ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಫೋನ್‌ನಲ್ಲಿ ಈ ಫೀಚರ್ಸ್‌ಗಳನ್ನು ಆನ್ ಮಾಡಿ!
ಈಗಿನ ಒತ್ತಡ ಬದುಕಿನಲ್ಲಿ ಬಹುಪಾಲು ಮಂದಿ ಸ್ಮಾರ್ಟ್‌ಫೋನ್‌ಗೆ ಒಗ್ಗಿಕೊಳ್ಳುವ ಮೂಲಕ ಸರಿಯಾಗಿ ನಿದ್ದೆ ಮಾಡಲು ಮುಂದಾಗುವುದಿಲ್ಲ. ಈ ಕಾರಣಕ್ಕೆ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರ ಮೂಲ ಹುಡುಕುತ್ತಾ ಹೋದರೆ ನಮಗೆಲ್ಲರಿಗೂ ಕಂಡುಬರುವ ದೊಡ್ಡ ಸಮಸ್ಯೆ ಎಂದರೆ ಸ್ಮಾರ್ಟ್‌ಫೋನ್. ಈ ಸ್ಮಾರ್ಟ್‌ಫೋನ್ ಮೂಲಕ ನೀವು ಹೇಗೆ ನಿಮ್ಮ ನಿದ್ದೆಗೆ ಭಂಗ ತಂದುಕೊಳ್ಳುತ್ತಿದ್ದೀರಿ ಎಂಬುದರ ಬಗ್ಗೆ ಗೊತ್ತಾ?.
ಹೌದು, ಈಗಂತೂ ಸ್ಮಾರ್ಟ್‌ಫೋನ್‌ಗಳು ನಮ್ಮ ಅಗತ್ಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಹಲವಾರು ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಅದಾಗ್ಯೂ ಕೆಲವರು ಅದರ ಬಗ್ಗೆ ಗಮನಹರಿಸಿದೆ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ, ಅದರಲ್ಲಿ ಪ್ರಮುಖವಾದುದು ನಿದ್ದೆಯ ಸಮಸ್ಯೆ. ಹೀಗಾಗಿ ನೀವು ಉತ್ತಮ ನಿದ್ದೆ ಮಾಡಬೇಕು ಎಂದುಕೊಂಡರೆ ನಾವಿಲ್ಲಿ ತಿಳಿಸಲಾದ ಸೆಟ್ಟಿಂಗ್‌ಗಳನ್ನು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾಡಿದರೆ ಸಾಕು, ಕಣ್ತುಂಬ ನಿದ್ದೆ ಮಾಡಬಹುದು.

ನೈಟ್ ಲೈಟ್/ರೀಡಿಂಗ್ ಮೋಡ್ ಅನ್ನು ಆನ್ ಮಾಡಿ: ನೀಲಿ ಬೆಳಕಿನ ಹೊರಸೂಸುವಿಕೆಯು ನಿದ್ರಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಯಾಕೆಂದರೆ ನಿದ್ರಿಸುವಂತೆ ಮಾಡುವ ಮೆಲಟೋನಿನ್ ಎಂಬ ಹಾರ್ಮೋನ್ ಅನ್ನು ಇದು ನಿರ್ಬಂಧಿಸುತ್ತದೆ. ಆಂಡ್ರಾಯ್ಡ್ 7.1 ನಲ್ಲಿ ನೈಟ್ ಲೈಟ್ ಎಂಬ ಫೀಚರ್ಸ್ ಪರಿಚಯಿಸಲಾಗಿದ್ದು, ಇದು ನೀವು ನಿಮ್ಮ ಸ್ಮಾರ್ಟ್‌ಫೋನ್ ಬಳಕೆ ಮಾಡುವಾಗ ನೈಸರ್ಗಿಕ ಬೆಳಕನ್ನು ಉತ್ತಮವಾಗಿ ಹೊಂದಿಸಲು ಸಹಾಯ ಮಾಡುತ್ತದೆ. ಹಾಗೆಯೇ ಬೇಗ ನಿಮಗೆ ನಿದ್ರೆ ಬರುವಂತೆ ಮಾಡುತ್ತದೆ.
ಡಿಸ್‌ಪ್ಲೇ ಬಣ್ಣ ಹೊಂದಿಸಿ: ಉತ್ತಮವಾದ ನಿದ್ದೆ ಮಾಡಲು ಮತ್ತೊಂದು ಪ್ರಮುಖ ಮಾರ್ಗ ಎಂದರೆ ನೀವು ಬಳಕೆ ಮಾಡುವ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇಯನ್ನು ವಾರ್ಮರ್ ಬಣ್ಣಕ್ಕೆ ಹೊಂದಿಸುವುದು. ಇದಕ್ಕಾಗಿ ನೀವು ಸೆಟ್ಟಿಂಗ್ ವಿಭಾಗಕ್ಕೆ ಹೋಗಿ ಅಲ್ಲಿ ಡಿಸ್‌ಪ್ಲೇ ಮತ್ತು ಬ್ರೈಟ್‌ನೆಸ್ ಎಂಬ ಆಯ್ಕೆಯನ್ನು ಗಮನಿಸಿ. ನಂತರ ನಿಮಗೆ ಕೂಲ್, ಡಿಫಾಲ್ಟ್ ವಾರ್ಮ್ ಎಂಬ ಮೂರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ ಗಮನಿಸಿ. ಅದರಲ್ಲಿ ವಾರ್ಮರ್ ವಿಭಾಗದ ಮೇಲೆ ಟ್ಯಾಪ್ ಮಾಡಿ.

