮಾಡಿದೆ. ಗ್ರಾಹಕ ವ್ಯಾಜ್ಯಗಳ ಪ್ಲಾಟ್‌ಫಾರ್ಮ್, ಮುಂಗಡ ಬುಕಿಂಗ್ ಸಮಯದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸುವ ಅಭ್ಯಾಸವು ಅನ್ಯಾಯವಾಗಿದೆ.
ಅಲ್ಲದೆ ಅಂತಹ ದೂರುದಾರರು ಮಾನಸಿಕ ಸಂಕಟಕ್ಕೆ ಒಳಗಾಗುತ್ತಾರೆ. ಆದ್ದರಿಂದ ಅವರು ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಮತ್ತು ಕಿರುಕುಳ ಮತ್ತು ದಾವೆ ವೆಚ್ಚಗಳಿಗೆ ಅರ್ಹರು ಎಂದು ತಿಳಿಸಲಾಗಿದ್ದು, ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಮತ್ತು ಗ್ರಾಹಕರ ನಂಬಿಕೆಯನ್ನು ಎತ್ತಿಹಿಡಿಯುವುದು ಉಬರ್‌ನಂತಹ ಸೇವಾ ಪೂರೈಕೆದಾರರ ಜವಾಬ್ದಾರಿಯಾಗಿದ್ದು, ಪ್ರಶಾರ್‌ಗೆ ಪರಿಹಾರ ಮತ್ತು ಅವರ ವ್ಯಾಜ್ಯ ವೆಚ್ಚವನ್ನು ಭರಿಸುವುದರ ಜೊತೆಗೆ ಗ್ರಾಹಕರ ಕಲ್ಯಾಣ ನಿಧಿಗೆ 10,000 ರೂ.ಗಳನ್ನು ಉಬರ್ ಠೇವಣಿ ಮಾಡಬೇಕೆಂದು ಆಯೋಗ ತಿಳಿಸಿದೆ.
ಉಬರ್‌ನಿಂದ ಮತ್ತೊಂದು ಯಡವಟ್ಟು: ಈ ನಡುವೆ ಬೆಂಗಳೂರಿನ ಉಬರ್ ಡ್ರೈವರ್ (Bangalore Uber driver) ತನ್ನನ್ನು ಕ್ಯಾಬ್‌ನಿಂದ ಕೆಳಗಿಳಿಸಿದ್ದಾನೆ ಎಂದು ಪೋಲೆಂಡ್‌ನ ಗೂಗಲ್ ಟೆಕ್ಕಿ ಆರೋಪ ಮಾಡಿದ್ದಾರೆ. ಎಕ್ಸ್‌ನಲ್ಲಿ ಈ ಸಂಬಂಧ ಅವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಶನಿವಾರ ಅವರು ಕ್ಯಾಬ್ ಅನ್ನು ಬುಕ್ ಮಾಡಿದ್ದು, 1.5 ಗಂಟೆಗಳ ಕಾಲ ಸಂಚಾರ ಮಾಡಬೇಕಿತ್ತು. ಆದರೆ, ಚಾಲನೆ ಮಾಡುವಾಗ ಫೋನ್‌ನಲ್ಲಿ ಮಾತನಾಡಬೇಡಿ ಅಂದಿದ್ದೇ ತಡ ಆ ಪ್ರಯಾಣ ಅರ್ಧ ಗಂಟೆಗೆ ಕೊನೆಯಾಗಿದೆ.
ಇನ್ನು ಚಾಲಕ ನಿರಂತರವಾಗಿ ತನ್ನ ಫೋನ್‌ನಲ್ಲಿ ಮಾತನಾಡುತ್ತಲೇ ಇದ್ದನಂತೆ. ಇದರಿಂದ ಟೆಕ್ಕ್ ವಿಕ್ರಮಾದಿತ್ಯ ಅವರು ಇರುಸುಮುರುಸುಕೊಂಡು ಆ ರೀತಿ ಹೇಳಿದ್ದಾರೆ. ಆದರೆ, ಚಾಲಕ ಥಟ್ಟನೆ ಅವರನ್ನು ನನ್ನ ಕಾರಿಂದ ಇಳಿಸಿಯೇ ಬಿಟ್ಟಿದ್ದಾನೆ. ಈ ಎಲ್ಲಾ ಘಟನೆಯನ್ನು ಅವರು ಎಕ್ಸ್‌ನಲ್ಲಿ ಉಲ್ಲೇಖಿಸಿದ್ದು, ಇದಕ್ಕೆ ಉಬರ್ ಪ್ರತಿಕ್ರಿಯೆ ಸಹ ನೀಡಿದೆ. ದಯವಿಟ್ಟು ನಿಮ್ಮ ನೋಂದಾಯಿತ ಸಂಪರ್ಕ ವಿವರಗಳೊಂದಿಗೆ ಪ್ರವಾಸದ ದಿನಾಂಕ ಮತ್ತು ಸಮಯವನ್ನು ಮೆಸೆಜ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ನಮ್ಮ ತಂಡವು ಅದನ್ನು ಪರಿಶೀಲಿಸುತ್ತದೆ ಎಂದು ಬರೆದಿದೆ.


Click it and Unblock the Notifications








