ಟ್ವಿಟ್ಟರ್ ಲೋಗೋ ಬದಲಾಯಿಸಿದ ಮಸ್ಕ್; ಹೊಸ ಲೋಗೋ ಹೀಗಿದೆ ನೋಡಿ!
ಟ್ವಿಟ್ಟರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಎಲಾನ್ ಮಸ್ಕ್ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಮೈಕ್ರೋ-ಬ್ಲಾಗಿಂಗ್ ಸೈಟ್ ಆಗಿರುವ ಟ್ವಿಟ್ಟರ್‌ನಲ್ಲಿ ಸಾಕಷ್ಟು ಬದಲಾವಣೆ ಸಂಭವಿಸಿದೆ. ಹಾಗೆಯೇ ಕಾಲಕಾಲಕ್ಕೆ ಹೊಸ ಹೊಸ ನೀತಿಗಳನ್ನು ಜಾರಿಗೆ ತರುತ್ತಿದ್ದು, ಇವು ಕೆಲವರಿಗೆ ಇಷ್ಟವಾದರೆ ಇನ್ನೂ ಕೆಲವರಿಗೆ ಕಷ್ಟವಾಗಿ ಪರಿಣಮಿಸುತ್ತಿದೆ.
ಹೌದು, ಹೊಸ ನೀತಿಗಳು ಮತ್ತು ಬದಲಾವಣೆಗಳನ್ನು ತರುತ್ತ ಆಗಾಗ್ಗೆ ಸುದ್ದಿಯಲ್ಲಿರುವ ಮಸ್ಕ್ ಅವರು ಇದೀಗ ಟ್ವಿಟರ್ ಗೆ ಹೊಸ ಅಪ್ ಡೇಟ್ ತಂದಿದ್ದಾರೆ. ಅದರಂತೆ ಈ ಬಾರಿ ಟ್ವಿಟ್ಟರ್ ಲೋಗೋ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಯಾಕೆಂದರೆ ಟ್ವಿಟ್ಟರ್‌ನ ಐಕಾನಿಕ್ ಬ್ಲೂ ಬರ್ಡ್ ಲೋಗೋವನ್ನು ನಾಯಿ ಲೋಗೋದ ಮೂಲಕ ಬದಲಾಯಿಸಲಾಗಿದೆ. ಈ ನಾಯಿ ಮೀಮ್ ಶೀಬಾ ಇನು ನಾಯಿಯ ಮುಖವನ್ನು ಹೋಲಲಿದೆ.

ಈ ಲೋಗೋ ವೆಬ್ ಆವೃತ್ತಿಯಲ್ಲಿ ಹೋಮ್ ಬಟನ್ ಆಗಿ ಕಾರ್ಯನಿರ್ವಹಿಸಲಿದ್ದು, ಮೊಬೈಲ್ ಆಪ್‌ನಲ್ಲಿ ಈ ಸಂಬಂಧ ಏನೂ ಬದಲಾಗಿಲ್ಲ. ಇನ್ನು ಈ ನಾಯಿಯ ಚಿತ್ರ ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋ ಎಂದೇ ಜನಪ್ರಿಯವಾಗಿದೆ. ಇದನ್ನು 2013 ರಲ್ಲಿ ವಿನೋದಕ್ಕಾಗಿ ರಚಿಸಲಾಗಿತ್ತು. ವೈವಿಧ್ಯತೆಯನ್ನು ಉಲ್ಲೇಖಿಸಿ ಬಿಟ್‌ಕಾಯಿನ್‌ನಂತಹ ಇತರ ಕ್ರಿಪ್ಟೋಕರೆನ್ಸಿಗಳನ್ನು ಅಪಹಾಸ್ಯ ಮಾಡಲು ಇದನ್ನು ಆರಂಭಿಸಲಾಗಿದೆ.
ಹಾಗೆಯೇ ಮಸ್ಕ್ ಅವರು ಈ ಸಂಬಂಧ ತಮ್ಮ ಖಾತೆಯಲ್ಲಿ ಒಂದು ಉಲ್ಲಾಸದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಪೊಲೀಸ್ ಅಧಿಕಾರಿ ಪರಿಶೀಲನೆ ನಡೆಸುತ್ತಿದ್ದು, ಆ ಲೈಸೆನ್ಸ್‌ನಲ್ಲಿ ಬ್ಲೂ ಬರ್ಡ್ ಫೋಟೋ ಇದೆ. ಹಾಗೆಯೇ ಕಾರಿನಲ್ಲಿ ಕುಳಿತಿರುವ ನಾಯಿ, ಅದು ಹಳೆಯ ಫೋಟೋ ಎಂದು ಹೇಳುವಂತೆ ಚಿತ್ರಿಸಲಾಗಿದೆ. ಈ ಮೀಮ್ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ಸುದ್ದಿಯಲ್ಲಿದೆ.
ಇದರ ನಡುವೆ ಮಸ್ಕ್ ಅವರು ಓರ್ವ ವ್ಯಕ್ತಿಯ ನಡುವಿನ ಮಾರ್ಚ್ 26, 2022 ರ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದ್ದು, ಈ ಸಂಭಾಷಣೆಯಲ್ಲಿ ಅವರು ಲೋಗೋದಲ್ಲಿ ಬರ್ಡ್ ಬದಲಾಗಿ ನಾಯಿ ಇರಿಸಲು ಕೇಳಿದ್ದಾರೆ. ಇದಕ್ಕೆ ಭರವಸೆ ನೀಡಿದಂತೆ ಮಸ್ಕ್ ಕೊನೆಗೂ ಈ ಕೆಲಸ ಮಾಡಿಯೇ ತೀರಿದ್ದಾರೆ.
ಸೋಮವಾರ ರಾತ್ರಿಯಿಂದ ಬಳಕೆದಾರರು ತಮ್ಮ ಟ್ವಿಟರ್ ಖಾತೆಯಲ್ಲಿ ನೀಲಿ ಹಕ್ಕಿಯ ಬದಲಿಗೆ ನಾಯಿಯನ್ನು ನೋಡಲು ಪ್ರಾರಂಭಿಸಿದ್ದಾರೆ. ಈ ಲೋಗೋವನ್ನು ನೋಡಿದ ಬಳಕೆದಾರರು ಆಶ್ಚರ್ಯಚಕಿತರಾಗಿದ್ದು, ಟ್ವಿಟ್ಟರ್ ಲೋಗೋದಲ್ಲಿ ನಾಯಿ ಕಾಣಿಸುತ್ತಿದೆಯೇ ಎಂದು ಅವರು ಪರಸ್ಪರ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. ಇದಾದ ಸ್ವಲ್ಪ ಸಮಯದೊಳಗೆ, #DOGE Twitter ನಲ್ಲಿ ಟ್ರೆಂಡಿಂಗ್ ಆರಂಭ ಆಗಿದೆ.

