ಜನರಿಗೂ, ಟೆಲಿಕಾಂ ಕಂಪೆನಿಗಳಿಗೂ ಸಮಸ್ಯೆ ತಂದಿಟ್ಟ 'ಆಧಾರ್' ಪ್ರಾಧಿಕಾರದ ಸೂಚನೆ!!
ಮೊಬೈಲ್ ಸಿಮ್ ಖರೀದಿಸಲು ಅಥವಾ ಟೆಲಿಕಾಂ ಕಂಪೆನಿಗಳಿಗೆ ಆಧಾರ್ ನೀಡುವುದು ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಒಂದು ವಾರದ ಒಳಗಾಗಿಯೇ, ಜಿಯೋ, ಏರ್ಟೆಲ್, ವೊಡಾಫೋನ್, ಐಡಿಯಾ ಸೇರಿದಂತೆ ದೇಶದ ಎಲ್ಲಾ ಟೆಲಿಕಾಂ ಕಂಪೆನಿಗಳಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI)ವು ಆಧಾರ್ ಬಳಕೆ ಬಗ್ಗೆ ಸುತ್ತೋಲೆ ಹೊರಡಿಸಿದೆ.
ಸೆಕ್ಷನ್ 57ನ್ನು ರದ್ದುಗೊಳಿಸಿ ಬ್ಯಾಂಕ್ ಮತ್ತು ಟೆಲಿಕಾಂ ಕಂಪೆನಿಗಳಿಗೆ ಆಧಾರ್ ನೀಡುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಘೋಷಿಸಿದ ಕೇವಲ ಒಂದು ವಾರದಲ್ಲಿ ಆಧಾರ್ ಪ್ರಾಧಿಕಾರ ಟೆಲಿಕಾಂ ಕಂಪೆನಿಗಳಿಗೆ ಸುತ್ತೋಲೆ ನೀಡಿದೆ. 15 ದಿನಗಳೊಳಗಾಗಿ ಇ-ಕೆವೈಸಿಗೆ ಆಧಾರ್ ಮಾಹಿತಿ ಬಳಕೆ ಹೇಗೆ ನಿಲ್ಲಿಸುತ್ತೀರಾ ಎಂಬುದರ ಬಗ್ಗೆ ವರದಿ ನೀಡುವಂತೆ ಸೂಚಿಸಿದೆ.

2018ರ ಸಪ್ಟೆಂಬರ್ 26 ರಂದು ಸುಪ್ರೀಂನೀಡಿದ ತೀರ್ಪಿನ ಅನ್ವಯ ಎಲ್ಲಾ ಟೆಲಿಕಾಂ ಕಂಪೆನಿಗಳಿಗೆ ತಕ್ಷಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಎಲ್ಲಾ ಕಂಪೆನಿಗಳು ಆಧಾರ್ ಆಧಾರಿತ ದೃಢೀಕರಣ ವ್ಯವಸ್ಥೆಗಳ ಬಳಕೆಯನ್ನು ನಿಲ್ಲಿಸಲು ಯಾವ ರೀತಿ ಯೋಜನೆ ರೂಪಿಸಿಕೊಳ್ಳುತ್ತದೆ ಎಂಬುವುದನ್ನು ಅಕ್ಟೋಬರ್ 15ರೊಳಗೆ ತಿಳಿಸಬೇಕೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಕೇವಲ 15 ದಿನಗಳೊಳಗೆ ಸಿಮ್ ಖರೀದಿ ವೇಳೆ ಆಧಾರ್ ಬಳಕೆ ಹೇಗೆ ನಿಲ್ಲಿಸುತ್ತೀರಿ ಹಾಗೂ ಇದಕ್ಕೆ ಪರ್ಯಾಯವೇನು ಎಂಬ ವರದಿ ನೀಡಲು ಪ್ರಾಧಿಕಾರ ಸೂಚಿಸಿದ ನಂತರ ಟೆಲಿಕಾಂ ಕಂಪೆನಿಗಳಿಗೆ ಇದು ನುಂಗಲಾರದ ತುತ್ತಾಗಿದೆ. ಟೆಲಿಕಾಂ ಕಂಪೆನಿಗಳ ಜೊತೆಗೆ ಮೊಬೈಲ್ ಗ್ರಾಹಕರಿಗೂ ಸಹ ಸಮಸ್ಯೆ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.

ಇ-ಕೆವೈಸಿಗೆ ಆಧಾರ್ ಮಾಹಿತಿ ಬಳಕೆಗೆ ಪರ್ಯಾಯವಾಗಿ ಟೆಲಿಕಾಂ ಕಂಪೆನಿಗಳು ಹಳೆ ಮಾದರಿಗೆ ವಾಪಸ್ ತೆರಳುವ ಸೂಚನೆ ಕೂಡ ಲಭ್ಯವಾಗಿದೆ. ಒಂದು ವೇಳೆ ಹಾಗೇನಾದರೂ ಆದಲ್ಲಿ, ಈಗ ಇ-ಕೆವೈಸಿ ಮೂಲಕ ಸಿಮ್ ಖರೀದಿಸಿದವರು ಬೇರೊಂದು ದಾಖಲೆಯನ್ನು ನೀಡಿ ಆಧಾರ್ ಮಾಹಿತಿ ಅಳಿಸುವಂತೆ ಕೇಳಬಹುದು. ಆದರಿದು ಎಲ್ಲರಿಗೂ ತಲೆನೊವ್ವಿನ ಕೆಲಸ.
ಓದಿರಿ: ಸ್ಮಾರ್ಟ್‌ಫೋನ್ ಅನ್ನು ಶರ್ಟ್ ಜೇಬಿನಲ್ಲಿ ಇಟ್ಟುಕೊಂಡರೆ ಅಕಾಲಿಕ ಮರಣ ಸಾಧ್ಯತೆ!


Click it and Unblock the Notifications