ವಿ ಟೆಲಿಕಾಂಗೆ ಅಳಿವು-ಉಳಿವಿನ ಚಿಂತೆ: ಏರ್‌ಟೆಲ್, ಜಿಯೋ ವಿರುದ್ಧ ಸರ್ಕಾರಕ್ಕೆ ಪತ್ರ!
ಟೆಲಿಕಾಂ ವಲಯದಲ್ಲಿ ಹಿಡಿತ ಸಾಧಿಸಿಕೊಳ್ಳುವ ಉದ್ದೇಶದಿಂದ ಜಿಯೋ, ಏರ್‌ಟೆಲ್ ತೀವ್ರ ಪೈಪೋಟಿ ನಡೆಸುತ್ತಿವೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇವೆರಡರ ಕಾಳಗದಲ್ಲಿ ವಿ ಹಾಗೂ ಬಿಎಸ್‌ಎನ್ಎಲ್‌ಗೆ ಭಾರೀ ಹೊಡೆತ ಬೀಳುತ್ತಿದೆ. ಇದೀಗ ವಿ ಟೆಲಿಕಾಂ ಸರ್ಕಾರಕ್ಕೆ ಏರ್‌ಟೆಲ್ ಹಾಗೂ ಜಿಯೋ ವಿರುದ್ಧ ಪತ್ರ ಬರೆದು ತನ್ನ ಬೇಸರ ಹೊರಹಾಕಿದೆ.
ಹೌದು, 5G ಸೇವೆಯನ್ನು ಭಾರತದಲ್ಲಿ ಪರಿಚಯಿಸಿದ್ದೇ ತಡ ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್ ಹಾಗೂ ಜಿಯೋ ನಾಮುಂದು-ತಾಮುಂದು ಎಂಬಂತೆ ಒಂದಕ್ಕೊಂದು ಪೈಪೋಟಿಯಲ್ಲಿ 5G ಬಳಕೆದಾರರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಾ ಬರುತ್ತಿವೆ. ಅದೂ ಸಹ ಉಚಿತವಾಗಿ. ಈ ಬಗ್ಗೆ ಇದರಿಂದಾಗಿ ಹಲವಾರು ಬಳಕೆದಾರರು ಈ ಎರಡೂ ಟೆಲಿಕಾಂ ಸೇವೆಗಳಿಗೆ ಮುಗಿಬಿದ್ದಿದ್ದಾರೆ. ಹಾಗಿದ್ರೆ ವಿ ಬರೆದ ಪತ್ರದಲ್ಲಿ ಏನಿದೆ?, ಏರ್‌ಟೆಲ್ ಹಾಗೂ ಜಿಯೋ ನಡೆ ಏನು ಎಂಬ ಮಾಹಿತಿಗಾಗಿ ಈ ಲೇಖನ ಓದಿ.

ವಿ ಟೆಲಿಕಾಂ ಆರೋಪ ಏನು?: ಏರ್‌ಟೆಲ್ ಮತ್ತು ಜಿಯೋ ಅನಿಯಮಿತ 5Gಡೇಟಾವನ್ನು ಉಚಿತವಾಗಿ ನೀಡುತ್ತಿದೆ ಎಂದು ವಿ ಟೆಲಿಕಾಂ ಆರೋಪ ಮಾಡಿದೆ. ಈ ನಿಯಮದಿಂದಾಗಿ ವಿಗೆ ಬೇಸರ ಹಾಗೂ ಆತಂಕ ಮನೆ ಮಾಡಿದೆ ಎನ್ನಲಾಗಿದೆ. ದಿ ಎಕನಾಮಿಕ್ ಟೈಮ್ಸ್ ಪ್ರಕಾರ,ವಿಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾಗೆ ಪತ್ರ ಬರೆದಿದ್ದು, ಪ್ರತಿಸ್ಪರ್ಧಿ ಟೆಲಿಕಾಂಗಳ ಪರಭಕ್ಷಕ ಬೆಲೆಗಳ ಬಗ್ಗೆ ಉಲ್ಲೇಖ ಮಾಡಿದೆ.ಇದಾದ ನಂತರ ಎರಡೂ ಟೆಲಿಕಾಂ ಸಂಸ್ಥೆಗಳು TRAIಗೆ ಪ್ರತ್ಯುತ್ತರ ಸಹ ನೀಡಿವೆ.
