ಸೀಲಿಂಗ್ ಫ್ಯಾನ್‌ಗಳಿಗೆ ದೇಶದಲ್ಲಿ ಕಠಿಣ ಕಾನೂನು, ಖರೀದಿಸುವ ಮುನ್ನ ಈ ಸುದ್ದಿ ಓದಿ!
ಭಾರತದಲ್ಲಿ ಬಹುಪಾಲು ವಸ್ತುಗಳು ಹಾಗೂ ಸ್ಮಾರ್ಟ್ ಗ್ಯಾಜೆಟ್‌ಗಳು (Smart gadget) ಕಾನೂನಿನ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಈ ಕಾನೂನು ಮೀರಿ ನಡೆದರೆ ಶಿಕ್ಷೆ ಅಥವಾ ದಂಡ ತಪ್ಪಿದ್ದಲ್ಲ. ಅದರಂತೆ ಈಗ ಭಾರತದಲ್ಲಿ ಸೀಲಿಂಗ್ ಫ್ಯಾನ್‌ಗಳಿಗೆ (Ceiling fan) ಸಂಬಂಧಿಸಿದಂತೆ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ.
ಹೌದು, ದೇಶದಲ್ಲಿ ಗುಣಮಟ್ಟವಿಲ್ಲದ ವಸ್ತುಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗಿರುವ ಸರ್ಕಾರ ಈಗಾಗಲೇ ಲ್ಯಾಪ್‌ಟಾಪ್ ಹಾಗೂ ಟ್ಯಾಬ್‌ಗಳ ಆಮದಿಗೆ ನಿರ್ಬಂಧ ಹೇರಿದೆ. ಅದರಂತೆ ದೇಶದಲ್ಲಿ ಉತ್ತಮವಾದ ಡಿವೈಸ್‌ಗಳನ್ನು ತಯಾರು ಮಾಡುವ ಗುರಿ ಹೊಂದಿದ್ದು, ಇದರ ಭಾಗವಾಗಿಯೇ ಈಗ ಪ್ರತಿ ಮನೆಗಳಿಗೂ ಅಗತ್ಯವಾಗಿ ಬೇಕಾಗಿರುವ ಸೀಲಿಂಗ್ ಫ್ಯಾನ್ ವಿಷಯಕ್ಕೆ ಕಠಿಣ ಕಾನೂನು ನಿಯಮ ಹೇರಿದೆ. ಹಾಗಿದ್ರೆ, ಏನಿದು ಕಾನೂನು? ತಿಳಿಯೋಣ ಬನ್ನಿ.