ಯೂಟ್ಯೂಬ್ ಬೆಟ್‌ಟೈಮ್ ಜ್ಞಾಪನೆಯನ್ನು ಆನ್ ಮಾಡಿ: ಈ ಫೀಚರ್ಸ್ ಅಂತೂ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರಲಿದೆ. ಯಾಕೆಂದರೆ ಬೆಡ್‌ಟೈಮ್ ಜ್ಞಾಪನೆಯು ನಿಮ್ಮ ತಡರಾತ್ರಿಯ ವೀಕ್ಷಣೆಯನ್ನು ಅಡ್ಡಿಪಡಿಸುವ ಮೂಲಕ ನಿಮ್ಮನ್ನು ನಿದ್ರೆಗೆ ಜಾರುವಂತೆ ಮಾಡುತ್ತದೆ. ಅಂದರೆ ಬೆಡ್‌ಟೈಮ್ ಜ್ಞಾಪನೆಯಲ್ಲಿ ವಿಡಿಯೋಗಳನ್ನು ನೋಡುವುದನ್ನು ನಿಲ್ಲಿಸಲು ಮತ್ತು ಮಲಗಲು ನೀವು ನೋಟಿಫಿಕೇಶನ್ ಪಡೆದುಕೊಳ್ಳಬಹುದಾಗಿದೆ.
ಬೆಡ್‌ಟೈಮ್ ಮೋಡ್ ಅನ್ನು ಆನ್ ಮಾಡಿ: ನಿದ್ರಾಹೀನತೆಯನ್ನು ಸೋಲಿಸಲು ಬೆಡ್‌ಟೈಮ್ ಮೋಡ್ ಅನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಕರೆಗಳು ಮತ್ತು ನೋಟಿಫಿಕೇಶನ್‌ಗಳನ್ನು ನಿಶ್ಯಬ್ದಗೊಳಿಸಲಿದ್ದು, ಆಟೋಮ್ಯಾಟಿಕ್ ಆಗಿ ಅಡಚಣೆ ಮಾಡಬೇಡಿ ಎಂಬ ಫೀಚರ್ಸ್ ಅನ್ನು ಆನ್ ಮಾಡುತ್ತದೆ, ಹಾಗೆಯೇ ಡಿಸ್‌ಪ್ಲೇಯನ್ನು ಕಪ್ಪು ಮತ್ತು ಬಿಳಿ ಬಣ್ಣಕ್ಕೆ ತಿರುಗಿಸುತ್ತದೆ. ಇದರಿಂದಾಗಿ ನಿಮ್ಮನ್ನು ಮಲಗಲು ಪ್ರೇರೇಪಿಸುತ್ತದೆ.

ಇದಕ್ಕಾಗಿ ನಿಮ್ಮ ಫೋನ್‌ನ ಸೆಟ್ಟಿಂಗ್‌ವಿಭಾಗಕ್ಕೆ ತಲುಪಿ ಡಿಜಿಟಲ್ ಯೋಗಕ್ಷೇಮ ಮತ್ತು ಪೋಷಕರ ನಿಯಂತ್ರಣ (Digital Wellbeing & parental controls) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ ಬೆಡ್‌ಟೈಮ್ ಮೋಡ್‌ಗೆ ನ್ಯಾವಿಗೇಟ್ ಮಾಡುವ ಮೂಲಕ ಬೆಡ್‌ಟೈಮ್ ಮೋಡ್ ಅನ್ನು ಆನ್ ಮಾಡಬಹುದು. ಇದರಲ್ಲಿ ಸಮಯವನ್ನು ನಿರ್ದಿಷ್ಟಪಡಿಸಬಹುದು ಅಥವಾ ಚಾರ್ಜ್ ಮಾಡಲು ನಿಮ್ಮ ಫೋನ್ ಅನ್ನು ಪ್ಲಗ್ ಮಾಡಿದಾಗ ಅದು ತಂತಾನೆ ಆನ್ ಆಗಲು ಬಿಡಬಹುದು.
ಇದೆಲ್ಲದರ ಹೊರತಾಗಿಯೂ ನೀವು ಮಲಗುವ ಮೊದಲು ಅರ್ಧಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಸ್ಮಾರ್ಟ್‌ಫೋನ್ ತಂಟೆಗೆ ಹೋಗಬೇಡಿ. ಅದರ ಬದಲು ಯಾವುದಾದರೂ ಕಥೆ ಅಥವಾ ಕಾದಂಬರಿ ಇರುವ ಪುಸ್ತಕವನ್ನು ಓದಿ. ಇದರಿಂದ ಮನಸ್ಸು ಉಲ್ಲಾಸಗೊಳ್ಳುವುದರ ಜೊತೆಗೆ ಉತ್ತಮವಾದ ನಿದ್ದೆ ಮಾಡಲು ಇದು ಸಹಕಾರಿಯಾಗುತ್ತದೆ. ಈ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ.


Click it and Unblock the Notifications








