Threads ಆಪ್ ವಿರುದ್ಧ ಕೇಳಿ ಬಂತು ಶಾಕಿಂಗ್ ಸುದ್ದಿ; ಈ ರೀತಿ ಆದ್ರೆ ನೀವೆಷ್ಟು ಸೇಫ್?
ನಿನ್ನೆಯಿಂದ ಥ್ರೆಡ್ಸ್(Threads) ಆಪ್ ಇಡೀ ಜಗತ್ತಿನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅದು ಟ್ವಿಟ್ಟರ್‌ನೊಂದಿಗೆ (Twitter) ಸ್ಪರ್ಧಿಸುತ್ತಿದೆ ಎಂಬುದು ಒಂದು ವಿಷಯವಾದರೆ, ಮೆಟಾ ಮಾಲೀಕತ್ವದಲ್ಲಿ ಈ ಆಪ್ ಲಾಂಚ್ ಆಗಿರುವುದು ಮತ್ತೊಂದು ವಿಶೇಷ. ಈ ನಡುವೆ ನಾ ಮುಂದು ತಾ ಮುಂದು ಎಂದು ಈ ಆಪ್‌ಅನ್ನು ಡೌನ್‌ಲೋಡ್ ಮಾಡಿಕೊಂಡವರಿಗೆ ಈಗ ಶಾಕಿಂಗ್ ಸುದ್ದಿಯೊಂದು ಭಯಪಡುವಂತೆ ಮಾಡಿದೆ.
ಹೌದು, ಥ್ರೆಡ್ಸ್ ಆಪ್ ಬಗ್ಗೆ ಘೋಷಣೆ ಮಾಡಿದ ಮೊದಲ ನಾಲ್ಕು ಗಂಟೆಯಲ್ಲೇ ಐದು ಮಿಲಿಯನ್ ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ. ಅಂದರೆ ಈ ಆಪ್‌ನ ಕಡೆ ಜನರ ಒಲವು ಎಂತಹುದು ಎಂಬುದನ್ನು ಈ ನಂಬರ್ ಅಂಕಿ ಅಂಶ ನೋಡಿಯೇ ತಿಳಿಯಬಹುದು. ಆದರೆ, ಈ ಆಪ್ ನಿಮಗೆ ಅಷ್ಟೊಂದು ಸುರಕ್ಷಿತವಲ್ಲ ಎಂದು ಸಹ ತಿಳಿದುಬಂದಿದೆ. ಯಾಕೆಂದರೆ ನಿಮ್ಮ ಎಲ್ಲಾ ಮಾಹಿತಿಯನ್ನು ಇದು ಸಂಗ್ರಹ ಮಾಡುತ್ತಿದೆಯಂತೆ. ಹಾಗಿದ್ರೆ, ಈ ಆಪ್‌ನಲ್ಲಿ ಏನೆಲ್ಲಾ ವಿಷಯಗಳನ್ನು ಸಂಗ್ರಹ ಮಾಡುತ್ತಿದೆ ಎಂಬ ಮಹತ್ವದ ಮಾಹಿತಿ ಇಲ್ಲಿದೆ ನೋಡಿ.

ಟ್ವಿಟ್ಟರ್‌ಗೆ ಪ್ರತಿಸ್ಪರ್ದಿ: ಮೆಟಾ ಟ್ವಿಟರ್‌ಗೆ ಪ್ರತಿಸ್ಪರ್ಧಿಯಾದ ಥ್ರೆಡ್ಸ್ ಅಪ್ಲಿಕೇಶನ್ ಅನ್ನು ಆರಂಭಿಸಿದ್ದು, ಈ ಸಂಬಂಧ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಹೆಚ್ಚು ಸಂತಸಗೊಂಡಿದ್ದಾರೆ. ಯಾಕೆಂದರೆ ಹೊಸ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 10ಮಿಲಿಯನ್ ಜನರು ಕೇವಲ ಏಳು ಗಂಟೆಗಳಲ್ಲಿ ಸೈನ್ ಅಪ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಇನ್‌ಸ್ಟಾಗ್ರಾಮ್ ಎಂದು ಹೇಳಬಹುದು. ಯಾಕೆಂದರೆ ಯಾರೆಲ್ಲಾ ಇನ್‌ಸ್ಟಾಗ್ರಾಮ್ ಖಾತೆ ಹೊಂದಿದ್ದಾರೋ ಅವರು ಅತ್ಯಂತ ಸರಳವಾಗಿ ಈ ಥ್ರೆಡ್ಸ್ ಆಪ್‌ಗೆ ಎಂಟ್ರಿ ಆಗಬಹುದಾಗಿದೆ.
