ಸಬ್ ಮರಿನ್ ಕಣ್ಮರೆ: ಜಲಾಂತರ್ಗಾಮಿಯಲ್ಲಿ ಆಮ್ಲಜನಕ ಎಲ್ಲಿಯವರೆಗೆ ಇರುತ್ತೆ?
ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿರುವ ಪ್ರಸಿದ್ಧ ಟೈಟಾನಿಕ್ ಹಡಗಿನ ಅವಶೇಷಗಳನ್ನು ಮತ್ತು ಅದರ ಸ್ಥಳವನ್ನು ವೀಕ್ಷಿಸಲು ತೆರೆಳಿದ್ದ ಪ್ರವಾಸಿ ಜಲಾಂತರ್ಗಾಮಿ ಕಣ್ಮರೆಯಾಗಿದೆ. ನಾಪತ್ತೆಯಾಗಿರುವ ಸಬ್ ಮರಿನ್ ನೌಕೆಯ ಹುಡುಕಾಟ ಮುಂದುವರೆದಿದೆ. ಇನ್ನು ಈ ಪ್ರವಾಸಿ ಜಲಾಂತರ್ಗಾಮಿಯಲ್ಲಿ ಪೈಲೆಟ್ ಸೇರಿ ಐದು ಜನರನ್ನು ಒಳಗೊಂಡಿತ್ತು ಎಂದು ಹೇಳಲಾಗಿದೆ.
ಹೌದು, 18 ಭಾನುವಾರ 2023 ರಂದು ಪ್ರವಾಸಿ ಜಲಾಂತರ್ಗಾಮಿ ಕಣ್ಮರೆಯಾಯಿತು ಎಂದು ವರದಿಯಾಗಿದೆ. ಜಲಾಂತರ್ಗಾಮಿ ಮುಳುಗಿದ ಸುಮಾರು ಒಂದು ಗಂಟೆ 45 ನಿಮಿಷಗಳ ನಂತರ ಅದು ತನ್ನ ಬೆಂಬಲ ಹಡಗು ಕೆನಡಾದ ಸಂಶೋಧನಾ ಐಸ್ ಬ್ರೇಕರ್ ಪೋಲಾರ್ ಪ್ರಿನ್ಸ್‌ನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು ಎಂದು ವರದಿಯಾಗಿದೆ.

ಕಣ್ಮರೆಯಾದ ಪ್ರವಾಸಿ ಸಬ್ ಮರಿನ್ ಗಾಗಿ ಶೋಧ ನಡೆಸಿದ ತಂಡಗಳು ನೀರೊಳಗಿನ ಶಬ್ದಗಳನ್ನು ಪತ್ತೆ ಹಚ್ಚಿವೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಬುಧವಾರ ತಿಳಿಸಿದೆ. ಕೋಸ್ಟ್ ಗಾರ್ಡ್ ಮಾಹಿತಿ ಪ್ರಕಾರ, ಒಟ್ಟು 10,000 ಚದರ ಮೈಲಿಗಳನ್ನು ಅಧಿಕ ಹುಡುಕಾಟ ಮಾಡಲಾಗಿದೆ. ಇನ್ನು ಈ ಪ್ರವಾಸಿ ಸಬ್ ಮರಿನ್‌ನಲ್ಲಿ ಸುಮಾರು 96 ಗಂಟೆ ಆಮ್ಲಜನಕದ ಪೂರೈಕೆ ವ್ಯವಸ್ಥೆ ಇತ್ತು ಎಂದು ವರದಿಯಿಂದ ತಿಳಿದುಬಂದಿದೆ.
