smartphone: ಹೇಳ ಹೆಸರಿಲ್ಲದಂತೆ ಮಾಯವಾಗಿದ್ದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮತ್ತೆ ರೀ-ಎಂಟ್ರಿ: ಜನ ಮೆಚ್ಚುವರೇ?
ಸ್ಮಾರ್ಟ್‌ಫೋನ್ ಕಂಪೆನಿಗಳ (smartphone company) ವಿಭಾಗದಲ್ಲಿ ಸಾಮಾನ್ಯ ಜನರಿಗೆ ತಿಳಿದಂತೆ ಆಪಲ್, ಸ್ಯಾಮ್‌ಸಂಗ್, ಒನ್‌ಪ್ಲಸ್, ಗೂಗಲ್ ಪಿಕ್ಸೆಲ್, ಒಪ್ಪೋ, ರೆಡ್ಮಿ, ರಿಯಲ್‌ಮಿ ಸೇರಿದಂತೆ ಅನೇಕ ಬ್ರ್ಯಾಂಡ್‌ಗಳು ಸದ್ಯಕ್ಕೆ ಪೈಪೋಟಿಯುಕ್ತ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಿವೆ. ಅದಾಗ್ಯೂ ಇವು ಎಂದಿಗೂ ಇದೇ ರೀತಿ ಇರುತ್ತವೆ ಎಂದು ಹೇಳಲು ಸಾಧ್ಯ ಆಗುವುದಿಲ್ಲ. ಅಂದರೆ ಕಣ್ಮರೆ ಸಹ ಆಗಬಹುದು. ಆ ರೀತಿ ಆದ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದೆ ಇವೆ.
ಹೌದು, ಯಾವುದೇ ಬ್ರ್ಯಾಂಡ್ ಆದರೂ ಸಹ ಕ್ಷಣ ಕ್ಷಣಕ್ಕೂ ಪೈಪೋಟಿಯನ್ನು ಎದುರಿಸಲೇ ಬೇಕು. ಕೆಲವು ಗಟ್ಟಿಯಾಗಿ ನೆಲೆಯೂರಿದ್ರೆ ಇನ್ನೂ ಕೆಲವು ಹೇಳ ಹೆಸರಿಲ್ಲದಂತೆ ಮಾಯವಾಗಿಬಿಡುತ್ತವೆ. ಆ ರೀತಿ ಆದ ಬ್ರ್ಯಾಂಡ್ ಗಳಲ್ಲಿ ಪ್ರಮುಖವಾದುದು ಹೆಚ್‌ಟಿಸಿ (HTC). ಒಂದು ಕಾಲದಲ್ಲಿ ಫೋನ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದ ಈ ಕಂಪೆನಿ ಈಗ ಮತ್ತೆ ಪುಟಿದೇಳಲು ಸಜ್ಜಾಗಿದೆ. ಹಾಗಿದ್ರೆ, ಈ ಕಂಪೆನಿಯ ಪ್ಲ್ಯಾನ್ ಏನು?, ಅಷ್ಟಕ್ಕೂ ಯಾವ ರೀತಿಯ ಫೋನ್‌ಗಳನ್ನು ಇದು ಅನಾವರಣ ಮಾಡಲು ಮುಂದಾಗಿದೆ ಅನ್ನೋ ವಿವರ ಇಲ್ಲಿದೆ ನೋಡಿ.

ಫೀನಿಕ್ಸ್ ಪಕ್ಷಿಯಂತೆ ಏಳಲು ಮುಂದಾದ ಹೆಚ್‌ಟಿಸಿ: ಹೆಚ್‌ಟಿಸಿ ಬ್ರ್ಯಾಂಡ್ ಒಂದು ಕಾಲದಲ್ಲಿ ಪ್ರೀಮಿಯಂ ಮತ್ತು ನವೀನ ಆಂಡ್ರಾಯ್ಡ್ ಆಧಾರಿತ ಫೋನ್‌ಗಳಿಗೆ ಹೆಸರುವಾಸಿಯಾಗಿತ್ತು. ಹಾಗೆಯೇ ಈಗ ಹೊಸ ತಂತ್ರದೊಂದಿಗೆ ಪುನರಾಗಮನಕ್ಕೆ ಸಜ್ಜಾಗಿದೆ. ಅಂದರೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಸರಣಿಯ ಚಿಪ್‌ಗಳಿಂದ ರನ್ ಆಗುವ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪ್ರಾರಂಭಿಸಲು ಕಂಪನಿಯು ಎಲ್ಲಾ ತಯಾರಿ ನಡೆಸಿದೆ ಎಂದು ತಿಳಿದುಬಂದಿದೆ.
ಗಮನಿಸಬೇಕಾದ ವಿಷಯ ಏನೆಂದರೆ ಆಂಡ್ರಾಯ್ಡ್ ಆಧಾರಿತ ಡಿವೈಸ್‌ಗಳನ್ನು ತಯಾರಿಸಿದ ಸ್ಮಾರ್ಟ್‌ಫೋನ್ ಬ್ರಾಂಡ್ ಇದಾಗಿದ್ದು, ಇದನ್ನು ಐಫೋನ್ ಮಟ್ಟದ ಪ್ರೀಮಿಯಂ ಮತ್ತು ಸ್ಯಾಮ್‌ಸಂಗ್ ಮಟ್ಟದ ನವೀನ ಫೋನ್‌ಗಳಿಗೆ ಸರಿಸಮನಾಗಿ ಪರಿಗಣಿಸಲಾಗುತ್ತಿತ್ತು. ಆದರೆ, ಬದಲಾದ ಕಾಲದಲ್ಲಿ ಸ್ಪರ್ಧೆ ಕಠಿಣವಾಯಿತು. ಈ ಮೂಲಕ ಕಂಪನಿಯು ನಿಧಾನವಾಗಿ ಹಿಂದಕ್ಕೆ ಸರಿಯುತ್ತಾ ಹೋಯ್ತು. ಜೊತೆಗೆ ಅದು ಮಾರುಕಟ್ಟೆಯಿಂದ ಕಣ್ಮರೆಯಾಯಿತು. ಆದರೆ ಇತರೆ ಡಿವೈಸ್‌ಗಳ ಮೂಲಕ ಆಗಾಗ್ಗೆ ಸದ್ದು ಮಾಡುತ್ತಲೇ ಇತ್ತು.

