Smartphone ban: ಉತ್ತಮ ನಿರ್ಧಾರ... ಎಲ್ಲಾ ಶಾಲೆಗಳಾದ್ಯಂತ ಮೊಬೈಲ್ ಫೋನ್ ನಿಷೇಧ!
ಸ್ಮಾರ್ಟ್‌ಫೋನ್ (Smartphone) ಬಳಕೆ ವ್ಯಾಪಕವಾಗುತ್ತಿದ್ದಂತೆ ಅದರಿಂದ ಕೆಲವು ಸಮಸ್ಯೆಗಳು ಸಹ ಉಂಟಾಗುತ್ತಿವೆ. ಅದರಲ್ಲೂ ಫೋನ್‌ಗಳು ಮಕ್ಕಳ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಲಿದ್ದು, ಇದಕ್ಕೆ ಕಡಿವಾಣ ಹಾಕಲೆಂದು ಎಲ್ಲಾ ಶಾಲೆಗಳಾದ್ಯಂತ ಮೊಬೈಲ್ ಫೋನ್ ನಿಷೇಧ ಮಾಡಿ ಆದೇಶ ನೀಡಲಾಗಿದೆ.
ಹೌದು, ಜಾಗತಿಕವಾಗಿ ಸ್ಮಾರ್ಟ್‌ಫೋನ್ ಇಂದು ಎಲ್ಲಾ ರೀತಿಯಲ್ಲೂ ಬಳಕೆ ಆಗುತ್ತಿದೆ. ಅದರಲ್ಲೂ ಕೊರೊನಾ ನಂತರ ಶಾಲಾ ಮಕ್ಕಳು ಸಹ ಸ್ಮಾರ್ಟ್‌ಫೋನ್ ಬಳಕೆ ಮಾಡುವ ಅನಿವಾರ್ಯತೆ ಉಂಟಾಗಿತ್ತು. ಆದರೆ, ಆ ಬೆಳವಣಿಗೆ ಇಂದು ರೂಢಿಯಾಗಿ ಮುಂದುವರೆದಿದ್ದು, ಇದರಿಂದ ಮಕ್ಕಳ ಮಾನಸಿಕ ಹಾಗೂ ಶೈಕ್ಷಣಿಕ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎನ್ನಲಾಗಿದೆ. ಇದೇ ಕಾರಣಕ್ಕೆ ಈಗ ಈ ರಾಷ್ಟ್ರದಲ್ಲಿ ಮೊಬೈಲ್ ನಿಷೇಧ ಮಾಡಲಾಗುತ್ತಿದೆ. ಹಾಗಿದ್ರೆ, ಈ ನಿರ್ಧಾರ ಮಾಡಿರುವುದು ಎಲ್ಲಿ?, ಇದರಿಂದ ಮಕ್ಕಳಿಗೆ ಏನೆಲ್ಲಾ ಪ್ರಯೋಜನ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮೊಬೈಲ್ ಫೋನ್ ನಿಷೇಧ: ಫ್ರಾನ್ಸ್, ಇಟಲಿ ಮತ್ತು ಪೋರ್ಚುಗಲ್ ಸೇರಿದಂತೆ ಮೊಬೈಲ್ ಫೋನ್ ಬಳಕೆಯನ್ನು ನಿರ್ಬಂಧಿಸಿರುವ ಇತರ ಯುರೋಪಿಯನ್ ರಾಷ್ಟ್ರಗಳು ತೆಗೆದುಕೊಂಡ ಕ್ರಮಗಳಿಗೆ ಅನುಗುಣವಾಗಿ ಇಂಗ್ಲೆಂಡ್ ಸಹ ಈ ಕ್ರಮ ತೆಗೆದುಕೊಂಡಿದೆ. ಅಂದರೆ ಯುಕೆ ಪ್ರಧಾನಿ ರಿಷಿ ಸುನಕ್ (UK Prime Minister Rishi Sunak) ಇಂಗ್ಲೆಂಡ್‌ನ ಎಲ್ಲಾ ಶಾಲೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ನಿಷೇಧಿಸಿದ್ದಾರೆ.
ಸುನಕ್ ಅವರು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಸಂಬಂಧ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು. ಸೆಕೆಂಡರಿ ಶಾಲೆಯ ಸುಮಾರು ಮೂರನೇ ಒಂದು ಭಾಗದಷ್ಟು ಮಕ್ಕಳು ತಮ್ಮ ಫೋನ್‌ನಿಂದಾಗಿ ಪಾಠ ಆಲಿಸುವಲ್ಲಿ ಸಮಸ್ಯೆ ಎದುರಿಸಿದ್ದಾರೆ ಎಂದಿದ್ದಾರೆ. ಈಗಾಗಲೇ ತಮ್ಮ ಕ್ಯಾಂಪಸ್‌ಗಳಲ್ಲಿ ಮೊಬೈಲ್ ಫೋನ್‌ಗಳನ್ನು ನಿಷೇಧಿಸಿರುವ ಶಾಲೆಗಳು ಉತ್ತಮ ಕಲಿಕೆ ವಾತಾವರಣಕ್ಕೆ ಸಾಕ್ಷಿಯಾಗಿವೆ.
