Galaxy AI: ಗ್ಯಾಲಕ್ಸಿ ಎಐ.. ಬೇರೆ ಭಾಷೆಯವರು ಕರೆ ಮಾಡಿದ್ರೆ ಏನಂತೆ ನೀವು ನಿಮ್ಮದೇ ಭಾಷೆಯಲ್ಲಿ ಆಲಿಸಿ!
ಸ್ಮಾರ್ಟ್‌ಫೋನ್‌ಗಳು (Smartphone) ಇತ್ತೀಚಿನ ದಿನಗಳಲ್ಲಿ ಜನರು ನಿಬ್ಬೆರಗಾಗಿಸುವ ಫೀಚರ್ಸ್ ಅನ್ನು ನೀಡುತ್ತಿವೆ. ಈ ಹಿಂದೆ ಫೋನ್‌ಗಳಲ್ಲೇ ಬ್ಯಾಂಕ್ ವ್ಯವಹಾರ ಮಾಡಬಹುದು ಎಂದರೆ ಜನರು ಬಾಯಿ ಮೇಲೆ ಬೆರಳಿಟ್ಟು ಹೌದೇ ಎನ್ನುತ್ತಿದ್ದರು. ಕಾಲಾ ನಂತರ ಇದು ಸಾಮಾನ್ಯವಾಗಿಬಿಟ್ಟಿದೆ. ಆದರೆ, ಈಗ ಮತ್ತೆ ರೋಚಾಂಚನಗೊಳ್ಳುವ ಹೊಸ ಫೀಚರ್ಸ್ ಲಭ್ಯವಾಗಲಿದೆ.
ಹೌದು, ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಹೊಸ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ಎಐ ಫೀಚರ್ಸ್‌ನೊಂದಿಗೆ (AI Features) ಮಾರುಕಟ್ಟೆಯಲ್ಲಿ ಸಂಚಲನವನ್ನೇ ಸೃಷ್ಟಿಸುತ್ತಿವೆ. ಸ್ಯಾಮ್‌ಸಂಗ್ ಈ ವಿಭಾಗದಲ್ಲಿ ಬೇರೆ ಏನಲ್ಲ. ಯಾಕೆಂದರೆ ಈಗ ಗ್ಯಾಲಕ್ಸಿ ಎಐನ (Galaxy AI) ಪರಿಚಯದೊಂದಿಗೆ ಕಂಪನಿಯು ತನ್ನ ಸಮಗ್ರ ಎಐ ಸಾಮರ್ಥ್ಯಗಳೊಂದಿಗೆ ಹೊಸ ಸ್ಮಾರ್ಟ್‌ಫೋನ್ ಅನುಭವವನ್ನು ನೀಡಲು ಸಿದ್ಧವಾಗಿದೆ. ಹಾಗಿದ್ರೆ, ಏನಿದು ಗ್ಯಾಲಕ್ಸಿ ಎಐ?, ಇದರಿಂದ ಆಗುವ ಲಾಭ ಏನು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಐ: ಈಗಾಗಲೇ ಸ್ಯಾಮ್‌ಸಂಗ್ ಒನ್ UI 6 ನೊಂದಿಗೆ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿ ಅನುಭವವನ್ನು ಹೆಚ್ಚಿಸಲು ಕ್ಯಾಮರಾ ಆಪ್‌ಗೆ ಎಐ ಚಾಲಿತ ನವೀಕರಣಗಳನ್ನು ಪರಿಚಯಿಸಿದೆ. ಆದರೆ ಈ ಎಐ ಅನ್ನು ಕೇವಲ ಕ್ಯಾಮೆರಾಕಷ್ಟೇ ಮೀಸಲಿಡದೆ ಇತರೆ ವಿಭಾಗಗಳಲ್ಲೂ ವಿಸ್ತರಣೆ ಮಾಡುವ ಕಾಯಕಕ್ಕೆ ಮುಂದಾಗಿದೆ. ಅಂದರೆ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಫೋನ್‌ಗಳಿಗೆ ನೈಜ ಸಮಯದ ಕರೆಗಳನ್ನು ಭಾಷಾಂತರಿಸುವ ಎಐ ಫೀಚರ್ಸ್ ಪರಿಚಯಿಸಲು ಯೋಜಿಸುತ್ತಿದೆ.
ಗ್ಯಾಲಕ್ಸಿ ಎಐ ಕ್ಲೌಡ್-ಆಧಾರಿತ ಎಐ ಜೊತೆಗೆ ಉದ್ಯಮದ ತಜ್ಞರ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಆನ್-ಡಿವೈಸ್ ಎಐ ಅನ್ನು ಸಂಯೋಜಿಸುತ್ತದೆ ಎಂದು ತಿಳಿದುಬಂದಿದೆ. ಈ ಗ್ಯಾಲಕ್ಸಿ ಎಐ ತಡೆ ಮುಕ್ತ ಸಂವಹನ, ಸುಲಭ ಕಾರ್ಯಕ್ಷಮತೆ ಮತ್ತು ಅನಿಯಮಿತ ಸೃಜನಶೀಲತೆಯ ಭರವಸೆ ನೀಡುತ್ತದೆ. ಇನ್ನು ಸ್ಯಾಮ್‌ಸಂಗ್ ಎಐ ಫೋರಮ್ 2023 ರಲ್ಲಿ ಸ್ಯಾಮ್‌ಸಂಗ್ ಗೌಸ್ ಎಂಬ ತನ್ನದೇ ಆದ ಉತ್ಪಾದಕ ಎಐ ಮಾದರಿಯನ್ನು ಅನಾವರಣ ಮಾಡಿದ್ದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.

