ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಬಿಗ್ ಶಾಕ್; ಇನ್ಮುಂದೆ ಟ್ವಿಟ್ಟರ್‌ನಲ್ಲಿ ಸಿನಿಮಾ ನೋಡಬಹುದು!?
ಟೆಕ್ ವಲಯದಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರುವ ಪ್ಲಾಟ್‌ಫಾರ್ಮ್ ಎಂದರೆ ಅದು ಟ್ವಿಟ್ಟರ್. ಇದನ್ನು ಮಸ್ಕ್ ಅವರು ಖರೀದಿ ಮಾಡಿದ ನಂತರ ಒಂದಲ್ಲಾ ಒಂದು ಬದಲಾವಣೆಗಳು ನಿತ್ಯವೂ ಜರುಗುತ್ತಿವೆ. ಈ ನಡುವೆ ಇನ್ಮುಂದೆ ಬಳಕೆದಾರರು ಈ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಸಹ ವೀಕ್ಷಣೆ ಮಾಡಬಹುದು.
ಹೌದು, ಪ್ರಮುಖ ಸೋಶಿಯಲ್ ಸೈಟ್ ಆಗಿರುವ ಟ್ವಿಟ್ಟರ್ ಈಗಾಗಲೇ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಜೊತೆಗೆ ಕೆಲವು ಸೌಲಭ್ಯಗಳನ್ನು ಕಡಿಮೆ ಮಾಡಿದೆ. ಅಂದರೆ ಹೇಗಾದರೂ ಸರಿಯೇ ಇದರಿಂದ ಹೆಚ್ಚಿನ ಆದಾಯ ಪಡೆಯಬೇಕು ಎಂದು ಮಸ್ಕ್ ವಿವಿಧ ಬದಲಾವಣೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ಕಾರಣಕ್ಕಾಗಿಯೇ ವಿಡಿಯೋ ಸಂಬಂಧ ಹೊಸ ಬದಲಾವಣೆ ಶೀಘ್ರದಲ್ಲೇ ಜರುಗಲಿದೆ. ಹಾಗಿದ್ರೆ, ಏನಿದು ಟ್ವಿಟ್ಟರ್‌ನಲ್ಲಿ ಲಭ್ಯ ಆಗುತ್ತಿರುವ ಮುಂದಿನ ಪ್ರಯೋಜನ?, ಇದು ಯಾರಿಗೆಲ್ಲಾ ಲಾಭ ಎಂಬ ಮಾಹಿತಿಯನ್ನು ತಿಳಿಯಿರಿ.

ಮೊದಲೇ ತಿಳಿಸಿದಂತೆ ಅಕ್ಟೋಬರ್ 2022 ರಲ್ಲಿ ಟ್ವಿಟ್ಟರ್ ಸ್ವಾಧೀನಪಡಿಸಿಕೊಂಡ ನಂತರ ಮಸ್ಕ್ ಟ್ವಿಟರ್‌ಗೆ ಹಲವಾರು ಬದಲಾವಣೆಗಳನ್ನು ಮಾಡಿದ್ದು, ಕೆಲವು ಗಮನಾರ್ಹ ಬದಲಾವಣೆಗಳೆಂದರೆ ಪಾವತಿಸಿದ ಚಂದಾದಾರಿಕೆ, ದೀರ್ಘ ಟ್ವೀಟ್‌ಗಳು, ಪಾವತಿಸುವ ಗ್ರಾಹಕರಿಗೆ ಟು-ಫ್ಯಾಕ್ಟರ್ ದೃಢೀಕರಣವನ್ನು ಆಯ್ಕೆ ನೀಡಲಾಗಿದೆ. ಇದರೊಂದಿಗೆ ಈಗ ಈ ಬಳಕೆದಾರರಿಗೆ ಪ್ಲಾಟ್‌ಫಾರ್ಮ್‌ನಲ್ಲಿ 3 ಗಂಟೆಗೂ ಹೆಚ್ಚಿನ ಅವಧಿಯ ವಿಡಿಯೋವನ್ನು ಅಪ್‌ಲೋಡ್ ಮಾಡಲು ಅನುಕೂಲ ಮಾಡಿಕೊಡಲಾಗುತ್ತಿದೆ.
ಟ್ವಿಟ್ಟರ್‌ನಲ್ಲೇ ಮಸ್ಕ್ ಅವರು ಅಮೇರಿಕನ್ ಹಾಸ್ಯನಟ ಮತ್ತು ಪಾಡ್‌ಕ್ಯಾಸ್ಟರ್ ಥಿಯೋ ವಾನ್ ಅವರ ವಿಡಿಯೋ ಪೋಸ್ಟ್‌ಗೆ ಉತ್ತರಿಸಿದ್ದು, ಈ ಪ್ಲಾಟ್‌ಫಾರ್ಮ್‌ನಲ್ಲಿ ಹಾಸ್ಯ ಕಾನೂನುಬದ್ಧವಾಗಿದೆ! ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಲೆಕ್ಸ್ ಫ್ರೈಡ್ ಮ್ಯಾನ್ 3+ ಗಂಟೆಗಳ ಪಾಡ್‌ಕ್ಯಾಸ್ಟ್ ವಿಡಿಯೋವನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗಿಸಿರುವುದು ಉತ್ತಮವಾಗಿದೆ ಎಂದಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ಮಸ್ಕ್ ಕಮಿಂಗ್ ಎಂದಷ್ಟೇ ಬರೆದಿದ್ದಾರೆ.
ಕಮಿಂಗ್ ಎಂಬುವುದಕ್ಕೆ ಉತ್ತರಿಸಲಾಗಿದ್ದು, ಧನ್ಯವಾದಗಳು ಎಲೋನ್! ನೀವು ಪಾಡ್‌ಕಾಸ್ಟ್‌ಗಳನ್ನು ಟ್ವಿಟ್ಟರ್‌ಗೆ ತರಲು ಸಿದ್ಧರಾದಾಗ ನನಗೆ ತಿಳಿಸಿ. ಸಹಾಯ ಮಾಡಲು ಸಂತೋಷವಾಗಿದೆ ಎಂದು ವಾನ್ ಬರೆದಿದ್ದಾರೆ. ಈ ವೇಳೆ ಹಲವಾರು ಬಳಕೆದಾರರು ತಮ್ಮದೇ ಆದ ಅಭಿಪ್ರಾಯಗಳನ್ನು ಹೊರಹಾಕಿದ್ದು, ಅದರಲ್ಲಿ ಓರ್ವ ಒಬ್ಬ ಬಳಕೆದಾರ, ನೀವು ಅಪ್‌ಲೋಡ್ ಮಾಡುವ ಸಮಯವನ್ನು ವೇಗವಾಗಿ ಮಾಡಬಹುದೇ....ನಾನು 5 ನಿಮಿಷಗಳ ವಿಡಿಯೋ ಅಪ್‌ಲೋಡ್ ಮಾಡಲು ಪ್ರಯತ್ನಿಸುತ್ತಿದ್ದೇನೆ ಮತ್ತು ಪೋಸ್ಟ್ ಮಾಡಲು ಇನ್ನೂ ಸಹ 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ.
ಈ ಸಂಬಾಷಣೆಗಳನ್ನು ಗಮನಿಸಲಾಗಿ ಇನ್ನೇನು ಕೆಲವೇ ದಿನಗಳಲ್ಲಿ ಬ್ಲೂಟಿಕ್ ಚಂದಾದಾರರು ಈ ದೀರ್ಘ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಹಾಗೂ ವೀಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಯೂಟ್ಯೂಬ್ ಹಾಗೂ ಫೇಸ್‌ಬುಕ್‌ನಲ್ಲಿ ಸಿನಿಮಾ ವೀಕ್ಷಣೆ ಮಾಡುವ ರೀತಿಯಲ್ಲೇ ಇನ್ಮುಂದೆ ಟ್ವಿಟ್ಟರ್‌ನಲ್ಲೂ ಸಹ ಸಿನಿಮಾ ವೀಕ್ಷಣೆ ಮಾಡಬಹುದು ಎಂದು ಊಹಿಸಲಾಗಿದೆ. ಆದರೆ, ಸಿನಿಮಾವನ್ನೂ ಇಲ್ಲಿ ಅಪ್‌ಲೋಡ್ ಮಾಡಬಹುದೇ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.