ಇನ್ನು ಪ್ರವಾಸಿ ಜಲಾಂತರ್ಗಾಮಿ ಟೈಟಾನ್ ಅನ್ನು ಪೈಲಟ್ ಮಾಡುತ್ತಿದ್ದ ಓಷನ್‌ಗೇಟ್ ಸಿಇಒ ಸ್ಟಾಕ್‌ಟನ್ ರಶ್, ಬ್ರಿಟಿಷ್ ಸಾಹಸಿ ಹಮೀಶ್ ಹಾರ್ಡಿಂಗ್, ಪಾಕಿಸ್ತಾನಿ ವ್ಯಾಪಾರ ಕುಟುಂಬದ ಇಬ್ಬರು ಸದಸ್ಯರು (ತಂದೆ ಮತ್ತು ಮಗ ಎನ್ನಲಾಗಿದೆ) ಮತ್ತು ಟೈಟಾನಿಕ್ ತಜ್ಞರು ಇದ್ದರು ಎಂದು ಎಂದು ಯುಎಸ್‌ಎ ಟುಡೇ ವರದಿ ಮಾಡಿದೆ. ಇನ್ನು ಜಲಾಂತರ್ಗಾಮಿ ಟೈಟಾನ್ ನಲ್ಲಿ ಪ್ರಯಾಣ ಮಾಡಿದ ಎಲ್ಲರು ಬಿಲಿಯನೇರ್ ಆಗಿದ್ದು, ಸಬ್ ಮರಿನ್ ಟೈಟಾನ್ ಗಾಗಿ ಎಲ್ಲ ರೀತಿಯ ಹುಡುಕಾಟ ನಡೆದಿದೆ.
ಈ ಹಿಂದೆ ಮುಳುಗಡೆ ಆಗಿದ್ದ ಟೈಟಾನಿಕ್ ಅನ್ನು ಪತ್ತೆ ಮಾಡಲು ಬಳಸಿದ ಆಪ್ಟಿಕಲ್ ಇಮೇಜಿಂಗ್ ಸಿಸ್ಟಮ್ ಅಭಿವೃದ್ಧಿಪಡಿಸಿದ ತಂಡಗಳೇ ಪ್ರತ್ಯೇಕ ಸ್ಥಳಗಳಲ್ಲಿ ರಕ್ಷಣಾ ಕಾರ್ಯ ಮಾಡುತ್ತಿವೆ. ಪ್ರವಾಸಿ ಸಬ್ ಮರಿನ್ ಟೈಟಾನ್ ಸಾಗರದ ಆಳದಲ್ಲಿ ಹುದುಗಿದ್ದರೆ, ಅದನ್ನು ಪತ್ತೆ ಮಾಡುವುದು ಕಷ್ಟ. ಏಕೆಂದರೆ ಸಾಗರದ ತಳವು ಸಮತಟ್ಟಾಗಿಲ್ಲ. ಇದು ಬೆಟ್ಟಗಳು ಮತ್ತು ಕಣಿವೆಗಳಿಂದ ಆವೃತವಾಗಿದೆ. ಪ್ರಯಾಣಿಕರನ್ನು ರಕ್ಷಿಸುವುದು ಸಾಹಸದಾಯಕ ಎಂದು ಬ್ರಿಟನ್‌ನ ಕೀಲೆ ವಿಶ್ವವಿದ್ಯಾನಿಲಯದ ಫೊರೆನ್ಸಿಕ್ ಜಿಯೋಸೈನ್ಸ್‌ನ ಪ್ರೊಫೆಸರ್ ಜೇಮೀ ಪ್ರಿಂಗಲ್ ಹೇಳಿದ್ದಾರೆ.
ಇದು ದುಬಾರಿ ಜಲ-ಯಾನ!
ನಾಪತ್ತೆಯಾಗಿರುವ ಪ್ರವಾಸಿ ಜಲಾಂತರ್ಗಾಮಿ ಹೆಸರು ಟೈಟಾನ್ ಆಗಿದೆ. ಈ ಹಡಗು ಸುಮಾರು 21 ಅಡಿ ಇದ್ದು, ಐದು ಜನರು ಪ್ರಯಾಣಿಕರನ್ನು ಹೊಂದಿತ್ತು. ಟೈಟಾನಿಕ್ ದುರಂತ ಸ್ಥಳ ಹಾಗೂ ಟೈಟಾನಿಕ ಹಡಗಿನ ಅವಶೇಷಗಳನ್ನು ವೀಕ್ಷಿಸುವ ಈ ಜಲ ಯಾನದ ದರ ಒಬ್ಬರಿಗೆ 2,50,000 ಡಾಲರ್ (ಭಾರತದಲ್ಲಿ ಅಂದಾಜು 20,497,987 ರೂ) ಆಗಿದೆ.
