ಸ್ವಿಗ್ಗಿ ಸಂಸ್ಥೆಯಿಂದ 'ಸ್ವಿಗ್ಗಿ ಗೋ' ಸೇವೆ ಆರಂಭ!..ಎಲ್ಲವೂ ಈಗ ಮನೆ ಬಾಗಿಲಿಗೆ!
ಪ್ರಸ್ತುತ ಫುಡ್ ಡೆಲಿವರಿ ಸೇವೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ 'ಸ್ವಿಗ್ಗಿ' ಸಂಸ್ಥೆಯು ಇದೀಗ ತನ್ನ ಸೇವಾವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಗ್ರಾಹಕರು ಇನ್ಮುಂದೆ ಬರೀ ಫುಡ್ ಆರ್ಡರ್ ಮಾಡುವಾಗ ಮಾತ್ರ ಸ್ವಿಗ್ಗಿ ನೆನಪಾಗುವುದಿಲ್ಲ. ಬದಲಿಗೆ ಮನೆಯಲ್ಲಿ ಬಾಕ್ಸ್ ಅಥವಾ ಕೀ ಮರೆತು ಆಫೀಸ್‌ಗೆ ಹೋದಾಗ, ಪಾರ್ಸಲ್ ಕಳುಹಿಸುವುದಿದ್ದಾಗ, ಲಾಂಡ್ರಿ ತರಲು ಹೀಗೆ ಹಲವು ಅತೀ ಅಗತ್ಯ ಕೆಲಸಗಳಿಗೂ ಸಹ 'ಸ್ವಿಗ್ಗಿ'ಯೇ ನೆನಪಿಸಿಕೊಳ್ತಿರಾ.!

ಹೌದು, ಜನಪ್ರಿಯ ಸ್ವಿಗ್ಗಿ ಕಂಪನಿಯು ಹೊಸದಾಗಿ 'ಸ್ವಿಗ್ಗಿ ಗೋ' ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದು, ಈ ಸೇವೆಯಡಿ ಸಂಸ್ಥೆಯು ಗ್ರಾಹಕರಿಗೆ ಲಾಂಡ್ರಿ ಪಿಕ್‌ಅಪ್, ಡ್ರಾಪ್, ಕೀ ಮರೆತು ಹೋದರೇ, ಅವರಿಗೆ ತಲುಪಿಸುವುದು ಮತ್ತು ನಿರ್ದಿಷ್ಟ ಸ್ಥಳಕ್ಕೆ ಪಾರ್ಸಲ್ ತಲುಪಿಸುವ ಸೇವೆಗಳನ್ನು ನೀಡಲು ಮುಂದಾಗಿದೆ. ಅದಕ್ಕಾಗಿ ಸ್ವಿಗ್ಗಿ ಸ್ಟೋರ್‌ಗಳನ್ನು ತೆರೆಯುವುದಾಗಿ ಕಂಪನಿಯು ತಿಳಿಸಿದೆ. ಹಾಗಾದರೇ ಸ್ವಿಗ್ಗಿ ಗೋ ಸೇವೆಯ ಕುರಿತು ಇನ್ನಷ್ಟು ಮಾಹಿತಿಗಳನ್ನು ಮುಂದೆ ನೋಡೋಣ ಬನ್ನಿರಿ.

ಸ್ವಿಗ್ಗಿಯ ಹೊಸ 'ಸ್ವಿಗ್ಗಿಯ ಗೋ' ಸೇವೆಯಲ್ಲಿ ಗ್ರಾಹಕರಿಗೆ ಕಿರಾಣಿ ದಿನಸಿ, ತರಕಾರಿ, ಹೂಗಳು, ಮೆಡಿಸಿನ್ ಸೇರಿದಂತೆ ದೈನಂದಿನ ಅಗತ್ಯವಾದ ವಸ್ತುಗಳನ್ನು ಒಂದು ಗಂಟೆಯೊಳಗೆ ತಲುಪಿಸಲಿದೆ. ಅದಕ್ಕಾಗಿ 'ಸ್ವಿಗ್ಗಿ ಸ್ಟೋರ್' ಇರಲಿದ್ದು, ಇದು ಸ್ವಿಗ್ಗಿ ಮೇನ್ ಆಪ್‌ನ ಒಂದು ಭಾಗವಾಗಿರಲಿದೆ. ಸ್ವಿಗ್ಗಿ ಸ್ಟೋರ್‌ನಲ್ಲಿ ಗ್ರಾಹಕರು ಆರ್ಡರ್ ಮಾಡುವ ದೈನಂದಿನ ವಸ್ತುಗಳನ್ನು ಸ್ವಿಗ್ಗಿ ಅವರ ಮನೆಗೆ ತಲುಪಿಸುವ ಸೇವೆ ನೀಡಲಿದೆ.

