ಯುಪಿಐ ಪಾವತಿಯಲ್ಲಿ ದಾಖಲೆ ಬರೆದ ಭಾರತೀಯರು; ವಹಿವಾಟು ಎಷ್ಟೆಂದು ತಿಳಿಯಿರಿ!
ಇಂದು ಭಾರತದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿಯೂ ಡಿಜಿಟಲ್ ಪಾವತಿ ಪ್ರಕ್ರಿಯೆ ನಡೆಯುತ್ತಿದೆ. ಈ ಮೂಲಕ ಜೇಬಿನಲ್ಲಿ ಒಂದು ರೂಪಾಯಿ ಹಣ ಇಲ್ಲದಿದ್ದರೂ ಸಹ ಈ ಇಡೀ ದೇಶವನ್ನೇ ಸುತ್ತಬಹುದು. ಇದಕ್ಕೆ ಕಾರಣ ಯುಪಿಐ ಪ್ರಕ್ರಿಯೆ. ಅಂತೆಯೇ ಭಾರತೀಯರು ಕಳೆದ ಜನವರಿ ತಿಂಗಳಲ್ಲಿ ಅಂದರೆ ಹೊಸ ವರ್ಷದ ಸಂಭ್ರಮದ ಜೊತೆಗೆ ದಾಖಲೆ ಮಟ್ಟದಲ್ಲಿ ಯುಪಿಐ ಪಾವತಿ ಪ್ರಕ್ರಿಯೆಗಳನ್ನು ನಡೆಸಿದ್ದಾರೆ.

ಹೌದು, ಭಾರತದಲ್ಲಿ ಶೀಘ್ರವಾಗಿ ಈ ಯುಪಿಐ ಪಾವತಿ ವ್ಯವಹಾರಗಳು ಜರುಗುತ್ತಿದ್ದು, ಈ ಮೂಲಕ ಈ ವರ್ಷದ ಜನವರಿ ತಿಂಗಳಲ್ಲಿ ಬರೋಬ್ಬರಿ ಎಂಟು ಶತಕೋಟಿ ವಹಿವಾಟುಗಳನ್ನು ದಾಟಿದ್ದು, ಇದರ ಮೌಲ್ಯ 13 ಲಕ್ಷ ಕೋಟಿ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಭಾರತೀಯ ಯುಪಿಐ ಉದ್ಯಮವು ಪಾವತಿಗಳು, ಸಾಲ ನೀಡಿಕೆ, ವೈಯಕ್ತಿಕ ಹಣಕಾಸು ನಿರ್ವಹಣೆ, ಇನ್ಸರ್ಟೆಕ್, ತಂತ್ರಜ್ಞಾನ (ರೆಗ್ಟೆಕ್) ಮುಂತಾದ ಹಲವಾರು ಉಪವಿಭಾಗಗಳನ್ನು ಒಳಗೊಂಡಿದ್ದು, ಈ ಮೂಲಕ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್‌ನೊಂದಿಗೆ ಈ ಫಿನ್‌ಟೆಕ್ ಉದ್ಯಮವು ಕಳೆದ ಐದು ವರ್ಷಗಳಿಂದ ಭಾರತದಲ್ಲಿ ಹಣಕಾಸು ಮತ್ತು ಪಾವತಿ ವ್ಯವಸ್ಥೆಯ ವಿಷಯವನ್ನೇ ಬದಲಾವಣೆ ಮಾಡಿದೆ.
ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ ಯುಪಿಐ ಪಾವತಿ ಸ್ಟಾರ್ಟ್‌ಅಪ್‌ಗಳು
ಇನ್ನು ಈ ಫಿನ್‌ಟೆಕ್ ಸ್ಟಾರ್ಟ್‌ಅಪ್‌ಗಳು ಅದರಲ್ಲೂ ಗೂಗಲ್ ಪೇ, ಫೋನ್‌ಪೇ ರೀತಿಯಲ್ಲಿ ಈಗ ನೂರಾರು ಯುಪಿಐ ಪಾವತಿ ಸ್ಟಾರ್ಟ್‌ಅಪ್‌ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಈ ಮೂಲಕ ಗ್ರಾಹಕರು ಸುಲಭವಾದ ಬ್ಯಾಂಕಿಂಗ್ ವ್ಯವಹಾರವನ್ನು ಮಾಡುವುದರ ಜೊತೆಗೆ ಸಾಲಗಳನ್ನೂ ಪಡೆದುಕೊಳ್ಳಬಹುದಾಗಿದೆ. ಇದಿಷ್ಟೇ ಅಲ್ಲದೆ ಆಟೋ ವಿಭಾಗ ಹಾಗೂ ಮನೆ ನಿರ್ಮಾಣ ವಿಭಾಗದಲ್ಲೂ ಇದು ತನ್ನ ಪ್ರಾಬಲ್ಯ ಸಾಧಿಸಿದೆ.

ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಿನ್‌ಟೆಕ್ ಮಾರುಕಟ್ಟೆಯಲ್ಲಿ ಭಾರತ
ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಿನ್‌ಟೆಕ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅದರಂತೆ 2,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (DPIIT) ಗುರುತಿಸಿದೆ. ಇವು ಬಳಕೆದಾರರಿಗೆ ಸುಲಭ ಬ್ಯಾಂಕಿಂಗ್ ವ್ಯವಹಾರ ಮಾಡಲು ಸಹಾಯಕವಾಗಿವೆ. ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಭಾರತದಲ್ಲಿ 2021 ರಲ್ಲಿ ಫಿನ್‌ಟೆಕ್ ಉದ್ಯಮ $ 50 ಶತಕೋಟಿ ಮೌಲ್ಯದ್ದಾಗಿದ್ದು, 2025 ರ ವೇಳೆಗೆ ಅದರ ಮೌಲ್ಯ ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಭಾರತದ ಸರ್ಕಾರದ ವರದಿಯಂತೆ ಭಾರತದಲ್ಲಿ ಈ ವಲಯವು $1 ಟ್ರಿಲಿಯನ್ ಅಂಡರ್ ಮ್ಯಾನೇಜ್‌ಮೆಂಟ್ (AUM) ಮತ್ತು $200 ಶತಕೋಟಿ ಆದಾಯವನ್ನು ಈ ವರ್ಷ ಹೊಂದುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ 2021-22 ಹಣಕಾಸು ವರ್ಷದಲ್ಲಿ ಭಾರತದಲ್ಲಿ ಫಿನ್‌ಟೆಕ್ ವಲಯವು 278 ಡೀಲ್‌ಗಳಲ್ಲಿ $8.53 ಶತಕೋಟಿ ಹಣವನ್ನು ಕಂಡಿದ್ದು, ಜುಲೈ 2022 ರ ಹೊತ್ತಿಗೆ 23 ಫಿನ್‌ಟೆಕ್ ಕಂಪೆನಿಗಳನ್ನು ಹೊಂದಿದೆ. ಈ ಮೂಲಕ $1 ಬಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದೊಂದಿಗೆ ಯುನಿಕಾರ್ನ್ ಸ್ಟೇಟಸ್ ಅನ್ನು ಗಳಿಸಿವೆ ಎಂದು ವರದಿಯಾಗಿದೆ.

ಇದೆಲ್ಲದರ ನಡುವೆ ಸೆಪ್ಟೆಂಬರ್ 2022 ರ ಹೊತ್ತಿಗೆ, ಯುಪಿಐ 358 ಬ್ಯಾಂಕ್‌ಗಳು ಸಹ ಈ ವಿಭಾಗದಲ್ಲಿ ತೊಡಗಿಸಿಕೊಂಡಿದ್ದು, $135 ಶತಕೋಟಿ ಮೌಲ್ಯದ ಸುಮಾರು 6.8 ಬಿಲಿಯನ್ ವಹಿವಾಟುಗಳನ್ನು ದಾಖಲಿಸಿವೆ. ಇದು ಭಾರತದ ಆರ್ಥಿಕ ವ್ಯವಸ್ಥೆಯನ್ನು ಹಿಂದೆಂದಿಗಿಂತಲೂ ಈಗ ಸರಳವಾಗಿದ್ದು, ಯಾವುದೇ ಬ್ಯಾಂಕ್‌ನ ಗ್ರಾಹಕರು ಅತ್ಯಂತ ಸುಲಭವಾಗಿ ತಮ್ಮ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.


Click it and Unblock the Notifications