ಸ್ವಿಗ್ಗಿಯಿಂದ ಫುಡ್ ಆರ್ಡರ್ ಮಾಡುವುದು ಈಗ ಇನ್ನಷ್ಟು ದುಬಾರಿ: ಪ್ರತಿ ಆರ್ಡರ್‌ಗೂ ಹೆಚ್ಚಿನ ಬೆಲೆ!
ಸ್ವಿಗ್ಗಿ ಆಪ್ ಮೂಲಕ ಬಹುಪಾಲು ಮಂದಿ ತಮಗಿಷ್ಟವಾದ ಆಹಾರವನ್ನು ತಮ್ಮ ನೆಚ್ಚಿನ ಹೋಟೆಲ್ ಮೂಲಕ ಮನೆ ಬಳಿಯೇ ತರಿಸಿಕೊಂಡು ಸ್ವಾಧಿಸುತ್ತಿದ್ದರು.ಆದರೆ, ಇನ್ಮುಂದೆ ಸ್ವಿಗ್ಗಿ ಮೂಲಕ ಫುಡ್ ಆರ್ಡರ್ ಮಾಡುವುದು ಸ್ವಲ್ಪ ದುಬಾರಿಯಾಗಲಿದೆ. ಯಾಕೆಂದರೆ ಇನ್ಮುಂದೆ ಪ್ರತಿ ಆರ್ಡರ್ ಮೇಲೆ ಹೆಚ್ಚುವರಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ತೆರಬೇಕಿದೆ.
ಹೌದು, ಸ್ವಿಗ್ಗಿ ಆಪ್ 2014 ರಿಂದ ತನ್ನ ಸೇವೆಯನ್ನು ಸಲ್ಲಿಸುತ್ತಿದ್ದು, ಭಾರತದ 500 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ನಡುವೆ ಈ ಆಪ್ ಮೂಲಕ ಆಹಾರವನ್ನು ಆರ್ಡರ್ ಮಾಡುತ್ತಿದ್ದ ಗ್ರಾಹಕರಿಗೆ ಖಾರದ ಸುದ್ದಿ ನೀಡಿದ್ದು, ಈ ಮೂಲಕ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪಡೆದುಕೊಳ್ಳುತ್ತಿದೆ. ಹಾಗಿದ್ರೆ, ಯಾಕೆ ಸ್ವಿಗ್ಗಿ ಈ ನಿರ್ಧಾರ ಮಾಡಿದೆ, ಇದರಿಂದ ಗ್ರಾಹಕರಿಗೆ ಎಷ್ಟು ನಷ್ಟ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಯಾರೆಲ್ಲಾ ಪಾವತಿ ಮಾಡಬೇಕು?: ದೆಹಲಿ ಮತ್ತು ಮುಂಬೈನಂತಹ ಪ್ರಮುಖ ನಗರಗಳಲ್ಲಿ ಸ್ವಿಗ್ಗಿ ಇನ್ನೂ ಈ ಶುಲ್ಕಗಳನ್ನು ಪರಿಚಯಿಸಿಲ್ಲ. ಇನ್ನು ಬಳಕೆದಾರರು ಸ್ವಿಗ್ಗಿ ಒನ್ ಗ್ರಾಹಕರಾಗಿರಲಿ ಅಥವಾ ಇಲ್ಲದಿರಲಿ. ಇನ್‌ಸ್ಟಾಮಾರ್ಟ್ ಡೆಲಿವರಿಯಲ್ಲಿ ಪ್ಲಾಟ್‌ಫಾರ್ಮ್ ಶುಲ್ಕ ಪ್ರಸ್ತುತ ಅನ್ವಯಿಸುವುದಿಲ್ಲ. ಆದರೆ, ಆಹಾರ ಡೆಲಿವರಿಯಲ್ಲಿ ಈ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಈ ಮೂಲಕ ಸ್ವಿಗ್ಗಿ ತನ್ನ ವ್ಯವಹಾರದಲ್ಲಿ ಮರು ಹೂಡಿಕೆ ಮಾಡಲು ಮುಂದಾಗಿದೆ.
