Online Gaming: ಆನ್‌ಲೈನ್ ಗೇಮ್ ಆಡುವವರಿಗೆ ಶಾಕಿಂಗ್ ನ್ಯೂಸ್, ಜಿಎಸ್‌ಟಿ ದರ 28% ಕ್ಕೆ ಹೆಚ್ಚಳ!
ಭಾರತದಲ್ಲಿ ಇತ್ತೀಚಿಗೆ ಆನ್‌ಲೈನ್ ಗೇಮಿಂಗ್ (Online Gaming)ಕ್ರೇಜ್ ಹೆಚ್ಚಾಗುತ್ತಿದೆ. ಇದನ್ನು ಜೂಜಾಟ ಎಂದು ಪರಿಗಣಿಸಿಲ್ಲ. ಅದರಲ್ಲೂ ಕೆಲವು ದುರುದ್ದೇಶಪೂರಿತ ಆಟಗಳಿಗೆ ಈಗಾಗಲೇ ನೀತಿ ನಿರ್ಬಂಧಗಳನ್ನು ಹೇರಲಾಗಿದ್ದು, ಇದರೊಂದಿಗೆ ಸರ್ಕಾರ ಆನ್‌ಲೈನ್ ಗೇಮಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ನಿರ್ಧಾರ ಪ್ರಕಟ ಮಾಡಿದೆ. ಈ ಮೂಲಕ ಆನ್‌ಲೈನ್ ಗೇಮ್ ಆಡುವವರಿಗೆ ಶಾಕ್ ನೀಡಲಾಗಿದೆ.
ಹೌದು, ಈ ಮೊದಲು ಆನ್‌ಲೈನ್‌ನಿಂದ ಸಂಪಾದನೆ ಮಾಡುವ ಹಣದಲ್ಲಿ ಸರ್ಕಾರಕ್ಕೆ ಅಲ್ಪ ಸ್ವಲ್ಪ ಹಣ ಕಟ್ಟಿ ಉಳಿದ ಹಣವನ್ನು ಸಲೀಸಾಗಿ ಜೇಬಿಗೆ ಇರಿಸಿಕೊಳ್ಳಲಾಗುತ್ತಿತ್ತು. ಆದರೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್‌ನ 50 ನೇ ಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಸಂಬಂಧ ಮಹತ್ವದ ನಿರ್ಧಾರ ಮಾಡಿದ್ದು, ಇನ್ಮುಂದೆ ಈಗ ಆನ್‌ಲೈನ್‌ನಿಂದ ಬರುವ ಹಣದಲ್ಲಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಹಾಗಿದ್ರೆ, ಯಾವೆಲ್ಲಾ ಗೇಮ್‌ಗಳಿಗೆ ಇದು ಅನ್ವಯ?, ಎಷ್ಟು ತೆರಿಗೆ ಪಾವತಿ ಮಾಡಬೇಕು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

28 % ರಷ್ಟು ತೆರಿಗೆ : ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಆಡುವ ಅಂದರೆ ಕ್ಯಾಸಿನೊ ಮತ್ತು ಕುದುರೆ ರೇಸಿಂಗ್‌ನಿಂದ ಬರುವ ಆದಾಯದ ಮೇಲೆ ತೆರಿಗೆ ಪಾವತಿ ಮಾಡಬೇಕು ಎಂದು ಜಿಎಸ್‌ಟಿ ಕೌನ್ಸಿಲ್ ಸಭೆಯ ನಿರ್ಧಾರ ಮಾಡಲಾಗಿದೆ. ಈ ಆದಾಯದಲ್ಲಿ ಶೇಕಡಾ 28 %ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ತೆರಿಗೆಯನ್ನು ಪೂರ್ಣ ಮುಖಬೆಲೆಯ ಮೇಲೆ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.
