ಗರ್ಭಾವಸ್ಥೆಯಲ್ಲಿರುವಾಗ ಹೆಚ್ಚಾಗಿ ಸ್ಮಾರ್ಟ್‌ಫೋನ್ ಬಳಸುತ್ತೀರಾ?, ಹಾಗಿದ್ರೆ ನೀವೆ ನಿಮ್ಮ ಮಕ್ಕಳಿಗೆ ವಿಲನ್!
ಸ್ಮಾರ್ಟ್‌ಫೋನ್‌ಗಳು ನಮಗೆ ಮಾಡುವ ಅನುಕೂಲಗಳಿಂದ ಅದನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ಆದರೆ, ಇದು ಎಲ್ಲಾ ಸಮಯದಲ್ಲೂ ಅನ್ವಯ ಆಗುವುದಿಲ್ಲ. ಅಂತೆಯೇ ಕೆಲವೊಂದು ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ನಿಂದ ದೂರ ಇರುವ ಮೂಲಕ ಹಲವಾರು ಸಮಸ್ಯೆಗಳಿಂದ ಮುಕ್ತರಾಗಬಹುದಾಗಿದೆ. ಅದರಲ್ಲೂ ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಮೊದಲು ಈ ಕೆಲಸ ಮಾಡಬೇಕು.
ಹೌದು, ಇದು ಸಾಮಾಜಿಕ ಮಾಧ್ಯಮಗಳ ಕಾಲ. ಈ ಕಾರಣಕ್ಕಾಗಿಯೇ ಸ್ಮಾರ್ಟ್‌ಫೋನ್ ಮಾನವ ಜೀವನದ ಪ್ರಮುಖ ಭಾಗವಾಗಿದೆ. ಅಂದರೆ ಆಹಾರ ಎಷ್ಟು ಮುಖ್ಯವೋ, ಫೋನ್ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಮಕ್ಕಳಿಂದ ಹಿರಿಯರವರೆಗೂ ಎಲ್ಲರೂ ಸ್ಮಾರ್ಟ್‌ಫೋನ್ ಬಳಕೆ ಮಾಡಲಾಗುತ್ತದೆ. ಅದರಲ್ಲಿ ಗರ್ಭಿಣಿಯರೂ ಸೇರಿದ್ದು, ಗರ್ಭಾವಸ್ಥೆಯಲ್ಲಿ ಅನೇಕ ಮಹಿಳೆಯರು ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡುವುದು ಸಾಮಾನ್ಯ ವಿಚಾರವಾಗಿದೆ. ಆದರೆ, ಇದರಿಂದ ತಾಯಿ ಮತ್ತು ಭವಿಷ್ಯದ ಮಗುವಿಗೆ ಹಾನಿಕಾರಕ ಎಂದು ಬಹುಶಃ ಅವರಿಗೆ ತಿಳಿದಿಲ್ಲ.

ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯಲ್ಲಿ ದೀರ್ಘಕಾಲದವರೆಗೆ ಸ್ಮಾರ್ಟ್‌ಫೋನ್ ಬಳಕೆ ಮಾಡಿದ್ದೇ ಆದರೆ ಮಗುವಿನಲ್ಲಿ ಮಾನಸಿಕ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಅದರಲ್ಲೂ ಈ ಸಂಬಂಧ ಡೆನ್ಮಾರ್ಕ್‌ನಲ್ಲಿ ಇತ್ತೀಚೆಗೆ ಒಂದು ಅಧ್ಯಯನ ನಡೆಸಲಾಗಿದ್ದು, ಅದರಲ್ಲಿ 1 ಸಾವಿರ ಗರ್ಭಿಣಿಯರ ಮೇಲೆ ಸಂಶೋಧನೆ ಮಾಡಲಾಗಿದೆ. ಈ ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಯಾರೆಲ್ಲಾ ಫೋನ್‌ಗಳನ್ನು ಬಳಕೆ ಮಾಡುತ್ತಿದ್ದರೋ ಅವರ ಮಕ್ಕಳು ಹೈಪರ್ಆಕ್ಟಿವಿಟಿ ಮತ್ತು ನಡವಳಿಕೆಯ ಅಸ್ವಸ್ಥತೆಗಳ ಸಮಸ್ಯೆಗೆ ಒಳಗಾಗಿದ್ದಾರಂತೆ.
ಸ್ಮಾರ್ಟ್‌ಫೋನ್ ಬಳಕೆ ಏಕೆ ಅಪಾಯಕಾರಿ?: ಸಾಮಾನ್ಯವಾಗಿ ಈ ಪ್ರಶ್ನೆ ಎಲ್ಲರಲ್ಲೂ ಕಾಡುತ್ತದೆ. ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳು ಈ ಹಿಂದೆಂದಿಗಿಂತಲೂ ಈಗ ಸುಧಾರಿತ ಸೌಲಭ್ಯಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಬಳಕೆದಾರರಿಗೆ ಹೆಚ್ಚಿನ ಅಪಾಯವಾಗಬಾರದ ಹಾಗೆ ತಯಾರು ಮಾಡುತ್ತಿದ್ದಾರೆ. ಅದಾಗ್ಯೂ ಗರ್ಭಿಣಿಯರ ವಿಚಾರದಲ್ಲಿ ಇದು ಭಿನ್ನವಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಹೆಚ್ಚು ಸ್ಮಾರ್ಟ್ ಫೋನ್ ಬಳಸಿದರೆ ಅವರ ಜೀವನಶೈಲಿ ಹದಗೆಡುತ್ತದೆ ಎಂದು ದೆಹಲಿಯ ಸ್ತ್ರೀರೋಗ ತಜ್ಞ ಡಾ.ಚಂಚಲ್ ಶರ್ಮಾ ಹೇಳಿದ್ದಾರೆ.
ಸ್ಮಾರ್ಟ್‌ಫೋನ್‌ನ ಅತಿಯಾದ ಬಳಕೆ ನಿದ್ರೆ ಮತ್ತು ಎಚ್ಚರದ ಮಾದರಿಯಲ್ಲಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಈ ಮೂಲಕ ನಿದ್ರೆಯ ಗುಣಮಟ್ಟ ಹಾಳಾಗುತ್ತದೆ. ಇದು ಅನೇಕ ಸಮಸ್ಯೆಗಳಿಗೆ ನಿರ್ಮಾಣ ಆಗಲು ಕಾರಣವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಮಹಿಳೆಯರು ಆತಂಕಕ್ಕೆ ಬಲಿಯಾಗುತ್ತಾರೆ. ಅದೆಲ್ಲಕ್ಕೂ ಮಿಗಿಲಾಗಿ ದೀರ್ಘಕಾಲದವರೆಗೆ ಫೋನ್ ಬಳಕೆ ಮಾಡುವುದರಿಂದ ವಿಕಿರಣದ ಸಂಪರ್ಕಕ್ಕೆ ಅವರು ಬರಲಿದ್ದು, ಇದು ಸ್ಮರಣೆಯ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.
ಅಂದರೆ ಅತಿಯಾದ ಫೋನ್ ಬಳಕೆಯಿಂದ ನೇರವಾಗಿ ಗರ್ಭಿಣಿಯರಿಗೆ ಸಮಸ್ಯೆ ಉಂಟಾಗಲಿದ್ದು, ಈ ಸಮಸ್ಯೆಗಳು ಹೊಟ್ಟೆಯಲ್ಲಿ ಬೆಳೆಯುವ ಮಕ್ಕಳಿಗೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತವೆ ಎನ್ನಲಾಗಿದೆ. ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಸ್ಮಾರ್ಟ್ ಫೋನ್ ಬಳಸುವ ಚಟ ಹೆಚ್ಚಾಗುತ್ತಿದೆ. ಯಾವುದೇ ಕಾರಣವಿಲ್ಲದೆ ಮಹಿಳೆಯರು ಗಂಟೆಗಟ್ಟಲೆ ಫೋನ್ ಬಳಕೆ ಮಾಡುತ್ತಾರೆ. ಈ ಸಂಪ್ರದಾಯ ಕಡಿಮೆ ಆಗಬೇಕಿದೆ ಎಂದು ಡಾ.ಚಂಚಲ್ ಸಲಹೆ ನೀಡಿದ್ದಾರೆ.

ಗರ್ಭಿಣಿಯಾಗಿದ್ದಾಗ ಮಹಿಳೆಯರು ಸಾಮಾನ್ಯವಾಗಿ ಮನೆಯಲ್ಲಿ ಒಬ್ಬರೇ ಇರುತ್ತಾರೆ. ಹೀಗಾಗಿ ಖಂಡಿತಾ ಸ್ಮಾರ್ಟ್‌ಫೋನ್‌ಗಳು ಇವರನ್ನು ಆಕರ್ಷಿಸುತ್ತವೆ. ಬೇಸರ ಕಳೆಯಲೋ ಅಥವಾ ಯಾರೊಂದಿಗಾದರೂ ಸಂವಹನ ನಡೆಸಲೋ ನಿರಂತರವಾಗಿ ಫೋನ್ ಬಳಕೆ ಮಾಡುತ್ತಲೇ ಇರುತ್ತಾರೆ. ಆದರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದಾಗಿ ಫೋನ್ ಬಳಕೆಗೆ ಸಮಯವನ್ನು ನಿಗದಿ ಮಾಡಿಕೊಳ್ಳಿ. ಎಲ್ಲಕ್ಕಿಂತ ಮಿಗಿಲಾಗಿ ಸಾಮಾಜಿಕ ಮಾಧ್ಯಮದಿಂದ ದೂರವಿರಿ. ಅದರ ಬದಲು ಉತ್ತಮವಾದ ಪುಸ್ತಕಗಳನ್ನು ಓದಿರಿ.
ಇದರೊಂದಿಗೆ ರಾತ್ರಿ ಮಲಗುವ 2 ಗಂಟೆಗಳ ಮೊದಲು ಯಾವುದೇ ಕಾರಣಕ್ಕೂ ಫೋನ್ ಬಳಕೆ ಮಾಡಬೇಡಿ. ಅಷ್ಟಾಗಿಯೂ ನಿಮ್ಮಲ್ಲಿ ಒಂಟಿತನ ಕಾಡುತ್ತಿದ್ದರೆ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಅಥವಾ ನೆರೆಹೊರೆಯವರ ಜೊತೆ ಹರಟೆ ಹೊಡೆಯಿರಿ ಇದರಿಂದ ನಿಮ್ಮ ದೇಹಕ್ಕೂ ಒಂದು ರೀತಿಯ ವ್ಯಾಯಾಮ ಆದಂತೆ ಆಗುತ್ತದೆ. ಈ ಮೂಲಕ ದೇಶಕ್ಕೆ ಉತ್ತಮವಾದ ಮಕ್ಕಳನ್ನು ನೀಡುವ ಮೂಲಕ ಉತ್ತಮ ತಾಯಿಯಾಗಿ ಗುರುತಿಸಿಕೊಳ್ಳಿ.


Click it and Unblock the Notifications








