ತಿರುಪತಿ ತಿಮ್ಮಪ್ಪನ ಸಾವಿರಾರು ಭಕ್ತರಿಗೆ ಈ ಮೂಲಕ ಮಹಾವಂಚನೆ: ನೀವು ಮೋಸ ಹೋಗದಿರಿ!
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ದೇಶದ ಮೂಲೆ ಮೂಲೆಯಿಂದ ಭಕ್ತಾದಿಗಳು ಬಂದು ದೇವರ ದರ್ಶನ ಪಡೆಯುತ್ತಾರೆ. ಆದರೆ, ಈ ಭಕ್ತರ ನಂಬಿಕೆಗೆ ತಿರುಮಲ ತಿರುಪತಿ ದೇವಸ್ಥಾನಂ ಭಾರೀ ಮೋಸ ಎಸಗಿದೆ. ಈ ಸಂಬಂಧ ದೂರು ಸಹ ದಾಖಲಾಗಿದ್ದು, ಪೊಲೀಸರು ಕ್ರಮ ಜರುಗಿಸಿದ್ದಾರೆ. ಈ ವಿಷಯ ಕೇಳಿ ಶಾಕ್ ಆಗಬೇಡಿ. ಮುಂದೆ ಓದಿ ಮಾಹಿತಿ ಏನೆಂದು ಗೊತ್ತಾಗುತ್ತದೆ.
ಹೌದು, ಅಪಾರ ಭಕ್ತಗಣ ಹೊಂದಿರುವ ತಿರುಪತಿ ತಿಮ್ಮಪ್ಪ ಭಾರತದ ಶ್ರೀಮಂತ ದೇವರುಗಳಲ್ಲಿ ಪ್ರಮುಖವಾಗಿದ್ದಾನೆ. ಈ ದೇವಾಲಯಕ್ಕೆ ನಿತ್ಯವೂ ಸಾಕಷ್ಟು ಹಣ ಭಕ್ತಾದಿಗಳಿಂದ ಹರಿದುಬರುತ್ತದೆ. ಈ ನಡುವೆ ಭಕ್ತಾದಿಗಳು ಬೇಸರ ಪಡುವ ಘಟನೆಯೊಂದು ಜರುಗಿದೆ. ಅಂದರೆ ವೆಂಕಟೇಶ್ವರ ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮತ್ತೊಂದು ನಕಲಿ ವೆಬ್‌ಸೈಟ್ ಪತ್ತೆಯಾಗಿದೆ.

ಹೆಚ್ಚಾದ ನಕಲಿ ವೆಬ್‌ಸೈಟ್‌ಗಳ ಹಾವಳಿ: ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಹೆಸರಲ್ಲಿ ಈಗಾಗಲೇ ಸಾಕಷ್ಟು ನಕಲಿ ವೆಬ್‌ಸೈಟ್‌ಗಳು ಕಂಡುಬಂದಿದ್ದು, ಈ ಸಂಬಂಧ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಇದರ ಭಾಗವಾಗಿಯೇ ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂನ ಮತ್ತೊಂದು ನಕಲಿ ವೆಬ್‌ಸೈಟ್ ಅನ್ನು ಪತ್ತೆ ಮಾಡಿದ್ದು, ಟಿಟಿಡಿಯ ಐಟಿ ವಿಭಾಗದ ದೂರಿನ ಮೇರೆಗೆ ತಿರುಮಲ 1 ಟೌನ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420,468,471ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇಲ್ಲಿಯವರೆಗೆ ಕಂಡುಬಂದ ನಕಲಿ ವೆಬ್‌ಸೈಟ್‌ಗಳೆಷ್ಟು?: ಎಪಿ ಫೋರೆನ್ಸಿಕ್ ಸೈಬರ್ ಸೆಲ್ ಈ ರೀತಿಯ ನಕಲಿ ವೆಬ್‌ಸೈಟ್‌ನ ತನಿಖೆಗೆ ಧುಮುಕಿದ್ದು, ಇಲ್ಲಿಯವರೆಗೆ ಬರೋಬ್ಬರಿ 40 ನಕಲಿ ವೆಬ್‌ಸೈಟ್‌ಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೀಗ ಕಂಡುಬಂದಿರುವ ಹೊಸದನ್ನು ಸೈಬರ್ ಕ್ರೈಂ ಅಡಿಯಲ್ಲಿ 41 ನೇ ನಕಲಿ ವೆಬ್‌ಸೈಟ್ ಎಂದು ದಾಖಲಿಸಲಾಗಿದೆ.

