ಬೆಂಗಳೂರು ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಡ್ರೋನ್ ಬಳಕೆ; ಇದು ಹೇಗೆ ಕೆಲಸ ಮಾಡುತ್ತೆ!
ತಂತ್ರಜ್ಞಾನ ಇಂದು ಎಲ್ಲಾ ರೀತಿಯಲ್ಲೂ ಸಮಾಜಕ್ಕೆ ದೊಡ್ಡ ಕೊಡುಗೆಯನ್ನೇ ನೀಡುತ್ತಾ ಬರುತ್ತಿದೆ. ಅದರಲ್ಲೂ ರಸ್ತೆ ಸಂಚಾರ ವಿಷಯಕ್ಕೆ ಸಂಬಂಧಿಸಿದಂತೆ ಮಹಾನಗರಗಳಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತಿದ್ದು, ಇನ್ಮುಂದೆ ಈ ವ್ಯವಸ್ಥೆಗೆ ಡ್ರೋನ್ (Drone) ಎಂಟ್ರಿಯಾಗಲಿವೆ. ಅದೂ ಸಹ ಬೆಂಗಳೂರಲ್ಲಿ.
ಹೌದು, ಬೆಂಗಳೂರು ಸಂಚಾರ (Bangalore Traffic) ಪೊಲೀಸರು ಮೊದಲ ಬಾರಿಗೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಳಕೆ ಮಾಡಿಕೊಂಡು ನಗರದಲ್ಲಿ ದೊಡ್ಡ ಟ್ರಾಫಿಕ್ ಅನ್ನು ನಿಯಂತ್ರಣ ಮಾಡಲು ಸಜ್ಜಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ಗೃಹ ಸಚಿವ ಜಿ ಪರಮೇಶ್ವರ ಮಾಹಿತಿ ನೀಡಿದ್ದಾರೆ. ಹಾಗಿದ್ರೆ, ಏನಿದು ಡ್ರೋನ್ ಬಳಕೆ, ಇದರಿಂದ ಸಂಚಾರ ದಟ್ಟಣೆಯನ್ನು ಹೇಗೆ ನಿಯಂತ್ರಣ ಮಾಡಲಾಗುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳಲು ಈ ಲೇಖನ ಓದಿರಿ.

ಬೆಂಗಳೂರು ಟ್ರಾಫಿಕ್‌ಗೆ ಡ್ರೋನ್ ಎಂಟ್ರಿ: ಈ ಡ್ರೋನ್ ವಿಚಾರವಾಗಿ ಗೃಹ ಮಂತ್ರಿ ಡಾ. ಜಿ ಪರಮೇಶ್ವರ್ ಅವರು ಮಾಹಿತಿ ನೀಡಿದ್ದು, ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ನಾನು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಮೂರು ತಿಂಗಳ ಗಡುವನ್ನು ನೀಡಿದ್ದೇನೆ. ನಗರವು ವಿಶ್ವದ ಅತ್ಯಂತ ಜನದಟ್ಟಣೆಯ ನಗರಗಳಲ್ಲಿ ಒಂದಾಗಿದೆ ಎಂಬ ಅಪಖ್ಯಾತಿಗಳಿಸಿದೆ. ಇದನ್ನು ತೊಡೆದುಹಾಕುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಡ್ರೋನ್ ಹೇಗೆ ಕೆಲಸ ಮಾಡಲಿವೆ?: ಇನ್ನು ಜಂಕ್ಷನ್‌ಗಳಲ್ಲಿ ನಿಯೋಜಿಸಲಾದ ಪೊಲೀಸರು ಒಂದು ಮೀರಿದ ದಟ್ಟಣೆಯನ್ನು ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಟ್ರಾಫಿಕ್ ಎಲ್ಲಿಯವರೆಗೆ ಇದೆ ಎಂದು ತಿಳಿದುಕೊಳ್ಳಲು ಹಾಗೂ ಟ್ರಾಫಿಕ್ ಯಾವ ಕಾರಣಕ್ಕೆ ಆಗಿದೆ?, ಎಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಒಳ್ಳೆಯದು ಎಂದು ತಿಳಿದುಕೊಂಡು ಸರಳ ಸಂಚಾರಕ್ಕೆ ಅನುವು ಮಾಡಿಕೊಡಲು ಡ್ರೋನ್‌ಗಳು ಸಹಾಯಕವಾಗಲಿದ್ದು, ಇದರಿಂದ ಪೊಲೀಸರಿಗೆ ಸಾಕಷ್ಟು ಸಹಕಾರ ಆಗಲಿದೆ.