ಕಡಿಮೆ ಸಮಯದಲ್ಲಿ ಹೆಚ್ಚಿನ ಜನರನ್ನು ಈ ಕಡೆ ಆಕರ್ಷಿಸುವ ಉದ್ದೇಶದಿಂದಾಗಿಯೇ ಮೆಟಾ ಈ ಇನ್‌ಸ್ಟಾಗ್ರಾಮ್ ಅನ್ನು ಬಳಕೆ ಮಾಡಿಕೊಂಡಿದೆ. ಇದರಿಂದಾಗಿ ಜನರು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬಳಸಿಕೊಂಡು ಲಾಗ್ ಇನ್ ಮಾಡಲು ಹಾಗೂ ಅದೇ ಅನುಯಾಯಿಗಳ ಪಟ್ಟಿಯನ್ನು ನಿರ್ವಹಿಸಲು ಅನುವು ಮಾಡಿಕೊಡಲಾಗಿದೆ. ಈ ಮೂಲಕ ಮೆಟಾ ತನ್ನ ಚಾಣಾಕ್ಷ ಬುದ್ದಿ ತೋರಿಸಿದೆ. ಅದೆಲ್ಲಕ್ಕೂ ಮಿಗಿಲಾಗಿ ಈ ಲಾಗಿನ್ ಪ್ರಕ್ರಿಯೆ ಕೇವಲ 10 ಸೆಕೆಂಡುಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
ಇಷ್ಟೆಲ್ಲಾ ಉತ್ತಮ ವಿಷಯ ಹೊಂದಿರುವ ಈ ಹೊಸ ಆಪ್ ಈಗ ಆರೋಪವೊಂದನ್ನು ಎದುರಿಸುವಂತಾಗಿದೆ. ಅಂದರೆ ಈ ಆಪ್ ಸಂಬಂಧ ಆತಂಕಕಾರಿ ಸತ್ಯವೊಂದು ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಮ್ ಮತ್ತು ಥ್ರೆಡ್ಸ್‌ನ ಮಾಲೀಕ ಕಂಪೆನಿಯಾದ ಮೆಟಾ(Meta) ಈ ಎರಡು ಆಪ್‌ಗಳ ನಡುವಿನ ಡೇಟಾ ಹಂಚಿಕೆಯ ಜಟಿಲತೆಗಳೊಂದಿಗೆ ಗ್ರಾಪ್ಲಿಂಗ್ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಈ ಆಪ್ ಟ್ವಿಟರ್‌ನ ಡೇಟಾ ಸಂಗ್ರಹಣೆ ಸಾಮರ್ಥ್ಯಗಳನ್ನು ಮೀರಿಸಿ 5 ವಿಭಿನ್ನ ವರ್ಗಗಳಲ್ಲಿ ಬಳಕೆದಾರರ ಡೇಟಾವನ್ನು ಸಂಗ್ರಹ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಅಂದರೆ ಸರ್ಚ್ ಹಿಸ್ಟರಿ, ವೆಬ್ ಬ್ರೌಸಿಂಗ್ ಚಟುವಟಿಕೆಗಳು, ಕ್ಯಾಲೆಂಡರ್ ಈವೆಂಟ್, ಸಂಪರ್ಕಗಳು, ವಾಯ್ಸ್ ರೆಕಾರ್ಡಿಂಗ್‌ಗಳು, ಮ್ಯೂಸಿ್ ಫೈಲ್, ವಿವಿಧ ಆಡಿಯೊ ಫೈಲ್, ಫೋಟೋ, ವೀಡಿಯೊ, ಎಸ್‌ಎಮ್‌ಎಸ್, ಇಮೇಲ್‌ಗಳು, ಪಾವತಿ ಕಾರ್ಡ್ ಮಾಹಿತಿ, ಬ್ಯಾಂಕ್ ಖಾತೆಯ ವಿವರ ಮತ್ತು ಹಣಕಾಸಿನ ಡೇಟಾವನ್ನು ಸೇರಿದಂತೆ ಅನಗತ್ಯ ಮಾಹಿತಿಯನ್ನು ಇದು ಸಂಗ್ರಹ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.
ಇದಿಷ್ಟು ಮಾತ್ರವಲ್ಲದೆ ಈ ಹೊಸ ಆಪ್ ಹೆಚ್ಚು ಸೂಕ್ಷ್ಮವಾದ ಕ್ಷೇತ್ರಗಳಿಗೂ ಎಂಟ್ರಿ ಕೊಟ್ಟಿದೆಯಂತೆ. ಅಂದರೆ ಬಯೋಮೆಟ್ರಿಕ್ ಡೇಟಾ, ಲೈಂಗಿಕ ದೃಷ್ಟಿಕೋನ ಮತ್ತು ಜನಾಂಗೀಯ ಮಾಹಿತಿಯನ್ನು ಸಹ ಇದು ಸಂಗ್ರಹ ಮಾಡಲಿದೆ ಎನ್ನಲಾಗಿದ್ದು, ಜಾಕ್ ಎಂಬುವರು ಈ ಸಂಬಂಧ ಸ್ಕ್ರೀನ್ ಶಾಟ್‌ವೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಮಸ್ಕ್ ಸಹ ಪ್ರತಿಕ್ರಿಯೆ ನೀಡಿದ್ದು, ಈ ವಿಷಯ ಈಗ ಆಪ್ ಇನ್‌ಸ್ಟಾಲ್ ಮಾಡಿಕೊಂಡವರಲ್ಲಿ ಗೊಂದಲ ಉಂಟಾಗುವಂತೆ ಮಾಡಿದೆ.


Click it and Unblock the Notifications