ಉದ್ಯೋಗಿಗಳೇ ಗಮನಿಸಿ; EPFO ನ ಈ ಯೋಜನೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ!
ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಹೆಚ್ಚಿನ ಪಿಂಚಣಿ ಪಡೆಯಲು ಬಯಸುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸದಸ್ಯರು ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನಾಂಕ ಆಗಿದೆ. ಅದಾಗ್ಯೂ ಅರ್ಜಿ ಸಲ್ಲಿಕೆ ವೇಳೆ ಎದುರಾಗುತ್ತಿರುವ ಸಮಸ್ಯೆಗಳ ಹಿನ್ನೆಲೆ ಇಪಿಎಫ್‌ಒ ಮೂರನೇ ಬಾರಿಗೆ ಗಡುವನ್ನು ವಿಸ್ತರಿಸಬಹುದು ಎಂದೂ ಸಹ ಹೇಳಲಾಗುತ್ತದೆ.
ಹೌದು, ಇಪಿಎಫ್‌ಒ ಹೆಚ್ಚಿನ ಪಿಂಚಣಿಗಾಗಿ ನೀವು ಇನ್ನೂ ಅರ್ಜಿ ಸಲ್ಲಿಕೆ ಮಾಡದಿದ್ದರೆ ತಕ್ಷಣ ಈಗಲೇ ಅರ್ಜಿ ಸಲ್ಲಿಸಿ. ಇಲ್ಲದಿದ್ದರೆ ನೀವು ಈ ಸದಾವಕಾಶವನ್ನು ಕಳೆದುಕೊಳ್ಳಬಹುದು. ಈ ಇಪಿಎಸ್‌ನ ಪ್ರಯೋಜನ ಪಡೆದುಕೊಳ್ಳಲು ಎರಡು ರೀತಿಯ ಉದ್ಯೋಗಿಗಳು ಮಾತ್ರ ಅರ್ಹರಾಗಿರುತ್ತಾರೆ. ಹಾಗಿದ್ರೆ, ಯಾರು ಆ ಎರಡು ರೀತಿಯ ಉದ್ಯೋಗಿಗಳು?, ಇದರಿಂದ ಉದ್ಯೋಗಿಗಳಿಗೆ ಆಗುವ ಲಾಭ ಏನು ಎಂಬ ಮಾಹಿತಿಯನ್ನು ತಿಳಿಯಲು ಈ ಲೇಖನ ಓದಿರಿ.

ಇಪಿಎಫ್‌ಒ ಹೆಚ್ಚಿನ ಪಿಂಚಣಿಗೆ ಯಾರು ಅರ್ಹರು: ಪ್ರಮುಖ ಮಾಹಿತಿ ಪ್ರಕಾರ ಸೆಪ್ಟೆಂಬರ್ 1, 2014 ರಂದು ಇಪಿಎಫ್ ಮತ್ತು ಇಪಿಎಸ್ ಸದಸ್ಯರಾಗಿದ್ದವರು ಮತ್ತು ಆ ದಿನಾಂಕದ ನಂತರವೂ ಮುಂದುವರಿದವರು ಹಾಗೂ ಸೆಪ್ಟೆಂಬರ್ 1, 2014 ರ ಮೊದಲು ನಿವೃತ್ತರಾದವರು ಮತ್ತು ಈ ಹಿಂದೆ ಹೆಚ್ಚಿನ ಪಿಂಚಣಿಗಳನ್ನು ಆರಿಸಿಕೊಂಡವರು ಈ ಹೆಚ್ಚಿನ ಹಣ ಪಡೆದುಕೊಳ್ಳುವ ಯೋಜನೆಗೆ ಅರ್ಹರಾಗಿದ್ದಾರೆ.
ಇನ್ನು ಇಪಿಎಫ್‌ಒ ಪ್ರಕಾರ, ಅರ್ಹ ಉದ್ಯೋಗಿಗಳು ಅಗತ್ಯ ದಾಖಲೆಗಳ ಮೂಲಕ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅಂದರೆ ಅವರು ಪ್ಯಾರಾ 26(6) ರಲ್ಲಿ ಅಗತ್ಯವಾದ ಪುರಾವೆಗಳನ್ನು ಹೊಂದಿಲ್ಲದಿದ್ದರೆ ಹಾಗೂ ಉದ್ಯೋಗಿ ಇಪಿಎಸ್‌ಗೆ ಸೇರಲು ಬಯಸಿದರೆ, ಅವರು ಜಂಟಿ ಘೋಷಣೆಯ ನಮೂನೆಯನ್ನು ನೀಡಬೇಕಿದೆ. ಆದರೆ, ಈ ಸೌಲಭ್ಯ ಪಡೆದುಕೊಳ್ಳಲು ಅವರ ಸಂಬಳ ಮೂಲ ವೇತನಕ್ಕಿಂತ ಹೆಚ್ಚಿರಬೇಕು.
ಉದ್ಯೋಗಿಗಳಿಗೆ ಹೇಗೆ ಲಾಭ?: ನಿವೃತ್ತಿಯ ನಂತರ ನಿಯಮಿತ ಆದಾಯದ ಆಯ್ಕೆಯನ್ನು ಹೊಂದಿರದ ಅಥವಾ ಯಾವುದೇ ವರ್ಷಾಶನ ಯೋಜನೆಗಳು ಅಥವಾ ಸ್ಥಿರ ಆದಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿಲ್ಲದವರಿಗೆ ಇದು ತುಂಬಾ ಅಗತ್ಯವಾಗಿದೆ. ಇನ್ನು ಅರ್ಜಿದಾರರ ಪಿಂಚಣಿಯು ಸೆಪ್ಟೆಂಬರ್ 1, 2014ರ ಮೊದಲು ಪ್ರಾರಂಭವಾದರೆ, ಹೆಚ್ಚಿನ ಪಿಂಚಣಿಯ ಲೆಕ್ಕಾಚಾರವು ನಿವೃತ್ತಿಯ ದಿನಾಂಕದ ಹಿಂದಿನ 12 ತಿಂಗಳ ಅವಧಿಯಲ್ಲಿ ಪಡೆದ ಸರಾಸರಿ ಮಾಸಿಕ ವೇತನವನ್ನು ಆಧರಿಸಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು?: ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ನೀವು ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (UAN), ಪಿಂಚಣಿದಾರರಿಗೆ ಪಿಂಚಣಿ ಪಾವತಿ ಆದೇಶ (PPO) ಸಂಖ್ಯೆ, ವೇತನದ ಸೀಲಿಂಗ್ ಮಿತಿಗಿಂತ ಹೆಚ್ಚಿನ EPF ಖಾತೆಗೆ ಪಾವತಿಸಿದ ಪುರಾವೆ ಸೇರಿದಂತೆ ಅಗತ್ಯ ದಾಖಲೆಗಳು ನಿಮ್ಮಲ್ಲಿ ಇರಬೇಕು. ಇದನ್ನೆಲ್ಲಾ ಇಟ್ಟುಕೊಂಡು ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ನೀವು ಆಗಸ್ಟ್ 31, 2014 ರಂದು ಅಥವಾ ಮೊದಲು ನಿವೃತ್ತರಾಗಿದ್ದರೆ, ಹೆಚ್ಚಿನ ಪಿಂಚಣಿಗಾಗಿ ಸರಾಸರಿ ವೇತನವನ್ನು ಕಳೆದ ವರ್ಷದ ಸೇವೆಯ ಸರಾಸರಿ ವೇತನದ ಮೇಲೆ ಲೆಕ್ಕಹಾಕಲಾಗುತ್ತದೆ. ಇನ್ನು ಹೆಚ್ಚಿನ ಪಿಂಚಣಿ ಆಯ್ಕೆ ಮಾಡುವಾಗ, ಅದರಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಅಲ್ಪಾವಧಿ ಮತ್ತು ದೀರ್ಘಾವಧಿಯ ಆರ್ಥಿಕ ಗುರಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ ಎಂದು ಬ್ಯಾಂಕ್ ಬಜಾರ್‌ನ ಸಿಇಒ ಆದಿಲ್ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಗಡುವು ವಿಸ್ತರಣೆ ಆಗಬಹುದು?: ಮೊದಲೇ ತಿಳಿಸಿದಂತೆ ಈಗಾಗಲೇ EPFO ಎರಡು ಬಾರಿ ಗಡುವನ್ನು ವಿಸ್ತರಿಸಿದೆ. ಮೇ ತಿಂಗಳಲ್ಲಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಎರಡನೇ ಬಾರಿಗೆ ಗಡುವನ್ನು ವಿಸ್ತರಿಸುವಾಗ ಹೆಚ್ಚಿನ ಅವಕಾಶವನ್ನು ಒದಗಿಸಲು ಮತ್ತು ಎಲ್ಲಾ ಅರ್ಹ ವ್ಯಕ್ತಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಲು ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿಕೆ ನೀಡಿತ್ತು. ಈ ಮೂಲಕ ಈಗ ಅರ್ಜಿಗಳನ್ನು ಸಲ್ಲಿಸುವ ಟೈಮ್‌ಲೈನ್ ಅನ್ನು ಜೂನ್ 26, 2023 ರವರೆಗೆ ನಿಗದಿ ಪಡಿಸಿತ್ತು. ಅಂದರೆ ಇಂದಿಗೆ ಇದು ಕೊನೆಯಾಗಲಿದೆ.


Click it and Unblock the Notifications