ಗ್ರಾಹಕರು ಇನ್ನೂ ಅರ್ಹ 4G ಯೋಜನೆಗಳಿಗೆ ಚಂದಾದಾರರಾಗಬೇಕಾಗಿರುವುದರಿಂದ ತಮ್ಮ 5G ಸೇವೆಗಳು ಉಚಿತವಲ್ಲ ಎಂದು ಏರ್‌ಟೆಲ್ ಮತ್ತು ಜಿಯೋ TRAI ಗೆ ಬರೆದ ಪ್ರತ್ಯುತ್ತರದಲ್ಲಿ ಉಲ್ಲೇಖ ಮಾಡಿವೆ. ಆದರೆ ಎಲ್ಲಾ ಪೋಸ್ಟ್‌ಪೇಯ್ಡ್ ಗ್ರಾಹಕರು ಮತ್ತು ಪ್ರಿಪೇಯ್ಡ್ ಗ್ರಾಹಕರು ಉಚಿತ 5G ಡೇಟಾದ ಕೊಡುಗೆಯನ್ನು ಪಡೆದುಕೊಳ್ಳಬಹುದು ಎಂದು ಅಧಿಕೃತವಾಗಿ ತಿಳಿಸಿರುವುದು ನಮ್ಮ ನಿಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಜೊತೆಗೆ ಹಲವು ಬಳಕೆದಾರರು ಇದರ ಸೌಲಭ್ಯ ಸಹ ಪಡೆದುಕೊಳ್ಳುತ್ತಿದ್ದಾರೆ.
ಇನ್ನು ನಾವು ಜಿಯೋ ಮತ್ತು ಏರ್‌ಟೆಲ್‌ಗೆ ನೋಟಿಸ್ ನೀಡಿದ್ದೇವೆ, ಅವರು ಉತ್ತರಗಳನ್ನು ಸಹ ನೀಡಿದ್ದಾರೆ. ಅದರಂತೆ ಶೀಘ್ರದಲ್ಲೇ ಆ ಸಂಬಂಧ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ TRAIನ ಕಾನೂನು ತಂಡ, ಹಣಕಾಸು ತಂಡ ಮತ್ತು ತಾಂತ್ರಿಕ ತಂಡವು ಈ ವಿಷಯವನ್ನು ಅಧ್ಯಯನ ಮಾಡುತ್ತಿದೆ ಎಂದು TRAI ಅಧಿಕಾರಿಗಳು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಈ ರೀತಿಯ ಘಟನೆಗಳು ಇದೇ ಮೊದಲಲ್ಲ. ಈ ಹಿಂದೆ ಜಿಯೋ 2016ರಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸಿದ್ದಾಗ ಏರ್‌ಟೆಲ್ ಹಾಗೂ ವಿ ಅಂಬಾನಿ ನೇತೃತ್ವದ ಕಂಪನಿಯು ಪರಭಕ್ಷಕ ಬೆಲೆ ಬಗ್ಗೆ ಆರೋಪಿಸಿದ್ದವು. ಆದರೆ ಅಂದಿನಿಂದ ಇಂದಿನವರೆಗೂ ಏರ್‌ಟೆಲ್ ಮತ್ತು ವಿ ಜಿಯೋಗೆ ಸ್ಪರ್ಧಿಸಲು ತಮ್ಮದೇ ಆದ ರೀತಿಯಲ್ಲಿ ವಿವಿಧ ರೀಚಾರ್ಜ್ ಪ್ಲ್ಯಾನ್ ಮೂಲಕ ಸಮರ ಸಾರುತ್ತಿವೆ. ಆದರೆ, ಈಗ ವಿ ಏಕಾಂಗಿಯಾಗಿ ನಿಂತು ಇಬ್ಬರು ದೈತ್ಯರನ್ನು ಎದುರಿಸುತ್ತಿದೆ.