ಇನ್ನು ಇಂಗ್ಲೆಂಡಿನಲ್ಲಿ ಸರ್ಕಾರದ ಮಾರ್ಗದರ್ಶನದಲ್ಲಿ ಉಲ್ಲೇಖ ಮಾಡಿದಂತೆ, ಮುಖ್ಯ ಶಿಕ್ಷಕರು ವಿರಾಮದ ಸಮಯ ಸೇರಿದಂತೆ ಶಾಲಾ ಸಮಯದಲ್ಲಿ ದಿನವಿಡೀ ಮೊಬೈಲ್ ಫೋನ್‌ಗಳ ಬಳಕೆಯನ್ನು ಮೇಲ್ವಿಚಾರಣೆ ಮಾಡುವ ಕೆಲಸ ಮಾಡುತ್ತಾರೆ. ಯುಕೆಯ ಸುತ್ತಮುತ್ತಲಿನ ಅನೇಕ ಶಾಲೆಗಳು ಈಗಾಗಲೇ ಉತ್ತಮ ಫಲಿತಾಂಶ ಪಡೆಯುವುದರ ಜೊತೆಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವ ಕೆಲಸ ಮಾಡುತ್ತಿವೆ.

ಹಾಗೆಯೇ ಈ ಹೊಸ ಮಾರ್ಗದರ್ಶನದಲ್ಲಿ ಉಲ್ಲೇಖ ಮಾಡಿದಂತೆ. ಎಲ್ಲಾ ಶಾಲೆಗಳಲ್ಲಿ ಸ್ಥಿರವಾದ ವಿಧಾನವನ್ನು ಖಚಿತಪಡಿಸುತ್ತದೆ. ಶಾಲೆಯ ಆವರಣದಿಂದ ಫೋನ್‌ಗಳನ್ನು ನಿಷೇಧಿಸುವುದು, ಶಾಲೆಗೆ ಬಂದ ನಂತರ ಫೋನ್‌ಗಳನ್ನು ಹಸ್ತಾಂತರಿಸುವುದು ಮತ್ತು ಫೋನ್‌ಗಳನ್ನು ಶಾಲೆಯಲ್ಲಿ ಸುರಕ್ಷಿತವಾಗಿ ಲಾಕ್ ಮಾಡಿ ಇಡುವುದನ್ನು ಈ ಆದೇಶದಲ್ಲಿ ತಿಳಿಸಲಾಗಿದೆ.
ಯುಕೆ ಮಾಧ್ಯಮ ವಾಚ್‌ಡಾಗ್ ಆಫೀಸ್ ಆಫ್ ಕಮ್ಯುನಿಕೇಷನ್ಸ್ (OFCOM) ಈ ಸಂಬಂಧ ವರದಿ ಮಾಡಿದ್ದು, ಹನ್ನೆರಡು ವರ್ಷ ವಯಸ್ಸಿನ 97 ಪ್ರತಿಶತ ಮಕ್ಕಳು ತಮ್ಮದೇ ಆದ ಮೊಬೈಲ್ ಫೋನ್‌ಗಳನ್ನು ಹೊಂದಿದ್ದಾರೆ. ಶಾಲೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡುವುದರಿಂದ ಆನ್‌ಲೈನ್ ಬೆದರಿಕೆ, ವ್ಯಾಕುಲತೆ ಮತ್ತು ತರಗತಿಗೆ ಅಡಚಣೆ (Online bullying, distraction and classroom disruption) ಸಂಬಂಧಿಸಿದಂತೆ ವಿವಿಧ ರೀತಿಯ ಸಮಸ್ಯೆಳಿಗೆ ಕಾರಣವಾಗಬಹುದು ಎಂದು ಹೇಳಿದೆ.
ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ತರಗತಿಗಳಲ್ಲಿ ಮೊಬೈಲ್ ಫೋನ್‌ಗಳನ್ನು ನಿಷೇಧಿಸುವ ಸರ್ಕಾರದ ಹೊಸ ನೀತಿಯನ್ನು ಬೆಂಬಲಿಸುತ್ತಾ ಸುರಕ್ಷಿತ ಮತ್ತು ಹೆಚ್ಚು ಕೇಂದ್ರೀಕೃತ ಕಲಿಕೆಯ ವಾತಾವರಣವನ್ನು ಸೃಷ್ಟಿಸುವುದು ಇದರ ಗುರಿಯಾಗಿದೆ. ಫೆಬ್ರವರಿ 19 ಅಂದರೆ ಸೋಮವಾರದಂದು ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ಮಾರ್ಗದರ್ಶನವು ದೇಶದಾದ್ಯಂತ ಸ್ಥಿರವಾದ ವಿಧಾನವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.
