ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ; ಭಾರತದ 36 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆ ಬ್ಯಾನ್!
ವಾಟ್ಸಾಪ್ ಬಳಕೆದಾರರಿಗೆ ಹೆಚ್ಚಿನ ಭದ್ರತೆಯನ್ನು ನೀಡುವ ಸಲುವಾಗಿ ಕಾಲಕಾಲಕ್ಕೆ ಕೆಲವು ಫೀಚರ್ಸ್‌ಗಳ ಜೊತೆಗೆ ಕಟ್ಟುನಿಟ್ಟಿನ ಕ್ರಮಗಳನ್ನೂ ಸಹ ಜಾರಿಗೆ ತರುತ್ತಿದೆ. ಅದರಲ್ಲೂ ಮೊನ್ನೆಯಷ್ಟೇ ಹೊಸ ಫೀಚರ್ಸ್ ಆದ ದಿನಾಂಕದ ಪ್ರಕಾರ ಸರ್ಚ್ ಮಾಡುವ ಸೌಲಭ್ಯದ ಬಗ್ಗೆ ಘೋಷಣೆ ಮಾಡಿರುವುದು ಇನ್ನಷ್ಟು ವಿಶೇಷ. ಇದರ ನಡುವೆ ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಒಂದನ್ನು ನೀಡಲಾಗಿದೆ.

ಹೌದು, ವಾಟ್ಸಾಪ್ ಮಾಸಿಕ ಭಾರತ ವರದಿ ಬಿಡುಗಡೆ ಮಾಡಿದ್ದು, ಈ ಮೂಲಕ ಭಾರತದ ಲಕ್ಷಾಂತರ ವಾಟ್ಸಾಪ್ ಖಾತೆಗಳಿಗೆ ನಿರ್ಬಂಧ ಹೇರಲಾಗಿದೆ. ಅದರಲ್ಲೂ ಭಾರತದ ಐಟಿ ನಿಯಮಗಳು, 2021 ರ ಅನುಸಾರವಾಗಿ ವಾಟ್ಸಾಪ್ ಈ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಭಾರತದ ಇಷ್ಟೆಲ್ಲಾ ಖಾತೆಗಳನ್ನು ಯಾವ ಉದ್ದೇಶಕ್ಕೆ ನಿಷೇಧಿಸಲಾಗಿದೆ. ಒಟ್ಟಾರೆ ನಿಷೇಧಕ್ಕೆ ಒಳಪಟ್ಟ ಅಕೌಂಟ್‌ಗಳು ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ಭಾರತದ ಹಲವಾರು ವಾಟ್ಸಾಪ್ ಖಾತೆಗಳು ನಿಷೇಧ
ಡಿಸೆಂಬರ್ ತಿಂಗಳ ವಾಟ್ಸಾಪ್‌ನ ಮಾಸಿಕ ಭಾರತ ವರದಿ ಪ್ರಕಾರ ಭಾರತದಲ್ಲಿ 36 ಲಕ್ಷಕ್ಕೂ ಹೆಚ್ಚು ದುರುದ್ದೇಶಪೂರಿತ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿದೆ ಎಂದು ಹೇಳಿಕೊಂಡಿದೆ. ಅಂದರೆ ಒಟ್ಟಾರೆ 3,677,000 ಖಾತೆಗಳನ್ನು ನಿಷೇಧಿಸಲಾಗಿದೆ. ಇನ್ನು ಡಿಸೆಂಬರ್ 1, 2022 ಮತ್ತು ಡಿಸೆಂಬರ್ 31, 2022 ರ ನಡುವಿನ ವರದಿ ಇದಾಗಿದೆ. ಹಾಗೆಯೇ ಬಳಕೆದಾರರಿಂದ ಯಾವುದೇ ವರದಿಗಳನ್ನು ಪಡೆಯುವ ಮೊದಲು 1,389,000 ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಕಂಪೆನಿ ಇದೇ ವೇಳೆ ಮಾಹಿತಿ ನೀಡಿದೆ.

