Samsung: ಸ್ಯಾಮ್‌ಸಂಗ್ ಫೋನ್ ಬಳಕೆದಾರರಿಗೆ ಉಚಿತ ಸೌಲಭ್ಯ ಘೋಷಣೆ... ಆದರೆ!?
ಸ್ಯಾಮ್‌ಸಂಗ್ (Samsung) ಈಗಾಗಲೇ ಸಾಕಷ್ಟು ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳನ್ನು ಲಾಂಚ್ ಮಾಡುವ ಮೂಲಕ ಹಾಗೂ ಹಳೆಯ ಫೋನ್‌ಗಳಿಗೆ ಅತ್ಯುತ್ತಮ ರಿಯಾಯಿತಿ ನೀಡಿರುವ ಮೂಲಕ ಬಹಳ ಸದ್ದು ಮಾಡುತ್ತಿತ್ತು. ಈ ನಡುವೆ ಮತ್ತೆ ತನ್ನೆಲ್ಲಾ ಬಳಕೆದಾರರಿಗೆ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಬಳಕೆದಾರರು ಈ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಹೌದು, ಸ್ಯಾಮ್‌ಸಂಗ್ ಈಗಾಗಲೇ ಘೋಷಣೆ ಮಾಡಿದ ವಿಶೇಷ ಸೌಲಭ್ಯಗಳು ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಅನುಕೂಲ ಮಾಡಿಕೊಟ್ಟಿವೆ. ಈ ನಡುವೆ ತಾತ್ಕಾಲಿಕ ಕ್ಲೌಡ್ ಬ್ಯಾಕಪ್ (Temporary Cloud Backup) ಫೀಚರ್ಸ್ ಬಗ್ಗೆ ಘೋಷಣೆ ಮಾಡಿದೆ. ಅದೂ ಸಹ ಉಚಿತವಾಗಿ. ಹಾಗಿದ್ರೆ, ಈ ಉಚಿತ ಸೇವೆ ಪಡೆದುಕೊಳ್ಳುವುದು ಹೇಗೆ?, ಎಲ್ಲಿಯವರೆಗೆ ಇದು ಲಭ್ಯ ಇರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ತಾತ್ಕಾಲಿಕ ಕ್ಲೌಡ್ ಬ್ಯಾಕಪ್: ಸ್ಯಾಮ್‌ಸಂಗ್ ಹೊಸ ತಾತ್ಕಾಲಿಕ ಕ್ಲೌಡ್ ಬ್ಯಾಕಪ್ ಫೀಚರ್ಸ್ ಬಗ್ಗೆ ಘೋಷಣೆ ಮಾಡಿದ್ದು, ಬಳಕೆದಾರರು ತಮ್ಮ ಫೋನ್ ಡೇಟಾವನ್ನು ಬ್ಯಾಕಪ್ ಮಾಡಲು ಇದು ವಿವಿಧ ರೀತಿಯಲ್ಲಿ ಸಹಾಯಕವಾಗಿದೆ. ಅದರಲ್ಲೂ ಈ ಫೀಚರ್ಸ್ ನಿರ್ದಿಷ್ಟ ಫೈಲ್‌ಗಳಿಗೆ ಉಚಿತ ಸ್ಟೋರೇಜ್ ಆಯ್ಕೆಯನ್ನು ನೀಡುತ್ತದೆ. ಅದಾಗ್ಯೂ ಇಲ್ಲೊಂದು ಸಮಸ್ಯೆ ಇದೆ.
ಸ್ಯಾಮ್‌ಸಂಗ್‌ನ ತಾತ್ಕಾಲಿಕ ಕ್ಲೌಡ್ ಬ್ಯಾಕಪ್ ಬಳಕೆದಾರರಿಗೆ 100GB ಯ ಗಾತ್ರದ ಫೈಲ್‌ಗಳನ್ನು ಸ್ಟೋರ್ ಮಾಡಲು ಅನುಮತಿಸುತ್ತದೆ. ಆದರೆ, ಡೇಟಾ ಕ್ಲೌಡ್‌ನಲ್ಲಿ ಕೇವಲ 30 ದಿನಗಳವರೆಗೆ ಇರುತ್ತದೆ ಎಂಬುದು ನಿಮ್ಮ ಗಮನಕ್ಕೆ ಇರಲಿ. ಈ ಫೀಚರ್ಸ್ UI 6.0 ಅಥವಾ ಹೆಚ್ಚಿನದರಲ್ಲಿ ಚಾಲನೆಯಲ್ಲಿರುವ ಸ್ಯಾಮ್‌ಸಂಗ್ ಡಿವೈಸ್‌ಗಳನ್ನು ನಿರ್ವಹಿಸುವ ಬಳಕೆದಾರರಿಗೆ ಮಾತ್ರ ಲಭ್ಯ ಇರಲಿದೆ.