ಶಾಲಾ ಮಕ್ಕಳು ಸ್ಮಾರ್ಟ್‌ಫೋನ್ ಬಳಕೆ ಮಾಡಿದ್ರೆ ಆಗುವ ಅನಾನುಕೂಲಗಳೇನು?: ಮೊದಲೇ ತಿಳಿಸಿದಂತೆ ಎಲ್ಲಾ ಕಡೆ ಈ ಸಮಸ್ಯೆಗಳಿವೆ. ಇದರಿಂದ ಪೋಷಕರು ಸಹ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇರುವುದನ್ನು ಕಾಣಬಹುದು. ಅದರಲ್ಲೂ ನಮ್ಮ ದೇಶದಲ್ಲಿ ಹಾಲು ಕುಡಿಯುವ ಮಕ್ಕಳು ಸಹ ಫೋನ್‌ಗೆ ಅಡಿಕ್ಟ್ ಆಗಿದ್ದಾರೆ. ಹಾಗಿದ್ರೆ, ಶಾಲಾ ಮಕ್ಕಳು ಸ್ಮಾರ್ಟ್‌ಫೋನ್ ಬಳಕೆ ಮಾಡಿದ್ರೆ ಆಗುವ ಸಾಮಾನ್ಯ ಸಮಸ್ಯೆಗಳು ಏನು ಅನ್ನೋದನ್ನು ತಿಳಿಸಿಕೊಡಲಾಗಿದೆ ಓದಿರಿ.
ವ್ಯಾಕುಲತೆ: ಸ್ಮಾರ್ಟ್‌ಫೋನ್‌ಗಳು ಶಾಲಾ ಮಕ್ಕಳಿಗೆ ಪ್ರಮುಖ ಅಡ್ಡಿಯಾಗಬಹುದು. ಅಂದರೆ ಸಾಮಾಜಿಕ ಮಾಧ್ಯಮವನ್ನು ಪ್ರವೇಶಿಸಲು, ಗೇಮ್‌ಗಳನ್ನು ಆಡಲು ಮತ್ತು ವಿಡಿಯೋಗಳನ್ನು ವೀಕ್ಷಿಸಲು ಅವುಗಳನ್ನು ಬಳಕೆ ಮಾಡಲಾಗುತ್ತದೆ. ಇದರಿಂದ ಮಕ್ಕಳು ತರಗತಿಯಲ್ಲಿ ಗಮನ ಹರಿಸದೇ ಹೋಮ್‌ವರ್ಕ್ ಮಾಡದೇ ಇರಬಹುದು.
ಸೈಬರ್ ಬೆದರಿಕೆ: ಮಕ್ಕಳು ಸ್ಮಾರ್ಟ್‌ಫೋನ್ ಬಳಕೆ ಮಾಡುವಾದ ಸೈಬರ್ ಬೆದರಿಕೆಗೂ ಒಳಗಾಗಬಹುದಾಗಿದೆ. ಬಲಿಪಶುಗಳಿಗೆ ಕಿರುಕುಳ ನೀಡಲು ಮತ್ತು ಬೆದರಿಸಲು ಸಾಮಾಜಿಕ ಮಾಧ್ಯಮ ಮತ್ತು ಟೆಕ್ಸ್ಟ್ ಮೆಸೆಜ್‌ಗಳನ್ನು ಕಳುಹಿಸಲಾಗುತ್ತದೆ. ಇದು ಬಲಿಪಶುವಿನ ಮಾನಸಿಕ ಆರೋಗ್ಯ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ನಿದ್ರಾ ಭಂಗ: ಮಲಗುವ ಮುನ್ನ ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಸ್ಮಾರ್ಟ್‌ಫೋನ್‌ಗಳಿಂದ ಹೊರಸೂಸುವ ನೀಲಿ ಬೆಳಕು ನಿದ್ರೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ. ಇದರಿಂದ ಮಕ್ಕಳು ಸಾಕಷ್ಟು ನಿದ್ದೆ ಮಾಡದೇ ಇರುವುದು, ಅವರ ಮನಸ್ಥಿತಿ, ಏಕಾಗ್ರತೆ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು.
ವ್ಯಸನ: ಸ್ಮಾರ್ಟ್‌ಫೋನ್‌ಗಳು ವ್ಯಸನಕಾರಿಯಾಗಬಹುದು. ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳು ಅವುಗಳನ್ನು ಬಳಸದೇ ಇದ್ದಾಗ ಬೇರೆ ರೀತಿಯಲ್ಲೇ ವರ್ತನೆ ತೋರಲು ಮುಂದಾಗುತ್ತಾರೆ.ಇದು ಸಂಬಂಧಗಳು, ಶಾಲೆ ಮತ್ತು ಇತರ ಚಟುವಟಿಕೆಗಳೊಂದಿಗೆ ಭಾಗಿಯಾಗಲು ಸಮಸ್ಯೆ ಉಂಟು ಮಾಡಬಹುದು.


Click it and Unblock the Notifications








