ಉದ್ಯೋಗ ಹುಡುಕುವವರಿಗೆ ಗುಡ್ ನ್ಯೂಸ್ ನೀಡಲು ಮುಂದಾದ ಟ್ವಿಟ್ಟರ್! ಏನದು?
ಟ್ವಿಟ್ಟರ್ (Twitter) ಪ್ಲಾಟ್‌ಫಾರ್ಮ್ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಯಲ್ಲಿದೆ. ಯಾಕೆಂದರೆ ಮಸ್ಕ್ ಅವರು ಕೆಲವು ಹೊಸ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದ್ದರೆ ಇನ್ನೂ ಕೆಲವು ಹಳೆಯ ಫೀಚರ್ಸ್‌ಗಳನ್ನು ತೆಗೆದುಹಾಕುತ್ತಿದ್ದಾರೆ. ಈ ಕಾರಣಕ್ಕೆ ಟ್ವಿಟ್ಟರ್ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ಹೊರಹಾಕುತ್ತಿದ್ದಾರೆ. ಅದಾಗ್ಯೂ ಈಗ ಟ್ವಿಟ್ಟರ್ ಬಳಕೆದಾರರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.
ಹೌದು, ಟ್ವಿಟ್ಟರ್‌ನಲ್ಲಿ ಇನ್ಮುಂದೆ ಉದ್ಯೋಗಗಳನ್ನೂ ಸಹ ಸುಲಭವಾಗಿ ಹುಡುಕಬಹುದಾಗಿದೆ. ಅಂದರೆ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿರುವ ಈ ಟ್ವಿಟ್ಟರ್‌ನಲ್ಲಿ ಕೆಲಸಕ್ಕೆ ಸಂಬಂಧಿಸಿದ ಲಿಸ್ಟ್‌ಗಳನ್ನು ಸೇರಿಸಲು ಹೊಸ ಮಾರ್ಗವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಏನಿದು ಟ್ವಿಟ್ಟರ್‌ನ ಹೊಸ ಸೇವೆ?, ಇದರಿಂದ ನಿರುದ್ಯೋಗಿಗಳು ಹೇಗೆ ಉದ್ಯೋಗ ಗಿಟ್ಟಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ.

ಸದ್ಯಕ್ಕೆ ದೇಶದಲ್ಲಿನ ಹಲವಾರು ಉದ್ಯೋಗಿಗಳು ಹಾಗೂ ನಿರುದ್ಯೋಗಿಗಳು ತಮಗೆ ಅಗತ್ಯ ಇರುವ ಉದ್ಯೋಗಗಳನ್ನು ಹುಡುಕಲು ಲಿಂಕ್ಡ್‌ಇನ್, ಅಪ್ನಾ ಆಪ್, ನೌಕರಿ ಸೇರಿದಂತೆ ಅನೇಕ ಆಪ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಆದರೆ, ಟ್ವಿಟ್ಟರ್‌ನಲ್ಲಿ ಆಗುತ್ತಿರುವ ಬೆಳವಣಿಗೆ ಗಮನಿಸಿದರೆ ಇನ್ಮುಂದೆ ಈ ಎಲ್ಲಾ ಆಪ್‌ಗಳಿಗೂ ಟ್ವಿಟ್ಟರ್ ತೀವ್ರ ಪೈಪೋಟಿ ನೀಡಲಿದೆ ಎನ್ನಲಾಗಿದೆ. ಅಂದರೆ ಕಂಪೆನಿಗಳು ಸುಲಭವಾಗಿ ತಮಗೆ ಅಗತ್ಯ ಇರುವವರನ್ನು ಈ ಮೂಲಕ ನೇಮಿಸಿಕೊಳ್ಳಲು ಮೈಕ್ರೋ-ಬ್ಲಾಗಿಂಗ್ ಸೇವೆಯನ್ನು ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ.
ಟ್ವಿಟರ್ ನೇಮಕಾತಿ ಎಂದರೇನು?: ಈ ಸಂಬಂಧ ದಿ ವರ್ಜ್‌ನಲ್ಲಿ ವರದಿಯಾಗಿದ್ದು, ಇದನ್ನು ನಿಮಾ ಓವ್ಜಿ ಎಂಬ ಅಪ್ಲಿಕೇಶನ್ ಸಂಶೋಧಕರು ಗುರುತಿಸಿದ್ದಾರೆ. ಜೊತೆಗೆ ಈ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೀಚರ್ಸ್‌ಗೆ ಟ್ವಿಟರ್ ನೇಮಕ (Twitter Hiring) ಎಂದು ಕರೆಯಲಾಗಿದ್ದು, ಇದು ಕೇವಲ ಕಂಪನಿಗೆ ಮಾತ್ರ ಉದ್ದೇಶಿಸಿಲ್ಲ. ಬದಲಾಗಿ ಬಳಕೆದಾರರು ವಿವಿಧ ಸಂಸ್ಥೆಗಳಿಂದ ಉದ್ಯೋಗಗಳನ್ನು ಹುಡುಕಲು ಇದು ಅನುವು ಮಾಡಿಕೊಡಲಿದೆ ಎಂದು ಉಲ್ಲೇಖಿಸಲಾಗಿದೆ.
