ತೇಜಸ್ವಿ ಸೂರ್ಯರ ಫೋನ್ ಕದ್ದು ದುರ್ಬಳಕೆ?; ನಿಮ್ಮ ಫೋನ್ ಸುರಕ್ಷಿತವಾಗಿರಬೇಕು ಅಂದ್ರೆ ಈ ರೀತಿ ಮಾಡಿ!
ಸ್ಮಾರ್ಟ್‌ಫೋನ್ ಬಳಕೆಯಿಂದ ಎಷ್ಟು ಪ್ರಯೋಜನವೋ ಅವುಗಳಿಂದ ಅಷ್ಟೇ ಅಪಾಯ ಸಹ ಇದೆ. ಇತ್ತೀಚಿನ ದಿನಗಳಲ್ಲಂತೂ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಸ್ಮಾರ್ಟ್‌ಫೋನ್ ಅನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಈ ನಡುವೆ ಸಂಸದ ತೇಜಸ್ವಿ ಸೂರ್ಯ ವಿಷಯದಲ್ಲಿ ಶಾಕ್ ಆಗುವ ಘಟನೆಯೊಂದು ಜರುಗಿದ್ದು, ಈ ಸಂಬಂಧ ದೂರು ದಾಖಲು ಮಾಡಿದ್ದಾರೆ.
ಹೌದು,ಬಿಜೆಪಿ ಪಕ್ಷದ ಯುವ ಮೋರ್ಚಾದ ನಾಯಕ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಮೊಬೈಲ್ ಅನ್ನು ಯಾರೋ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗಿದ್ರೆ, ಸೂರ್ಯ ಅವರ ಫೋನ್ ಅನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ?.ಇಂತಹ ದೊಡ್ಡ ವ್ಯಕ್ತಿಗಳ ಫೋನ್‌ಗಳನ್ನೇ ಈ ರೀತಿ ಮಾಡುತ್ತಾರೆ ಅಂದರೆ ಜನಸಾಮಾನ್ಯರ ಗತಿ ಏನು?,ಇದರಿಂದ ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ದೂರು ನೀಡಿದ ಸೂರ್ಯ: ಗುಜರಾತ್‌ನ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ನಾಯಕನನ್ನು ಗುರಿಯಾಗಿಸಿಕೊಂಡು ಹಣ ಮತ್ತು ವಜ್ರ ಸುಲಿಗೆ ಯತ್ನ ನಡೆಸಲು ತಮ್ಮ ಮೊಬೈಲ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಇನ್ನು ಸೂರ್ಯ ಅವರು ರಾಜಕೀಯ ಕೆಲಸಗಳಲ್ಲಿ ಬ್ಯುಸಿ ಇದ್ದ ಪರಿಣಾಮ ಅವರ ಫೋನ್ ಕರೆಗಳನ್ನು ನಾವೇ ನಿರ್ವಹಣೆ ಮಾಡುತ್ತಿದ್ದೆವು ಎಂದು ಅವರ ಆಪ್ತ ಕಾರ್ಯದರ್ಶಿ ಬಾನು ಪ್ರಕಾಶ್ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಸೌತ್ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲಿ ಉಲ್ಲೇಖ ಮಾಡಿದಂತೆ, ಜುಲೈ 1 ರಂದು ಬಿಜೆವೈಎಂ ಗುಜರಾತ್ ಘಟಕದ ಅಧ್ಯಕ್ಷ ಪ್ರಶಾಂತ್ ಕೊರಾಟ್ ಅವರಿಗೆ ಸೂರ್ಯ ಅವರ ಮೊಬೈಲ್ ಫೋನ್‌ನಿಂದ ಫೋನ್ ಕರೆ ಹೋಗಿದೆಯಂತೆ. ಅದರಲ್ಲಿ ಸುಲಿಗೆ ಬಗ್ಗೆ ಮಾತನಾಡಲಾಗಿದೆ ಎನ್ನಲಾಗಿದೆ. ಕೊರಟ್ ತಕ್ಷಣ ಸೂರ್ಯ ಅವರನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದ್ದಾರೆ. ಆ ವೇಳೆ ಆ ಕರೆಯನ್ನು ನಾನು ಮಾಡಿಲ್ಲ ಎಂದು ಸೂರ್ಯ ಅವರು ಹೇಳಿದ್ದು, ಅಪರಿಚಿತ ವ್ಯಕ್ತಿಯೊಬ್ಬರು ಈ ಫೋನ್ ಅನ್ನು ಕದ್ದು ಕೊರಟ್‌ಗೆ ಕರೆ ಮಾಡಿದ್ದಾರೆ ಎಂದು ಪ್ರಕಾಶ್ ತಿಳಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 419 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಹಾಗಿದ್ರೆ, ನಿಮ್ಮ ಫೋನ್ ಅನ್ನು ಸೇಫ್ ಆಗಿ ಇರಿಸಿಕೊಳ್ಳುವುದು ಹೇಗೆ?, ಇದೇ ರೀತಿಯ ಘಟನೆಗಳು ನಿಮ್ಮ ಜೀವನದಲ್ಲೂ ನಡೆಯಬಾರದು ಎಂದರೆ ನೀವು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.