ಇತ್ತೀಚಿನ ವರದಿಯ ಪ್ರಕಾರ, ಕಂಪನಿಯು ಪ್ರತಿ ವರ್ಷ ಒಂದು ಅಥವಾ ಎರಡು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಮುಂದಾಗಿದೆಯಂತೆ. ಆದರೆ ಈ ಬಾರಿ ಮೊದಲು ಮಾಡಿದ ತಪ್ಪನ್ನು ಮಾಡುವುದಿಲ್ಲ ಎಂದು ತಿಳಿದುಬಂದಿದೆ. ಅಂದರೆ ಐಫೋನ್ ಅಥವಾ ಗ್ಯಾಲಕ್ಸಿ (iPhone, samsung Galaxy) ಫೋನ್‌ಗಳಿಗೆ ಪೈಪೋಟಿ ನೀಡುವ ಬದಲಾಗಿ ಮಧ್ಯಮ ಶ್ರೇಣಿಯ ಫೋನ್‌ಗಳನ್ನು ಲಾಂಚ್ ಮಾಡಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.
ಈ ಕಂಪೆನಿ ಲಾಂಚ್ ಮಾಡಲು ಮುಂದಾಗಿರುವ ಫೋನ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಸರಣಿಯ ಚಿಪ್‌ಗಳಿಂದ ರನ್ ಆಗಲಿದೆ ಎನ್ನಲಾಗಿದೆ. ಈ ಜನ್‌ನ ಪ್ರೊಸೆಸರ್‌ಗಳು ಸಾಮಾನ್ಯವಾಗಿ ಫೋನ್‌ಗಳಲ್ಲಿ ಎಲ್ಲಾ ಕೆಲಸವನ್ನು ಸಮತೋಲನದಿಂದ ಮಾಡುತ್ತವೆ. ಈ ಕಾರಣಕ್ಕೆ ಇದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಫೋನ್‌ಗಳು ಯಾವಾಗ ಲಾಂಚ್ ಆಗುತ್ತವೆ ಎಂಬ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಈ ಹೆಚ್‌ಟಿಸಿ ಬಗ್ಗೆ ಕೆಲವು ವರ್ಷಗಳು ಹಿಂದಕ್ಕೆ ಹೋದರೆ ಹೆಚ್‌ಟಿಸಿ U23 ಸರಣಿಯಲ್ಲಿ ಹೆಚ್‌ಟಿಸಿ U23 ಮತ್ತು U23 ಪ್ರೊ ಫೋನ್‌ಗಳನ್ನು ಲಾಂಚ್ ಮಾಡಲಾಗಿತ್ತು. ಇದಲ್ಲದೆ, ಡಿಸೈರ್ 22 ಪ್ರೊ ಫೋನ್ ಸಹ ಮಾರುಕಟ್ಟೆಯಲ್ಲಿ ಕೊಂಚ ಸದ್ದು ಮಾಡಿ ಜನರ ಗಮನ ಸೆಳೆದಿತ್ತು. ಈ ಮೂಲಕ ಬೆರಳಣಿಕೆಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದರೂ ಸಹ ಸ್ಮಾರ್ಟ್‌ಫೋನ್ ವಲಯದಲ್ಲಿ ಉತ್ತಮ ಹೆಸರನ್ನೇ ಪಡೆದಿತ್ತು.
ಹಾಗೆಯೇ ಈ ಕಂಪೆನಿ ಕೆಲವು ವರ್ಷಗಳ ಹಿಂದೆ ದೊಡ್ಡ ಬ್ರ್ಯಾಂಡ್ ಆಗಿ ಹೆಸರು ಪಡೆಯಲು ಕಾರಣ ನವೀನ ಮತ್ತು ಪ್ರೀಮಿಯಂ ಉತ್ಪನ್ನಗಳ ತಯಾರಿಕೆ. ಇತರ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ಕಸ್ಟಮ್ ಯೂಸರ್ ಇಂಟರ್‌ಫೇಸ್ ಅನ್ನು ಸರಿಯಾಗಿ ಪಡೆಯಲು ಹೆಣಗಾಡುತ್ತಿರುವ ಸಮಯದಲ್ಲಿ ವ್ಯಾಪಕ ಶ್ರೇಣಿಯ, ಪಾಲಿಶ್ ಮಾಡಿದ ಬಳಕೆದಾರ ಇಂಟರ್‌ಫೇಸ್ ಅನ್ನು ಪರಿಚಯಿಸುವ ಕೆಲಸ ಮಾಡಿತ್ತು.


Click it and Unblock the Notifications