ಸಂಸ್ಥೆಯು 'ಸ್ವಿಗ್ಗಿ ಗೋ' ಸೇವೆಯನ್ನು ಬೆಂಗಳೂರಿನಲ್ಲಿಯೇ ಮೊದಲು ಆರಂಭಿಸಿದ್ದು, 2020ರ ವೇಳೆಗೆ ಸುಮಾರು 300 ನಗರ ಪ್ರದೇಶಗಳಿಗೂ ಈ ಸೇವೆಯನ್ನು ವಿಸ್ತರಿಸುವ ಯೋಜನೆ ಇದೆ. ನಗರ ಪ್ರದೇಶದ ಜನರಿಗೆ ಜೀವನಶೈಲಿ ಅಸಮತೋಲನವಾಗಿರುತ್ತದೆ. ಹೀಗಾಗಿ ಗ್ರಾಹಕರಿಗೆ ಸ್ವಿಗ್ಗಿ ಗೋ ಮೂಲಕ ಅಗತ್ಯ ಸೇವೆಗಳನ್ನು ನೀಡುವ ಉದ್ದೇಶ ಹೊಂದಿದೆ ಎಂದು ಸ್ವಿಗ್ಗಿ ಸಿಇಓ ಶ್ರೀಹರ್ಷಾ ಮೆಜೆಟಿ ತಿಳಿಸಿದ್ದಾರೆ.

ಸ್ವಿಗ್ಗಿ ಗೋ ಸೇವೆಯಡಿ ಬೆಂಗಳೂರಿನಲ್ಲಿ ಸುಮಾರು 300ಕ್ಕೂ ಅಧಿಕ ಅಂಗಡಿಗಳನ್ನು ಟೈಅಪ್ ಮಾಡಿಕೊಂಡಿರುವ ಸಂಸ್ಥೆಯು ಗ್ರಾಹಕರಿಗೆ ಸೇವೆ ಒದಗಿಸಲು ಸಜ್ಜಾಗಿದೆ. ಅವುಗಳಲ್ಲಿ ನೀಲಗಿರಿಸ್, ಗೋದ್ರೆಜ್ ನೆಚರ್ ಬಾಸ್ಕೆಟ್, ಆರ್ಗ್ಯಾನಿಕ್ ವರ್ಲ್ಡ್ ನಂತಹ ಪ್ರಮುಖ ಸ್ಟೋರ್‌ಗಳು ಸೇರಿಕೊಂಡಿವೆ. ಹಾಗೆಯೇ ಹೈದ್ರಾಬಾದ ನಗರದಲ್ಲಿ ಸುಮಾರು 200ಕ್ಕೂ ಅಧಿಕ ಸ್ಟೋರ್‌ಗಳೊಂದಿಗೆ ಟೈಅಪ್ ಮಾಡಿಕೊಂಡಿದೆ.

ಸ್ವಿಗ್ಗಿ ಫುಡ್ ಡೆಲಿವರಿ ಅಷ್ಟೇ ಅಲ್ಲದೇ, ಇನ್ನು ಡ್ಯಾಕ್ಯುಮೆಂಟ್ ಡೆಲಿವರಿ ಅಥವಾ ಮರೆತು ಮನೆಯಲ್ಲಿಯೇ ಬಿಟ್ಟು ಬಂದಿರುವ ಅಗತ್ಯ ವಸ್ತುಗಳನ್ನು ನಿಮಗೆ ತಲುಪಿಸುವ ಕೆಲಸ ಮಾಡಲಿದೆ. ಹಾಗೆಯೇ ನಗರ ಪ್ರದೇಶ ವ್ಯಾಪ್ತಿಯೊಳಗೆ ಪಾರ್ಸಲ್ ಸೇವೆಯನ್ನು ಸಹ ಸ್ವಿಗ್ಗಿ ನೀಡಲಿದೆ. ಪಾರ್ಸೆಲ್ ಡೆಲಿವರಿ ಕೆಲಸವು ಸ್ವಿಗ್ಗಿ ಗೋ ಸೇವೆಯಡಿ ನಡೆಯಲಿದೆ.


Click it and Unblock the Notifications