Samsung: ಐಫೋನ್‌ಗಳಲ್ಲಿನ ಈ ಸೌಲಭ್ಯ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯಲ್ಲಿ! ಏನಿದು? ಪ್ರಯೋಜನವೇನು?
ಅತ್ಯುತ್ತಮವಾದ ಸ್ಮಾರ್ಟ್‌ಫೋನ್ ಎಂದಾಕ್ಷಣ ಎರಡು ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಅವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಹಾಗೂ ಆಪಲ್ ಐಫೋನ್‌ಗಳು (Samsung Galaxy and Apple iPhones). ಆದರೆ, ಐಫೋನ್ ಒಂದು ಹೆಜ್ಜೆ ಮುಂದೆ ಇದ್ದು, ಸ್ಯಾಮ್‌ಸಂಗ್‌ಗೂ ಗ್ರಾಹಕರಿಗೇನು ಕಡಿಮೆ ಇಲ್ಲ. ಈ ನಡುವೆ ಐಫೋನ್ ನಲ್ಲಿ ಕಂಡು ಬರುವ ಈ ವಿಶೇಷ ಫೀಚರ್ಸ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯಲ್ಲಿ (Samsung Galaxy S24 series) ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.
ಹೌದು, ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ S24 ಸ್ಮಾರ್ಟ್‌ಫೋನ್‌ಗಳು ತುರ್ತು ಸೇವೆಗಳಿಗಾಗಿ ಉಪಗ್ರಹ ಸಂಪರ್ಕವನ್ನು (satellite connectivity) ಹೊಂದಿರಲಿವೆ ಎಂದು ತಿಳಿದುಬಂದಿದೆ. ಈ ಮೂಲಕ ಈ ಸ್ಮಾರ್ಟ್‌ಫೋನ್ ಬಳಕೆದಾರರು ಎಂತಹುದೇ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿದರೆ ಸಹಾಯಕ್ಕೆ ಕರೆ ಮಾಡಲು ಅನುವು ಮಾಡಿಕೊಡುತ್ತದೆ. ಹಾಗಿದ್ರೆ, ಈ ಸೇವೆಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ. ಅದರಲ್ಲೂ ಈ ಫೀಚರ್ಸ್ ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ.