ಈ ಹಿಂದೆ ಬ್ಲೂ ಟಿಕ್ ಚಂದಾದಾರರು ಎರಡು ಗಂಟೆಗಳ ಅವಧಿಯ ಅಥವಾ ಹೆಚ್ಚಿನ ಗಾತ್ರದ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗಿತ್ತು. ಅಂದರೆ ಪಾವತಿಸಿದ ಬಳಕೆದಾರರಿಗೆ ವಿಡಿಯೋ ಫೈಲ್ ಗಾತ್ರದ ಮಿತಿಯನ್ನು 2GB ನಿಂದ 8GB ಗೆ ಹೆಚ್ಚಿಸಲಾಗಿತ್ತು. ಈ ನಡುವೆ ಇದೇ ವಿಭಾಗದಲ್ಲಿ ಈಗ ಮತ್ತೊಂದು ಮಹತ್ವದ ಬೆಳವಣಿಗೆ ಆಗುತ್ತಿದ್ದು, ಇದರಿಂದ ಹಲವಾರು ಬಳಕೆದಾರರಿಗೆ ಸಹಾಯ ಆಗಲಿದೆ ಎನ್ನಲಾಗಿದೆ.
ಈ ನಡುವೆ ಟ್ವಿಟ್ಟರ್‌ನಲ್ಲಿ ಮತ್ತೊಂದು ಬದಲಾವಣೆ ಆಗಿದೆ. ಅಂದರೆ ಈ ಮೊದಲು ಬಳಕೆದಾರರು ಎಷ್ಟು ಬೇಕಾದರೂ ಟ್ವೀಟ್‌ಗಳನ್ನು ವೀಕ್ಷಣೆ ಮಾಡಬಹುದಾಗಿತ್ತು. ಆದರೆ, ಇನ್ಮುಂದೆ ಅದಕ್ಕೂ ಮಿತಿ ಬಿದ್ದಿದೆ. ಈ ಬಗ್ಗೆ ಯಾವುದೇ ಘೋಷಣೆ ಮಾಡದ ಹಿನ್ನೆಲೆ ಟ್ವಿಟ್ಟರ್ ಬಳಕೆದಾರರು ಕೆಲಕಾಲ ಗೊಂದಲದಕ್ಕೆ ಒಳಗಾಗಿದ್ದರು. ಆನಂತರ ಈ ಸಮಸ್ಯೆ ಬಗ್ಗೆ ಮಸ್ಕ್ ಮಾಹಿತಿ ನೀಡಿದ್ದಾರೆ. ಹಾಗೆಯೇ ಇದು ತಾತ್ಕಾಲಿಕ ಕ್ರಮವಾಗಿದ್ದು, ಮುಂದೆ ಬದಲಾವಣೆ ಸಹ ಆಗಬಹುದು ಎಂದು ಹೇಳಿದ್ದಾರೆ.


Click it and Unblock the Notifications








