ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ವಾಟ್ಸಾಪ್‌ನಲ್ಲಿ ಎಂದಿಗೂ ಈ ಕೆಲಸ ಮಾಡಬೇಡಿ!
ಆಧಾರ್ ಕಾರ್ಡ್ (Aadhaar Card) ಇಂದು ಅತ್ಯಗತ್ಯ ದಾಖಲೆ ಆಗಿದ್ದು, ಈ ಮೂಲಕ ಜನರು ಸರ್ಕಾರಿ ಸೇವೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಬ್ಯಾಂಕಿಂಗ್ ವ್ಯವಹಾರಗಳಿಗೆ ಇದು ಅತ್ಯಗತ್ಯ ದಾಖಲೆ ಆಗಿದೆ. ಈ ನಡುವೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ದೇಶದ ಜನರಿಗೆ ಎಚ್ಚರಿಕೆಯೊಂದನ್ನು ನೀಡಿದೆ.
ಹೌದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸುವ ಉದ್ದೇಶಕ್ಕಾಗಿ ಇಮೇಲ್ ಅಥವಾ ವಾಟ್ಸಾಪ್ ಮೂಲಕ ಗುರುತಿನ ಅಥವಾ ವಿಳಾಸ ಪುರಾವೆ ದಾಖಲೆಗಳನ್ನು ಹಂಚಿಕೊಳ್ಳಬೇಡಿ ಎಂದು ತಿಳಿಸಿದೆ. ಹಾಗಿದ್ರೆ, ಯಾಕೆ ಈ ಎಚ್ಚರಿಕೆ ನೀಡಿದೆ. ನೀವೇ ಆನ್‌ಲೈನ್‌ನಲ್ಲಿ ಸುಲಭವಾಗಿ ಅಪ್‌ಡೇಟ್ ಮಾಡುವುದು ಹೇಗೆ ಎಂಬಿತ್ಯಾದಿ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ದೇಶದ ಜನರಿಗೆ ಎಚ್ಚರಿಕೆ ನೀಡಿದ UIDAI: 'ನಿಮ್ಮ ಆಧಾರ್ ಅನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ನವೀಕರಿಸಲು ನಿಮ್ಮ POI/POA ದಾಖಲೆಗಳನ್ನು ಹಂಚಿಕೊಳ್ಳಲು UIDAI ನಿಮ್ಮನ್ನು ಎಂದಿಗೂ ಕೇಳುವುದಿಲ್ಲ. ಮೈ ಆಧಾರ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್ ಅನ್ನು ಅಪ್‌ಡೇಟ್ ಮಾಡಿ ಅಥವಾ ನಿಮ್ಮ ಸಮೀಪದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ' ಎಂದು ಎಕ್ಸ್ ನಲ್ಲಿ UIDAI ಪೋಸ್ಟ್ ಮಾಡಿದೆ.

ಇನ್ನು ಈ ವಿಷಯ ಈಗ ಮುನ್ನೆಲೆಗೆ ಬರಲು ಪ್ರಮುಖ ಕಾರಣ ಏನೆಂದರೆ ಯಾರೆಲ್ಲಾ ಆಧಾರ್ ಕಾರ್ಡ್ ಪಡೆದು ಹತ್ತು ವರ್ಷ ಆಗಿದೆಯೋ ಅವರು ನವೀಕರಣ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಅಂದರೆ ಇದರಲ್ಲಿ ವಿಳಾಸ, ಹೆಸರು ಹಾಗೂ ಇನ್ನಿತರೆ ಅಗತ್ಯ ಮಾಹಿತಿಯನ್ನು ಉಚಿತವಾಗಿ ಅಪ್‌ಡೇಟ್ ಮಾಡಿಕೊಳ್ಳಬಹುದು. ಈ ವೇಳೆ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ (PoI/PoA) ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದ್ದು, ಇದನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಕಾರಣಕ್ಕೆ ಎಚ್ಚರಿಕೆ ನೀಡಲಾಗಿದೆ.
ಆಧಾರ್‌ನಲ್ಲಿ ವಿಳಾಸವನ್ನು ಹೇಗೆ ನವೀಕರಿಸುವುದು?:
- ಮೊದಲು ನೀವು ಅಧಿಕೃತ ಸೈಟ್‌ಗೆ ಭೇಟಿ ನೀಡಬೇಕಿದೆ. ಇದಕ್ಕಾಗಿ ನೀವು https://www.uidai.gov.in/ ಲಿಂಕ್ ಅನ್ನು ಬಳಕೆ ಮಾಡಿಕೊಳ್ಳಬಹುದು.
- ಇದಾದ ನಂತರ 'ನನ್ನ ಆಧಾರ್' (My Aadhaar)ಮೆನು ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮ್ಮ ಆಧಾರ್ ಅನ್ನು ನವೀಕರಿಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.
- ಇಲ್ಲಿ ಕಾಣಿಸಿಕೊಳ್ಳುವ ಆಯ್ಕೆಗಳ ಪಟ್ಟಿಯಿಂದ ಆನ್‌ಲೈನ್‌ನಲ್ಲಿ ಜನಸಂಖ್ಯಾ ಡೇಟಾವನ್ನು ನವೀಕರಿಸಿ ಎಂಬ ಮತ್ತೊಂದು ಆಯ್ಕೆ ಮೇಲೆ ಟ್ಯಾಪ್ ಮಾಡಿ.
- ಇಷ್ಟು ಮಾಡಿದ ಮೇಲೆ ಆಧಾರ್ ಕಾರ್ಡ್ ಸ್ವಯಂ ಸೇವಾ ಪೋರ್ಟಲ್‌ಗಾಗಿ ಮರುವಿನ್ಯಾಸಗೊಳಿಸಲಾದ ಇಂಟರ್ಫೇಸ್ ನಿಮ್ಮ ಡಿಸ್‌ಪ್ಲೇನಲ್ಲಿ ಕಾಣಿಸಿಕೊಳ್ಳುತ್ತದೆ.
- ಈ ವೇಳೆ ನೀವು 'ಆಧಾರ್ ಅನ್ನು ನವೀಕರಿಸಲು ಮುಂದುವರಿಯಿರಿ' ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಬೇಕು.
- ಇದಾದ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಪರಿಶೀಲನೆಯನ್ನು ಪೂರ್ಣಗೊಳಿಸಿ.