ವಿ ಟೆಲಿಕಾಂಗೆ ಕೋಪ ಬರಲು ಇದೇ ಕಾರಣ : ಇದೀಗ ಎಲ್ಲಾ ಟೆಲಿಕಾಂಗಳು ತಮ್ಮ ಯೋಜನೆಗಳೊಂದಿಗೆ ಉಚಿತ ಕರೆ ಸೌಲಭ್ಯವನ್ನು ನೀಡುತ್ತವೆ. ಇದರಲ್ಲಿ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳು ಈಗ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ತಾತ್ಕಾಲಿಕ ಚಂದಾದಾರಿಕೆ ಪ್ರಯೋಜನಗಳನ್ನು ಸಹ ನೀಡುತ್ತಿವೆ. ಆದರೆ ಈ ವಿಭಾಗದಲ್ಲಿ ವಿ ಸ್ವಲ್ಪ ಹಿಂದೆ ಉಳಿದಿದೆ.
ಇದರೊಂದಿಗೆ ಏರ್‌ಟೆಲ್ ಸಹ ಒಂದು ಕಡೆ ಜಿಯೋ ವಿರುದ್ಧ ಕಿಡಿಕಾರುತ್ತಿದೆ. ಯಾಕೆಂದರೆ ಜಿಯೋ ಸಿನಿಮಾ ಪ್ಲಾಟ್‌ಫಾರ್ಮ್‌ನೊಂದಿಗೆ ಅನ್ಯಾಯದ ಪ್ಲ್ಯಾನ್‌ಗಳನ್ನು ಅದು ನೀಡುತ್ತಿದೆ. ಅದರಲ್ಲೂ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಋತುವಿನ ಮಧ್ಯೆ ಜಿಯೋ ಬಳಕೆದಾರರಿಗೆ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಗಂಭೀರ ಆರೊಪ ಮಾಡಿದೆ. ಆದರೆ ಜಿಯೋ ಏರ್‌ಟೆಲ್‌ನ ಈ ದೂರನ್ನು ತಳ್ಳಿಹಾಕಿದ್ದು, ಗ್ರಾಹಕರು ಸಮಂಜಸವಾದ ಶುಲ್ಕಗಳನ್ನು ಭರಿಸುತ್ತಿದ್ದಾರೆ ಎಂದು ಹೇಳಿದೆ.

ಇದೆಲ್ಲದ್ದಕ್ಕೂ ಕಾರಣ 5G : ಎಲ್ಲಾ ಮೂರು ಟೆಲಿಕಾಂಗಳು ಭಾರತದಲ್ಲಿ 5G ರೋಲ್‌ಔಟ್ ಅನ್ನು ಅಧಿಕೃತವಾಗಿ ಕಿಕ್‌ಸ್ಟಾರ್ಟ್ ಮಾಡಲು ಅಕ್ಟೋಬರ್ 2022ರಲ್ಲಿ IMC ನಲ್ಲಿ ನರೇಂದ್ರ ಮೋದಿಯವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದವು.ಆದರೆ, ಅಂದಿನಿಂದ ಇಂದಿನವರೆಗೂ ಜಿಯೋ ಹಾಗೂ ಏರ್‌ಟೆಲ್ ಮಾತ್ರ ಅನೇಕ ರಾಜ್ಯಗಳಲ್ಲಿ 5Gಇಂಟರ್ನೆಟ್ ಅನ್ನು ನೀಡುತ್ತಿವೆ. ಆದರೆ ವಿ ಟೆಲಿಕಾಂಗೆ ಇದು ಇನ್ನೂ ಸಾಧ್ಯವಾಗಿಲ್ಲ, ಇದರೊಂದಿಗೆ ಇರುವ ಪ್ಲ್ಯಾನ್‌ಗಳಲ್ಲೇ ಕೆಲವು ಬದಲಾವಣೆ ಮಾಡಿಕೊಂಡು ಬರುತ್ತಿದ್ದು, ಗ್ರಾಹಕರ ಬೇಸರಕ್ಕೂ ಕಾರಣ ಆಗುತ್ತಿದೆ.


Click it and Unblock the Notifications