ಯಾರಿಗೆಲ್ಲಾ ಜಿಎಸ್‌ಟಿಯಿಂದ ವಿನಾಯಿತಿ? : ಗೇಮಿಂಗ್ ವಿಭಾಗ ಹೊರತುಪಡಿಸಿ ಈ ಸಭೆಯಲ್ಲಿ ಮಗದೊಂದು ಮಹತ್ವದ ನಿರ್ಧಾರ ಸಹ ಮಾಡಲಾಗಿದ್ದು, ಅಪರೂಪದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಕ್ಯಾನ್ಸರ್ ಔಷಧಿಯಾದ ದಿನುಟುಕ್ಸಿಮಾಬ್ ಮತ್ತು ವಿಶೇಷ ವೈದ್ಯಕೀಯ ಉದ್ದೇಶಗಳಿಗಾಗಿ ಆಹಾರ ಆಮದು ಮೇಲೆ ಜಿಎಸ್‌ಟಿ ವಿನಾಯಿತಿಯನ್ನು ಕೌನ್ಸಿಲ್ ಅನುಮೋದಿಸಿದೆ. ಇದರೊಂದಿಗೆ ಖಾಸಗಿ ನಿರ್ವಾಹಕರಿಂದ ಜಿಎಸ್‌ಟಿ ಉಪಗ್ರಹ ಉಡಾವಣಾ ಸೇವೆಗಳಿಗೂ ವಿನಾಯಿತಿ ನೀಡಲಾಗಿದೆ.
ಯಾಕೆ ಈ ನಿರ್ಧಾರ?: ಕ್ಯಾಸಿನೊಗಳು, ಕುದುರೆ ರೇಸಿಂಗ್ ಮತ್ತು ಇನ್ನಿತರೆ ಆನ್‌ಲೈನ್ ಗೇಮಿಂಗ್‌ಗೆ ತೆರಿಗೆ ವಿಧಿಸಲು ಸಚಿವರ ಗುಂಪು ಒತ್ತಾಯ ಮಾಡಿತ್ತು. ಅದರನ್ವಯ ಅಂದರೆ ಸಚಿವರ ಶಿಫಾರಸಿನ ಆಧಾರದ ಮೇಲೆ ತೆರಿಗೆ ದರವನ್ನು ನಿರ್ಧರಿಸಲಾಗಿದೆ. ಜೊತೆಗೆ ಯಾವುದೇ ತಾರತಮ್ಯವಿಲ್ಲದೆ ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ತೆರಿಗೆ ವಿಧಿಸಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವರು ಮಾಹಿತಿ ನೀಡಿದ್ದಾರೆ.
ಈ ರೀತಿ ಮಾಡುತ್ತಿರುವುದರಿಂದ ಗೇಮಿಂಗ್ ಉದ್ಯಮದ ಮೇಲೆ ಪ್ರಭಾವ ಬೀರುವುದಿಲ್ಲವೇ ಎಂಬ ಪ್ರಶ್ನೆಗೆ ಸೀತಾರಾಮನ್ ಪ್ರತಿಕ್ರಿಯೆ ನೀಡಿದ್ದು, ಗೇಮಿಂಗ್ ಅನ್ನು ಬೇರೆ ಯಾವುದೇ ಉದ್ಯಮಕ್ಕಿಂತ ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ಹಾಗೆಯೇ ನಾವು ಯಾವುದೇ ಉದ್ಯಮವನ್ನು ಕೊಲ್ಲುತ್ತಿಲ್ಲ ಎಂದು ತಿಳಿಸಿದ್ದಾರೆ. ಅದಾಗ್ಯೂ ಆನ್‌ಲೈನ್ ಗೇಮಿಂಗ್ ಕಂಪೆನಿಗಳು ಇದಕ್ಕೆ ತೀವ್ರ ಆಕ್ರೋಶ ಹೊರಹಾಕಿವೆ.