ಭದ್ರತಾ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದೆ ವಾಟ್ಸಾಪ್
ವಾಟ್ಸಾಪ್ ಯಾವುದೇ ರೀತಿಯ ನಿಂದನೆಯನ್ನು ತಡೆಗಟ್ಟುವಲ್ಲಿ ಮುಂಚೂಣಿಯಲ್ಲಿದೆ. ಇದರ ನಡುವೆ ಅಂತ್ಯದಿಂದ ಕೊನೆಯವರೆಗೆ ಎನ್‌ಕ್ರಿಪ್ಟ್ ಮಾಡಲಾದ ಸಂದೇಶ ಸೇವೆ ಸಹ ನೀಡಲಾಗುತ್ತಿದೆ. ಇದೆಲ್ಲದರ ನಡುವೆ ಬಳಕೆದಾರರ ರಕ್ಷಣೆಗೆ ನಾವು ಕೃತಕ ಬುದ್ಧಿಮತ್ತೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡುತ್ತಾ ಬರುತ್ತಿದ್ದೇವೆ ಎಂದು ವಾಟ್ಸಾಪ್‌ನ ವಕ್ತಾರರು ಮಾಹಿತಿ ನೀಡಿದ್ದಾರೆ.
ಈ ಬಳಕೆದಾರರ ಸುರಕ್ಷತಾ ವರದಿಯಲ್ಲಿ ಸ್ವೀಕರಿಸಿದ ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ವಾಟ್ಸಾಪ್ ಕೈಗೊಂಡ ಕ್ರಮಗಳನ್ನು ಒಳಗೊಂಡಿದೆ. ಅದರಂತೆ ಇತ್ತೀಚಿನ ಮಾಸಿಕ ವರದಿಯಲ್ಲಿ ಕಂಡುಬಂದಂತೆ ವಾಟ್ಸಾಪ್ 3.6 ಮಿಲಿಯನ್ ಖಾತೆಗಳನ್ನು ನಿಷೇಧಿಸಿದೆ ಎಂದು ತಿಳಿಸಿದ್ದಾರೆ.
1,600 ಕ್ಕೂ ಹೆಚ್ಚು ವರದಿ ಸ್ವೀಕಾರ
ಈ ಸಂಬಂಧ ಪ್ರತಿ ತಿಂಗಳು ವಾಟ್ಸಾಪ್ ಬಳಕೆದಾರರಿಂದ ವರದಿ ಸ್ವೀಕಾರ ಮಾಡುತ್ತಿದ್ದು, ಅದರ ಅನುಸಾರ ಡಿಸೆಂಬರ್‌ನಲ್ಲಿ 1,607 ವರದಿಗಳನ್ನು ಸ್ವೀಕರಿಸಿದೆ. ಹಾಗೆಯೇ ಅದರಲ್ಲಿ 166 ಖಾತೆಗಳ ಮೇಲೆ ಕ್ರಮ ಜರುಗಿಸಿದೆ.
ಕಳೆದ ತಿಂಗಳು, ವಾಟ್ಸಾಪ್ ಭಾರತದಲ್ಲಿ 37 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿತ್ತು. ಈ ಮೂಲಕ ನವೆಂಬರ್‌ನಲ್ಲಿ 946 ವರದಿಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 74 ವರದಿಗಳ ಮೇಲೆ ಕಾರ್ಯನಿರ್ವಹಿಸಿದೆ. ಇದರೊಂದಿಗೆ ದೇಶದಲ್ಲಿ 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಪ್ರಮುಖ ಪ್ಲಾಟ್‌ಫಾರ್ಮ್ ವಾಟ್ಸಾಪ್ ಆಗಿರುವುದು ವಿಶೇಷ.

ಇನ್ನು ಸುಧಾರಿತ ಐಟಿ ನಿಯಮಗಳು 2021 ರ ಅಡಿಯಲ್ಲಿ, 5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸಬೇಕಿದೆ.
ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಇಂಟರ್ನೆಟ್ ಬಳಕೆ ಕಡೆಗೆ ಪ್ರಮುಖ ಉತ್ತೇಜನವನ್ನು ನೀಡುವ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಮೂಲಕ ಐಟಿ ಸಚಿವಾಲಯವು ಡಿಜಿಟಲ್ ನಾಗರೀಕರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಕೆಲವು ತಿದ್ದುಪಡಿಗಳನ್ನು ಸೂಚಿಸಿದೆ. ಅದರಂತೆ ಯಾವುದೇ ಧಕ್ಕೆ ತರುವಂತಹ ವಿಷಯವನ್ನು ಅಪ್ಲೋಡ್ ಮಾಡುವುದನ್ನು ತಡೆಯಲು ಸಮಂಜಸವಾದ ಪ್ರಯತ್ನಗಳನ್ನು ಜರುಗಿಸಲು ಸಚಿವಾಲಯ ಪ್ಲಾಟ್‌ಫಾರ್ಮ್‌ಗಳಿಗೆ ಸೂಚಿಸಿದೆ.
ದಿನಾಂಕದ ಪ್ರಕಾರ ಮಾಹಿತಿ ಸರ್ಚ್ ಮಾಡಿ
ವಾಟ್ಸಾಪ್‌ನ ಹೊಸ ಅಪ್‌ಡೇಟ್‌ನಲ್ಲಿ ಬಳಕೆದಾರರು ದಿನಾಂಕದ ಪ್ರಕಾರ ಸರ್ಚ್ ಮಾಡುವ ಅವಕಾಶ ದೊರೆಯಲಿದೆ. ಇದರಿಂದ ಸೆಂಡ್ ಮಾಡಿರುವ ಮೆಸೆಜ್‌ಗಳು, ಇಮೇಜ್‌ಗಳನ್ನು ದಿನಾಂಕದ ಆಧಾರದ ಮೇಲೆ ಸುಲಭವಾಗಿ ಕಂಡುಕೊಳ್ಳಬಹುದು. ಸಂಪರ್ಕ ಅಥವಾ ಗ್ರೂಪ್‌ನಲ್ಲಿ ಸರ್ಚ್ ಆಯ್ಕೆ ಅನ್ನು ಟ್ಯಾಪ್ ಮಾಡಿದಾಗ ಅಲ್ಲಿ ಕ್ಯಾಲೆಂಡರ್ ಐಕಾನ್ ಕಾಣಿಸಿಕೊಳ್ಳುತ್ತದೆ. ಇದನ್ನು ಟ್ಯಾಪ್ ಮಾಡಿ ಈ ಮೂಲಕ ಕಡಿಮೆ ಸಮಯದಲ್ಲಿ ಬೇಕಾದ ವಿವರವನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿದೆ.


Click it and Unblock the Notifications








