ಅಬ್ಬಬ್ಬಾ... 440MP ಕ್ಯಾಮೆರಾ ಸೆನ್ಸರ್ ಲಾಂಚ್‌ಗೆ ಸಿದ್ಧವಾದ ಸ್ಯಾಮ್‌ಸಂಗ್, ಇಷ್ಟೇ ಅಲ್ಲಾ...
ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಫೋನ್‌ಗಳಿಗೆ (Samsung Phones) ಭಾರೀ ಬೇಡಿಕೆ ಇದೆ. ಈ ಫೋನ್‌ಗಳ ಕಾರ್ಯಕ್ಷಮತೆ ಹಾಗೂ ಬ್ಯಾಟರಿ ಸಾಮರ್ಥ್ಯ ಇತರೆ ಫೋನ್‌ಗಳಿಗಿಂತ ಕೊಂಚ ಹೆಚ್ಚಾಗಿಯೇ ಇರುತ್ತದೆ ಅದರಲ್ಲೂ ಪ್ರಮುಖವಾಗಿ ಕ್ಯಾಮೆರಾ (camera) ವಿಚಾರದಲ್ಲಂತೂ ದೊಡ್ಡ ಸಾಧನೆಗಳನ್ನೇ ಮಾಡಿಕೊಂಡು ಬಂದಿರುವ ಸ್ಯಾಮ್‌ಸಂಗ್ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ.
ಹೌದು, ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಕ್ಯಾಮೆರಾಗಳು ಶೀಘ್ರದಲ್ಲೇ ಇತರೆ ಫೋನ್‌ಗಳಿಗೆ ನಡುಕ ಹುಟ್ಟಿಸಲಿವೆ. ಸ್ಯಾಮ್‌ಸಂಗ್ ಈಗಾಗಲೇ 200MP ಸೆನ್ಸರ್‌ನೊಂದಿಗೆ ಹೆಚ್ಚಿನ ಕಾರ್ಯಕ್ಷಮತೆಯ ಕ್ಯಾಮೆರಾವನ್ನು ಪರಿಚಯಿಸಲಾಗಿದ್ದು, ಈಗ ಮತ್ತೆ ಮುಂದಿನ ಮೈಲಿಗಲ್ಲಿನತ್ತ ಹೆಜ್ಜೆ ಹಾಕಿದೆ. ಈ ಮೂಲಕ 440MP ಕ್ಯಾಮೆರಾ ಸೆನ್ಸರ್‌ಲಾಂಚ್ ಮಾಡಲು ಎಲ್ಲಾ ತಯಾರಿ ನಡೆಸುತ್ತಿದೆ. ಹಾಗಿದ್ರೆ, ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಬರೋಣ.

