ಈ ರೋಬೋಟ್ ನಿಮ್ಮ ಮನೆಗೆಲಸಕ್ಕೆ ಸೂಪರ್: ಹೇಳಿದ ಕೆಲಸವನ್ನು ಫಟಾಫಟ್ ಅಂತಾ ಮಾಡುತ್ತೆ!
ತಂತ್ರಜ್ಞಾನ ಅಭಿವೃದ್ಧಿಯಾದಂತೆ ವಿವಿಧ ಸ್ಮಾರ್ಟ್‌ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ನಡುವೆ ವಿಶಿಷ್ಟವಾದ ರೋಬೋಟ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಜನರು ನಿಬ್ಬೆರಗಾಗಿ ನೋಡುವಂತಾಗಿದೆ. ಯಾಕೆಂದರೆ ಇದು ನಿಮ್ಮ ಮನೆಯಲ್ಲಿ ಎಲ್ಲಾ ರೀತಿಯ ಸ್ವಚ್ಛ ಕಾರ್ಯಗಳನ್ನು ಮಾಡುತ್ತದೆ. ಅಂದರೆ ಬಟ್ಟೆ ಒಗೆಯಲಿದೆ, ಮನೆಯನ್ನು ಸ್ವಚ್ಛ ಮಾಡಲಿದೆ.
ಹೌದು, ಪ್ರಿನ್ಸ್‌ಟನ್ ಮತ್ತು ಕೊಲಂಬಿಯಾದಂತಹ ವಿವಿಧ ವಿಶ್ವವಿದ್ಯಾಲಯಗಳ ಸಂಶೋಧಕರು ಜಂಟಿಯಾಗಿ ಈ ವಿಶೇಷ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಮನೆಯನ್ನು ಸ್ವಚ್ಛ ಮಾಡುವ ಉದ್ದೇಶದಿಂದ ತಯಾರಿಸಲಾಗಿದ್ದು, ಇದಕ್ಕೆ 'ಟೈಡಿಬಾಟ್' (TidyBot) ಎಂದು ಹೆಸರಿಡಲಾಗಿದೆ. ಹಾಗಿದ್ರೆ, ಈ ರೋಬೋಟ್ ನಿತ್ಯ ಮನೆ ಅಥವಾ ಆಫೀಸಿನಲ್ಲಿ ಮಾಡುವ ಕೆಲಸವೇನು?, ಇದರಿಂದ ಏನೆಲ್ಲಾ ಪ್ರಯೋಜನ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಈ ರೋಬೋಟ್ ಏನೆಲ್ಲಾ ಮಾಡಲಿದೆ?: ಸಂಶೋಧಕರು ತಿಳಿಸಿದಂತೆ ಇದನ್ನು ಮನೆ ಕೆಲಸಕ್ಕೆ ಅಥವಾ ಕೋಟೆಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಈ ರೋಬೋಟ್ ನೆಲದಲ್ಲಿ ಎಲ್ಲೇ ವಸ್ತುಗಳು ಕಂಡುಬಂದರೂ ಸಹ ಅದನ್ನು ಎತ್ತಿಕೊಳ್ಳುತ್ತದೆ. ಜೊತೆಗೆ ನಿರ್ದಿಷ್ಟ ಆಜ್ಞೆಗಳ ಆಧಾರದ ಮೇಲೆ ಆಯಾ ಸ್ಥಳಗಳಲ್ಲಿ ಏನೆಲ್ಲಾ ಇರಬೇಕು ಎಂಬುದನ್ನು ಸಮರ್ಥವಾಗಿ ಜೋಡಿಸುತ್ತದೆ. ವಾಸ್ತವವಾಗಿ ಈ ರೋಬೋಟ್ ಒಬ್ಬ ಮನೆಗೆಲಸಗಾರ ಏನೆಲ್ಲಾ ಮಾಡುತ್ತಾನೋ ಅದನ್ನು ಮಾಡುತ್ತದೆ.
ಇನ್ನು ಈ TidyBot ನ ನಿರ್ಮಾಣಕಾರರು ಇದನ್ನು ಮೊದಲು ಕೆಲವು ಆಜ್ಞೆಗಳೊಂದಿಗೆ ಪಠ್ಯ ಬೇಸ್ ಬೆಂಚ್‌ಮಾರ್ಕ್ ಡೇಟಾಸೆಟ್ ಅನ್ನು ರಚಿಸಿದ್ದರು. ನಂತರ ಜಿಪಿಟಿ-3 ಈ ಹಂತಗಳನ್ನು ಅನುಸರಿಸಲು ಕೇಳಿಕೊಂಡರು. ಹಾಗೆಯೇ ಹಳದಿ ಶರ್ಟ್‌ಗಳನ್ನು ಡ್ರಾಯರ್‌ನಲ್ಲಿ ಹಾಕಲು ಮತ್ತು ಡಾರ್ಕ್ ಶರ್ಟ್‌ಗಳನ್ನು ಕ್ಲೋಸೆಟ್‌ನಲ್ಲಿ ಇರಿಸಲು ಸೂಚಿಸಿದರು. ಅದರಂತೆ ರೋಬೋಟ್ ಅವರು ಹೇಳಿದ್ದನ್ನು ಚಾಚೂ ತಪ್ಪದೆ ಮಾಡಿದೆ.