ಉಪಗ್ರಹ ಸಂಪರ್ಕ ಸೇವೆ: ಈಗಾಗಲೇ ಐಪೋನ್‌ಗಳು ಹಾಗೂ ಆಪಲ್ ವಾಚ್‌ಗಳು ಹಲವಾರು ಜೀವಗಳನ್ನು ಅದರಲ್ಲೂ ಸಾವಿನ ಸನಿಹದಲ್ಲಿ ಇದ್ದವರನ್ನು ಉಳಿಸಿದ ಅದೆಷ್ಟೋ ಘಟನೆಗಳನ್ನು ನೀವು ಕೇಳಿರಬಹುದು. ಇದೇ ಸೇವೆ ಇನ್ಮುಂದೆ ಸ್ಯಾಮ್‌ಸಂಗ್‌ನ ಈ ಫೋನ್‌ಗಳಲ್ಲೂ ಇರಲಿದೆ. ಇದರಿಂದ ವಿವಿಧ ರೀತಿಯಲ್ಲಿ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಅಂದರೆ
ಉಪಗ್ರಹದ ಮೂಲಕ ತುರ್ತು SOS (Emergency SOS via Satellite) ಕಾರ್ಯವು ಬಳಕೆದಾರರನ್ನು ತುರ್ತು ಪ್ರಶ್ನೆಗಳ ಮೂಲಕ ಸಂವಹನ ನಡೆಸುವಂತೆ ಮಾಡುತ್ತದೆ. ಇವರ ಸ್ಥಾನವನ್ನು ಒಳಗೊಂಡಂತೆ ಅಧಿಕಾರಿಗಳಿಗೆ ಅಗತ್ಯ ಮಾಹಿತಿಯನ್ನು ರವಾನೆ ಮಾಡುವ ಕೆಲಸ ಮಾಡುತ್ತದೆ.
ಈ ವಿಶೇಷ ತುರ್ತು ಸೇವೆಗಳಿಗಾಗಿ ಉಪಗ್ರಹ ಸಂಪರ್ಕವನ್ನು ತಮ್ಮ ಮುಂದಿನ ಗ್ಯಾಲಕ್ಸಿ S24 ಯ ಪ್ರಮುಖ ಫೋನ್‌ಗಳಲ್ಲಿ ಸೇರಿಸಲಾಗುವುದು ಎಂದು ಸ್ಯಾಮ್‌ಸಂಗ್ ಅಧಿಕೃತವಾಗಿ ಮಾಹಿತಿ ನೀಡಿದೆ. ಈ ಸಂಬಂಧ ಸ್ಯಾಮ್‌ಸಂಗ್‌ನ ಸಿಸ್ಟಮ್ ಎಲ್‌ಎಸ್‌ಐ ವಿಭಾಗದ ಸಿಇಒ ಪಾರ್ಕ್ ಯೋಂಗ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಇದು ಮುಂದಿನ ವರ್ಷದ ಆರಂಭದಲ್ಲಿ ಸಿದ್ಧವಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಇನ್ನು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಬಳಕೆದಾರರು ಈ ವಿಶೇಷ ಫೀಚರ್ಸ್ ಅನ್ನು ಮುಂದಿನ ದಿನಗಳಲ್ಲಿ ಬಳಕೆ ಮಾಡಬಹುದಾಗಿದ್ದು, ಎಂತಹುದೇ ಕಠಿಣ ಪ್ರದೇಶದಲ್ಲಿ ಸಿಲುಕಿದ್ದರೂ ಸಹ ರಕ್ಷಣೆಗೆ ಕರೆ ಮಾಡಬಹುದಾಗಿದೆ. ಈ ಹೊಸ ಫೀಚರ್ಸ್ ಕಳೆದ ವರ್ಷ ಐಫೋನ್ 14 ಸರಣಿಯಲ್ಲಿ (iPhone 14 series) ಪರಿಚಯಿಸಲಾಗಿದ್ದು, ಇದಾದ ನಂತರದಲ್ಲಿ ಈಗಿನ ಹೊಸ ಸರಣಿಯಲ್ಲೂ ನೀಡಲಾಗಿದೆ. ಇದರಿಂದ ಐಫೋನ್ ಬಳಕೆದಾರರು ಸಂತಸಗೊಂಡಿದ್ದಾರೆ.
ಇನ್ನು ಗಮನಿಸಬೇಕಾದ ವಿಷಯ ಏನೆಂದರೆ ಗ್ಯಾಲಕ್ಸಿ S24 ಸರಣಿಯ ಪ್ರಮುಖ ಫೋನ್‌ಗಳಲ್ಲಿ ಮಾತ್ರ ಈ ಸೇವೆ ಇರಲಿದೆ ಎಂದು ಜನರ ತಲೆಗೆ ಸ್ಯಾಮ್‌ಸಂಗ್ ಹುಳ ಬಿಟ್ಟಿದೆ. ಇದರಿಂದ ಗ್ಯಾಲಕ್ಸಿ S24 ಸರಣಿಯ ಮಾದರಿಗಳಲ್ಲಿ ಇದು ಕಂಡುಬರಲಿದಿಯೋ ಅಥವಾ ಗ್ಯಾಲಕ್ಸಿ S24 ಅಲ್ಟ್ರಾದಲ್ಲಿ (Galaxy S24 Ultra) ಮಾತ್ರ ಇದು ಲಭ್ಯ ಇರಲಿದೆಯೋ ಎಂಬ ಬಗ್ಗೆ ಮಾಹಿತಿ ಖಚಿತವಾಗಿಲ್ಲ. ಅದಾಗ್ಯೂ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಇದು ಹೊಸ ಕ್ರಾಂತಿ ಆಗಲಿದೆ.

ಈ ಎಲ್ಲಾ ಬೆಳವಣಿಗೆ ನಡುವೆ ಜನವರಿ ಮಧ್ಯದಲ್ಲಿ ಜಾಗತಿಕವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಮತ್ತು ಗ್ಯಾಲಕ್ಸಿ S23 (Galaxy S23) ಸರಣಿಗೆ ಹೋಲಿಸಿದರೆ ಈ ಫೋನ್‌ಗಳು ಅತ್ಯುತ್ತಮವಾದ ಫೀಚರ್ಸ್ ಅನ್ನು ಪಡೆದಿರಲಿವೆ ಎಂದು ಹೇಳಲಾಗಿದೆ. ಅದರಲ್ಲೂ ಕಂಪನಿಯು 200 MP ಸೆನ್ಸರ್ ಅನ್ನು ನೀಡುವ ಬಗ್ಗೆ ತಿಳಿದುಬಂದಿದೆ. ಈ ಮೂಲಕ ಸ್ಯಾಮ್‌ಸಂಗ್ ಪ್ರಿಯರಿಗೆ ವಿಶೇಷ ಅನುಭವವನ್ನು ನೀಡಲು ಕಂಪೆನಿ ಮುಂದಾಗಿದೆ.


Click it and Unblock the Notifications








