Safer Internet Day: ಬಳಕೆದಾರರಿಗೆ ಪ್ರಮುಖ ಸಲಹೆ ನೀಡಿದ ವಾಟ್ಸಾಪ್: ಏನದು?
ವಾಟ್ಸಾಪ್ ಇಂದು ಹೆಚ್ಚು ಬಳಕೆ ಮಾಡುವ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಇದರಲ್ಲಿ ಬಳಕೆದಾರರು ಬೇಕಾದವರ ಜೊತೆ ತುಂಬಾ ಸೆಕ್ಯೂರ್ ಆಗಿ ಚಾಟ್ ಮಾಡಬಹುದು, ಫೋಟೋ, ವಿಡಿಯೋ ಕಳುಹಿಸಬಹುದು, ಸ್ವೀಕರಿಸಬಹುದು. ಇದಕ್ಕಾಗಿ ಮೆಟಾ ಪ್ರಮುಖವಾದ ಭದ್ರತಾ ಫೀಚರ್ಸ್‌ಗಳ ಆಯ್ಕೆಯನ್ನೂ ನೀಡಿದೆ. ಆದರೂ ಸಹ ಈ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವರು ಮೋಸ ಹೋಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.

ಹೌದು, ವಾಟ್ಸಾಪ್ ಪ್ಲಾಟ್‌ಫಾರ್ಮ್ ಅನ್ನು ವ್ಯವಸ್ಥಿತವಾಗಿ ಬಳಕೆ ಮಾಡಿಕೊಳ್ಳುತ್ತಿರುವ ಕೆಲವು ಕಿಡಿಕೇಡಿಗಳು ಸಾಮಾನ್ಯ ಬಳಕೆದಾರರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಮೋಸ ಮಾಡುತ್ತಾ ಬರುತ್ತಿದ್ದಾರೆ. ಈ ಕಾರಣಕ್ಕೆ ಸುರಕ್ಷಿತ ಇಂಟರ್ನೆಟ್ ದಿನ (Safer Internet Day ) ಆಗಿರುವ ಇಂದು ವಾಟ್ಸಾಪ್ ತನ್ನ ಬಳಕೆದಾರರಿಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡಿದ್ದು, ಈ ರೀತಿಯಲ್ಲಿ ಎಚ್ಚರಿಕೆ ವಹಿಸುವ ಮೂಲಕ ಸೈಬರ್ ಕಳ್ಳರಿಂದ ಅಂತರ ಕಾಪಾಡಿಕೊಳ್ಳಹುದು ಎಂದು ತಿಳಿಸಿದೆ. ಹಾಗಿದ್ರೆ, ವಾಟ್ಸಾಪ್ ತನ್ನ ಬಳಕೆದಾರರಿಗೆ ಏನೆಲ್ಲಾ ಸಲಹೆ ಸೂಚನೆ ನೀಡಿದೆ ಎನ್ನುವುದನ್ನು ತಿಳಿಸಿಕೊಡಲಾಗಿದೆ ಓದಿರಿ.
ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿರಿಸಿ
ವಾಟ್ಸಾಪ್‌ನಲ್ಲಿ ಬಳಕೆದಾರರು ಪ್ರೊಫೈಲ್ ಫೋಟೋ, ಲಾಸ್ಟ್ ಸೀನ್, ಆನ್‌ಲೈನ್ ಸ್ಟೇಟಸ್ ಸೇರಿದಂತೆ ಇತರೆ ಮಾಹಿತಿಯನ್ನು ಖಾಸಗಿಯಾಗಿ ಇರಿಸಿಕೊಳ್ಳುವ ಆಯ್ಕೆ ನೀಡಲಾಗಿದ್ದು, ಈ ಮೂಲಕ ಅನಾಮಿಕರು ಹಾಗೂ ಅಗತ್ಯ ಇಲ್ಲದ ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
ಅಕೌಂಟ್ ರಕ್ಷಿಸಲು ಹೆಚ್ಚಿನ ಭದ್ರತೆ ಫೀಚರ್ಸ್ ಬಳಸಿ
ವಾಟ್ಸಾಪ್‌ನಲ್ಲಿ ಅಂದಿನಿಂದ ಈವರೆಗೂ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಅಂದರೆ ಸಾಮಾನ್ಯವಾಗಿ ಬಳಕೆದಾರರು ಒಂದು ಹಂತದಲ್ಲಿ ಮಾತ್ರ ಸೆಕ್ಯೂರಿಟಿ ಪಿನ್ ಹೊಂದಿಸಿರುತ್ತಾರೆ. ಆದರೆ, ಇದರ ಬದಲಿಗೆ ವಾಟ್ಸಾಪ್‌ನಲ್ಲಿ ಎರಡು ಹಂತದ ಸೆಕ್ಯುರಿಟಿ ಫೀಚರ್ಸ್ ಆಯ್ಕೆ ನೀಡಲಾಗಿದ್ದು, ಇದನ್ನು ಬಳಕೆ ಮಾಡಬಹುದಾಗಿದೆ. ಇದು ಖಾತೆಗೆ ಹೆಚ್ಚುವರಿ ಭದ್ರತೆಯನ್ನು ನೀಡಲಿದ್ದು, ನಿಮ್ಮ ಸಿಮ್ ಕಳೆದುಕೊಂಡರೆ ಅಥವಾ ಮೊಬೈಲ್ ಕಳ್ಳತನವಾದರೆ ಈ ಸೌಲಭ್ಯ ಸಹಾಯಕ್ಕೆ ಬರಲಿದೆ.

