Samsung ನಿಂದ ಗೇಮಿಂಗ್ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ; ಈ ಸೇವೆಗೆ ಫಿದಾ ಆಗದೇ ಇರರಿ!
ಸ್ಯಾಮ್‌ಸಂಗ್ ಫೋನ್‌ಗಳಿಗೆ (Samsung galaxy phone) ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಅಗ್ರ ಎರಡನೇ ಸ್ಥಾನವನ್ನು ಈ ಫೋನ್‌ಗಳು ಕಾಯ್ದುಕೊಂಡು ಬರುತ್ತಿದ್ದು, ಇವು ನೇರವಾಗಿ ಐಫೋನ್‌ನೊಂದಿಗೆ ಸ್ಫರ್ಧಿಸಲಿವೆ. ಈ ನಡುವೆ ಸ್ಯಾಮ್‌ಸಂಗ್ ತನ್ನೆಲ್ಲಾ ಗ್ಯಾಲಕ್ಸಿ ಡಿವೈಸ್‌ಗಳಿಗೆ ತನ್ನದೇ ಆದ ಕ್ಲೌಡ್ ಗೇಮಿಂಗ್ (Cloud Gaming) ಸೇವೆಯನ್ನು ತರಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.
ಹೌದು, ಇತರ ಕ್ಲೌಡ್ ಗೇಮಿಂಗ್ ಸೇವೆಗಳು ಮತ್ತು ಪ್ಲಾಟ್‌ಫಾರ್ಮ್‌ಗಳಿಗಿಂತ ಭಿನ್ನವಾಗಿ ಈ ಸ್ಯಾಮ್‌ಸಂಗ್ ನ ಕ್ಲೌಡ್ ಗೇಮಿಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ ಪ್ರತ್ಯೇಕವಾಗಿ ಇರಲಿವೆ ಎನ್ನಲಾಗಿದೆ. ಹಾಗಿದ್ರೆ, ಇದರಿಂದ ಸ್ಯಾಮ್‌ಸಂಗ್ ಫೋನ್ ಬಳಕೆದಾರರಿಗೆ ಹೇಗೆಲ್ಲಾ ಲಾಭ?, ಎಂದಿನಿಂದ ಈ ಸೇವೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ತನ್ನದೇ ಆದ ಕ್ಲೌಡ್ ಗೇಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದ್ದು, ಇದು ಕೆಲವು ಸಮಯದಿಂದ ಬೀಟಾ ಪರೀಕ್ಷೆಯಲ್ಲಿದೆ ಎನ್ನಲಾಗಿದೆ. ಕಂಪನಿಯು ಈಗ ಈ ವಾರದಲ್ಲಿ 1 ಬಿಲಿಯನ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಿಗೆ ಇದನ್ನು ಹೊರತರಲು ಯೋಜಿಸುತ್ತಿದೆ ಎಂಬ ಸಂತಸದ ಸುದ್ದಿ ಸಹ ಹೊರಬಿದ್ದಿದೆ. ಅದರಲ್ಲೂ ಸ್ಯಾಮ್‌ಸಂಗ್ ಅಕ್ಟೋಬರ್ 5 ರಂದು ಅಂದರೆ ನಾಳೆ ನಡೆಯಲಿರುವ ಸ್ಯಾಮ್‌ಸಂಗ್ ಡೆವಲಪರ್ ಸಮ್ಮೇಳನದಲ್ಲಿ ಇದನ್ನು ಘೋಷಿಸಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.
ಇತರ ಕ್ಲೌಡ್ ಗೇಮಿಂಗ್ ಸೇವೆಗಳು ಮತ್ತು ಪ್ಲಾಟ್‌ಫಾರ್ಮ್‌ಗಳಿಗಿಂತ ಭಿನ್ನವಾಗಿ ಇದು ಇರಲಿದೆ ಎನ್ನಲಾಗಿದೆ. ಅದರಲ್ಲೂ ಸ್ಯಾಮ್‌ಸಂಗ್ ಕ್ಲೌಡ್ ಗೇಮಿಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ ಪ್ರತ್ಯೇಕವಾಗಿ ಉಳಿಯಬಹುದು ಎಂದು ಹೇಳಲಾಗಿದ್ದು, ಸ್ಯಾಮ್‌ಸಂಗ್ ಕ್ಲೌಡ್ ಗೇಮಿಂಗ್ ಬಳಕೆದಾರರು ತಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಮಾಡದೆಯೇ ಗೇಮ್ ಅನ್ನು ಆಡಲು ಅನುಮತಿಸುತ್ತದೆ ಎನ್ನಲಾಗಿದೆ.
