ಆಧಾರ್‌ನಲ್ಲಿ ಬದಲಾವಣೆ: ಟಚ್‌ಲೆಸ್ ಬಯೋಮೆಟ್ರಿಕ್ ಕ್ಯಾಪ್ಚರ್ ಸಿಸ್ಟಮ್‌ಗೆ ಒಪ್ಪಂದ!
ಆಧಾರ್ ಕಾರ್ಡ್ ಇಂದು ಎಲ್ಲಾ ವಿಷಯದಲ್ಲೂ ಅಗತ್ಯವಾದ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಇದರಿಂದ ದೇಶದ ಜನರಿಗೆ ಸಾಕಷ್ಟು ಅನುಕೂಲ ಆಗುತ್ತಿದೆ. ಈ ನಡುವೆ ಆಧಾರ್ ಕಾರ್ಡ್ ಅನ್ನು ಪ್ಯಾನ್‌ಕಾರ್ಡ್‌ಗೆ ಲಿಂಕ್ ಮಾಡುವ ಪ್ರಕ್ರಿಯೆ ಜರುಗುತ್ತಿರುವಾಗಲೇ ಆಧಾರ್ ಬಳಕೆದಾರರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.
ಹೌದು, ಆಧಾರ್ ಸಂಬಂಧ ಟಚ್‌ಲೆಸ್ ಬಯೋಮೆಟ್ರಿಕ್ ಕ್ಯಾಪ್ಚರ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಲು ಐಐಟಿ ಬಾಂಬೆಯೊಂದಿಗೆ ಯುಐಡಿಎಐ ಪಾಲುದಾರಿಕೆ ಹೊಂದಿದೆ. ಈ ಮೂಲಕ ಇನ್ನೇನು ಕೆಲವೇ ತಿಂಗಳಲ್ಲಿ ಈ ವಿಶೇಷವಾದ ಸೇವೆ ದೇಶದ ಜನರಿಗೆ ಲಭ್ಯವಾಗಲಿದೆ. ಹಾಗಿದ್ರೆ, ಏನಿದು ಟಚ್‌ಲೆಸ್ ಬಯೋಮೆಟ್ರಿಕ್ ಕ್ಯಾಪ್ಚರ್ ಸಿಸ್ಟಮ್, ಆಧಾರ್ ಬಳಕೆದಾರರಿಗೆ ಇದರಿಂದ ಪ್ರಯೋಜನ ಏನು? ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

IIT ಬಾಂಬೆ ಜೊತೆಗೆ UIDAI ಪಾಲುದಾರಿಕೆ : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (IIT ಬಾಂಬೆ) ಟಚ್‌ಲೆಸ್ ಬಯೋಮೆಟ್ರಿಕ್ ಕ್ಯಾಪ್ಚರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮೂಲಕ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಸುಲಭವಾಗಿ ಆಧಾರ್ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಐಐಟಿ ಬಾಂಬೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಜಂಟಿ ಉಪಕ್ರಮವಾದ ಆಂತರಿಕ ಭದ್ರತೆಗಾಗಿ ತಂತ್ರಜ್ಞಾನದ ರಾಷ್ಟ್ರೀಯ ಕೇಂದ್ರ (NCETIS) ಈ ವ್ಯವಸ್ಥೆಗಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಮುನ್ನಡೆಸುತ್ತದೆ. ಇನ್ನು ಈ NCETIS ಭಾರತದ ಆಂತರಿಕ ಭದ್ರತಾ ಪಡೆಗಳ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಎಲೆಕ್ಟ್ರಾನಿಕ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆಗೆ ತಂತ್ರಜ್ಞಾನ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತದೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಈ ಸಂಬಂಧ ಮಾಹಿತಿ ನೀಡಿದ್ದು, ಟಚ್‌ಲೆಸ್ ಬಯೋಮೆಟ್ರಿಕ್ ಕ್ಯಾಪ್ಚರ್ ಸಿಸ್ಟಮ್‌ನಲ್ಲಿ ಯುಐಡಿಎಐ ಮತ್ತು ಐಐಟಿ ಬಾಂಬೆ ಒಟ್ಟಾಗಿ ಕೆಲಸ ಮಾಡಲಿದೆ ಎಂದು ಎಂದು ತಿಳಿಸಿದೆ. ಅಂದರೆ ಫಿಂಗರ್‌ಪ್ರಿಂಟ್‌ಗಾಗಿ ಮೊಬೈಲ್ ಕ್ಯಾಪ್ಚರ್ ಸಿಸ್ಟಮ್‌ನೊಂದಿಗೆ ಸಂಯೋಜಿತವಾದ ಲೈವ್‌ನೆಸ್ ಮಾದರಿಯನ್ನು ರಚಿಸಲು ಯುಐಡಿಎಐ ಮತ್ತು ಐಐಟಿ ಬಾಂಬೆ ಜಂಟಿ ಸಂಶೋಧನೆ ನಡೆಸುತ್ತವೆ ಎಂದು ಉಲ್ಲೇಖಿಸಲಾಗಿದೆ.