ಗ್ಯಾಲಕ್ಸಿ ಎಐ ಬಿಡುಗಡೆಗೆ ಮುಂಚಿತವಾಗಿ ಕಂಪನಿಯು ಲೈವ್ ಟ್ರಾನ್ಸ್‌ಲೇಟ್ ಕರೆ ಫೀಚರ್ಸ್ (Live translate call features) ಅನ್ನು ಲೇವಡಿ ಮಾಡಲಾಗಿದೆ. ಈ ಎಐ ಫೀಚರ್ಸ್ ಫೋನ್ ಕರೆಗಳ ಸಮಯದಲ್ಲಿ ನೈಜ-ಸಮಯದ ಆಡಿಯೊ ಮತ್ತು ಟೆಕ್ಸ್ಟ್ ಅನ್ನು ಅನುವಾದ ಮಾಡಲಿದೆ ಎಂದು ತಿಳಿದುಬಂದಿದೆ. ಮೂರನೇ ವ್ಯಕ್ತಿಯ ಆಪ್‌ನ ಅಗತ್ಯವನ್ನು ಈ ಮೂಲಕ ತೆಗೆದುಹಾಕುವ ಕೆಲಸ ಮಾಡುತ್ತದೆ. ಇಷ್ಟೆ ಅಲ್ಲದೆ ಭದ್ರತೆ ಮತ್ತು ಗೌಪ್ಯತೆ ಹಿನ್ನೆಲೆ ಗ್ಯಾಲಕ್ಸಿ ಎಐ ಡಿವೈಸ್‌ಗಳಲ್ಲಿ ಖಾಸಗಿ ಸಂಭಾಷಣೆಗಳನ್ನು ಇದು ಖಚಿತಪಡಿಸುತ್ತದೆ.
ಕೆಲವು ಮಾಹಿತಿ ಪ್ರಕಾರ ಈ ಗ್ಯಾಲಕ್ಸಿ ಎಐ ಗ್ಯಾಲಕ್ಸಿ S24 ಸರಣಿಯಲ್ಲಿ (Galaxy S24 series) ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಈ ಫೋನ್‌ಗಳು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳು ಮೂರು ಮಾದರಿಗಳನ್ನು ಒಳಗೊಂಡಿರುತ್ತವೆ ಗ್ಯಾಲಕ್ಸಿ S24, ಗ್ಯಾಲಕ್ಸಿ S24+ ಮತ್ತು ಗ್ಯಾಲಕ್ಸಿ S24 ಅಲ್ಟ್ರಾ. ಈ ಫೋನ್‌ಗಳು ನಿರೀಕ್ಷಿತ ದಿನಗಳಿಗಿಂತ ಮುಂಚೆಯೇ ಲಾಂಚ್ ಆಗಬಹುದು ಎಂಬ ಮಾಹಿತಿ ಸಹ ಲಭ್ಯ ಇದೆ.

ಈ ಸಂಬಂಧ ಎಸ್‌ಬಿಎಸ್ ಬಿಜ್ ವರದಿ ಮಾಡಿದ್ದು, ಅದರಂತೆ ಗ್ಯಾಲಕ್ಸಿ S24 ಸರಣಿಯನ್ನು ಜನವರಿ 17 ರಂದು ಯುಎಸ್‌ಎನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯುವ ಸಮಾರಂಭದಲ್ಲಿ ಲಾಂಚ್ ಮಾಡಲಾಗುತ್ತದೆ ಎನ್ನಲಾಗಿದೆ. ಇನ್ನು ಈ ಫೋನ್‌ಗಳಲ್ಲಿ ಗ್ಯಾಲಕ್ಸಿ ಎಐ ಲಭ್ಯವಾಗಿದ್ದೇ ಆದರೆ ಜನರು ಇನ್ಮುಂದೆ ರಾಜ್ಯ, ದೇಶ ಸೇರಿದಂತೆ ಎಲ್ಲಾ ರೀತಿಯ ಎಲ್ಲೆಗಳನ್ನು ಮೀರಿ ಸಂಪರ್ಕದಲ್ಲಿ ಇರಲು ಸಹಾಯವಾಗಲಿದೆ.


Click it and Unblock the Notifications