ಸ್ಮಾರ್ಟ್‌ಫೋನ್ ಅನ್ನು ಸೇಫ್ ಆಗಿ ಇಟ್ಟುಕೊಳ್ಳುವುದು ಹೇಗೆ?
ಬಲವಾದ ಪಾಸ್‌ಕೋಡ್ ,ಬಯೋಮೆಟ್ರಿಕ್ ದೃಢೀಕರಣವನ್ನು ಬಳಕೆ ಮಾಡಿ: ಯಾರೇ ಫೋನ್ ಕದ್ದರೂ ಸಹ ಅದನ್ನು ತಕ್ಷಣವೇ ಅವರು ದುರುಪಯೋಗಪಡಿಸಿಕೊಳ್ಳಲು ಮುಂದಾಗುತ್ತಾರೆ. ಇದನ್ನು ತಡೆಯಬೇಕು ಹಾಗೂ ಫೋನ್‌ಗೆ ಅವರು ಯಾವುದೇ ಕಾರಣಕ್ಕೂ ಎಂಟ್ರಿ ಆಗಬಾರದು ಎಂದರೆ ಕಷ್ಟಕರವಾದ ಪಾಸ್‌ಕೋಡ್ ಅನ್ನು ಬಳಕೆ ಮಾಡಿ. ಜೊತೆಗೆ ಫಿಂಗರ್‌ಪ್ರಿಂಟ್ ಅಥವಾ ಮುಖ ಗುರುತಿಸುವಿಕೆಯಂತಹ ಬಯೋಮೆಟ್ರಿಕ್ ದೃಢೀಕರಣ ವಿಧಾನಗಳನ್ನು ಬಳಕೆ ಮಾಡಿ.
ಸಾಫ್ಟ್‌ವೇರ್ ನವೀಕರಿಸಿ: ಭದ್ರತಾ ದೃಷ್ಟಿಯಿಂದ ಆಗಾಗ್ಗೆ ಫೋನ್‌ಗಳಲ್ಲಿ ಹೊಸ ನವೀಕರಣಗಳು ಬರುತ್ತಲೇ ಇರುತ್ತವೆ. ಇವುಗಳನ್ನು ಗಮನಿಸಿ ನಿಮ್ಮ ಫೋನ್ ಅನ್ನು ಅಪ್‌ಡೇಟ್ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಫೋನ್ ಸ್ಕ್ಯಾಮರ್‌ಗಳಿಗೆ ಬೆಂಬಲ ನೀಡುವುದು ತಪ್ಪುತ್ತದೆ. ಹಾಗೆಯೇ ಕೆಲವು ಭದ್ರತಾ ಪ್ಯಾಚ್‌ಗಳು ಮತ್ತು ದೋಷ ಪರಿಹಾರ ಆಗಲಿದ್ದು, ಈ ಮೂಲಕ ಯಾವುದೇ ಸಮಸ್ಯೆ ಇಲ್ಲದಂತೆ ಫೋನ್ ಅನ್ನು ಬಳಕೆ ಸಹ ಮಾಡಬಹುದು.
