ಕೇಂದ್ರ ಬಜೆಟ್ 2020 ಮುಖ್ಯಾಂಶಗಳು: ತಂತ್ರಜ್ಞಾನ ವಲಯಕ್ಕೆ ಸಿಕ್ಕ ಗಿಫ್ಟ್ ಏನು?
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೇಂದ್ರ ಬಜೆಟ್ 2020 ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡನೇ ಬಾರಿಗೆ ಬಜೆಟ್ ಮಂಡಿಸಿದರು. ಭಾರತದ ಆಕಾಂಕ್ಷೆ, ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಕಾಳಜಿ ಮೂಲಸೂತ್ರಗಳ ಈ ಬಾರಿಯ ಬಜೆಟ್ ಹೊಂದಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದ ವೇಳೆ ಹೇಳಿದ್ದಾರೆ.

ಕೇಂದ್ರ ಬಜೆಟ್ 2020ರಲ್ಲಿ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಭಾರತದ ತಂತ್ರಜ್ಞಾನ ವಲಯಕ್ಕೆ ಹೊಸ ಭರವಸೆಗಳನ್ನು ಮೂಡಿಸಿದ್ದಾರೆ, ಮೊಬೈಲ್, ಇಂಟರ್ನೆಟ್, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆ, ಇಂಟರ್ನೆಟ್ ಆಧಾರಿತ ಡಿವೈಸ್‌ಗಳು ಸೇರಿದಂತೆ ವಲಯದಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಬಜೆಟ್ ಭಾಷಣದಲ್ಲಿ ತಂತ್ರಜ್ಞಾನ ವಲಯಕ್ಕೆ ಘೋಷಣೆ ಮಾಡಿರುವ ಪ್ರಮುಖ ಯೋಜನೆಗಳ ಹೈಲೈಟ್ಸ್ ತಿಳಿಯಲು ಮುಂದೆ ಓದಿರಿ.

ಗ್ರಾಮ ಪಂಚಾಯತಿಗಳಿಗೆ ಇಂಟರ್ನೆಟ್
ಸದ್ಯ ಪ್ರತಿ ಕೆಲಸವು ಇಂಟರ್ನೆಟ್ ಆಧಾರಿತವಾಗಿದ್ದು, ಎಲ್ಲ ವಲಯದಗಳಲ್ಲಿಯೂ ತಂತ್ರಜ್ಞಾನದ ಬಳಕೆಗೆ ಇಂಟರ್ನೆಟ್ ಅಗತ್ಯವು ಆಗಿದೆ. ಈ ನಿಟ್ಟಿನಲ್ಲಿ 2021ರಲ್ಲಿ ಭಾರತದ 1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದ ಭಾರತ್‌ನೆಟ್ ಬ್ರಾಡ್‌ಬ್ಯಾಂಡ್ ಸಂಪರ್ಕ ಮಾಡುವ ಯೋಜನೆಯನ್ನು ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್
ಮಕ್ಕಳ ಮತ್ತು ಮಹಿಳೆಯರ ನ್ಯೂಟ್ರಿಶನ್ ಪ್ರಮಾಣದ ಸ್ಥಿತಿಗತಿಯ ಮಾಹಿತಿಯನ್ನು ಡಿಜಿಟಲ್ ಆಗಿ ಅಪ್‌ಲೋಡ್ ಮಾಡುವ ಯೋಜನೆ ಮಾಡಲಿದೆ. ಈ ಕಾರ್ಯಕ್ಕಾಗಿ ಸುಮಾರು 6 ಲಕ್ಷಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ನೀಡುವ ಯೋಜನೆ ಇದೆ ಎಂದಿದ್ದಾರೆ.

ಭಾರತ್‌ನೆಟ್ ಬ್ರಾಡ್‌ಬ್ಯಾಂಡ್
ದೇಶದಲ್ಲಿ ಪೋಲಿಸ್ ಇಲಾಖೆ, ಅಂಚೆ ಕಛೇರಿ, ಪಂಚಾಯಿತಿ, ಸೇರಿದಂತೆ ಎಲ್ಲ ಸೇವಾ ವಲಯದಗಳಲ್ಲಿ ಇಂಟರ್ನೆಟ್ ಒದಗಿಸುವ ಯೋಜನೆ ಇದೆ. ಇದಕ್ಕಾಗಿ ಭಾರತ್‌ನೆಟ್ ಬ್ರಾಡ್‌ಬ್ಯಾಂಡ್ ಜಾರಿಮಾಡಲಿದ್ದು, ಈ ಯೋಜನೆಗೆ 6000 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ.

ಸ್ಮಾರ್ಟ್‌ಫೋನ್ ಉತ್ಪಾದನೆಗೆ ಉತ್ತೇಜನ
ದೇಶದಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನೆ, ಎಲೆಕ್ಟ್ರಾನಿಕ್ಸ್ ಉಪಕರಣಗಳ ಉತ್ಪದನೆಗೆ ಹೆಚ್ಚಿನ ಒತ್ತು ನೀಡುವ ಯೋಜನೆಗಳು ಇವೆ ಎಂದಿದ್ದಾರೆ. ಹಾಗೆಯೆ ಸೆಮಿಕಂಡಕ್ಟರ್ ಪ್ಯಾಕಿಂಗ್ ಉತ್ತೇಜನೆ ನೀಡುವುದಾಗಿದೆ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಕ್ವಾಂಟಮ್ ತಂತ್ರಜ್ಞಾನ
ದೇಶದಲ್ಲಿ ಕ್ವಾಂಟಮ್ ತಂತ್ರಜ್ಞಾನ ಆಧಾರಿತ ಕಂಪ್ಯೂಟಿಂಗ್ ಉತ್ಪನ್ನಗಳಿಗೆ ಹೆಚ್ಚಿನ ಉತ್ತೇಜನ ನೀಡುವುದು. ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಈ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಪ್ಲಿಕೇಶನ್‌ಗಳಿಗೆ 8000ರೂ. ಕೋಟಿ ನೀಡುವುದಾಗಿ ಎಂದು ಬಜೆಟ್ ಭಾಷಣೆದಲ್ಲಿ ಘೋಷಿಸಿದ್ದಾರೆ.

ಆನ್‌ಲೈನ್ ಶಿಕ್ಷಣಕ್ಕೆ ಒತ್ತು
ಆನ್‌ಲೈನ್ ಶಿಕ್ಷಣ ಅಧ್ಯಾಯನಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದ್ದು, ಶಿಕ್ಷಣ ಪಡೆಯದೆ ಇದ್ದವರು ಆನ್‌ಲೈನ್ ಮೂಲಕ ಪದವಿ ಶಿಕ್ಷಣವನ್ನು ಪೂರೈಸಬಹುದಾದ ಅವಕಾಶಗಳನ್ನು ನೀಡುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.


Click it and Unblock the Notifications