ಅಂದರೆ ಇನ್ಮುಂದೆ ಸ್ಯಾಮ್‌ಸಂಗ್ ಫೋನ್ ಬಳಕೆದಾರರು ನೇರವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟೋರ್ ಅಥವಾ ಪ್ಲೇ ಸ್ಟೋರ್‌ನಿಂದ ಗೇಮ್ ಅನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಡೆವಲಪರ್‌ಗಳನ್ನು ಆಕರ್ಷಿಸಲು ಆಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್ ಎರಡಕ್ಕೂ ವಿಧಿಸುವ 30% ಶುಲ್ಕವನ್ನು ಸಹ ಕಡಿತಗೊಳಿಸಲು ಸ್ಯಾಮ್‌ಸಂಗ್ ಯೋಜಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕ್ಲೌಡ್‌ನಿಂದ ಸ್ಯಾಮ್‌ಸಂಗ್‌ಗೆ ಹೇಗೆ ಲಾಭ: ಕ್ಲೌಡ್ ಗೇಮಿಂಗ್ ಮಾರುಕಟ್ಟೆಗೆ ಪ್ರವೇಶಿಸುವುದು ಹೊಸ ಆಲೋಚನೆಯಲ್ಲ. ಆದಾಗ್ಯೂ, ಸ್ಯಾಮ್‌ಸಂಗ್ ಇತರ ಆಟಗಾರರಿಗಿಂತ ದೊಡ್ಡ ಪ್ರಯೋಜನವನ್ನು ಹೊಂದಿದೆ ಜೊತೆಗೆ ಗ್ಯಾಲಕ್ಸಿ ಡಿವೈಸ್‌ಗಳ ಪರಿಸರ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ. ಈ ಮೂಲಕ ಜಾಹೀರಾತುಗಳು, ಚಂದಾದಾರಿಕೆಗಳ ಮೂಲಕ ಸ್ಯಾಮ್‌ಸಂಗ್ ಹೆಚ್ಚಿನ ಆದಾಯವನ್ನು ಗಳಿಸಲು ಇದು ಅನುಮತಿಸುತ್ತದೆ.
ಗಮನಿಸಬೇಕಾದ ವಿಷಯ ಏನೆಂದರೆ ಸ್ಯಾಮ್‌ಸಂಗ್ ಈ ರೀತಿ ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಕಂಪನಿಯು ಈಗಾಗಲೇ ತನ್ನ ಟಿವಿಗಳು, ಪ್ರೊಜೆಕ್ಟರ್‌ಗಳು ಮತ್ತು ಮಾನಿಟರ್‌ಗಳಲ್ಲಿ ಗೇಮಿಂಗ್ ಹಬ್ ಅನ್ನು ಹೊಂದಿದೆ. ಇದು ಬಳಕೆದಾರರಿಗೆ ಎಕ್ಸ್‌ಬಾಕ್ಸ್ ಕ್ಲೌಡ್, ಅಮೆಜಾನ್ ಲೂನಾ ಮತ್ತು ಜಿಫೋರ್ಸ್ ನೌನಂತಹ ಕ್ಲೌಡ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ನೇರವಾಗಿ ಆಟಗಳನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ.

ಈ ನಡುವೆ ಸ್ಯಾಮ್‌ಸಂಗ್ ಹೊಸ ಡಿವೈಸ್‌ಗಳನ್ನು ಅನಾವರಣ ಮಾಡಿದೆ. ಅಂದರೆ ಸ್ಯಾಮ್‌ಸಂಗ್‌ನ FE ಸರಣಿಯು ಒಂದು ವರ್ಷದ ನಂತರ ಮತ್ತೆ ಕಾಣಿಸಿಕೊಂಡಿದ್ದು, ಗ್ಯಾಲಕ್ಸಿ S23 FE (Samsung Galaxy S23 FE) ಫೋನ್ ಎಲ್ಲೆಡೆ ಸದ್ದು ಮಾಡುತ್ತಿದೆ. ಇದರೊಂದಿಗೆ ಗ್ಯಾಲಕ್ಸಿ ಟ್ಯಾಬ್ S9 FE (Samsung Galaxy Tab S9 FE) ಸಹ ನೀರು ಮತ್ತು ಧೂಳಿನ ನಿರೋಧಕತೆಯೊಂದಿಗೆ ಪ್ಯಾಕ್ ಆಗಿದ್ದು, ಗ್ಯಾಲಕ್ಸಿ ಬಡ್ಸ್ FE (Samsung Galaxy Buds FE) ಸಕ್ರಿಯ ಶಬ್ದ ರದ್ಧತಿಯೊಂದಿಗೆ ಕಾಣಿಸಿಕೊಂಡಿದ್ದು, ಈ ಮೂಲಕ ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ.


Click it and Unblock the Notifications








