ಇನ್ಫೋಸಿಸ್ ಕೆಲಸ ಬಿಟ್ಟು ರೈತನಾದ ಟೆಕ್ಕಿ: ಕೃಷಿಯಲ್ಲಿ ದುಪ್ಪಟ್ಟು ಹಣ ಗಳಿಕೆ !
ಜೀವನ ನಿರ್ವಹಣೆಗೆ ಯಾರಿಗೇ ಆದರೂ ಕಾಯಕ ಅತೀ ಮುಖ್ಯ. ಈ ನಡುವೆ ಕೆಲಸದ ಸಂಬಂಧ ಕೆಲವರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡು ಜೀವನ ರೂಪಿಸಿಕೊಳ್ಳುವುದು ಒಂದು ಕಡೆಯಾದರೆ ಇನ್ನೂ ಕೆಲವರೂ ವಿಶೇಷವಾದ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಂಡು ಅಚ್ಚರಿ ಎನಿಸುವ ಯಶಸ್ಸನ್ನು ಗಳಿಸುತ್ತಾರೆ.
ಹೌದು, ವಿದ್ಯಾಭ್ಯಾಸ ಮುಗಿದ ಮೇಲೆ ಯುವಕ ಅಥವಾ ಯುವತಿಯಲು ಕೆಲಸಕ್ಕಾಗಿ ಹುಡುಕಾಟ ನಡೆಸುವುದು ಸರ್ವೇ ಸಾಮಾನ್ಯ. ಅದರಲ್ಲೂ ಇನ್ಫೋಸಿಸ್ ಕಂಪನಿಯಲ್ಲಿ ಏನಾದರೂ ಕೆಲಸ ಸಿಕ್ಕರೆ ಜೀವನ ಸೆಟಲ್ ಆಗಿಯೇ ಬಿಡ್ತು ಎನ್ನುವಷ್ಟು ಖುಷಿ ಬಹುಪಾಲು ಮಂದಿಯಲ್ಲಿದೆ. ಈ ಕಾರಣಕ್ಕಾಗಿಯೇ ಈ ರೀತಿಯ ಕಂಪೆನಿಗಳಲ್ಲಿ ಕೆಲಸ ಮಾಡಲು ಯುವಕರು ಕಾತುರರಾಗಿರುತ್ತಾರೆ. ಆದರೆ, ಇಲ್ಲೊರ್ವ ಉದ್ಯೋಗಿ ಇನ್ಫೋಸಿಸ್‌ನಲ್ಲಿನ ಕೆಲಸವನ್ನು ಬಿಟ್ಟು ಇನ್ನೂ ಅತ್ಯುತ್ತಮವಾದ ಜೀವನ ಕಟ್ಟಿಕೊಂಡಿದ್ದಾನೆ ಎಂದರೆ ನೀವು ನಂಬಲೇ ಬೇಕು.

ಏನಿದು ಯುವಕನ ಯಶೋಗಾಥೆ?: ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್‌ಪಟ್ಟಿಯ ವಿಘ್ನೇಶ್ (27) ಎಂಬುವರು ತಾವು ಮಾಡಿದ ನಿರ್ಧಾರದಿಂದ ಇಂದು ಇತರರಿಗೆ ಮಾದರಿಯಾಗಿದ್ದಾರೆ. ಈ ಮೂಲಕ ಮನಸ್ಸು ಮಾಡಿದರೆ ಏನೂ ಬೇಕಾದರೂ ಸಾಧನೆ ಮಾಡಬಹುದು ಎಂಬ ಅಚಲ ವಿಶ್ವಾಸವನ್ನು ಎಲ್ಲರಲ್ಲೂ ಮೂಡುವಂತೆ ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ 40,000 ಸಂಬಳ ಇದ್ದ ಕೆಲಸ ಬಿಟ್ಟಿದ್ದು.
ಅರೇ.. ಕೆಲಸ ಬಿಟ್ಟು ಅದೇಗೆ ಅವರು ಯಶಸ್ಸು ಕಂಡರು ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಿರಬೇಕಲ್ಲವೇ?. ಎಂಜಿನಿಯರಿಂಗ್ ಪದವೀಧರರಾಗಿರುವ ವಿಘ್ನೇಶ್ ಅವರು ಚೆನ್ನೈನ ಇನ್ಫೋಸಿಸ್‌ನಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ತಿಂಗಳಿಗೆ ಆರಂಭದಲ್ಲೇ 40,000 ಸಂಬಳ ಸಿಗುತ್ತಿತ್ತು. ಇದರೊಂದಿಗೆ ಕೊರೊನಾ ಹಿನ್ನೆಲೆ ಲಾಕ್‌ಡೌನ್ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಕೃಷಿಕ ಕುಟುಂಬದವರಾದ ಇವರ ತಂದೆ ಜಮೀನಿನಲ್ಲಿ ಕೃಷಿ ಮಾಡುತ್ತಿರುವುದನ್ನು ಕಂಡು ಉತ್ಸುಕರಾಗಿದ್ದರು.