ಈ ರೀತಿ ಮಾಡುತ್ತಿರುವುದರಿಂದ ಆದಾಯದ ನಷ್ಟ ಮತ್ತು ಲಕ್ಷಗಟ್ಟಲೆ ನುರಿತ ಎಂಜಿನಿಯರ್‌ಗಳಿಗೆ ಉದ್ಯೋಗ ಇಲ್ಲದಂತೆ ಆಗುತ್ತದೆ. ಜೊತೆಗೆ ಈ ನಿರ್ಧಾರವು ಈಗಾಗಲೇ ಹೂಡಿಕೆ ಮಾಡಲಾದ $2.5 ಶತಕೋಟಿ ವಿದೇಶಿ ನೇರ ಹೂಡಿಕೆಯ (FDI) ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಮತ್ತು ಯಾವುದೇ ಸಂಭಾವ್ಯ ಹೂಡಿಕೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಕಂಪೆನಿಗಳು ದೂರಿವೆ.
ಈ ಉದ್ಯಮವು ಇನ್ನೂ ಸಹ ಹಿಡಿತ ಸಾಧಿಸುತ್ತಿರುವಾಗಲೇ ಆಟಗಾರರ ಸಂಖ್ಯೆಯಲ್ಲಿ ತೀವ್ರ ಕುಸಿತವನ್ನು ಕಾಣಲಿದೆ ಎಂಬುದು ದೊಡ್ಡ ಚಿಂತೆಯಾಗಿದೆ. EPWA ಯ ಇತ್ತೀಚಿನ ಸಮೀಕ್ಷೆಯ ಪ್ರಕಾರ 60% ಕ್ಕಿಂತ ಹೆಚ್ಚು ಆಟಗಾರರು ಹೆಚ್ಚಿದ ತೆರಿಗೆ ಹೊರೆಯಿಂದಾಗಿ ಆನ್‌ಲೈನ್ ಆಟಗಳನ್ನು ಆಡುವುದರಿಂದ ದೂರವಿರುತ್ತಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ವೃತ್ತಿಪರ ಆಟಗಾರರಿಗೆ ಇದು ಅತ್ಯಂತ ಕಠಿಣವಾಗಿದೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ಯಾವುದೇ ಆಟದ ಗೆಲುವಿನ ಮೇಲೆ ಈಗಾಗಲೇ 30% ಪಾವತಿಸುತ್ತೇವೆ ಮತ್ತು ಇನ್‌ಪುಟ್ ಕ್ರೆಡಿಟ್‌ಗಳನ್ನು ಸ್ವೀಕರಿಸುವುದಿಲ್ಲ. ನಮ್ಮನ್ನು ಜೂಜಾಟದಲ್ಲಿ ತೊಡಗಿಸುವುದು ಮತ್ತು ಅಂತಹ ಹೆಚ್ಚಿನ ತೆರಿಗೆ ದರಗಳನ್ನು ವಿಧಿಸುವುದು ನಿರುತ್ಸಾಹದಾಯಕವಾಗಿದೆ. ಇದರಿಂದಾಗಿ ಸರ್ಕಾರವು ನಮ್ಮ ದೃಷ್ಟಿಕೋನವನ್ನು ಪರಿಗಣಿಸಬೇಕು ಎಂದು EPWA ನಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುವ ಹಾಗೂ ಪೋಕರ್ ಆಟಗಾರ ಶರ್ಮಾ ಹೇಳಿದ್ದಾರೆ.
ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ 20 ರಿಂದ 29 ನಡುವಿನ ವಯಸ್ಸಿನ ಆಟಗಾರರು ಆನ್‌ಲೈನ್ ಆಟಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಅಂದರೆ ಇವರ ಸಂಖ್ಯೆ 69.8% ರಷ್ಟು ಹಾಗೆಯೇ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರರು 13.4% ಇದ್ದು, 30 ರಿಂದ 39 ವಯಸ್ಸಿನವರು 2.9% ಮಾತ್ರ ಇದ್ದಾರೆ. ಜೊತೆಗೆ ಮಹಿಳೆಯರಿಗಿಂತ ಪುರುಷ ಜನಸಂಖ್ಯೆಯು ಹೆಚ್ಚಿನ ಪ್ರಾಬಲ್ಯ ಹೊಂದಿದೆ ಎಂದು ಕಂಡುಕೊಳ್ಳಲಾಗಿದೆ.


Click it and Unblock the Notifications