ಆಪ್ ಇನ್‌ಸ್ಟಾಲ್ ಮಾಡುವಾಗ ಎಚ್ಚರ: ನೀವು ಯಾವುದೇ ಆಪ್‌ಗಳನ್ನಾದರೂ ಸಹ ಗೂಗಲ್ ಪೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ಮೂಲಕವೇ ಇನ್‌ಸ್ಟಾಲ್ ಮಾಡಿ. ಯಾವ್ಯಾವುದೋ ಲಿಂಕ್ ಬಳಕೆ ಮಾಡಿಕೊಂಡು ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿದ್ರೆ ಅದರಲ್ಲಿ ಮಾಲ್‌ವೇರ್ ಸಹ ಇರುತ್ತವೆ ಎಂಬುದು ನಿಮಗೆ ಗೊತ್ತಿರಲಿ. ಇವು ಸ್ಕ್ಯಾಮರ್‌ಗಳಿಗೆ ರಿಮೋಟ್ ಕಂಟ್ರೋಲ್ ನೀಡುತ್ತವೆ.
ಅನುಮಾನದ ಲಿಂಕ್ ಕ್ಲಿಕ್ ಮಾಡಬೇಡಿ: ಇನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ನಿತ್ಯವೂ ನೂರಾರು ಮೆಸೆಜ್‌ಗಳು ಬರಬಹುದು. ಇವೆಲ್ಲವೂ ಒಳ್ಳೆಯ ಉದ್ದೇಶವನ್ನು ಹೊಂದಿವೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಮೆಸೆಜ್‌ಗಳಲ್ಲಿ ದುರುದ್ದೇಶಪೂರಿತ ಲಿಂಕ್ ಇರಲಿದ್ದು, ಇದನ್ನು ನೀವು ಅಪ್ಪಿ ತಪ್ಪಿಯೂ ಕ್ಲಿಕ್ ಮಾಡಬೇಡಿ. ಅಕಸ್ಮಾತ್ ಕ್ಲಿಕ್ ಮಾಡಿದರೂ ತಕ್ಷಣವೇ ಎಚ್ಚೆತ್ತು ಅದರಿಂದ ಆಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.
ಡಿವೈಸ್ ಟ್ರ್ಯಾಕಿಂಗ್ ಫೀಚರ್ಸ್ ಬಳಕೆ ಮಾಡಿ: ಕದ್ದ ಮೊಬೈಲ್‌ಗಳನ್ನು ಪತ್ತೆ ಮಾಡಲು ಹಲವಾರು ಸೇವೆಗಳನ್ನು ಪರಿಚಯಿಸಲಾಗಿದೆ. ಆದರೂ ಸಹ ಫೋನ್‌ಗಳಲ್ಲಿ ಇನ್‌ಬಿಲ್ಟ್ ಫೈಂಡ್ ಮೈ ಫೋನ್ ಫೀಚರ್ಸ್ ಆಯ್ಕೆ ಇದ್ದು, ಅದನ್ನು ಯಾವಾಗಲೂ ಆಕ್ಟಿವ್ ಆಗಿಯೇ ಇಡಿ. ಈ ಫೀಚರ್ ನಿಮ್ಮ ಫೋನ್ ಕಳೆದುಹೋದಾಗ ಅದು ಎಲ್ಲಿದೆ ಎಂದು ಸ್ಥಳವನ್ನು ಟ್ರ್ಯಾಕ್ ಮಾಡಲು ಅನುಮತಿ ನೀಡುತ್ತದೆ.

ಇದಿಷ್ಟು ಮಾತ್ರವಲ್ಲದೆ ಫೋನ್ ಅನ್ನು ಸೇಫ್ ಆಗಿ ಇಟ್ಟುಕೊಳ್ಳಲು ಹಲವಾರು ಮಾರ್ಗಗಳಿಗೆ. ಅದಾಗ್ಯೂ ಕೆಲವು ಸಮಯದಲ್ಲಿ ಜನರು ಮೋಸ ಹೋಗುವುದುಂಟು. ಆ ರೀತಿಯದ್ದೇ ಘಟನೆ ಈಗ ಸೂರ್ಯ ಅವರಿಗೆ ಆಗಿದೆ. ಆದರೆ, ಹೀಗಾಯ್ತಲ್ಲಾ ಎಂದು ಎದೆಗುಂದದೆ ಪೊಲೀಸ್ ಠಾಣೆ ಅಥವಾ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಿದರೆ ಮುಂದೆ ನಿರ್ಮಾಣ ಆಗುವ ಸಮಸ್ಯೆಗಳಿಂದ ನೀವು ಪಾರಾಗಬಹುದು.


Click it and Unblock the Notifications