- ಬಳಿಕ ನೀವು OTP ಕಳುಹಿಸಿ ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿದರೆ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
- OTP ಪರಿಶೀಲನೆಯ ನಂತರ ಅಪ್‌ಡೇಟ್ ಡೆಮೊಗ್ರಾಫಿಕ್ಸ್ ಡೇಟಾ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- ಇಷ್ಟೆಲ್ಲಾ ಆದ ಮೇಲೆ ಈಗ ಬದಲಾವಣೆಗಳನ್ನು ಮಾಡಲು ವಿಳಾಸ ಎಂಬ ವಿಭಾಗದ ಮೇಲೆ ಟ್ಯಾಪ್ ಮಾಡಿ ಮತ್ತು ಹೊಸ ವಿಳಾಸದ ಮಾಹಿತಿಯನ್ನು ಅಲ್ಲಿ ಎಂಟ್ರಿ ಮಾಡಿ.
- ಈ ವೇಳೆ ನೀವು ಪೋಷಕ ದಾಖಲೆ ಪುರಾವೆಯನ್ನು ಸ್ಕ್ಯಾನ್ ಮಾಡಿದ ಪ್ರತಿಯಾಗಿ ಅಪ್‌ಲೋಡ್ ಮಾಡಬೇಕು. ಇದಾದ ನಂತರ ಅಲ್ಲೇ ಕಾಣಿಸಿಕೊಳ್ಳುವ ಮುಂದುವರಿಯಿರಿ ಎಂಬುದರ ಮೇಲೆ ಟ್ಯಾಪ್ ಮಾಡಿ.
- ಈ ಸೇವೆಯನ್ನು ಮೌಲ್ಯೀಕರಿಸಲು OTP ಕೇಳುತ್ತದೆ. ಇದೆಲ್ಲಾ ಆದ ಮೇಲೆ URN ಬಳಸಿಕೊಂಡು ವಿಳಾಸ ನವೀಕರಣಗಳ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಿ.
ನವೀಕರಣ ವಿನಂತಿಯನ್ನು ಈ ರೀತಿ ಟ್ರ್ಯಾಕ್ ಮಾಡಿ:
ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸಲು ವಿನಂತಿಯನ್ನು ಸಲ್ಲಿಸಿದ ಬಳಿಕ ನೀವು URN (ಅಪ್‌ಡೇಟ್ ವಿನಂತಿ ಸಂಖ್ಯೆ) ಅನ್ನು ಸ್ವೀಕಾರ ಮಾಡುತ್ತೀರಿ. ಈ URN ಸಂಖ್ಯೆಯನ್ನು ಬಳಕೆ ಮಾಡಿಕೊಂಡು ನಿಮ್ಮ ಅರ್ಜಿಯ ಸ್ಥಿತಿ ಯಾವ ಹಂತದಲ್ಲಿದೆ ಎಂದು ಕಂಡುಕೊಳ್ಳಬಹುದು. ಇದಕ್ಕಾಗಿ ನೀವು https://ssup.uidai.gov.in/checkSSUPStatus/checkupdatestatus ಲಿಂಕ್ ಅನ್ನು ಬಳಕೆ ಮಾಡಿಕೊಳ್ಳಬಹುದು.


Click it and Unblock the Notifications