ಟೈಟಾನಿಕ್ ಹಡಗು ಒಂದು ದಂತಕಥೆ
1912 ರಲ್ಲಿ ಮುಳುಗಡೆಯಾದ ಟೈಟಾನಿಕ್ ಹಡಗು ಒಂದು ರೋಚಕ ದಂತಕಥೆಯಾಗಿ ಉಳಿದಿದೆ. ಅಂದಹಾಗೆ ಲಗ್ಸುರಿ ಹಡಗು ಟೈಟಾನಿಕ್ ಇಂಗ್ಲೆಂಡ್‌ನ ಸೌತಾಂಪ್ಟನ್ ಪ್ರದೇಶದಿಂದ ಯುಎಸ್‌ಎಯ ನ್ಯೂಯಾರ್ಕ್ ನಗರ ಯಾನ ಆರಂಭಿಸಿತ್ತು. ಹಡಗು ಉತ್ತರ ಅಟ್ಲಾಂಟಿಕ್ ದಲ್ಲಿದ್ದಾಗ ದೈತ್ಯ ಮಂಜುಗಡ್ಡೆಗೆ ಅಪ್ಪಳಿಸಿ ಹಡಗು ಎರಡು ತುಂಡಾಗಿ ಮಹಾಸಾಗರದಲ್ಲಿ ಮುಳುಗಡೆ ಆಯಿತು.
ಇನ್ನು ಟೈಟಾನಿಕ್ ಹಡಗು ಮುಳುಗಡೆಯ ಘಟನೆಯಿಂದ ಸುಮಾರು 1500ಕ್ಕೂ ಹೆಚ್ಚಿನ ಪ್ರಯಾಣಿಕರು ಸಾವನ್ನಪ್ಪಿದರು. ಈ ಭೀಕರ ದುರಂತದಲ್ಲಿ ಅನೇಕ ಜನರ ಮೃತದೇಹಗಳು ಪತ್ತೆನೇ ಆಗಿರಲಿಲ್ಲ. 1912 ರಲ್ಲಿ ಮುಳುಗಡೆಯಾದ ಟೈಟಾನಿಕ ಹಡಗಿನ ಅವಶೇಷವನ್ನು 1985ರಲ್ಲಿ ಪತ್ತೆ ಮಾಡಲಾಗಿತ್ತು.
ಸಬ್‌ಮರ್ಸಿಬಲ್ ಮತ್ತು ಸಬ್ ಮರಿನ್ ನಡುವಿನ ವ್ಯತ್ಯಾಸ ಏನು?
ಜಲಾಂತರ್ಗಾಮಿ (submarine) ಮತ್ತು ಜಲಾಂತರ್ಗಾಮಿ ನೌಕೆಯ (submersible) ನಡುವಿನ ಪ್ರಮುಖ ಭಿನ್ನತೆಯೆಂದರೆ, ಸಬ್ ಮರಿನ್ ಬಂದರನ್ನು ಬಿಟ್ಟು ತನ್ನ ಸ್ವಂತ ಶಕ್ತಿಯ ಬಲದೊಂದಿಗೆ ಮರಳಿ ಬಂದರಿಗೆ ಬರುವ ಸಾಕಷ್ಟು ಶಕ್ತಿಯನ್ನು ಹೊಂದಿರುತ್ತದೆ. ಇನ್ನು ಸಬ್‌ಮರ್ಸಿಬಲ್ ತುಂಬಾ ಸೀಮಿತ ವಿದ್ಯುತ್ ಮೀಸಲು ಹೊಂದಿದೆ, ಆದ್ದರಿಂದ ಲಾಂಚ್ ಮಾಡಲು ಹಾಗೂ ಮರುಪಡೆಯಲು ಮುಖ್ಯ ಹಡಗು ಅಗತ್ಯವಿದೆ. ವಿವಿಧ ರೀತಿಯ ಸಬ್‌ಮರ್ಸಿಬಲ್‌ಗಳು ಇವೆ.


Click it and Unblock the Notifications