ದುರಂತ ಎಂದರೆ ನಕಲಿ ವೆಬ್‌ಸೈಟ್ ಅನ್ನು ದುಷ್ಕರ್ಮಿಗಳು ಬಹುತೇಕ ಟಿಟಿಡಿ ಅಧಿಕೃತ ವೆಬ್‌ಸೈಟ್‌ನಂತೆಯೇ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಗಮನಿಸಿದರೆ ಸಾಮಾನ್ಯ ಜನರು ಇದು ನಕಲಿ ಎಂದು ಕಂಡುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಆದರೆ, ನಕಲಿ ವೆಬ್‌ಸೈಟ್ URL ನ ವಿಳಾಸ https:// tirupatibalaji-ap-gov.org/ ಎಂದು ಇದೆ. ಹಾಗೆಯೇ ಅಧಿಕೃತ ವೆಬ್‌ಸೈಟ್ URL https://tirupatibalaji.ap.gov.in/ ಎಂದಿದೆ. ಈ ಮೂಲಕ ಭಕ್ತರು ನಕಲಿ ಹಾಗೂ ಅಸಲಿ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
ಎಚ್ಚರಿಕೆ ನೀಡಿದ ಟಿಟಿಡಿ: ಈ ರೀತಿಯ ನಕಲಿ ವೆಬ್‌ಸೈಟ್‌ಗಳಿಗೆ ಬಲಿಯಾಗದಂತೆ ಭಕ್ತರಿಗೆ ಟಿಟಿಡಿ ಎಚ್ಚರಿಕೆ ನೀಡಿದ್ದು, ಭಕ್ತರು ಟಿಟಿಡಿ ಅಧಿಕೃತ ವೆಬ್‌ಸೈಟ್‌ನ URL ವಿಳಾಸವನ್ನು ಗಮನಿಸಿ ಹಾಗೆಯೇ ಆನ್‌ಲೈನ್ ಟಿಕೆಟ್‌ಗಳನ್ನು ಬುಕ್ ಮಾಡುವ ಮೊದಲು ಸರಿಯಾದ ವೆಬ್‌ಸೈಟ್‌ನ ರುಜುವಾತುಗಳನ್ನು ಪರಿಶೀಲಿಸಿ ಎಂದು ಸೂಚನೆ ನೀಡಿದೆ. ಇದರಲ್ಲಿ ಏನಾದರೂ ಸಮಸ್ಯೆ ಕಂಡುಬಂದರೆ ಅಧಿಕೃತ ಮೊಬೈಲ್ ಆಪ್ ಮೂಲಕ ಟಿಕೆಟ್ ಬುಕ್ ಮಾಡಲು ಕೇಳಿಕೊಂಡಿದೆ.
ನಕಲಿ ವೆಬ್‌ಸೈಟ್‌ನಲ್ಲಿ ಹೇಗೆ ಮೋಸ ಮಾಡಲಾಗುತ್ತದೆ?: ಈ ನಕಲಿ ವೆಬ್‌ಸೈಟ್ 300ರೂ. ಗಳಿಗೆ ವಿಶೇಷ ದರ್ಶನ ಟಿಕೆಟ್‌ಗಳು ಲಭ್ಯ ಇರಲಿವೆ ಎಂದು ತೋರಿಸಲಾಗಿದೆ. ಹಾಗೆಯೇ ವಸತಿ ಸೌಕರ್ಯಗಳನ್ನು ನೀಡಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಇದನ್ನು ನಂಬಿದ ಸಾವಿರಾರು ಯಾತ್ರಿಕರು ವಂಚಕರ ಬಲೆಗೆ ಬಿದ್ದು, ಹಣ ಕಳೆದುಕೊಂಡು ಅತಂತ್ರರಾಗುತ್ತಿದ್ದಾರೆ. ಈ ಕಾರಣಕ್ಕೆ ಟಿಟಿಡಿ ನಿರಂತರವಾಗಿ ಈ ಸಂಬಂಧ ಮೇಲ್ವಿಚಾರಣೆ ಮಾಡಿಕೊಂಡು ಬರುತ್ತಿದೆ.

ಎರಡರಲ್ಲೂ ಈ ವ್ಯತ್ಯಾಸ ಏನಿದೆ?: ಅಧಿಕೃತ ಪೇಜ್‌ನಲ್ಲಿ ಮೊದಲೇ ನಿಮ್ಮ ಮೊಬೈಲ್ ನಂಬರ್ ಕೇಳಲಾಗುತ್ತದೆ. ನಂತರ ಐಕಾನ್‌ಗಳ ರೂಪದಲ್ಲಿ ಸೇವಾ ವಿಭಾಗಗಳನ್ನು ಪಟ್ಟಿ ಕಾಣಿಸಿಕೊಳ್ಳುತ್ತದೆ. ಅವುಗಳಲ್ಲಿ ನಿಮಗೆ ಅಗತ್ಯವಾದ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಸೇವೆ ಪಡೆದುಕೊಳ್ಳಬಹುದು. ಆದರೆ, ನಕಲಿ ವೆಬ್‌ಸೈಟ್ ನಲ್ಲಿ ಬುಲೆಟಿನ್ ರೀತಿಯ ಮಾಹಿತಿಗಳು ಕಾಣಿಸಿಕೊಳ್ಳುತ್ತವೆ. ಆದರೆ, ಇದರಲ್ಲಿ ಹೆಚ್ಚಿನ ಆಯ್ಕೆಗಳು ನಿಮಗೆ ಕಾಣಿಸಿಕೊಳ್ಳುವುದಿಲ್ಲ.


Click it and Unblock the Notifications