ಕೇಂದ್ರ ಸರ್ಕಾರ (Central Govt) ಒಂದರ ಹಿಂದೆ ಒಂದರಂತೆ ವಿವಿಧ ಸ್ಮಾರ್ಟ್ ಗ್ಯಾಜೆಟ್ ಸೇರಿದಂತೆ ಇತರೆ ವಸ್ತುಗಳ ಆಮದಿನ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಹಿಂದೆ ಕೇಂದ್ರ ಸರ್ಕಾರವು ದೇಶದಲ್ಲಿ ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಉತ್ಪನ್ನಗಳು, ಚಾರ್ಜರ್‌ಗಳು ಮತ್ತು ಯುಎಸ್‌ಬಿ ಕೇಬಲ್‌ಗಳ (Chargers and USB cable) ಆಮದನ್ನು ನಿಷೇಧ ಮಾಡಿ ಭಾರೀ ಸದ್ದು ಮಾಡಿತ್ತು. ಈಗ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಸೀಲಿಂಗ್ ಫ್ಯಾನ್‌ಗಳ ಗುಣಮಟ್ಟವನ್ನು ಸುಧಾರಿಸಲು ಮಾನದಂಡಗಳನ್ನು ನಿಗದಿಪಡಿಸಿದೆ.
ಸೀಲಿಂಗ್ ಫ್ಯಾನ್‌ಗೆ ಏನೆಲ್ಲಾ ಮಾನದಂಡ?: ಇತ್ತೀಚಿನ ದಿನಗಳಲ್ಲಿ ಫ್ಯಾನ್‌ಗಳು ತುಂಬಾನೇ ಸ್ಮಾರ್ಟ್ ಆಗಿವೆ. ಇವುಗಳನ್ನು ಬಳಕೆ ಮಾಡುವುದೇ ಒಂದು ಪ್ರತಿಷ್ಠೆಯಾದಂತೆ ಆಗಿದೆ. ಆದರೆ, ಈಗ ಸಿಕ್ಕ ಸಿಕ್ಕಂತೆ ಫ್ಯಾನ್‌ಗಳನ್ನು ತಯಾರು ಮಾಡುವಂತೆಯೂ ಇಲ್ಲ ಹಾಗೂ ಮಾರುವಂತೆಯೂ ಇಲ್ಲ. ಈ ಮೂಲಕ ಬಿಐಎಸ್ ಗುರುತು ಹೊಂದಿರುವ ಫ್ಯಾನ್‌ಗಳನ್ನು ಮಾತ್ರ ದೇಶದಲ್ಲಿ ಮಾರಾಟ ಮಾಡಲು ಯೋಜಿಸಲಾಗಿದೆ.
ಇದರೊಂದಿಗೆ ಬಿಐಎಸ್ ಕಾಯಿದೆಯ (BIS Act) ನಿಬಂಧನೆಯನ್ನು ಮೊದಲ ಬಾರಿಗೆ ಉಲ್ಲಂಘನೆ ಮಾಡಿದರೆ ಎರಡು ವರ್ಷಗಳ ಜೈಲು ಶಿಕ್ಷೆಯೊಂದಿಗೆ ದಂಡಕ್ಕೆ ಆಹ್ವಾನ ನೀಡಿದಂತೆ ಎಂದು ಸರ್ಕಾರ ಎಚ್ಚರಿಸಿದೆ. ಅದರಲ್ಲೂ ಫ್ಯಾನ್‌ನಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಂದರೆ BIS ಮಾರ್ಕ್ ಅನ್ನು ಹೊಂದಿರುವುದು ಅಗತ್ಯವಾಗಿದ್ದು, ಅಂಗಡಿಯವನು ಅಥವಾ ಕಂಪನಿಯು BIS ಮಾರ್ಕ್‌ನ ಫ್ಯಾನ್ ಹೊಂದಿಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.
ಕೆಟ್ಟ ಫ್ಯಾನ್ ಮಾಡಿದರೆ ಜೈಲುವಾಸ: ಯಾವುದೇ ಅಂಗಡಿಯವರು ಅಥವಾ ಕಂಪನಿಯು ಬಿಐಎಸ್ ಮಾರ್ಕ್ ಅನ್ನು ಅನುಸರಿಸದಿದ್ದರೆ ಅವರು ಮೊದಲೇ ಉಲ್ಲೇಖಿಸಿದಂತೆ ಮೊದಲ ಬಾರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ಎರಡು ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ಜೊತೆಗೆ ಎರಡನೇ ಬಾರಿಗೆ ಸಿಕ್ಕಿಬಿದ್ದರೆ ಅವರು 5 ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ ಇದರೊಂದಿಗೆ ದಂಡದ ಮೊತ್ತಕ್ಕೆ ಫ್ಯಾನ್ ವೆಚ್ಚದ 10 ಪಟ್ಟು ಸೇರಿಸಬೇಕಾಗುತ್ತದೆ.
ಇನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯು ಆಗಸ್ಟ್ 9 ರಂದು ಈ ಅಧಿಸೂಚನೆಯನ್ನು ಹೊರಡಿಸಿದೆ. ಪರಿಣಾಮ ಫ್ಯಾನ್‌ಗಳ ರೆಕ್ಕೆಗಳ ಮೇಲೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಂದರೆ BIS ನ ಗುರುತು ಇರಲೇಬೇಕಾಗಿದೆ. ಯಾವುದೇ ಸೀಲಿಂಗ್ ಫ್ಯಾನ್‌ನಲ್ಲಿ ಈ ಗುರುತು ಇಲ್ಲದಿದ್ದರೆ, ಆ ಕಂಪನಿ ಮತ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಅನುಮತಿ ನೀಡುತ್ತದೆ. ಈ ಕಟ್ಟು ನಿಟ್ಟಾದ ನಿಯಮ ಮುಂದಿನ ವರ್ಷ ಫೆಬ್ರವರಿಯಿಂದ ಅನ್ವಯವಾಗಲಿದೆ.

ಈ ನಿಯಮಕ್ಕೆ ಕಾರಣ ಏನು?: ಮೊದಲೇ ತಿಳಿಸಿದಂತೆ ದೇಶದಲ್ಲಿ ಫ್ಯಾನ್‌ಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ದೇಶೀಯ ಕಂಪನಿಗಳನ್ನು ಉತ್ತೇಜಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದು ಹಲವರಿಗೆ ಸಂತಸದ ವಿಚಾರವಾದರೂ ಸಹ ಮಾರಾಟಗಾರರಿಗೆ ತುಂಬಾ ಬೇಸರ ಉಂಟು ಮಾಡಲಿದೆ. ಇದರೊಂದಿಗೆ ಗುಣಮಟ್ಟವಿಲ್ಲದ ಫ್ಯಾನ್‌ಗಳ ಆಮದನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸುವ ಭಾಗವೇ ಈ ನಿಯಮಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.


Click it and Unblock the Notifications