ಸ್ಯಾಮ್‌ಸಂಗ್ ಫೋನ್‌ಗಳು ಸಾಮಾನ್ಯವಾಗಿ ಹೆಚ್ಚು ರಿಪೇರಿಗೆ ಬರುವುದಿಲ್ಲ.ಅದಾಗ್ಯೂ ಏನಾದರೂ ಫೋನ್‌ಗಳನ್ನು ರಿಪೇರಿ ಮಾಡಿಸಲು ನೀವು ಮುಂದಾದರೆ ಅಥವಾ ಇತರೆ ಸನ್ನಿವೇಶಗಳಲ್ಲಿ ತಾತ್ಕಾಲಿಕವಾಗಿ ಪ್ರಮುಖ ಫೈಲ್‌ಗಳನ್ನು ಸುರಕ್ಷಿತಗೊಳಿಸಲು ಇದನ್ನು ಬಳಕೆ ಮಾಡಬಹುದಾಗಿದೆ. ಈ ಮೂಲಕ ಹೊಸ ಫೀಚರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸ್ಯಾಮ್‌ಸಂಗ್ ಮಾಹಿತಿ ನೀಡಿದೆ.
ಡೇಟಾ ನಷ್ಟದ ಭಯವಿಲ್ಲದೆ ಅಗತ್ಯ ಡೇಟಾವನ್ನು ಸಂಗ್ರಹಿಸಲು ಬಳಕೆದಾರರಿಗೆ ಸುರಕ್ಷಿತ ಸ್ಥಳವನ್ನು ಒದಗಿಸುವುದು ಈ ಹೊಸ ಉಚಿತ ಸ್ಟೋರೇಜ್ ಪ್ಲ್ಯಾನ್‌ನ ಪ್ರಾಥಮಿಕ ಉದ್ದೇಶವಾಗಿದೆ. ಸ್ಮಾರ್ಟ್‌ಫೋನ್‌ಗೆ ಯಾವುದಾದರೂ ಸೇವೆ ಅಥವಾ ಬದಲಿ ಅಗತ್ಯವಿದ್ದಾಗ ಈ ಫೀಚರ್ಸ್ ಅಮೂಲ್ಯವಾಗಿರಲಿದೆ ಎಂದು ತನ್ನ ಹೇಳಿಕೆಯಲ್ಲಿ ಸ್ಯಾಮ್‌ಸಂಗ್ ಉಲ್ಲೇಖ ಮಾಡಿದೆ.
ಇದನ್ನು ಬಳಕೆ ಮಾಡುವುದು ಹೇಗೆ?: ತಾತ್ಕಾಲಿಕ ಕ್ಲೌಡ್ ಬ್ಯಾಕಪ್ ಅನ್ನು ಬಳಸುವುದು ತುಂಬಾ ಸುಲಭ. ಬಳಕೆದಾರರು ತಮ್ಮ ನಿರ್ಣಾಯಕ ಫೈಲ್‌ಗಳನ್ನು ಸ್ಯಾಮ್‌ಸಂಗ್ ಡಿವೈಸ್‌ನಿಂದ ಕ್ಲೌಡ್‌ಗೆ ಸುಲಭವಾಗಿ ಅಪ್‌ಲೋಡ್ ಮಾಡಬಹುದು ಮತ್ತು ಇನ್ನೊಂದು ಡಿವೈಸ್‌ನಿಂದ ಅಥವಾ ಅದೇ ಡಿವೈಸ್‌ನಿಂದ ಅವುಗಳಿಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಆದಾಗ್ಯೂ, ಈ ತಡೆರಹಿತ ವರ್ಗಾವಣೆಯನ್ನು ಸಕ್ರಿಯಗೊಳಿಸಲು ಎರಡೂ ಡಿವೈಸ್‌ಗಳೂ ಸಹ ಸ್ಯಾಮ್‌ಸಂಗ್‌ನವೇ ಆಗಿರಬೇಕು ಎಂಬುದು ನಿಮಗೆ ತಿಳಿದಿರಲಿ.
ಇನ್ನು ತಾತ್ಕಾಲಿಕ ಕ್ಲೌಡ್ ಬ್ಯಾಕಪ್ ನಿಂದ ನಿಮಗೆ ಯಾವುದೇ ಸಮಸ್ಯೆ ಆಗಬಾರದು ಅಥವಾ ಹ್ಯಾಕರ್ಸ್ ಹಾಗೂ ಇನ್ನಿತರೆ ಮೋಸ ಮಾಡುವ ಜನರಿಗೆ ನಿಮ್ಮ ಡೇಟಾ ಸಿಗಬಾರದು ಎಂಬ ಕಾರಣಕ್ಕೆ ಹೆಚ್ಚಿನ ಭದ್ರತಾ ಸೌಲಭ್ಯವನ್ನೂ ಸಹ ಕಲ್ಪಿಸಿಕೊಡಲಾಗಿದೆ. ಈ ಮೂಲಕ ನೀವು ಹೆಚ್ಚುವರಿಯಾಗಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎರಡು ಅಂಶಗಳ ದೃಢೀಕರಣ ಬಳಕೆ ಮಾಡಬೇಕಾಗುತ್ತದೆ.
