ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಹೆಜ್ಜೆ: ನಕಲಿ ಮಾಹಿತಿ ಶೇರ್ ಮಾಡೀರಿ ಜೋಕೆ!
ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಅಧಿಕಾರಕ್ಕೆ ಬಂದಾಗಿನಿಂದ ಹೊಸ ಹೊಸ ಬೆಳವಣಿಗೆ ನಡೆಯುತ್ತಲೇ ಇವೆ. ಇಲ್ಲಿಯವರೆಗೂ ಕೆಲವು ಸಾಮಾಜಿಕ ಜಾಲತಾಣ ಸೇರಿದಂತೆ ಇತರೆ ಪ್ಲಾಟ್‌ಫಾರ್ಮ್‌ನಲ್ಲಿ ಸಿಕ್ಕ ಸಿಕ್ಕ ಮಾಹಿತಿಯನ್ನು ಹಿಂದು ಮುಂದು ನೋಡದೆ ಶೇರ್ ಮಾಡುತ್ತಿದ್ದರು. ಆದರೆ ಇನ್ಮುಂದೆ ರಾಜ್ಯದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮ ಅನ್ವಯ ಆಗಲಿದೆ.
ಹೌದು, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇದೀಗ ತನ್ನದೇ ಆದ ಫ್ಯಾಕ್ಟ್ ಚೆಕ್ ಘಟಕವನ್ನು (Fact Check Unit) ಸ್ಥಾಪಿಸಲು ಸಜ್ಜಾಗಿದೆ. ಇದರಲ್ಲಿ ಎಸ್‌ಒಪಿಯು ಐಟಿ-ಬಿಟಿ ಇಲಾಖೆಯೊಂದಿಗೆ ಸತ್ಯ-ಪರೀಕ್ಷಕರನ್ನು ಒಳಗೊಂಡಿರುತ್ತದೆ ಎಂದು ಮಾಹಿತಿ ತಿಳಿದುಬಂದಿದ್ದು, ಇದು ನಕಲಿ ಸುದ್ದಿಗಳನ್ನು ಗುರುತಿಸುವುದು ಮತ್ತು ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನು ಪರಿಶೀಲಿಸಲಿದೆ ಎಂದು ಹೇಳಲಾಗಿದೆ. ಹಾಗಿದ್ರೆ, ಈ ಘಟಕ ಹೇಗೆಲ್ಲಾ ಕೆಲಸ ಮಾಡಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆದರಿಕೆ ಒಡ್ಡುವ ಹಾಗೂ ಸಮಾಜದ ಧ್ರುವೀಕರಣಕ್ಕೆ ಕಾರಣ ಆಗುವ ಸುಳ್ಳು ಸುದ್ದಿಗಳ ನಿಯಂತ್ರಣ ಕ್ರಮ ಅತ್ಯಗತ್ಯ ಎಂದು ಹೇಳಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು, ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆ ಸೇರಿದಂತೆ ಈ ವಿಷಯಕ್ಕೆ ಸಂಬಂಧ ಇರುವ ಎಲ್ಲಾ ನಿಯಮ ಮತ್ತು ಕಾನೂನು ರೂಪಿಸುವ ಕೆಲಸಕ್ಕೆ ಹಸಿರು ಬಾವುಟ ತೋರಿಸಿದ್ದಾರೆ.
ಇನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಸಭೆ ನಡೆಸಲಾಗಿದೆ. ಅಲ್ಲಿ ಮಹತ್ವದ ಚರ್ಚೆ ಮಾಡಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಂದರೆ ಸುಳ್ಳು ಸುದ್ದಿಗಳ ಮತ್ತು ಸುಳ್ಳು ಸುದ್ದಿ ಸೃಷ್ಟಿಸುವ ಸಿಂಡಿಕೇಟ್ಗಳ ಪತ್ತೆ ಮಾಡುವ ಕಾರ್ಯವನ್ನು ಈ ಮೂಲಕ ಮಾಡಲಿದ್ದು, ಈ ರೀತಿಯ ಸುದ್ದಿ ಪ್ರಸಾರಗಳಿಗೆ ತಡೆ ನೀಡುವುದು ಸೇರಿದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ.
