ಗಾಯಗೊಂಡ ಪಾರಿವಾಳ ರಕ್ಷಿಸಲು ಹೋಗಿ ವಂಚನೆಗೊಳಗಾದ ಮಹಿಳೆ: ಅದೇಗೆ ಅಂತೀರಾ!?
ಒಳ್ಳೆಯವರಿಗಲ್ಲ ಈ ಲೋಕ ಎಂಬ ಮಾತಿಗೆ ಇಂಬು ಕೊಡುವ ಘಟನೆಯೊಂದು ಜರುಗಿದ್ದು, ಇಲ್ಲೋರ್ವ ಕರುಣಾಮಯಿ ಮಹಿಳೆಗೆ ಭಾರೀ ವಂಚನೆ ಮಾಡಲಾಗಿದೆ. ಇದರಿಂದಾಗಿ ಜೀವನದಲ್ಲಿ ಇಂತಹ ಒಳ್ಳೆಯ ಕೆಲಸಗಳನ್ನೇ ಮಾಡಬಾರದು ಎಂಬ ನಿರ್ಧಾರಕ್ಕೆ ಜನರು ಬರುವಂತೆ ಮಾಡಲಾಗಿದೆ.
ಹೌದು, ಜನರು ಸಾಮಾನ್ಯವಾಗಿ ಪಕ್ಷಿಗಳನ್ನು ನೋಡಲು,ಅವುಗಳೊಂದಿಗೆ ಬೆರೆಯಲು ಇಷ್ಟಪಡುತ್ತಾರೆ. ಆದರಲ್ಲೂ ಕೆಲವರು ಗಾಯಗೊಂಡ ಯಾವುದೇ ಪಕ್ಷಿ ಕಂಡುಬಂದರೂ ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಹಾರೈಕೆ ಮಾಡುತ್ತಾರೆ. ಜೊತೆಗೆ ಅದನ್ನು ಎಚ್ಚರಿಕೆಯಿಂದ ನೋಡಿಕೊಂಡು ಬಳಿಕ ಅದನ್ನು ಸ್ವತಂತ್ರವಾಗಿ ಹಾರಲು ಬಿಡುತ್ತಾರೆ. ಆದರೆ, ಪಾರಿವಾಳದ ಜೀವ ಉಳಿಸಲು ಹೋದ ಈ ಮಹಿಳೆಗೆ ಈಗ ಭಾರೀ ಮೋಸ ಆಗಿದೆ. ಹಾಗಿದ್ರೆ, ಏನಿದು ವಂಚನೆ?, ಯಾರು ಆ ಮಹಿಳೆ ಎಂಬ ಮಾಹಿತಿಗಾಗಿ ಈ ಲೇಖನದ ಓದಿರಿ.

ಮಹಿಳೆಗೆ ವಂಚನೆ: ಧ್ವನಿ ಮೆಹ್ತಾ ಎಂಬ ಮಹಿಳೆ ಮಹಾರಾಷ್ಟ್ರದ ಮುಂಬೈನ ಮಹಾಲಕ್ಷ್ಮಿಯಲ್ಲಿರುವ ಪ್ರಸಿದ್ಧ ಸ್ಟುಡಿಯೊದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ಕೆಲಸ ಮುಗಿಸಿ ಹಿಂತಿರುಗುವಾಗ ರಸ್ತೆಬದಿಯಲ್ಲಿ ಗಾಯಗೊಂಡ ಪಾರಿವಾಳ ಕಾಣಿಸಿದೆ. ಅದನ್ನು ರಕ್ಷಿಸಿ ಮನೆಗೆ ಕರೆದೊಯ್ದು ನೀರು ಮತ್ತು ಆಹಾರವನ್ನು ನೀಡಿದ್ದಾರೆ. ಆದರೆ, ಅದನ್ನು ನೋಡಿಕೊಳ್ಳಲು ಸಮಯವಿಲ್ಲದ ಕಾರಣ ಅವರು ಆ ಪಕ್ಷಿಯನ್ನು ರಕ್ಷಣಾ ಸಂಸ್ಥೆಗೆ ಹಸ್ತಾಂತರಿಸಲು ನಿರ್ಧರಿಸಿದರು.
ಎನ್‌ಜಿಓಗಾಗಿ ಉಡುಕಾಟ:ಯಾವುದೇ ಪಕ್ಷಿ ರಕ್ಷಣಾ ಸಂಸ್ಥೆಯ ಬಗ್ಗೆ ಇವರಿಗೆ ಮಾಹಿತಿ ಇಲ್ಲದಿದ್ದ ಕಾರಣ ಗೂಗಲ್‌ನಲ್ಲಿ ಈ ಬಗ್ಗೆ ಮಾಹಿತಿ ಹುಡುಕುವ ಮೆಹ್ತಾಗೆ ಕೆಲವರ ಮೊಬೈಲ್ ನಂಬರ್ ಸಿಕ್ಕಿವೆ.ಆ ಸಂಖ್ಯೆಗೆ ಕರೆ ಮಾಡಿ ಮಾತನಾಡಿದ ವೇಳೆ ಸ್ಲ್ಯಾಮರ್‌ಗಳು ಕೆಲವು ದಾಖಲೆಗಳನ್ನು ಇಮೇಲ್ ಮೂಲಕ ಕಳುಹಿಸಿ ಭರ್ತಿ ಮಾಡುವಂತೆ ತಿಳಿಸಿದ್ದಾರೆ.ಇದಾದ ಬಳಿಕ ಮಹಿಳೆ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಪೂರ್ಣಗೊಳಿಸಿದ್ದಾರೆ.ಜೊತೆಗೆ ಕೇವಲ 1 ರೂ.ಗಳನ್ನು ದೂರು ಶುಲ್ಕವಾಗಿ ನೀಡಬೇಕು ಎಂದು ಸ್ಕ್ಯಾಮರ್‌ಗಳು ತಿಳಿಸಿದ್ದಾರೆ.

ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಮರುದಿನ ಖುದ್ದಾಗಿ ಬಂದು ಪಾರಿವಾಳವನ್ನು ರಕ್ಷಿಸುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಮರುದಿನ ಮಹಿಳೆ ಮನೆಗೆ ಯಾರೂ ಸಹ ಬರಲಿಲ್ಲ. ಅವರು ಬರುತ್ತಾರೆ ಎಂಬ ಭರವಸೆಯಿಂದ ಮಹಿಳೆ ಎಂದಿನಂತೆ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಎರಡು ದಿನಗಳ ಬಳಿಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಬ್ಯಾಂಕ್ ಖಾತೆಯಿಂದ 99,988ರೂ. ಕಡಿತವಾಗಿದೆ ಎಂಬ ಮೆಸೆಜ್ ಸ್ವೀಕರಿಸಿದ್ದಾರೆ..
ಇದರಿಂದ ಬೆಚ್ಚಿಬಿದ್ದ ಅವರು ಬ್ಯಾಂಕ್‌ಗೆ ಸಂಪರ್ಕಿಸಿ ಮಾಹಿತಿ ಕೇಳಿದಾಗ ಅವರಿಗೆ ತಿಳಿದಿದ್ದು ಏನೆಂದರೆ ಪಕ್ಷಿ ರಕ್ಷಣಾ ಸಂಸ್ಥೆ ಎಂದು ಹೇಳಿದ ವಂಚಕರು ಮೋಸ ಮಾಡಿದ್ದಾರೆ ಎಂದು.ಇದಾದ ಬಳಿಕ ಧ್ವನಿ ಮೆಹ್ತಾ ತಕ್ಷಣ ಮುಂಬೈ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು,ಅಮಾಯಕರು ಮೋಸ ಹೋಗುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ.ಈ ರೀತಿಯ ವಂಚನೆಯಿಂದ ಪಾರಾಗಲು ಈ ಸಲಗೆ ಪಾಲಿಸಿ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅನಧಿಕೃತ ಲಿಂಕ್‌ಗಳು ಕಾಣಿಸಿಕೊಂಡರೆ ಅಥವಾ ಅನಾಮಿಕರು ಈ ಲಿಂಕ್‌ಗಳನ್ನು ಕಳುಹಿಸಿದ್ದರೆ ಯಾವುದೇ ಕಾರಣಕ್ಕೂ ಅವುಗಳನ್ನು ಕ್ಲಿಕ್ ಮಾಡಬೇಡಿ. ಜೊತೆಗೆ ಭಾರೀ ಡಿಸ್ಕೌಂಟ್,ಒಂದು ಕೊಂಡರೆ ಒಂದು ಉಚಿತ ಎಂದು ಕಾಣಿಸಿಕೊಳ್ಳುವ ಜಾಹೀರಾತಿನ ಮೇಲೆ ಹೆಚ್ಚಿನ ಗಮನಹರಿಸಿ.ಇವೂ ಸಹ ಇದೀಗ ಮೋಸದ ಜಾಲವಾಗಿವೆ. ಅದೆಲ್ಲಕ್ಕೂ ಮಿಗಿಲಾಗಿ ಯಾರಿಗೇ ಆದರೂ ಸಹ ನಿಮ್ಮ ಬ್ಯಾಂಕ್ ವಿವರವನ್ನು ಎಂದಿಗೂ ಹಂಚಿಕೊಳ್ಳಬೇಡಿ. ಅಧಿಕೃತವಾಗಿ ವ್ಯವಹಾರ ಮಾಡುವ ಯಾರೇ ಆದರೂ ಸಂಪೂರ್ಣ ಬ್ಯಾಂಕ್ ವಿವರವನ್ನು ಕೇಳುವುದಿಲ್ಲ.


Click it and Unblock the Notifications