ಅದರಲ್ಲೂ ಸಿಕ್ಕ ಸಿಕ್ಕವರೆಲ್ಲಾ ಇಲ್ಲಿ ಉದ್ಯೋಗ ಇದೆ ಎಂದು ಪೋಸ್ಟ್ ಶೇರ್ ಮಾಡುವಂತಿಲ್ಲ. ಬದಲಾಗಿ ಪ್ಲಾಟ್‌ಫಾರ್ಮ್‌ನಲ್ಲಿ ಪರಿಶೀಲಿಸಿದ ಸಂಸ್ಥೆಗಳು ಮಾತ್ರ ಲಭ್ಯವಿರುವ ಉದ್ಯೋಗ ಪೋಸ್ಟಿಂಗ್‌ಗಳನ್ನು ಶೇರ್ ಮಾಡಿಕೊಳ್ಳಲು ಸಾಧ್ಯವಾಗುತ್ತದಂತೆ. ಈ ಮೂಲಕ ನಕಲಿ ಉದ್ಯೋಗದಾತರಿಂದ ನಿರುದ್ಯೋಗಿಗಳಿಗೆ ರಕ್ಷಣೆ ಸಿಕ್ಕಂತೆ ಆಗುತ್ತದೆ. ಈ ಸಂಬಂಧದ ಸ್ಕ್ರೀನ್‌ಶಾಟ್ ಅನ್ನು ಓವ್ಜಿ ಹಂಚಿಕೊಂಡಿದ್ದಾರೆ. ಟ್ವಿಟ್ಟರ್‌ಗೆ ಉದ್ಯೋಗ ಲಿಸ್ಟ್‌ಗಳನ್ನು ಆಮದು ಮಾಡಲು ಕಂಪನಿಗಳು ಬೆಂಬಲಿತ ಎಟಿಎಸ್ ಅಥವಾ ಎಕ್ಸ್‌ಎಮ್‌ಎಲ್ ಫೀಡ್ ಅನ್ನು ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.
ಟ್ವಿಟ್ಟರ್ ಹೇಗಾದರೂ ಮಾಡಿ ತನ್ನ ಆದಾಯವನ್ನು ಹೆಚ್ಚಿಗೆ ಮಾಡಿಕೊಳ್ಳುವ ಸಲುವಾಗಿ ಈ ರೀತಿಯ ಹೊಸ ವಿಷಯಗಳ ಮೂಲಕ ಮುನ್ನೆಲೆಗೆ ಬರುತ್ತಿದೆ. ಅದರಲ್ಲೂ ಕೆಲವು ದಿನಗಳಿಂದ ಜಾಹೀರಾತು ಹಂಚಿಕೆ ಆದಾಯವನ್ನು ಬಳಕೆದಾರರಿಗೆ ಶೇರ್ ಮಾಡುತ್ತಿದೆ. ಈ ಮೂಲಕ ಸಾಕಷ್ಟು ಪರಿಶೀಲಿಸಿದ ಬಳಕೆದಾರರು ಐದು ಲಕ್ಷಕ್ಕೂ ಹೆಚ್ಚಿನ ಹಣವನ್ನು ಸ್ವೀಕರಿಸಿದ್ದಾರೆ. ಈ ಬೆಳವಣಿಗೆಯಿಂದ ಕೆಲವರು ಮತ್ತೆ ಟ್ಟಿಟ್ಟರ್ ಕಡೆಗೆ ಮುಖ ಮಾಡುತ್ತಿದ್ದಾರೆ. ಅದಾಗ್ಯೂ ಪ್ರಸ್ತುತ ಪರೀಕ್ಷೆಯಲ್ಲಿರುವ ಈ ಫೀಚರ್ಸ್ ಕುರಿತು ಕಂಪೆನಿಯು ಅಧಿಕೃತವಾಗಿ ಯಾವುದೇ ವಿವರಗಳನ್ನು ನೀಡಿಲ್ಲ.
ಅದರಂತೆ ಈಗ ಮೆಟಾ ಒಡೆತನದಲ್ಲಿ ಥ್ರೆಡ್ಸ್ ಆಪ್ ಅನ್ನು ಲಾಂಚ್ ಮಾಡಲಾಗಿದ್ದು, ಇದು ಟ್ವಿಟ್ಟರ್ ರೀತಿಯಲ್ಲೇ ಸೇವೆ ನೀಡಲು ಮುಂದಾಗಿದೆ. ಈ ಮೂಲಕ ಟ್ವಿಟ್ಟರ್‌ಗೆ ಕೊಂಚ ಹಿನ್ನಡೆಯಾಗಿದೆಯಾದರೂ ಇದನ್ನು ಸರಿದೂಗಿಸಿಕೊಳ್ಳಲು ಈ ರೀತಿಯ ಹೊಸ ಹೊಸ ಬಾಣಗಳನ್ನು ಆಗಾಗ್ಗೆ ಬಿಡುತ್ತಲೇ ಇರುತ್ತದೆ. ಅದರಲ್ಲೂ ಮುನ್ನೆಲೆಯಲ್ಲಿರುವ ಯಾವುದೇ ಪ್ಲಾಟ್‌ಫಾರ್ಮ್‌ಗಳಲ್ಲಿನ ಸೇವೆಗಳನ್ನು ಟ್ವಿಟ್ಟರ್‌ನಲ್ಲಿಯೂ ನೀಡುತ್ತಾ ಬರುತ್ತಿರುವುದು ಮಸ್ಕ್ ಅವರ ವಿಶೇಷವಾಗಿದೆ.


Click it and Unblock the Notifications