ಎಲ್ಲೆಲ್ಲಿ ಈ ನಿಯಮ ಜಾರಿ, ಎಷ್ಟು ಹಣ ಹೆಚ್ಚು ಪಾವತಿ ಮಾಡಬೇಕು?: ಸ್ವಿಗ್ಗಿ ಇದೀಗ ಸ್ವಿಗ್ಗಿ ಬೆಂಗಳೂರು ಮತ್ತು ಹೈದರಾಬಾದ್‌ನಂತಹ ನಗರಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಈ ಮೂಲಕ ಪ್ರತಿ ಆಹಾರ ವಿತರಣಾ ಆರ್ಡರ್‌ಗೆ ಗ್ರಾಹಕರಿಂದ 2 ರೂಪಾಯಿಗಳ ಹೆಚ್ಚುವರಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪಡೆದುಕೊಳ್ಳಲಿದೆ. ಈ ಸಂಬಂಧ ಸ್ವಿಗ್ಗಿ ವಕ್ತಾರರು ಮಾಹಿತಿ ನೀಡಿದ್ದು, ಈ ಪ್ಲಾಟ್‌ಫಾರ್ಮ್ ಶುಲ್ಕವು ಆಹಾರದ ಆರ್ಡರ್‌ಗಳ ಮೇಲೆ ವಿಧಿಸಲಾಗುವ ಅತ್ಯಲ್ಪ ಫ್ಲಾಟ್ ಫಾರ್ಮ್ ಶುಲ್ಕವಾಗಿದೆ ಎಂದಿದ್ದಾರೆ.

ಯಾಕೆ ಶುಲ್ಕ ಹೆಚ್ಚಳ ಮಾಡಲಾಗಿದೆ?: ಸ್ವಿಗ್ಗಿ ಈ ನಿರ್ಧಾರ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ್ದು, ಪ್ಲಾಟ್‌ಫಾರ್ಮ್ ಅನ್ನು ನಿರ್ವಹಿಸಲು ಮತ್ತು ಸುಧಾರಿಸಲು ಹಾಗೂ ತಡೆರಹಿತ ಅಪ್ಲಿಕೇಶನ್ ಅನುಭವವನ್ನು ಜೊತೆಗೆ ಸ್ವಿಗ್ಗಿ ಅಪ್ಲಿಕೇಶನ್ ಫೀಚರ್ಸ್‌ಗಳನ್ನು ಇನ್ನೂ ಹೆಚ್ಚಿಗೆ ಮಾಡಲು ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಲಾಗಿದೆ. ವಿಷಯ ಏನೆಂದರೆ ಫುಡ್ ಆರ್ಡರ್ ವ್ಯವಹಾರವು ಫ್ಲಾಟ್ ಆಗಿರುವ ಈ ಸಮಯದಲ್ಲಿ ಈ ನಿರ್ಧಾರ ಕೈಕೊಂಡಿರುವುದು.