ಅಷ್ಟು ಮಾತ್ರವಲ್ಲದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಗೆ ಹೆಚ್ಚಿನ ಬಲ ನೀಡಲಾಗುತ್ತದೆ. ಜೊತೆಗೆ ಸುಳ್ಳು ಸುದ್ದಿ ಪ್ರಸಾರ ಮಾಡುವ ಸಿಂಡಿಕೇಟ್‌ಗಳನ್ನು ಪಟ್ಟಿ ಮಾಡಿ ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಇನ್ನು ಸರ್ಕಾರದ ಮೇಲ್ವಿಚಾರಣಾ ಸಮಿತಿಯು ಕಾನೂನು ಸಿಬ್ಬಂದಿಯನ್ನು ಹೊಂದಿದ್ದು, ಅವರು ಸುದ್ದಿಗಳನ್ನು ನಕಲಿ ಎಂದು ಮೊದಲು ಪರಿಶೀಲಿಸುತ್ತಾರೆ ಜೊತೆಗೆ ಅದು ಐಪಿಸಿ ಮತ್ತು ಐಟಿ ನೀತಿಯ ನಿಬಂಧನೆಗಳನ್ನು ಹೊಂದಿದೆಯೇ ಇಲ್ಲವೇ ಎಂಬುದರ ಕುರಿತು ಇನ್‌ಪುಟ್ ಅನ್ನು ನೀಡಲಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ರಾಜ್ಯ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದು, ನಮ್ಮ ಇಲಾಖೆಯು ಸತ್ಯ ಪರೀಕ್ಷಕರನ್ನು ಎಂಪಾನೆಲ್ ಮಾಡುವ ಪ್ರಕ್ರಿಯೆಯಲ್ಲಿದೆ. ನಕಲಿ ಸುದ್ದಿಗಳಿಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಇಲಾಖೆಯಾಗಿರುವ ಗೃಹ ಇಲಾಖೆಗೂ ಇದು ತಾಂತ್ರಿಕ ಬೆಂಬಲ ನೀಡಲಿದೆ. ಈ ವ್ಯವಸ್ಥೆಯನ್ನು ಗೃಹ ಇಲಾಖೆ ಮತ್ತು ಕರ್ನಾಟಕ ಪೊಲೀಸರು ಸಂಪೂರ್ಣ ಕಾರ್ಯಗತಗೊಳಿಸಲಿದ್ದಾರೆ ಹಾಗೂ ಈ ಘಟಕದಲ್ಲಿ ಎಐ ಬಳಕೆ ಮಾಡಲಾಗುತ್ತದೆ ಎಂದಿದ್ದಾರೆ.
ಈ ರೀತಿಯ ಕ್ರಮವನ್ನು ಜಾರಿಗೆ ತರಲು ವಿಶೇಷ ಕಾನೂನಿನ ಅಗತ್ಯವಿಲ್ಲ. ಇದಕ್ಕೆ ಸರ್ಕಾರಿ ಆದೇಶ ಸಾಕು ಎಂದು ಪ್ರಿಯಾಂಕ್ ಹೇಳಿದ್ದು, ಮೇಲ್ವಿಚಾರಣಾ ಸಮಿತಿ ಮತ್ತು ಸತ್ಯ ಪರಿಶೀಲನಾ ಘಟಕದಿಂದ ನಕಲಿ ಎಂದು ಟ್ಯಾಗ್ ಮಾಡಲಾದ ಎಲ್ಲಾ ಪೋಸ್ಟ್‌ಗಳು ಮತ್ತು ವರದಿಗಳನ್ನು ಸಾಮಾಜಿಕ ಮಾಧ್ಯಮ ಮತ್ತು ಇತರ ಮಾಧ್ಯಮ ಪೋರ್ಟಲ್‌ಗಳಿಂದ ತೆಗೆದುಹಾಕಲಾಗುತ್ತದೆ ಎಂದಿದ್ದಾರೆ. ಅಷ್ಟು ಮಾತ್ರವಲ್ಲದೆ ಅಗತ್ಯವಿದ್ದರೆ ಸರ್ಕಾರವು ನಿಬಂಧನೆಗಳ ಅಡಿಯಲ್ಲಿ ದಂಡದ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಫ್ಯಾಕ್ಟ್ ಚೆಕ್ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸಂಸ್ಥೆಗಳು ದೇಶದಲ್ಲಿ ಈಗಾಗಲೇ ಕೆಲಸ ಮಾಡುತ್ತಿವೆ. ಯಾವುದಾದರೂ ವಿಷಯ ಮುನ್ನೆಲೆಗೆ ಬಂದಾಗ ಅದರ ಪೂರ್ವಾಪರಗಳನ್ನು ಪರಿಶೀಲನೆ ಮಾಡಿ ಎಷ್ಟರ ಮಟ್ಟಿಗೆ ಈ ಸತ್ಯದಿಂದ ಕೂಡಿದೆ ಅಥವಾ ಇದು ನಕಲಿ ಎಂದು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತವೆ. ಈ ಕೆಲಸದಲ್ಲಿ ಆಲ್ಟ್ ನ್ಯೂಸ್, ಬೂಮ್ ಲೈವ್, ಫ್ಯಾಕ್ಟ್ ಕ್ರೆಸೆಂಡೋ, ವಿಶ್ವಾಸ್ ನ್ಯೂಸ್, ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಸೇರಿದಂತೆ ಅನೇಕ ಸೈಟ್‌ಗಳಿವೆ. ಆದರೆ ಸರ್ಕಾರದ ಈ ಘಟಕ ಮಾತ್ರ ವಿಭಿನ್ನವಾಗಿ ಕೆಲಸ ಮಾಡಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಶೇರ್ ಮಾಡುವುದರಿಂದ ಆಗುವ ಅನಾನುಕೂಲಗಳು:
ಸಾಮಾಜಿಕ ಮಾಧ್ಯಮಗಳನ್ನು ಇಂದು ಎಲ್ಲರೂ ಬಳಕೆ ಮಾಡುವುರಿಂದಾಗಿ ಯಾವುದೇ ಮಾಹಿತಿಗಳು ಸಹ ಜನರಿಗೆ ಬೇಗ ತಲುಪುತ್ತವೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಕೆಲವರು ಸುಳ್ಳು ಸುದ್ದಿ ಅಥವಾ ಮಾಹಿತಿಯನ್ನು ಹರಡುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಾರೆ.