ಈ ವರ್ಷದ ಆರಂಭದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಫೋನ್‌ನಲ್ಲಿ ತನ್ನ ಮೊದಲ 200MP ಕ್ಯಾಮೆರಾ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿ ಭಾರೀ ಸದ್ದು ಮಾಡಿತ್ತು. ಆದರೆ, ಈಗ ಮತ್ತೆ ನಾಲ್ಕು ವಿಭಿನ್ನ ಸೆನ್ಸರ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಪ್ರಮುಖವಾಗಿ 440MP ಕ್ಯಾಮೆರಾದ ಆಯ್ಕೆ ವಿಶೇಷವಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ.
ಈ ಸಂಬಂಧ ಟಿಪ್‌ಸ್ಟರ್ ಮಾಹಿತಿ ನೀಡಿದ್ದು, ಸ್ಯಾಮ್‌ಸಂಗ್ ಪ್ರಭಾವಶಾಲಿ ಕ್ಯಾಮೆರಾ ಸೆನ್ಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಸೆನ್ಸಾರ್ ವಾಸ್ತವವಾಗಿ ಸ್ಮಾರ್ಟ್‌ಫೋನ್‌ಗಳಿಗೆ ಆಗಿದೆಯೇ ಅಥವಾ ಬೇರೆಯದಕ್ಕೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದೆ. ಇದರೊಂದಿಗೆ ಸ್ಯಾಮ್‌ಸಂಗ್ ನಾಲ್ಕು ವಿಭಿನ್ನ ಕ್ಯಾಮೆರಾ ಸೆನ್ಸರ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಅಂದರೆ ಈ ಸ್ಯಾಮ್‌ಸಂಗ್ 1.6 ಮೈಕ್ರಾನ್ ಪಿಕ್ಸೆಲ್‌ಗಳೊಂದಿಗೆ 50MP ISOCELL GN6 ಸೆನ್ಸರ್, 0.7 ಮೈಕ್ರಾನ್ ಪಿಕ್ಸೆಲ್‌ಗಳೊಂದಿಗೆ 200MP HP7 ಸೆನ್ಸರ್, 320MP ಸೆನ್ಸರ್ ಮತ್ತು 440MP HU1 ಸೆನ್ಸರ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಉಲ್ಲೇಖಿಸಲಾಗಿದ್ದು, ಈ ಮೂಲಕ ಇತರೆ ಸ್ಮಾರ್ಟ್‌ಫೋನ್ ಕಂಪೆನಿಗಳು ದಂಗಾಗುವಂತೆ ಮಾಡಿದೆ.
ಸ್ಯಾಮ್‌ಸಂಗ್ 440MP HU1 ಸೆನ್ಸರ್: ಇನ್ನು ಟಿಪ್‌ಸ್ಟರ್ ಈ ಸೆನ್ಸರ್‌ಗಳ ಫೀಚರ್ಸ್ ಅನ್ನು ಉಲ್ಲೇಖಿಸಿಲ್ಲ. ಆದರೆ, ಸ್ಯಾಮ್‌ಸಂಗ್ ಅದನ್ನು ತಯಾರಿಸುತ್ತದೆ ಎಂದು ಮಾತ್ರ ತಿಳಿಸಿದೆ. ಜೊತೆಗೆ ಈ ಸೆನ್ಸರ್ ಅನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡುತ್ತಾರೋ ಅಥವಾ ಇಲ್ಲವೇ ಎಂಬುದು ಸಹ ತಿಳಿದಿಲ್ಲ. ಜೊತೆಗೆ ಆಟೋಮೋಟಿವ್ ಅಥವಾ ಕೈಗಾರಿಕಾ ವಿಭಾಗದಲ್ಲಿ ಈ ಸೆನ್ಸರ್ ಅನ್ನು ಬಳಕೆ ಮಾಡುವ ಸಾಧ್ಯತೆ ಸಹ ಇದೆ.
ಇದರೊಂದಿಗೆ ಸ್ಯಾಮ್‌ಸಂಗ್ 2020 ರಲ್ಲಿಯೇ ಮಾನವನ ಕಣ್ಣಿಗೆ ಸಮಾನವಾದ ರೆಸಲ್ಯೂಶನ್ ಹೊಂದಿರುವ ಕ್ಯಾಮೆರಾವನ್ನು ರಚಿಸುವ ಗುರಿಯನ್ನು ವ್ಯಕ್ತಪಡಿಸಿತ್ತು. ಅಂದರೆ 500MP ರಿಂದ 600MP ವರೆಗೆ ಕ್ಯಾಮೆರಾ ಸೆನ್ಸರ್ ತಯಾರಿಸುವ ಬಗ್ಗೆ ಉಲ್ಲೇಖ ಮಾಡಿತ್ತು. ಅಂತೆಯೇ ಈಗ ಕಂಪನಿಯು 440MP ಸೆನ್ಸರ್ ವರೆಗೆ ಕಾಲಿರಿಸಿದ್ದು, ಇನ್ನೇನು ಕೆಲವೇ ವರ್ಷಗಳಲ್ಲಿ ತನ್ನ ಗುರಿಯನ್ನು ತಲುಪಲಿದೆ.
ಸ್ಯಾಮ್‌ಸಂಗ್ 320MP ಸೆನ್ಸರ್: ಇನ್ನು ಮತ್ತೊಂದು ಸೆನ್ಸರ್ ಆಗಿರುವ 320MP ಬಗ್ಗೆಯೂ ಸಹ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಅದಾಗ್ಯೂ ಮುಂಬರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ನಲ್ಲಿ 320MP ಸೆನ್ಸರ್ ಕಾಣಬಹುದು ಎಂದು ಟಿಪ್‌ಸ್ಟರ್ ಸುಳಿವು ನೀಡಿದೆ. ಜೊತೆಗೆ ಈ ಕ್ಯಾಮೆರಾ ಮೀಡಿಯಾಟೆಕ್ ಡೈಮೆನ್ಸಿಟಿ 9200 ಪ್ರೊಸೆಸರ್ ಗೆ ಬೆಂಬಲ ನೀಡಲಿದೆಯಂತೆ.
ಸ್ಯಾಮ್‌ಸಂಗ್ 200MP HP7 ಸೆನ್ಸರ್: 0.7ಮೈಕ್ರಾನ್ ಪಿಕ್ಸೆಲ್‌ಗಳೊಂದಿಗೆ 200MP HP7 ಸೆನ್ಸರ್ ಅನ್ನು ಆರಂಭದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾಗಾಗಿ ಯೋಜಿಸಲಾಗಿತ್ತು. ಆದಾಗ್ಯೂ, ಹೆಚ್ಚಿನ ಉತ್ಪಾದನಾ ವೆಚ್ಚದ ಕಾರಣ ಅದನ್ನು ಕೈಬಿಡಲಾಗಿತ್ತು. ಇನ್ನು ಈ ಕ್ಯಾಮರಾ ಸೆನ್ಸರ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾದ 200MP HP2 ಕ್ಯಾಮೆರಾವನ್ನೇ ಹೋಲುತ್ತದೆ.

ಸ್ಯಾಮ್‌ಸಂಗ್ 50MP ISOCELL GN6 ಸೆನ್ಸರ್: ಕೊನೆಯ ಸೆನ್ಸರ್ ಬಗ್ಗೆ ಮಾಹಿತಿ ಪಡೆಯುವುದಾದರೆ ಈ ಸೆನ್ಸರ್ ಅನ್ನು ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಬಳಸಲಾಗುವುದಿಲ್ಲ ಎಂದು ಟಿಪ್‌ಸ್ಟರ್ ಉಲ್ಲೇಖಿಸಿದೆ. ಇದು ಸ್ಯಾಮ್‌ಸಂಗ್‌ನ ಮೊದಲ 1 ಇಂಚಿನ ಕ್ಯಾಮೆರಾ ಆಗಿರಬಹುದು ಎನ್ನಲಾಗಿದ್ದು, ಸೋನಿಯ 1 ಇಂಚಿನ IMX989 ಸೆನ್ಸರ್‌ನೊಂದಿಗೆ ಸ್ಪರ್ಧಿಸಲಿದೆ.


Click it and Unblock the Notifications