ಇದರಿಂದ ಸ್ವಿಗ್ಗಿಗೆ ಹೇಗೆಲ್ಲಾ ಲಾಭ ?: ಮಾರುಕಟ್ಟೆಯಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಸಂಬಂಧ ಹಲವಾರು ಆಪ್‌ಗಳು ಕೆಲಸ ಮಾಡುತ್ತವೆ. ಆದರೆ ಬಹುಪಾಲು ಮಂದಿ ಸ್ವಿಗ್ಗಿ ಹಾಗು ಜೊಮ್ಯಾಟೋ ಕಡೆ ಮುಖಮಾಡುತ್ತಾರೆ. ಈ ಮೂಲಕ ಇವು ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಇದರಲ್ಲಿ ಪ್ರಮುಖವಾಗಿರುವ ಸ್ವಿಗ್ಗಿ ದಿನಕ್ಕೆ ಸರಿಸುಮಾರು 1.6 ಮಿಲಿಯನ್ ಆರ್ಡರ್‌ಗಳನ್ನು ಮಾಡುತ್ತದಂತೆ. ಅಂದರೆ ಇಷ್ಟೂ ಆರ್ಡರ್ ಮೇಲೆ ಹೆಚ್ಚುವರಿ 2 ಪಡೆದುಕೊಳ್ಳುತ್ತದೆ ಎಂದರೆ ಇದರ ಆದಾಯ ಎಷ್ಟರ ಮಟ್ಟಿಗೆ ಹೆಚ್ಚಾಗಬೇಡ ನೀವೇ ಊಹಿಸಿ.

ಇದರ ನಡುವೆ ಸ್ವಿಗ್ಗಿಗೆ ಪ್ರತಿಸ್ಪರ್ಧಿಯಾಗಿರುವ ಜೊಮ್ಯಾಟೋ ಲಾಯಲ್ಟಿ ಪ್ರೋಗ್ರಾಂ ಆದ ಜೊಮ್ಯಾಟೋ ಗೋಲ್ಡ್ ಅನ್ನು ಮರುಪ್ರಾರಂಭಿಸಿದಾಗಿನಿಂದ 2022 ರ ದ್ವಿತೀಯಾರ್ಧದಲ್ಲಿ ಕಳೆದುಕೊಂಡಿದ್ದ ಮಾರುಕಟ್ಟೆ ಪಾಲನ್ನು ಮರುಪಡೆಯಲು ಸಾಧ್ಯವಾಗಿದೆ ಎಂದು ಹೆಚ್‌ಎಸ್‌ಬಿಸಿ ಗ್ಲೋಬಲ್ ರಿಸರ್ಚ್ ಮಾರ್ಚ್‌ನಲ್ಲಿನ ಟಿಪ್ಪಣಿಯಲ್ಲಿ ಉಲ್ಲೇಖ ಮಾಡಿದೆ. ಅದರಂತೆ 2022 ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಜೊಮ್ಯಾಟೋ ಮಾರುಕಟ್ಟೆಯ 54% ಅನ್ನು ಹೊಂದಿದ್ದು, ಸ್ವಿಗ್ಗಿ 46% ಅನ್ನು ಹೊಂದಿದೆ.
ಇನ್ನು ಈ ಸ್ವಿಗ್ಗಿಯ ಆಹಾರ ವಿತರಣಾ ವ್ಯವಹಾರವನ್ನು ಓಯೋ ಮಾಜಿ ಕಾರ್ಯನಿರ್ವಾಹಕ ರೋಹಿತ್ ಕಪೂರ್ ವಹಿಸಿಕೊಂಡಿದ್ದಾರೆ. ಅಂದರೆ ಇವರು ಆಗಸ್ಟ್ 2022 ರಲ್ಲಿ ಆಹಾರ ಮಾರುಕಟ್ಟೆಯ ಸಿಇಓ ಆಗಿ ಅಧಿಕಾರ ವಹಿಸಿಕೊಂಡು ವಿವಿಧ ರೀತಿಯ ಬದಲಾವಣೆ ಮಾಡಿಕೊಂಡು ಬರುತ್ತಿದ್ದಾರೆ. ಇದರ ಭಾಗವಾಗಿಯೇ ಸ್ವಿಗ್ಗಿ ತನ್ನ ವೆಚ್ಚವನ್ನು ಕಡಿತಗೊಳಿಸುತ್ತಿದೆ ಜೊತೆಗೆ ಈ ವರ್ಷ ಸುಮಾರು 380 ಉದ್ಯೋಗಿಗಳನ್ನು ವಜಾಗೊಳಿಸಿದೆ .


Click it and Unblock the Notifications