ಇನ್ನು ಈ ನಕಲಿ ಸುದ್ದಿಗಳನ್ನು ಹರಡುವುದು ವ್ಯಕ್ತಿಗಳು, ಸಮಾಜಕ್ಕೆ ಗಮನಾರ್ಹ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. ಜೊತೆಗೆ ಸುಳ್ಳು ಸುದ್ದಿಗಳನ್ನು ನಿಜವೆಂಬಂತೆ ಬಿಂಬಿಸುವುದರಿಂದಾಗಿ ಜನರು ಬೇಗ ಈ ಕಡೆ ವಾಲುತ್ತಾರೆ. ಇದರಿಂದಾಗಿ ರಾಜ್ಯದ ಅಥವಾ ದೇಶದ ಬಗ್ಗೆ ಅವರಿಗೆ ಇರುವ ತಿಳುವಳಿಕೆಯನ್ನು ವಿರೂಪಗೊಳಿಸಬಹುದು.

ಅದೆಲ್ಲದಕ್ಕಿಂತ ಮಿಗಿಲಾಗಿ ನಂಬಿಕೆಯನ್ನು ದುರ್ಬಲಗೊಳಿಸುವ ಕಾರ್ಯ ಸಹ ನಡೆಯುತ್ತದೆ. ನಕಲಿ ಸುದ್ದಿಗಳಿಗೆ ಪದೇ ಪದೇ ಒಡ್ಡಿಕೊಳ್ಳುವುದರಿಂದ ವಿಶ್ವಾಸಾರ್ಹ ಸುದ್ದಿ ಮೂಲಗಳು, ಸಂಸ್ಥೆಗಳು ಸೇರಿದಂತೆ ಕಾನೂನುಬದ್ಧ ವ್ಯವಸ್ಥೆಗಳ ಮೇಲಿನ ನಂಬಿಕೆಯನ್ನೇ ಕುಗ್ಗಿಸುತ್ತದೆ. ಇದರೊಂದಿಗೆ ಎಲ್ಲಾ ಸುದ್ದಿಗಳ ಬಗ್ಗೆ ಸಾಮಾನ್ಯ ಸಂದೇಹ ಸಹ ಉಂಟಾಗುವಂತೆ ಮಾಡುತ್ತದೆ.
ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುವ ಅಥವಾ ಹಲವಾರು ವೆಬ್‌ಸೈಟ್‌ನಲ್ಲಿ ಕಾಣಿಸಿಕೊಳ್ಳುವ ನಕಲಿ ಸುದ್ದಿಗಳು ಜನರ ಭಾವನೆಗಳು ಮತ್ತು ಪಕ್ಷಪಾತಗಳನ್ನು ಗುರಿಯಾಗಿಸುತ್ತವೆ. ಇವು ಸಮಾಜದಲ್ಲಿ ವಿಭಜನೆಯನ್ನು ಉಂಟು ಮಾಡುತ್ತವೆ. ಅದೆಲ್ಲಕ್ಕೂ ಮಿಗಿಲಾಗಿ ರಾಜಕೀಯ ಧ್ರುವೀಕರಣ, ಸಾಮಾಜಿಕ ಘರ್ಷಣೆಗೆ ಕಾರಣವಾಗುತ್ತದೆ.


Click it and Unblock the Notifications