ಇದನ್ನೆಲ್ಲಾ ದಿನನಿತ್ಯ ನೋಡುತ್ತಿದ್ದ ಈ ಟೆಕ್ಕಿ ಅಂತಿಮವಾಗಿ ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡರು. ಇದಾದ ನಂತರ ಪೂರ್ಣ ಸಮಯದ ಕೃಷಿಕರಾಗಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿ ಇನ್ಫೋಸಿಸ್ ನ ಹುದ್ದೆಯನ್ನು ತೊರೆದಿದ್ದಾರೆ. ಇದಾದ ನಂತರ ಕೃಷಿಯಲ್ಲಿ ಏನಾದರೂ ಸಾಧಿಸಬೇಕು ಎಂಬ ಆಸೆಯಿಂದ ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ನಂತರ ಆಪ್ತ ಸ್ನೇಹಿತನ ಸಹಾಯದಿಂದ ಜಪಾನ್‌ನಲ್ಲಿ ಸಾಂಪ್ರದಾಯಿಕ ಬಿಳಿಬದನೆ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ಆ ಕಂಪನಿಯಲ್ಲಿ ಕೆಲಸ ಮಾಡಲು ಭಾರೀ ಉತ್ಸುಕರಾಗಿದ್ದರು. ಅದರಂತೆ ಜಪಾನಿನ ವೃತ್ತಿಪರ ತರಬೇತಿ ಸಂಸ್ಥೆಗಳು ಕೃಷಿಯಲ್ಲಿ ಆಸಕ್ತಿ ಇರುವ ಯುವಕರಿಗೆ ತರಬೇತಿ ನೀಡುತ್ತಿರುವುದು ತಿಳಿದುಬಂದು. ಬಳಿಕ ತರಬೇತಿಗಾಗಿ ಜಪಾನ್‌ನ ಕಂಪೆನಿಯೊಂದಕ್ಕೆ ಸೇರಿಕೊಂಡರು. ಇವರು ಜಪಾನ್‌ಗೆ ತೆರಳಿ ಆರು ತಿಂಗಳು ಪೂರ್ಣಗೊಂಡಿದೆ. ಇದೀಗ ಅವರು ಯಶಸ್ವಿ ಬದನೆ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.
ಕೃಷಿಯಲ್ಲಿ ಪಡೆಯುತ್ತಿರುವ ಆದಾಯ ಎಷ್ಟು?: ಈ ಹಿಂದೆ ಅವರು ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿದ್ದಕ್ಕಿಂತ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ಅಂದರೆ ತಿಂಗಳಿಗೆ ಅವರು ಈ ಕೃಷಿ ಮೂಲಕ 80,000 ರೂ.ಗಳ ಆದಾಯ ಗಳಿಸುತ್ತಿದ್ದಾರೆ. ಅದರಲ್ಲೂ ವಿಶೇಷ ಎಂದರೆ ಜಪಾನ್‌ನಲ್ಲಿ ಅವರಿಗೆ ಉಳಿದುಕೊಳ್ಳಲು ಉಚಿತ ಸ್ಥಳಾವಕಾಶ ಮಾಡಿಕೊಡಲಾಗಿದ್ದು, ಊಟಕ್ಕೆ ಮಾತ್ರ ಹಣ ಬಳಕೆ ಮಾಡುತ್ತಿದ್ದಾರಂತೆ. ಇನ್ನುಳಿದ ಹಣವನ್ನು ಮನೆಗೆ ಕಳುಹಿಸುತ್ತಿದ್ದೇನೆ ಎನ್ನುತ್ತಿದ್ದಾರೆ ಈ ಟೆಕ್ಕಿ.

ನಿರುದ್ಯೋಗಿ ಯುವಕರಿಗೆ ಮಾದರಿ: ಈ ಯುವಕನ ನಿರ್ಧಾರ ಖಂಡಿತಾ ಇಂದಿನ ಭಾರತೀಯ ಯುವ ಪೀಳಿಗೆಗೆ ಮಾದರಿಯಾಗಬೇಕಿದೆ. ವಿಷಯ ಏನೆಂದರೆ ಭಾರತ ಕೃಷಿಪ್ರಧಾನ ರಾಷ್ಟ್ರವಾದರೂ ಇಲ್ಲಿ ಯಾರೂ ಸಹ ಕೃಷಿಗೆ ಅಷ್ಟೊಂದು ಮಹತ್ವದ ಸ್ಥಾನ ನೀಡುವುದಿಲ್ಲ. ಅದಾಗ್ಯೂ ಭಾರತದ ಕೆಲವು ಕಡೆ ವಿಶೇಷ ಬೆಳೆಗಳನ್ನು ಬೆಳೆದು ಈ ಯುವಕ ಸಂಪಾದನೆ ಮಾಡುವುದಕ್ಕಿಂತ ಹೆಚ್ಚಿನ ಆದಾಯ ಪಡೆಯುವ ಅದೆಷ್ಟೋ ರೈತರು ನಮ್ಮ ನಡುವೆ ಇದ್ದಾರೆ. ಈ ಮೂಲಕ ನಿರುದ್ಯೋಗಿಗಳು ಅತ್ಯುತ್ತಮ ಜೀವನ ರೂಪಿಸಿಕೊಳ್ಳಬಹುದಾಗಿದೆ.


Click it and Unblock the Notifications