ನಂತರದಲ್ಲಿ ಯಾರೋ ಟ್ವಿಟರ್ ಹ್ಯಾಕ್ ಮಾಡಿದ್ದಾರೆ ಎಂದು ಬಳಕೆದಾರರು ಭಾವಿಸಿದ್ದರು. ಅದಾಗ್ಯೂ ಮಸ್ಕ್ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ, ಈಗ ಎಲಾನ್ ಮಸ್ಕ್ ಟ್ವೀಟ್ ಮಾಡುವ ಮೂಲಕ ತಮ್ಮ ಟ್ವಿಟರ್ ಲೋಗೋವನ್ನು ಬದಲಾಯಿಸಲಾಗಿದೆ ಎಂದು ವಿಶೇಷವಾದ ರೀತಿಯಲ್ಲಿ ಬಳಕೆದಾರರಿಗೆ ಮಾಹಿತಿ ನೀಡಿದ್ದಾರೆ.
ಎಲೋನ್ ಮಸ್ಕ್ ಈ ಹಿಂದೆಯೂ ಈ ನಾಯಿ ಬಗ್ಗೆ ಸುಳಿವು ನೀಡಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರು ಫೋಟೋವೊಂದನ್ನು ಟ್ವೀಟ್ ಮಾಡಿ ಟ್ವಿಟರ್‌ನ ಹೊಸ CEO ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದರು.ಆದರೆ, ಟ್ವಿಟರ್‌ನ ಸಿಇಒ ಕುರ್ಚಿಯ ಮೇಲೆ ನಾಯಿ ಕುಳಿತಿತ್ತು. ಆ ನಾಯಿ ಮುಂದೆ ಇರುವ ಮೇಜಿನ ಮೇಲೆ ಒಂದು ಕಾಗದವನ್ನು ಇರಿಸಲಾಗಿತ್ತು. ಅದರಲ್ಲಿ ಈ ನಾಯಿಯ ಹೆಸರು ಫ್ಲೋಕಿ ಮತ್ತು ಅದರ ಪೋಸ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂದು ಬರೆಯಲಾಗಿತ್ತು.

ಇನ್ನು ಅಕ್ಟೋಬರ್ 2022 ರಲ್ಲಿ ಮಸ್ಕ್ ಟ್ವಿಟರ್ ಅನ್ನು ತಮ್ಮ ಅಧಿಕಾರದ ವ್ಯಾಪ್ತಿಗೆ ತೆಗೆದುಕೊಂಡಿದ್ದು, ಸುದೀರ್ಘ ಕಾನೂನು ಹೋರಾಟ ಮತ್ತು ತಿಂಗಳುಗಳ ಅನಿಶ್ಚಿತತೆಯ ನಂತರ $44 ಬಿಲಿಯನ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಹಾಗೆಯೇ ಮಸ್ಕ್ ಟ್ವಿಟರ್ ಸ್ವಾಧೀನಕ್ಕಾಗಿ ಟೆಸ್ಲಾದಲ್ಲಿ ಸುಮಾರು $8.5 ಶತಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.


Click it and Unblock the Notifications