ಅಷ್ಟೇ ಅಲ್ಲದೆ ತಿಳಿ ಬಣ್ಣದ ಬಟ್ಟೆಗಳು ಡ್ರಾಯರ್‌ಗೆ ಹಾಕಬೇಕು, ಗಾಢ ಬಣ್ಣದ ಬಟ್ಟೆಗಳನ್ನು ಕ್ಲೋಸೆಟ್‌ನಲ್ಲಿ ಹಾಕಬೇಕು, ಪ್ಲಾಸ್ಟಿಕ್ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಬೇಕು ಮತ್ತು ಚದುರಿದ ವಸ್ತುಗಳನ್ನು ಚೆನ್ನಾಗಿ ಎತ್ತಿಕೊಳ್ಳಬೇಕು ಎಂದು ತಿಳಿಸಲಾಗಿದ್ದು, ಸಂಶೋಧಕರು ಏನೆಲ್ಲಾ ಹೇಳಿದ್ದರೋ ಅದನ್ನೆಲ್ಲಾ ಈ ರೋಬೋಟ್ ಮಾಡಿ ಮುಗಿಸಿದೆ. ಅಷ್ಟೇ ಅಲ್ಲದೆ ಈ ರೋಬೋಟ್ ಅನ್ನು 24 ರೀತಿಯ ವಿವಿಧ ಕೊಠಡಿಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, ಬಹುಪಾಲು ಯಶಸ್ವಿಯಾಗಿದೆ.

ಇದಕ್ಕೆ ಇಂತಹುದೇ ಪ್ರದೇಶ ಬೇಕು ಎಂದೇನಿಲ್ಲ. ಯಾವುದೇ ಕೊಠಡಿಯಲ್ಲಿ ಇರಿಸಿದರೂ ಸಹ ಇದು ಅಚ್ಚುಕಟ್ಟಾಗಿ ತನ್ನ ಕರ್ತವ್ಯ ನಿರ್ವಹಿಸುತ್ತದೆ. ಹಾಗೆಯೇ 91.2% ಕಮಾಂಡ್‌ಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ ಮತ್ತು ಹೆಚ್ಚು ಸರಿಯಾಗಿ ನಿಗದಿಪಡಿಸಿದ ಆಜ್ಞೆಗಳನ್ನು ಪೂರ್ಣಗೊಳಿಸಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಜೊತೆಗೆ ಯಾವುದೇ ವಸ್ತುಗಳನ್ನು ಸಹ ಈ ರೋಬೋಟ್ ಅತ್ಯಂತ ಸರಳವಾಗಿ ಗುರುತಿಸಲಿದೆ ಎಂದು ತಿಳಿಸಿದ್ದಾರೆ.
ಅಂದರೆ ಮನೆಯಲ್ಲಿ ಸಾಮಾನ್ಯವಾಗಿ ಪೇಪರ್, ಪ್ಲಾಸ್ಟಿಕ್, ಹಣ್ಣುಗಳು, ತರಕಾರಿಗಳು, ತಿಂಡಿ ಪ್ಯಾಕೆಟ್‌ಗಳು, ಬಟ್ಟೆಗಳು, ಪರ್ಸ್, ಕೀಗಳು, ಕಾಫಿ ಮಗ್‌ಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಈ ರೋಬೋಟ್ ಗುರುತಿಸುವ ಮೂಲಕ ಯಾವುದು ಎಲ್ಲಿ ಇರಬೇಕೋ ಅಲ್ಲಿಗೆ ತೆಗೆದುಕೊಂಡು ಹೋಗಿ ಇಡುತ್ತದೆ. ಅದಾಗ್ಯೂ ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸಲು ಈ ರೋಬೋಟ್‌ಗೆ ಇನ್ನೂ ಹೆಚ್ಚಿನ ಪರೀಕ್ಷೆಯ ಅಗತ್ಯವಿದೆ ಎಂದು ತಿಳಿದುಬಂದಿದೆ.
ಎಂದಿನಿಂದ ಲಭ್ಯ?: ಇಷ್ಟೆಲ್ಲಾ ಓದಿದ ಮೇಲೆ ನಾವು ಒಂದು ರೋಬೋಟ್ ಖರೀದಿ ಮಾಡಿದರೆ ಹೇಗೆ ಎಂದು ನಿಮಗೆ ಅನಿಸಿರಬಹುದು. ಆದರೆ, ಈ ವಿಶೇಷ ರೋಬೋಟ್ ಮಾರುಕಟ್ಟೆಗೆ ಬರಲು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು ಎಂದು ಹೇಳಲಾಗುತ್ತದೆ. ಈ ರೋಬೋಟ್ ಬ್ಯಾಚುಲರ್‌ಗಳಿಗೆ ಹಾಗೂ ಒಬ್ಬಂಟಿಯಾಗಿ ವಾಸ ಮಾಡುವವರಿಗೆ, ಹೊರಗಡೆ ಕೆಲಸಕ್ಕೆ ಹೋಗುವವರಿಗೆ ಅತ್ಯಂತ ಅವಶ್ಯಕ ಎಂದೇ ಹೇಳಬಹುದು. ಈ ಮೂಲಕ ಓರ್ವ ಸಂಗಾತಿಯಂತೆ ಇದು ಅವರಿಗೆ ಹತ್ತಿರವಾಗುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications








