ಇನ್ಮುಂದೆ 10 ಮೊಬೈಲ್ ಅಂಕಿಗಳಲ್ಲ ಬದಲಾಗಿ 11-13: ಯಾಕಾಗಿ ಈ ನಿರ್ಧಾರ!?
ಭಾರತದಲ್ಲಿ ಇತ್ತೀಚೆಗೆ ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿವೆ. ಈ ಮೊದಲು ಸಾಮಾನ್ಯ ಕರೆಗಳ ಮೂಲಕ ವಂಚನೆ ಮಾಡುತ್ತಿದ್ದವರು ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್, ಸಿಗ್ನಲ್, ಟೆಲಿಗ್ರಾಮ್ ಸೇರಿದಂತೆ ಇನ್ನಿತರೆ ಇತರೆ ಆಪ್ ಬಳಕೆದಾರರಿಗೆ ಪಂಗನಾಮ ಹಾಕುತ್ತಿದ್ದಾರೆ. ಈ ನಡುವೆ ಭಾರತದ ಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
ಹೌದು, ನಾವು ಇಲ್ಲಿಯವರೆಗೂ 10 ಅಂಕೆಯ ಮೊಬೈಲ್ ನಂಬರ್ ಬಳಕೆ ಮಾಡುತ್ತಿದ್ದೆವು.ಆದರೆ, ಇನ್ಮುಂದೆ ಈ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಹಾಗಿದ್ರೆ, ಎಷ್ಟು ಸಂಖ್ಯೆ ಹೆಚ್ಚಳವಾಗಲಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಯಾಕೆ ಈ ನಿರ್ಧಾರ ಮಾಡಿದೆ, ಈ ನಿಯಮ ಎಂದಿನಿಂದ ಜಾರಿ ಹಾಗೂ ಯಾರ್ಯಾರಿಗೆ ಈ ಸಂಖ್ಯೆಗಳನ್ನು ನೀಡಲಾಗುತ್ತದೆ ಎಂಬಿತ್ಯಾದಿ ಇಂಟ್ರೆಸ್ಟಿಂಗ್ ಮಾಹಿತಿಗಾಗಿ ಈ ಲೇಖನ ಓದಿರಿ.

ಹೆಚ್ಚಾಗಲಿವೆ ಮೊಬೈಲ್ ಅಂಕೆಗಳು: ಇದೀಗ ಭಾರತದಾದ್ಯಂತ 10 ಮೊಬೈಲ್ ಸಂಖ್ಯೆಗಳು ಬಳಕೆಯಲ್ಲಿದ್ದು, ಹೊಸ ಮೊಬೈಲ್ ಸಂಖ್ಯೆಗಳಿಗೆ ನಿರಂತರ ಬೇಡಿಕೆಯಿದೆ. ಈ ನಡುವೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(TRAI) ಹೊಸ ಮೊಬೈಲ್ ಸಂಖ್ಯೆ ನೀಡಲು ಸಿದ್ಧತೆ ನಡೆಸಿದ್ದು, ಈ ಮೂಲಕ ಬಳಕೆದಾರರು 10 ಮೊಬೈಲ್ ಸಂಖ್ಯೆಗಳ ಬದಲಾಗಿ ಇನ್ನೂ ಒಂದು ಅಥವಾ ಎರಡು ಸಂಖ್ಯೆಗಳನ್ನು ಹೆಚ್ಚಾಗಿ ಪಡೆದುಕೊಳ್ಳಲಿದ್ದಾರೆ.
11 ಹಾಗೂ 13 ಸಂಖ್ಯೆಯ ಡಿಜಿಟಲ್ ಮೊಬೈಲ್ ಸಂಖ್ಯೆಗಳು: ಈ ಮೊಬೈಲ್ ಸಂಖ್ಯೆ ವಿಚಾರವಾಗಿ ಈ ಹಿಂದೆಯೂ ಟ್ರಾಯ್ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿತ್ತು. ಅಂದರೆ 10 ರ ಬದಲಿಗೆ 11 ಅಂಕಿಯ ಮೊಬೈಲ್ ಸಂಖ್ಯೆಯನ್ನು ನೀಡಲು ಸಿದ್ಧತೆ ನಡೆಸಿತ್ತು. ಅದರ ಪ್ರಕಾರ ಸ್ಥಿರ ಲೈನ್ ಮತ್ತು ಮೊಬೈಲ್ ಸೇವಾ ಸಂಖ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯವಿದೆ ಎಂದು ಉಲ್ಲೇಖ ಮಾಡಲಾಗಿತ್ತು.ಆದರೆ,ಈ ಪ್ರಸ್ತಾವನೆಗೆ ಇನ್ನೂ ಅಂತಿಮ ಮುದ್ರೆ ಸಿಕ್ಕಿಲ್ಲ.

ಏನೆಲ್ಲಾ ಬದಲಾವಣೆ ಆಗಲಿದೆ?: ಟ್ರಾಯ್ ಪ್ರಕಾರ 11 ಅಂಕಿಯ ಮೊಬೈಲ್ ಸಂಖ್ಯೆಯನ್ನು 9 ರಿಂದ ಪ್ರಾರಂಭಿಸಬಹುದು ಎನ್ನಲಾಗಿದೆ. ಈ ಮೂಲಕ 10 ಬಿಲಿಯನ್ ಹೊಸ ಮೊಬೈಲ್ ಸಂಖ್ಯೆಗಳನ್ನು ಉತ್ಪಾದಿಸಲು ಸಹಕಾರ ಆಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ 10 ಅಂಕಿಗಳ 70 ಪ್ರತಿಶತ ಮೊಬೈಲ್ ಸಂಖ್ಯೆಗಳನ್ನು ಬಳಕೆ ಮಾಡಲಾಗುತ್ತುದ್ದು, ಈ ನಡುವೆ ಸುಮಾರು 3 ಬಿಲಿಯನ್ ಮೊಬೈಲ್ ಸಂಖ್ಯೆಗಳು ಮಾತ್ರ ಸ್ಟಾಕ್‌ನಲ್ಲಿ ಉಳಿದಿವೆ.
ಅದರಲ್ಲೂ ಭಾರತದಲ್ಲಿ ಹೆಚ್ಚುತ್ತಿರುವ ಡಿಜಿಟಲೀಕರಣ ವ್ಯವಸ್ಥೆ ಶೀಘ್ರದಲ್ಲೇ ಮೊಬೈಲ್ ಸಂಖ್ಯೆಗಳ ಕ್ಷಾಮಕ್ಕೆ ಕಾರಣವಾಗಬಹುದು. ಈ ಕಾರಣಕ್ಕಾಗಿಯೇ ಟ್ರಾಯ್ ಈ ನಿರ್ಧಾರಕ್ಕೆ ಬಂದಿದೆ. ಇದರೊಂದಿಗೆ ಸ್ಥಿರ ಲೈನ್ ಮೊಬೈಲ್ ಸಂಖ್ಯೆಯ ಮೊದಲು ಸೊನ್ನೆ ಬಳಕೆ ಮಾಡಲು ಟ್ರಾಯ್ ಪ್ರಸ್ತಾಪಿಸಿದೆ. ಜೊತೆಗೆ ಮೊಬೈಲ್ ಮತ್ತು ಸ್ಥಿರ ದೂರವಾಣಿ ಸಂಖ್ಯೆಗಳನ್ನು ಸುಲಭವಾಗಿ ಗುರುತಿಸಲು ಅನುವು ಮಾಡಿಕೊಡಲಿದೆ. ಇದಲ್ಲದೆ ಡಾಂಗಲ್‌ಗೆ 10 ರ ಬದಲಿಗೆ 13 ಅಂಕಿಯ ಸಂಖ್ಯೆಯನ್ನು ನೀಡಲು ಸಹ ಎಲ್ಲಾ ತಯಾರಿ ನಡೆದಿದೆ.
ಇತ್ತೀಚಿನ ಬೆಳವಣಿಗೆಯಲ್ಲಿ ಪ್ರಚಾರ ಮತ್ತು ಸ್ಪ್ಯಾಮ್ ಕರೆಗಳ ಸಮಸ್ಯೆಯನ್ನು ನಿಭಾಯಿಸಲು ಸಹ ಈ ನಿರ್ಧಾರ ಪ್ರಮುಖವಾಗಿದೆ ಎನ್ನಲಾಗಿದೆ. ಈ ಮೂಲಕ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಕಂಪನಿಗಳು ಪ್ರಚಾರದ ಕರೆಗಳಿಗಾಗಿ ವಿಶಿಷ್ಟ ಸಂಖ್ಯೆಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಆದರೆ, ಈ ವಿಶೇಷ ಪ್ರಸ್ತಾವನೆಗೆ ಸಂಬಂಧಿಸಿದಂತೆ ಟ್ರಾಯ್ ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಸಿಕ್ಕಿಲ್ಲ.

ಏನಿದು ಟ್ರಾಯ್?: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾವು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಆಕ್ಟ್, 1997ರ ಸೆಕ್ಷನ್ 3 ರ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಒಂದು ನಿಯಂತ್ರಕ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ದೂರಸಂಪರ್ಕ ವಲಯವನ್ನು ಕಂಟ್ರೋಲ್ ಮಾಡುತ್ತದೆ. ಜೊತೆಗೆ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. ಮತ್ತು ಉದಯೋನ್ಮುಖ ಜಾಗತಿಕ ಮಾಹಿತಿ ಸಮಾಜದಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸಲು ಅನುವು ಮಾಡಿಕೊಡುತ್ತದೆ.


Click it and Unblock the Notifications