ಯಾವುದೇ ಸಂದೇಶ ಪಾರ್ವರ್ಡ್ ಮಾಡುವಾಗ ಎಚ್ಚರ ವಹಿಸಿ
ವಾಟ್ಸಾಪ್‌ನಲ್ಲಿ ಈಗ ಹೆಚ್ಚು ಶೇರ್ ಆದ ಪಾರ್ವರ್ಡ್ ಮೆಸೆಜ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಸುಲಭ ಮಾರ್ಗ ಕಲ್ಪಿಸಿಕೊಡಲಾಗಿದೆ. ಇನ್ನು ಎಲ್ಲಾ ಫಾರ್ವರ್ಡ್ ಮಾಡಿದ ಮೆಸೆಜ್‌ಗಳಿಗೆ ಲೇಬಲ್ ಅನ್ನು ರಚಿಸಲಿದ್ದು, ಇದನ್ನು ಮತ್ತೇ ಶೇರ್ ಮಾಡುವ ಮೊದಲು ಮರು ಪರಿಶೀಲಿಸಬೇಕು ಎಂದು ತಿಳಿಸಿದೆ. ಹಾಗೆಯೇ ಒಂದು ಸಂದೇಶವನ್ನು ಎಷ್ಟು ಬಾರಿ ಫಾರ್ವರ್ಡ್ ಮಾಡಬಹುದು ಎಂಬುದನ್ನು ಮಿತಿಗೊಳಿಸುವ ಆಯ್ಕೆಯನ್ನೂ ಸಹ ನೀಡಲಾಗಿದ್ದು, ಇದು ಬಹಳ ಪ್ರಯೋಜನಕಾರಿ. ಈ ಮೂಲಕ ನಿಮಗೆ ಖಚಿತವಿಲ್ಲದ ಮೆಸೆಜ್ ಅನ್ನು ಫಾರ್ವರ್ಡ್ ಮಾಡಲು ಮುಂದಾಗಬೇಡಿ ಎಂದು ಸಲಹೆ ನೀಡಿದೆ.
ಸ್ಪ್ಯಾಮ್ ಪತ್ತೆ ಮಾಡಿ ಅವುಗಳನ್ನು ವರದಿ ಮಾಡಿ
ಸ್ಪ್ಯಾಮ್ ಸಂದೇಶಗಳು, ಸೈಬರ್ ಬೆದರಿಕೆಗಳು ಮತ್ತು ವಂಚನೆಗೆ ಸಂಬಂಧಿತ ವಿಷಯಗಳ ವಿರುದ್ಧ ನೀವು ವರದಿ ಮಾಡಬಹುದಾಗಿದೆ. ಇದರಲ್ಲಿ ಉದ್ಯೋಗದ ಕೊಡುಗೆಯಾಗಿರಬಹುದು, ನಗದು ಬಹುಮಾನವನ್ನು ಗೆಲ್ಲುವುದು ಅಥವಾ ಸಂಪೂರ್ಣ ಪ್ರಾಯೋಜಿತ ಪ್ರವಾಸಗಳ ವಿಷಯಗಳಿರಬಹುದು. ಈ ಸಂದೇಶಗಳು ಸಾಮಾನ್ಯವಾಗಿ ವೆಬ್‌ಸೈಟ್ ಲಿಂಕ್‌ಗಳನ್ನು ಒಳಗೊಂಡಿದ್ದು, ನೀವು ಅದನ್ನು ಕ್ಲಿಕ್ ಮಾಡಿ ತಕ್ಷಣ ಮಾಲ್‌ವೇರ್‌ನೊಂದಿಗೆ ವೈಯಕ್ತಿಕ ಮಾಹಿತಿಗೆ ಪ್ರವೇಶವನ್ನು ಪಡೆಯಲು ಮುಂದಾಗುತ್ತದೆ. ಹೀಗಾಗಿ ಈ ರೀತಿಯ ಯಾವುದೇ ಮೆಸೆಜ್‌ಗಳು ಕಂಡುಬಂದರೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿ
ಭಾರತದಲ್ಲಿ 10 ಸ್ವತಂತ್ರ ಸತ್ಯ ತಪಾಸಣೆ (fact-check) ಸಂಸ್ಥೆಗಳಿದ್ದು, ಇವು ಬಳಕೆದಾರರಿಗೆ ಮಾಹಿತಿಯನ್ನು ಗುರುತಿಸಲು, ಪರಿಶೀಲಿಸಲು ಸಹಾಯ ಮಾಡುತ್ತವೆ. ಅದರಲ್ಲೂ ವಾಟ್ಸಾಪ್‌ನಲ್ಲಿ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯಲು ಇವು ಸಹಾಯ ಮಾಡಲಿದ್ದು, ಫೋಟೋಗಳು, ವಿಡಿಯೋಗಳು ಮತ್ತು ವಾಯ್ಸ್ ರೆಕಾರ್ಡಿಂಗ್‌ಗಳನ್ನು ಒಳಗೊಂಡಂತೆ ತಪ್ಪುದಾರಿಗೆಳೆಯುವ ಯಾವುದೇ ವಿಷಯವನ್ನು ಇವು ಪರಿಶೀಲಿಸಲಿವೆ. ಹಾಗೆಯೇ ಇಂಗ್ಲಿಷ್ ಹಾಗೂ 11 ಭಾರತೀಯ ಭಾಷೆಗಳಲ್ಲಿ ಈ ಸೇವೆ ಬಳಕೆದಾರರಿಗೆ ಲಭ್ಯ.


Click it and Unblock the Notifications