ಇದರಿಂದ ಪ್ರಯೋಜನ ಏನು?: ಈ ಹೊಸ ವ್ಯವಸ್ಥೆಯಿಂದ ಮನೆಯಿಂದಲೇ ಫಿಂಗರ್‌ಪ್ರಿಂಟ್ ದೃಢೀಕರಣವನ್ನು ಅನುಮತಿಸಲಾಗುತ್ತದೆ. ಅಂದರೆ, ಈ ಟಚ್‌ಲೆಸ್ ಬಯೋಮೆಟ್ರಿಕ್ ಕ್ಯಾಪ್ಚರ್ ಸಿಸ್ಟಂಗಳು ಒಮ್ಮೆ ಅಭಿವೃದ್ಧಿಪಡಿಸಿದ ಮತ್ತು ಕಾರ್ಯಾಚರಣೆಯಾದರೆ ಮುಖದ ದೃಢೀಕರಣದಂತೆಯೇ ಮನೆಯಿಂದಲೇ ಫಿಂಗರ್‌ಪ್ರಿಂಟ್ ದೃಢೀಕರಣವನ್ನು ಅನುಮತಿಸುತ್ತದೆ. ಹೊಸ ವ್ಯವಸ್ಥೆಯು ಒಂದೇ ಬಾರಿಗೆ ಅನೇಕ ಫಿಂಗರ್‌ಪ್ರಿಂಟ್‌ಗಳನ್ನು ಸೆರೆಹಿಡಿಯುತ್ತದೆ.
ಆಧಾರ್‌ನ ಭದ್ರತೆ ಮತ್ತು ಇದಕ್ಕೆ ಪ್ರವೇಶವನ್ನು ಹೆಚ್ಚಿಸಲು ಯುಐಡಿಎಐ ಕೃತಕ ಬುದ್ಧಿಮತ್ತೆ (AI) ಆಧಾರಿತ ಹೊಸ ಭದ್ರತಾ ಕಾರ್ಯವಿಧಾನವನ್ನು ಒಳಗೊಂಡಂತೆ ಹೊಸ ಫೀಚರ್ಸ್‌ಗಳು ಮತ್ತು ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ. ಈ AI ಆಧಾರಿತ ಕಾರ್ಯವಿಧಾನವು ಆಧಾರ್ ಆಧಾರಿತ ಫಿಂಗರ್‌ಪ್ರಿಂಟ್ ದೃಢೀಕರಣದ ಸಮಯದಲ್ಲಿ ವಂಚನೆಯ ಪ್ರಯತ್ನಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ.

ಮೂಲಗಳ ಪ್ರಕಾರ, ಪ್ರತಿದಿನ ಮಿಲಿಯನ್‌ಗಟ್ಟಲೆ ಜನರು ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಐರಿಸ್, ಫಿಂಗರ್‌ಪ್ರಿಂಟ್, ಫೋಟೋ ನವೀಕರಣಕ್ಕಾಗಿ ಅರ್ಜಿ ಸಲ್ಲಿಕೆ ಮಾಡುತ್ತಾರೆ. ಇದು ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲಿ ಡಿಸೆಂಬರ್ 2022 ರ ವೇಳೆಗೆ ಈ ರೀತಿ ಅರ್ಜಿ ಸಲ್ಲಿಕೆ ಮಾಡಿದವರ ಸಂಖ್ಯೆ ಬರೋಬ್ಬರಿ 88.29 ಶತಕೋಟಿ ದಾಟಿದೆಯಂತೆ. ಆದರೆ, ಈ ಹೊಸ ವ್ಯವಸ್ಥೆ ಜಾರಿಗೆ ಬಂದರೆ ಇವೆಲ್ಲಾ ಸುಲಭವಾದ ಕೆಲಸಗಳಾಗಲಿವೆ.


Click it and Unblock the Notifications