ಇವುಗಳ ಮಾನ್ಯತೆ 30 ದಿನಗಳು: ಇನ್ನು ಪ್ರತಿ ಫೈಲ್‌ಗೆ 30 ದಿನಗಳ ಸಂಗ್ರಹಣೆ ಅವಧಿ ಇರುತ್ತದೆ. ಇದು ಮುಕ್ತಾಯಗೊಳ್ಳುತ್ತಿದ್ದಂತೆ ಬಳಕೆದಾರರು ನೋಟಿಫೀಕೇಶನ್ ಅನ್ನು ಸ್ವೀಕರಿಸುತ್ತಾರೆ. ಈ ಸಮಯದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಫೈಲ್‌ಗೆ ಪ್ರತ್ಯೇಕವಾಗಿ ಲೆಕ್ಕಹಾಕಲಾಗುತ್ತದೆ. ಈ ಸಮಯ ಫೈಲ್ ಅಪ್‌ಲೋಡ್ ಮಾಡಿದ ತಕ್ಷಣ ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ಸ್ಯಾಮ್‌ಸಂಗ್‌ನ ಸುರಕ್ಷಿತ ಫೋಲ್ಡರ್‌ನಲ್ಲಿರುವ ಫೈಲ್‌ಗಳನ್ನು ಕ್ಲೌಡ್‌ನಲ್ಲಿ ಉಚಿತವಾಗಿ ಬಳಕೆ ಮಾಡಬಹುದಾಗಿದೆ.

ಭಾರತದಲ್ಲೂ ಲಭ್ಯ ಇದೆಯೇ?: ಸ್ಯಾಮ್‌ಸಂಗ್ ತಾತ್ಕಾಲಿಕ ಕ್ಲೌಡ್ ಬ್ಯಾಕಪ್ ಸ್ಟೋರೇಜ್ ಪ್ಲಾನ್ ಅನ್ನು ಹಂತ ಹಂತವಾಗಿ ಪರಿಚಯಿಸುತ್ತದೆ ಎಂದು ತಿಳಿದುಬಂದಿದೆ. ಸೇವೆಯು ಗ್ಯಾಲಕ್ಸಿ S ಮತ್ತು Z ಸರಣಿಯ ಡಿವೈಸ್‌ಗಳಲ್ಲಿ ಲಭ್ಯ ಇದ್ದು, ಇದನ್ನು ಮೊದಲು ಕೊರಿಯಾದಲ್ಲಿ ಹೊರತರಲಾಗುತ್ತಿದೆ. ಇದಾದ ನಂತರದಲ್ಲಿ ಕಂಪೆನಿಯು ಶೀಘ್ರದಲ್ಲೇ ಇತರ ದೇಶಗಳಿಗೆ ವಿಸ್ತರಿಸಲು ಪ್ರಾರಂಭಿಸುತ್ತದೆ ಎಂದು ಹೇಳಲಾಗಿದೆ.
ಇನ್ನು ಭಾರತವು ಸ್ಯಾಮ್‌ಸಂಗ್‌ನ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಆದ್ದರಿಂದ ಹೊಸ ಸ್ಯಾಮ್‌ಸಂಗ್ ಫೀಚರ್ಸ್ ಶೀಘ್ರದಲ್ಲೇ ಭಾರತಕ್ಕೂ ಬರುವ ನಿರೀಕ್ಷೆಯಿದೆ. ಈ ಕಾರ್ಯತಂತ್ರದ ವಿಧಾನವು ಬಳಕೆದಾರರಿಗೆ ಹೊಸ ಗ್ಯಾಲಕ್ಸಿ ಫೋನ್‌ಗಳಿಗೆ ಡಿವೈಸ್ ಅಪ್‌ಗ್ರೇಡ್‌ಗಳು ಮತ್ತು ಪರಿವರ್ತನೆಗಳನ್ನು ಹೆಚ್ಚು ತಡೆರಹಿತವಾಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಮೂಲಕ ಸ್ಯಾಮ್‌ಸಂಗ್ ಕಡೆ ಹೆಚ್ಚಿನ ಜನರು ವಾಲುವಂತೆ ಮಾಡುವುದು ಸ್ಯಾಮ್‌ಸಂಗ್‌ನ ತಂತ್ರವೂ ಆಗಿದೆ.


Click it and Unblock the Notifications