ಇದಿಷ್ಟು ಮಾತ್ರವಲ್ಲದೆ ಈ ಡ್ರೋನ್ ಕ್ಯಾಮೆರಾಗಳನ್ನು ನಗರದಲ್ಲಿನ ಭದ್ರತಾ ವಿಚಾರಕ್ಕೂ ಸಹ ಬಳಕೆ ಮಾಡಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗುತ್ತಿದೆ. ಈ ಸಂಬಂಧ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಸ್ಪಷ್ಟನೆ ನೀಡಿದ್ದಾರೆ. ಅಂದರೆ ಜನನಿಬಿಡ ಸ್ಥಳಗಳಲ್ಲಿ ಈ ಡ್ರೋನ್ ಬಳಕೆ ಮಾಡುವುದರಿಂದ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂಬುದು ಪೊಲೀಸರ ಅಭಿಪ್ರಾಯ.
ಅದರಂತೆ ನಾಲ್ಕು ಸಂಚಾರ ವಿಭಾಗದ ಡಿಸಿಪಿಗಳಿಗೆ ನಾಲ್ಕು ಡ್ರೋನ್ ಕ್ಯಾಮೆರಾಗಳನ್ನು ಖರೀದಿ ಮಾಡಲಾಗಿದ್ದು, ಮುಂದಿನ ಒಂದು ವಾರ ಅಥವಾ 10 ದಿನಗಳಲ್ಲಿ ಈ ಕ್ಯಾಮೆರಾಗಳನ್ನು ಪಡೆಯಲಾಗುವುದು. ಈ ಸಂಬಂಧ ತರಬೇತಿ ನಡೆಯುತ್ತಿದ್ದು, 10 ಸಂಚಾರ ಉಪವಿಭಾಗಗಳ ಎಲ್ಲಾ ಎಸಿಪಿಗಳು ಮತ್ತು ಸಂಚಾರ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಹಂತ ಹಂತವಾಗಿ ಡ್ರೋನ್‌ಗಳನ್ನು ಪಡೆದುಕೊಳ್ಳಲಿದ್ದಾರೆ.
ಇನ್ನು ಈ ಡ್ರೋನ್ ಬಳಕೆಯಿಂದ ಪೊಲೀಸರಿಗೆ ವಾಹನ ಸ್ಥಗಿತದಂತಹ ಪಾಯಿಂಟ್‌ಗಳ ಬಗ್ಗೆ ಸ್ಪಷ್ಟವಾದ ಕಲ್ಪನೆ ಸಿಗಲಿದ್ದು, ಮೈದಾನದಲ್ಲಿರುವ ಪೊಲೀಸರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಡ್ರೋನ್ ಅನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ. ಉದಾಹರಣೆಗೆ ಹೇಳುವುದಾದರೆ ಹೆಬ್ಬಾಳ ಮೇಲ್ಸೇತುವೆಯ ಮೇಲೆ ಡ್ರೋನ್ ಹಾರಾಟ ನಡೆಸುತ್ತಿದ್ದರೆ ಸಂಬಂಧಿಸಿದ ಅಧಿಕಾರಿ ತನ್ನ ಫೋನ್‌ನಲ್ಲಿ ವೀಕ್ಷಣೆ ಮಾಡಬಹುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೆಲ್ಲಕ್ಕೂ ಮಿಗಿಲಾಗಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಬದಲು ಸಂಚಾರ ನಿರ್ವಹಣೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ಯಾವುದೇ ಸಂಚಾರ ದಟ್ಟಣೆ ದೂರುಗಳು ಬಂದರೆ ಆಯಾ ಡಿಸಿಪಿಗಳು ಮತ್ತು ಎಸಿಪಿಗಳು ಜವಾಬ್ದಾರರಾಗಿರುತ್ತಾರೆ. ಕಾನ್‌ಸ್ಟೆಬಲ್‌ಗಳಿಂದ ಡಿಸಿಪಿಗಳವರೆಗೆ ಎಲ್ಲಾ ಪೊಲೀಸ್ ಸಿಬ್ಬಂದಿ ಪೀಕ್ ಹವರ್‌ನಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡು ಗಂಟೆಗಳ ಕಾಲ ಮೈದಾನದಲ್ಲಿ ಇರಲಿ ಸೂಚಿಸಲಾಗಿದೆ.
ಇನ್ನು ಬೆಂಗಳೂರಲ್ಲಿ ಜರುಗಿದ ಅಪಘಾತಗಳ ಅಂಕಿಅಂಶಗಳ ಪ್ರಕಾರ ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವವರ ಕಾರಣದಿಂದಾಗಿ ಗರಿಷ್ಠ ಸಾವುಗಳು ಸಂಭವಿಸಿದ್ದು, ಸಾವಿಗೆ ಎರಡನೇ ಕಾರಣ ಕುಡಿದು ವಾಹನ ಚಲಾಯಿಸುವುದು. ಈ ಮೂಲಕ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.


Click it and Unblock the Notifications








